Thursday, October 14, 2010

ರತ್ನನ್ ಪದಗಳ್ - My Version


ಹೇಳ್ಕೋಳೋಕ್ ಒಂದ್ ಕಂಪನಿ
ಕೈಯ್ನಾಗ್ ಒಂದ್ ಕಂಪ್ಯೂಟರು
ಮಾಡೋಕೆ ಕೈತುಂಬಾ ಕೆಲ್ಸಾ...
ಗೂಗಲ್ನಾಗ್ ಹುಡ್ಕಾಡಿ
ಕಾಪಿ ಪೇಸ್ಟ್  ಆಟಾಡಿ
ಮುಗ್ಸಿದರಾಯ್ತು ಸಂಪನ್ ಪರಪಂಚಾ....

ಬಗ್ಸು ಫಿಕ್ಸಾದಾಗ
ಮತ್ತೆಚ್ಚಿ ಹೋದಾಗ
ಹಂಗೇನೇ ಪರಪಂಚದ್ ಅಂಚ
ಐ-ಪಾಡಲ್ಲಿ ಹಾಡ್ಕೇಳ್ತಾ 
ಕನ್ನಡದಲ್ ಪದವಾಡ್ತಾ
ಹಿಗ್ಗೋದು ಸಂಪನ್ ಪರಪಂಚಾ....

ವೀಕೆಲ್ಲಾ ಬೆವರ ಸುರ್ಸಿ
ಬಂದಿದ್ರಲ್ ಹೊಸಿ ಉಳ್ಸಿ
ವೀಕೆಂಡಲ್ ಉಳಿಹೆಂಡ  ಕೊಂಚ
ಮೈಯೆಲ್ಲಾ ಜುಮ್ ಅಂದ್ರೆ
ಸಂಡೇ ಗಂ ಗಂ ಅಂದ್ರೆ
ತುಂಬೋಯ್ತು ಸಂಪನ್ ಪರಪಂಚಾ....

ಪ್ರಾಜೆಕ್ಟೇನ್ ಗೊತ್ತಿಲ್ಲ
ಲಾಭದಾಗ್ ನಮ್ಗ್ ಪಾಲಿಲ್ಲ
ನಾವ್ ಕಂಡಿಲ್ಲ ತಂಚವಂಚಾ
ನಮ್ಮಷ್ಟಕ್ ನಾವಾಗಿ
ಇದ್ಡಿದ್ದ್ರಲ್ ಹಾಯಾಗಿ
ಬಾಳೋದು ಸಂಪನ್ ಪರಪಂಚಾ....

ಹೈಕ್ ಕೊಟ್ಟರೆ ಕೊಡಲಣ್ಣ
ಕೊಡದಿದ್ದರೆ ಬಿಡಲಣ್ಣ
ನಾವೆಲ್ಲಾ ಅವರಮುಂದೆ ಬಚ್ಚಾ
ಕೊಟ್ಟಿರೋ ಕೆಲ್ಸದಾಗೆ
ಕಣ್ಮುಚ್ಕೊಂಡ್ ಹೇಳ್ದಂಗೆ
ಕುಣಿಯೋದು ಸಂಪನ್ ಪರಪಂಚಾ....

                             - ಸಂಪತ್ ಕುಮಾರ್

Monday, October 11, 2010

ಕತ್ತಲೆ


ಅತ್ತಲಿದ್ದ ರವಿಯೊಬ್ಬ
ಇತ್ತೆಡೆಗೆ ಸರಿದೊಡೆ
ಧರೆಯ ಕತ್ತಲದು ಸಮಾಧಿ...     ಆದರೇನು ಮರುಳೆ???
ನಭಕಿಹರು ಸಾವಿರ ಸೂರ್ಯರು
ಬೆಳಗಬಲ್ಲುರೆ ನಭವಪೂರ
ಬೆಳಕದುವೆ ಭ್ರಮಿತ, ಕತ್ತಲೆಯೇ ಶಾಶ್ವತ... ಸತ್ಯವದು ಇರುಳೇ...

ಕತ್ತಲೆಯೇ ನನ್ನೊಲವು
ಕತ್ತಲೆಯೇ ನನ್ನರಿವು
ನನ್ನೆಲ್ಲ ಬದುಕು ಬಾಳೇ ಕತ್ತಲೆ... ಆದರೇನು ಮರುಳೆ???
ದೇಹದೊಳಗೂ ಕತ್ತಲೆ
ಧರೆಯಾಚೆಗೂ ಕತ್ತಲೆ
ನಡುವೆ ಬೆಳಕಲ್ಲಿ ಮಾತ್ರ ನಾ ಬೆತ್ತಲೆ... ಸತ್ಯವದು ಇರುಳೇ...

ಕೊಂಕನೆಲ್ಲ ಬಿಂಬಿಸುವ
ಜಗವನೆಲ್ಲ ತೋರಿಸುವ
ಬೆಳಕು ಜೀವಕ್ರಾಂತಿಯ ಮಾಡಿಹಳು... ಆದರೇನು ಮರುಳೆ???
ಒಡಲಲೆಲ್ಲವನು ಬಚ್ಚಿಟ್ಟು
ಮಡಿಲಲ್ಲಿ ಮಲಗಿಸುವಳು
ಪರಮಶಾಂತಿಯಲಿ, ಅವಳೇ ತಾಯಿ ಕತ್ತಲೆ... ಸತ್ಯವದು ಇರುಳೆ...

ದಿನಕೊಮ್ಮೆ ಬರುವ
ಬೆಳಕೆಂಬ ಭ್ರಮೆಯಲ್ಲಿ
ಬದುಕ ರೂಡಿಸಿಕೊಂಡರೆಮ್ಮವರು,.. ಆದರೇನು ಮರುಳೆ???
ಧನ್ಯರಿಗೆ ಮಾತ್ರ
ಬದುಕೆಲ್ಲ ಕವಿದಿಹಳು
ದಟ್ಟವಾಗಿ ತಾಯಿ ಕತ್ತಲೆ... ನಾನಂತೂ ಧನ್ಯ ಓ ಇರುಳೆ...
                                -ಕೆ. ಸಿ. ಸಂಪತ್ ಕುಮಾರ್...