Friday, March 31, 2017

ಕನ್ಯಾಕುಮಾರಿಯಿಂದ ಕಾಶ್ಮೀರಕ್ಕೆ... (ಪಯಣಕ್ಕೊಂದು ಪಯಣ)

ಕನ್ಯಾಕುಮಾರಿಯಿಂದ ಕಾಶ್ಮೀರಕ್ಕೆ

ಮೊದ ಮೊದಲು http://kcsampath.blogspot.in/2017/03/blog-post.html

ಪಯಣಕ್ಕೊಂದು ಪಯಣ


        ಪ್ರವಾಸದ ಎಲ್ಲ ತಯಾರಿಗಳು ನೆಡೆಯುತ್ತಲೇ ಇದ್ದವು.

        ಶಿವು ಮತ್ತು ಶರತ್, ಬೈಕುಗಳನ್ನು ಬೆಂಗಳೂರಿನಿಂದ ಕನ್ಯಾಕುಮಾರಿಗೆ ಸಾಗಿಸಲು ಹಲವಾರು Packers & Movers ಗಳ ಬಳಿ ವಿಚಾರಿಸಿ ಕೊನೆಗೆ HSR lay-out ನ 'Jet Relocations' ಮೂಲಕ ಸಾಗಿಸುವುದಾಗಿ ತೀರ್ಮಾನಿಸಿದರು.
        ಅವರ ಪ್ರಕಾರ, ನಾವು ಶನಿವಾರ ಬೈಕುಗಳನ್ನು ಕನ್ಯಾಕುಮಾರಿಯಲ್ಲಿ ಪಡೆಯಬೇಕಾದರೆ, ಸೋಮವಾರ ಸಂಜೆಯೇ ಅವರ ಆಫೀಸ್ ಗೆ ಬೈಕುಗಳನ್ನು ತಲುಪಿಸಬೇಕು. ಹಾಗಿದ್ದಲ್ಲಿ ಮಾತ್ರ ಅದು ಒಂದು ದಿನ ಮುಂಚೆಯೇ ಅಲ್ಲಿಗೆ ತಲುಪುತ್ತದೆ ಎಂದು ಅವರು ನಮಗೆ ಹೇಳಿದ್ದರು.
        ಅಷ್ಟರ ಒಳಗೆ ನಾವು ಮೂವರೂ ಹಲವಾರು RE - Riders Group ಗಳ ಸಲಹೆಯಂತೆ, ಬನಶಂಕರಿಯ 'Om Shakthi Bullet Services' ನಲ್ಲಿ ಬೈಕುಗಳನ್ನು ಸರ್ವಿಸ್ ಮಾಡಿಸಿ, ಪ್ರವಾಸಕ್ಕೆ ಬೇಕಾದ Extra lights, Luggage carriage ಗಳನ್ನು ಜೋಡಿಸಿ, ಆ ಹಿಂದಿನ ವಾರಾಂತ್ಯದಲ್ಲೇ ತಯಾರಾಗಿಬಿಟ್ಟೆವು.

ಜನವರಿ 9, 2017
ಸೋಮವಾರ
        ಮೂವರೂ ಇಂದು ಸಂಜೆ 6 ಕ್ಕೆ Jet Relocations ಆಫೀಸ್ ತಲುಪುವುದಾಗಿ ಮಾತಾಡಿಕೊಂಡು ಆಫೀಸ್ ನಿಂದ ಹೊರಟೆವು. ತಪ್ಪು Google-Map Routes ನಿಂದಾಗಿ ಇನ್ನೆಲ್ಲೋ ಹೋಗಿ, ಮತ್ತೆ ಮತ್ತೆ ವಿಚಾರಿಸಿ ಕೊನೆಗೆ ಆ ಆಫೀಸ್ ತಲುಪಿದೆವು.
        ನಮ್ಮೆಲ್ಲಾ Documents ತೆಗೆದುಕೊಂಡು, ಪೂರ್ತಿ ದುಡ್ಡು ಪಡೆದು, ನಮ್ಮೆದುರೇ ಬೈಕುಗಳ packing ಮಾಡಿದರು. ಒಂದು ಮಟ್ಟಿಗೆ ನಮಗೆಲ್ಲ ಸಮಾಧಾನವಾಗುವಂತೆಯೇ packing ಮಾಡಿದರು. ನಮ್ಮ ಪ್ರಯಾಣದ ವಿಷಯಗಳನ್ನೆಲ್ಲಾ ತಿಳಿಸಿ, ನಮ್ಮ ಬೈಕುಗಳಿಗೆ ಯಾವುದೇ damage ಆಗದಂತೆ, ಕನ್ಯಾಕುಮಾರಿ ತಲುಪಿಸುವ ಭರವಸೆ ಪಡೆದು ಹೊರಡುವಷ್ಟರಲ್ಲಿ ರಾತ್ರಿ ಹತ್ತಾಗಿತ್ತು. ಕ್ಯಾಬ್ ಹಿಡಿದು ಮೂವರೂ ತಮ್ಮ ತಮ್ಮ ಮನೆ ಸೇರಿದೆವು.



ಇದು, ನಮ್ಮ ಪ್ರವಾಸದ ಮೊದಲ ಹೆಜ್ಜೆ.
* * *

ಜನವರಿ 13, 2017
ಶುಕ್ರವಾರ

        ಬೆಳಿಗ್ಗೆ 6 ಕ್ಕೆ ಎದ್ದವನೇ, ತರಾತುರಿಯಿಂದ ಸ್ನಾನಾದಿಗಳನ್ನು ಮುಗಿಸಿ, ಸಂಜೆಗೆ ಹೊರಡಲು ಬೇಕಾದ ಎಲ್ಲಾ luggage ಪ್ಯಾಕ್ ಮಾಡಿ ಇಟ್ಟು, ಬೆಳಗ್ಗೆ 8 ಕ್ಕೆ ಮನೆಯಿಂದ ಹೊರಟುನಿಂತೆ.
        ಈ ದಿನ ಸಂಜೆ 6.45 ಕ್ಕೆ ನಮ್ಮ ಕನ್ಯಾಕುಮಾರಿಯ ಬಸ್ ಹೊರಡುತ್ತಿರುವುದು.
        ಆದರೂ ಇಷ್ಟು ಬೇಗ ಎಲ್ಲ ಕೆಲಸ ಮುಗಿಸಿ, ತಯಾರಾಗಿ ಹೊರಟಿದ್ದು ಎಂದಿನಂತೆ ಆಫೀಸಿಗಲ್ಲ, ಬದಲಾಗಿ Airportಗೆ.

        ಕಾರಣವಿಷ್ಟೇ, ಈ ಪ್ರವಾಸದ ಸಿದ್ಧತೆಯಲ್ಲಿ ತೊಡಗಿದ್ದಾಗ, ನನಗೂ ಒಂದು Action camera ಖರೀದಿಸಲು ಶರತ್ ಸೂಚಿಸಿದರು. ಅದು ಏನೆಂದೇ ಗೊತ್ತಿರದಿದ್ದ ನಾನು, ಅಲಿ ಇಲ್ಲಿ ಹುಡುಕಾಡಿ, ಅದು ಕ್ರೀಡೆಗಳಲ್ಲಿ (Mountain Biking, Off-road sports), ಪ್ರವಾಸಗಳಲ್ಲಿ, ಹಲವಾರು ಸಾಹಸಗಳಲ್ಲಿ (Scuba diving, Sky diving etc) ಬಳಸುವ ವಿಶೇಷ ಕ್ಯಾಮೆರಾ ಎಂದು ತಿಳಿದುಕೊಂಡೆ. ಶರತ್ಅವರ  ಬಳಿ ಈಗಾಗಲೇ ಒಂದು SJCAM Action camera ಇದ್ದಿದ್ದರಿಂದ, ನನಗೆ ಇನ್ನೂ ಉತ್ತಮ ಎನ್ನಬಹುದಾದ GoPro ಕ್ಯಾಮೆರಾ ಖರೀದಿಸಿ ಎಂದರು. ಇಲ್ಲಿ ಅದು ಬಹಳ ದುಬಾರಿಯಾಗಿದ್ದರಿಂದ, ಅಮೇರಿಕಾದಿಂದ ತರಿಸಿಕೊಂಡರೆ ಸ್ವಲ್ಪ ಕಡಿಮೆಯಾಗಬಹುದು ಎಂದು ತಿಳಿಯಿತು.
        ಈಗ ಅಮೇರಿಕಾದಿಂದ ಭಾರತಕ್ಕೆ ಬರುವವರು ಬೇಕಾಗಿತ್ತು. ನನ್ನ ಸಹೋದ್ಯೋಗಿ-ಸ್ನೇಹಿತ ರತ್ನವೇಲ್ ಹೇಳಿದ, ಆತನ ಪರಿಚಿತರೊಬ್ಬರು ಅಲ್ಲಿಂದ ಹೊಸ ವರ್ಷಕ್ಕೆ ಇಲ್ಲಿಗೆ ಬರುವವರಿದ್ದಾರೆಂದು. ಹಾಗೇ ಆತನ ಇನ್ನೊಬ್ಬ ಸ್ನೇಹಿತ GoPro ಕಂಪನಿಯಲ್ಲೇ ಕೆಲಸ ಮಾಡುತ್ತಿದ್ದರಿಂದ, ಅವರೇ ಖರೀದಿ ಮಾಡಿದ್ರೆ 50% ಡಿಸ್ಕೌಂಟ್ ಸಿಗುತ್ತೆ ಅಂದರು. ಹಾಗಾದರೆ ಅದು ಇನ್ನೂ ಅನುಕೂಲವೇ ಆಯಿತು ಎಂದುಕೊಂಡು, ಅವರ ಮೂಲಕವೇ ಕೊಂಡುಕೊಳ್ಳಲು ತೀರ್ಮಾನಿಸಿದೆವು. ಆದರೆ ನಮ್ಮ ಯೋಜನೆಯಂತೆ ಎಲ್ಲವೂ ನೆಡೆಯದೆ, ಅವರು ಕ್ಯಾಮೆರಾ ಕೊಂಡು ಕೊಡುವಷ್ಟರಲ್ಲಿ ಆ ಇನ್ನೊಬ್ಬ ಸ್ನೇಹಿತ ಭಾರತಕ್ಕೆ ಬಂದಾಗಿತ್ತು.
        ಈಗ ಉಳಿದಿದ್ದು ಒಂದೇ ದಾರಿ, ಅವರು ಅದನ್ನ Fedex ಅಲ್ಲಿ ಪೋಸ್ಟ್ ಮಾಡ್ತೀನಿ ಅಂದ್ರು. ಇಷ್ಟೆಲ್ಲಾ ಪ್ಲಾನ್ ಮಾಡಿ ಅದನ್ನು ಖರೀದಿಸುವಲ್ಲಿ ಉಳಿಸಿದ ಹಣದಲ್ಲಿ ಅರ್ಧ ಈಗ Fedex corier ಗೆ ಕೊಡಬೇಕಾಯ್ತಲ್ಲ ಎಂದು ಬೇಜಾರಾಯ್ತು, ಆದರೂ ಬೇರೇನೂ ಮಾಡುವಂತಿರಲಿಲ್ಲ. ಹಾಗಾಗಿ "ಸರಿ, ಕಳುಹಿಸಿ" ಎಂದೆ. ಅವರೇನೋ ಕಳುಹಿಸಿದರು, ಆದರೆ ಅದು ಹತ್ತಾರು ದಿನವಾದರೂ ನಮ್ಮ ವಿಳಾಸಕ್ಕೆ ತಲುಪಲೇ ಇಲ್ಲ.
        ನಾವು ಹೊರಡುವ ದಿನ ಬೇರೆ ಹತ್ತಿರಾಗುತ್ತಾ ಬಂದಿತ್ತು. ಅಂತೂ ಇನ್ನು ಎರಡೇ ದಿನ ಇದೆ ಹೊರಡಲು ಎಂದಾಗ, ನಾವೇ Fedex ಗೆ ಫೋನ್ ಮಾಡಿ ದೂರು ಕೊಟ್ಟ ಮೇಲೆ, ಅವರು ಹೇಳಿದರು "ನಿಮ್ಮ ಪಾರ್ಸೆಲ್ ಬೆಂಗಳೂರು ಏರ್ಪೋರ್ಟ್ ಕಸ್ಟಮ್ಸ್ ಅಲ್ಲಿ ಸಿಕ್ಕಿ ಹಾಕಿ ಕೊಂಡಿದೆ. ಅವರು ತೆರೆವುಗೊಳಿಸುವವರೆಗೆ ನಾವು ನಿಮಗೆ ತಲುಪಿಸಲಾಗುವುದಿಲ್ಲ" ಎಂದು.
       ಈಗ ಅಂತೂ, ಕ್ಯಾಮೆರಾ ಎಲ್ಲಿದೆ ಅಂತ ಗೊತ್ತಾಯ್ತು. ಇನ್ನು ಉಳಿದಿರುವುದು ಇಂದು ಮತ್ತೆ ನಾಳೆ ಅಷ್ಟೇ, ಸರಿ ಇನ್ನು ತಡ ಯಾಕೆಂದು ಸಂಜೆ ಕೆಲಸ ಮುಗಿಸಿ ೮ ಘಂಟೆಗೆ ಏರ್-ಪೋರ್ಟ್ಗ ಗೆ ಹೊರಟು ಬಿಟ್ಟೆವು. ಅಲ್ಲಿಗೆ ತಲುಪಿದ ಮೇಲೆಯೇ ಗೊತ್ತಾಗಿದ್ದು, ಕಸ್ಟಮ್ಸ್ ಆಫೀಸ್ ಬೆಳಗ್ಗೆ 10 ರಿಂದ ಸಂಜೆ 6 ರವರೆಗೆ ಮಾತ್ರ ತೆರೆದಿರುತ್ತದೆ, ಎಂದು. ಸರಿಯಾಗಿ ವಿಚಾರಿಸಿಕೊಳ್ಳದೇ ನಾವು ಅಷ್ಟು ದೂರ ಸುಮ್ಮನೆ ಬಂದು, ಬಂದ ದಾರಿಗೆ ಸುಂಕವನ್ನೂ ಕಟ್ಟಿ (ಏರ್ಪೋರ್ಟ್ Toll) ಬರಿ ಗೈಲಿ, ಬರಿ ಹೊಟ್ಟೆಯಲ್ಲಿ ಮನೆ ತಲುಪಿದೆವು. ನನ್ನ ಕೆಲಸಕ್ಕಾಗಿ ರತ್ನವೇಲ್ ಮತ್ತು ಜೊತೆಗೆ ಬಂದ ಇನ್ನೊಬ್ಬ ಗೆಳೆಯನಿಗೆ ಸುಮ್ಮನೆ ತೊಂದರೆ ಕೊಟ್ಟದ್ದಕ್ಕೆ, ಇನ್ನೂ ಬೇಸರವಾಯ್ತು. ಆದರೆ ಮರುದಿನ ಬೆಳಗ್ಗೆ ಮತ್ತೆ ಏರ್ಪೋರ್ಟಿಗೆ ಬರಲೇಬೇಕಾಗಿತ್ತು. ಹಾಗಾಗಿ ಅವರಿಬ್ಬರನ್ನೂ ವಾಪಸ್ ಕಳುಹಿಸಿಕೊಟ್ಟು, ನಾನು ಕ್ಯಾಬ್ ನಲ್ಲಿ ಮನೆಗೆ ಬಂದು ಮಲಗಿದಾಗ ರಾತ್ರಿ ಸುಮಾರು 1 ಘಂಟೆಯಾಗಿತ್ತು.

       ಈಗ ಇಷ್ಟು ಬೇಗ ಎದ್ದು, ಸಂಜೆಯ ಬಸ್ಸಿಗೆ ಎಲ್ಲ ಪ್ಯಾಕಿಂಗ್ ಮುಗಿಸಿ, ಏರ್-ಪೋರ್ಟ್ ಗೆ ಅವಸರವಾಗಿ ಹೊರಡಲು ಇಷ್ಟೇ ಕಾರಣ.

       ರತ್ನವೇಲುಗೆ ಏರ್ಪೋರ್ಟಿಗೆ ಸೀದಾ ಬರಲು ಹೇಳಿದ್ದೆ. ಆದರೆ ನಾನು ಮನೆಯಿಂದ ಏರ್-ಪೋರ್ಟ್ ಗೆ ಹೋಗಿ ಕ್ಯಾಮೆರಾ ತೆಗೆದುಕೊಂಡು, ಮನೆಗೆ ವಾಪಸ್ಸು ಬಂದು, ಎಲ್ಲ ಲಗೇಜ್ ಬ್ಯಾಗುಗಳೊಡನೆ ವಿಜಯನಗರದಿಂದ ಮಡಿವಾಳಕ್ಕೆ ಹೋಗಬೇಕಿತ್ತು. ಇಷ್ಟನ್ನೆಲ್ಲಾ ಬಸ್ ಅಥವಾ ಕ್ಯಾಬ್ ನೆಚ್ಚಿಕೊಂಡು ಮಾಡುವುದು ಸಾಧ್ಯವೇ ಇರಲಿಲ್ಲ. ನನ್ನ ಬಳಿ ಬೈಕ್ ಬೇರೆ ಇಲ್ಲವಲ್ಲಾ, ಆಗ ನಮ್ಮ ಭಾವನ ಬೈಕ್ ನೆನಪಾಯ್ತು, ಆದರೆ ಅವರು ಬೈಕನ್ನು ಆಫೀಸಿನಲ್ಲಿ ಬಿಟ್ಟು ಕೆಲಸದ ಮೇಲೆ ಬೇರೆ ಊರಿಗೆ ಹೋಗಿದ್ದರು. ಅಂತೂ ಅಕ್ಕನ ಬಳಿಯಿಂದ ಇನ್ನೊಂದು ಕೀ ಪಡೆದು, ಅವರ ಆಫೀಸ್ ತನಕ ಆಟೋದಲ್ಲಿ ಹೋಗಿ, ಅಲ್ಲಿಂದ ಏರ್-ಪೋರ್ಟ್ ಗೆ ಬೈಕಲ್ಲಿ ತಲುಪುವಷ್ಟರಲ್ಲಿ ಸುಮಾರು 10 ಘಂಟೆಯಾಗಿತ್ತು.
        ನಾನೇನೋ ತಲುಪಿಬಿಟ್ಟೆ, ಆದರೆ ಪೋಸ್ಟ್ ಬಂದಿರುವುದು ಆತನ ಹೆಸರಿಗೆ ಆಗಿತ್ತು. ಈಗ ಬೇರೆ ವಿಧಿಯಿಲ್ಲದೇ ಅವನಿಗಾಗಿ ಕಾಯತೊಡಗಿದೆ. ಸುಮಾರು 11.30ಕ್ಕೆ ಆತ ಬಂದ. ನನ್ನ ಪುಣ್ಯಕ್ಕೆ ಅವನು ಬೈಕಿನಲ್ಲಿ ಬಂದಿದ್ದ. ಅಕಸ್ಮಾತ್ ಕಾರಿನಲ್ಲಿ ಬಂದಿದ್ದರೆ, ಆತ ತಲುಪುವಷ್ಟರಲ್ಲಿ ಸಂಜೆಯಾಗುತಿತ್ತೋ ಏನೋ, ನನ್ನ ದುರಾದೃಷ್ಟಕ್ಕೆ ಎಲ್ಲಾ ಕಡೆ ಅಷ್ಟು ಟ್ರಾಫಿಕ್ ಇತ್ತು ಆವತ್ತು.

        ಹಿಂದಿನ ದಿನ ರಾತ್ರಿ ನನ್ನ ಸ್ನೇಹಿತರೊಬ್ಬರು, ಅವರ ಪರಿಚಿತ ಕಸ್ಟಮ್ಸ್ ಆಫೀಸರ್ ಒಬ್ಬರ ನಂಬರ್ ಕೊಟ್ಟು, ಅವರ ಪರಿಚಯ ಮಾಡಿಕೊಂಡು ಯಾವುದೇ customs fee ಇಲ್ಲದೇ ಕ್ಯಾಮೆರಾ ತೆಗೆದುಕೊಂಡು ಬರಲು, ವ್ಯವಸ್ಥೆ ಮಾಡಿಕೊಟ್ಟಿದ್ದರು.

        ಆತ ಬಂದೊಡನೆ, ಅಲ್ಲಿ Post-Cargo Fedex ಮಳಿಗೆಗೆ ಹೋಗಿ ವಿಚಾರಿಸಿದ ಮೇಲೆ ಗೊತ್ತಾಗಿದ್ದು, ಅಲ್ಲಿ ಎರಡು ಮೂರು ದಿನದಿಂದ ಆ ಚಿಕ್ಕ ಕ್ಯಾಮೆರಾ ಬಾಕ್ಸ್ ಅನ್ನು ಎಲಿಟ್ಟಿದ್ದಾರೆಂದು ಅವರಿಗೇ ಗೊತ್ತಿಲ್ಲವೆಂದು. ನಂಗೆ ಕೋಪ ನೆತ್ತಿಗೇರತೊಡಗಿತು. ಅದು ಕಸ್ಟಮ್ಸ್ ನವರ ಬಳಿಯಿದೆ ಎಂದು Fedexನವರು, ಫೆಡೆಕ್ಸ್ ಮಳಿಗೆಯಲ್ಲಿದೆ ಎಂದು ಕಸ್ಟಮ್ಸ್ ನವರು, ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ ಕನಿಷ್ಠ ಹತ್ತು ಸಾರಿಯಾದರೂ ಸುತ್ತಾಡಿಸಿದರು. ಬೆಳಿಗ್ಗೆಯಿಂದ ಏನೂ ತಿನ್ನದೇ ಕಾದು ಕುಳಿತಿದ್ದ ನನಗೆ, ಮಧ್ಯಾಹ್ನ 2 ಘಂಟೆಯಾದರೂ ಅದು ಸಿಕ್ಕಿತೆಂದು ಅವರು ಹೇಳಲೇ ಇಲ್ಲ. ಕೊನೆಗೆ ನಾವು ಜಗಳಕ್ಕೆ ನಿಂತಾಗ, ಮತ್ತೆ ಅಲ್ಲಿ ಇಲ್ಲಿ ಹುಡುಕಾಡಿ ತೆಗೆದು, ಹೇಳಿದರು "ಈಗ ಸಿಕ್ಕಿತು, ಆದರೆ ನಾವು ಇದಕ್ಕೆ ಕಸ್ಟಮ್ಸ್ ಫೀ ಕಟ್ಟಿಯಾಗಿದೆ. ಅದನ್ನು ನೀವು ನಮಗೆ ಪಾವತಿಸಿದರಷ್ಟೇ ನಿಮ್ಮ ಕ್ಯಾಮೆರಾ ಕೊಡುವುದು" ಎಂದು.

        ನಾನು ಪರಿಚಯ ಸಿಕ್ಕಿದ್ದ ಕಸ್ಟಮ್ಸ್ ಆಫೀಸರ್ ಬಳಿ ವಿಚಾರಿಸಿದಾಗ ಅವರು ಹೇಳಿದರು, "ಫೆಡೆಕ್ಸ್ ನವರು ಮೊದಲೇ, ಅದರ ಫೀ ಕಟ್ಟಿಯಾಗಿದೆ. ಅವರು ಫೀ ಕಟ್ಟದೆ ನಿಮ್ಮ ಅನುಮತಿಗಾಗಿ ಕಾದಿದ್ದರೆ, ಆಗ ನಾನು ಅದನ್ನು ತೆರವು ಗೊಳಿಸುಬಹುದಿತ್ತು. ಆದರೀಗ ಫೀ ಕಟ್ಟಿದ್ದನ್ನು ವಾಪಸ್ಸು ಮರುಪಾವತಿಯ ವ್ಯವಸ್ಥೆಯೇ ಇಲ್ಲ ಕಂಪ್ಯೂಟರ್ ನಲ್ಲಿ", ಎಂದರು.

        "ಛೇ,,, ಅಲ್ಲಿಂದ ತರಿಸಿದ್ದಕ್ಕೆ ಸ್ವಲ್ಪವಾದರೂ ಉಳಿಯಿತು ಅಂದುಕೊಂಡಿದ್ದ ಹಣವನ್ನು ಅನ್ಯಾಯವಾಗಿ ಇಲ್ಲಿ ಮತ್ತೆ ಕಟ್ಟಬೇಕಾಯಿತಲ್ಲ..." ಎಂದು ಹೊಟ್ಟೆ ಉರಿಯತೊಡಗಿತು. ಆ Fedex ನ ಅಧಿಕಾರಿಗೆ ಆವತ್ತು ನಾನು ಹಾಕಿದಷ್ಟು ಶಾಪ ಇನ್ನಾರಿಗೂ ಹಾಕಿಲ್ಲ ಅನಿಸುತ್ತೆ. ಏನೂ ಮಾಡುವಂತಿಲ್ಲ ಇಲ್ಲೂ ನಾನು ನಿರುಪಾಯನಾಗಿ ಹೋದೆ. ಕೊನೆಗೆ "ಸರಿ ಅದನ್ನು ಪಾವತಿಸುತ್ತೇನೆ,  ಈಗಲೇ ಕ್ಯಾಮೆರಾ ಕೊಡಿ" ಎಂದಾಗ, ಇದನ್ನು ನಮ್ಮಿಂದ ಕ್ಲಿಯರ್ ಮಾಡಲು ಇನ್ನೂ ಅರ್ಧ ಘಂಟೆ ಬೇಕು ಎಂದರು. ನನಗೆ ಬಂದ ಸಿಟ್ಟಿಗೆ ಮೈಯೆಲ್ಲಾ ಉರಿಯತೊಡಗಿತು, ಮತ್ತೆ ಅದೇ ಪರಿಸ್ಥಿತಿ ನಾನೇನೂ ಮಾಡುವಂತಿರಲಿಲ್ಲ.  ಆಗ ಸಮಯವಾಗಲೇ 3ರ ಹತ್ತಿರಾಗಿತ್ತು. ನಾನು ಇನ್ನೂ ಕಾದು ಕುಳಿತರೆ, ಮನೆಗೆ ಹೋಗಿ ಲಗೇಜಿನೊಂದಿಗೆ ಬಸ್ ನಿಲ್ದಾಣ ತಲುಪುವುದು ಅಸಾಧ್ಯ ಎನಿಸಿತು.

        ಆಗ ರತ್ನವೇಲ್ ಹೇಳಿದ, "ನೀನು ಇಲ್ಲಿಂದ ಹೊರಡು ಈಗ, ಮನೆಗೆ ಹೋಗಿ ತಯಾರಾಗಿ, ಎಲ್ಲ ಲಗೇಜಿನೊಂದಿಗೆ ಮಡಿವಾಳದ ಬಸ್ ನಿಲ್ದಾಣಕ್ಕೆ ಬಾ... ಅಷ್ಟರಲ್ಲಿ, ಕ್ಯಾಮೆರಾ ತೆಗೆದುಕೊಂಡು ನಾನೂ ಅಲ್ಲಿಗೆ ಬಂದು, ಕ್ಯಾಮೆರಾವನ್ನು ನಿನಗೆ ತಲುಪಿಸುತ್ತೇನೆ" ಅಂದ.
        "ಸರಿ,,, Bye..." ಎಂದು ಹೇಳಿ, ತಕ್ಷಣ ಅಲ್ಲಿಂದ ಹೊರಟೆ.

        ನಾವು ಇಷ್ಟೆಲ್ಲಾ ದೊಂಬರಾಟ ಆಡಿಯೂ ಕೂಡ ಕೊನೆಗೆ ನಮಗೆ ಆ ಕ್ಯಾಮೆರಾ ಸಿಕ್ಕಿದ್ದು ಎಲ್ಲಾ ಖರ್ಚು ಸೇರಿ, ಇಲ್ಲಿನ ಬೆಲೆಗಿಂತ ಸ್ವಲ್ಪವೇ ಸ್ವಲ್ಪ ಕಡಿಮೆ ಬೆಲೆಗೆ ಅಷ್ಟೇ,,, ಎಂಬ ಸಣ್ಣ ಬೇಸರವಾದರೆ, ಇಷ್ಟಕ್ಕಾಗಿ ಎಲ್ಲರಿಗೂ ಇಷ್ಟೊಂದು ತೊಂದರೆ ಕೊಟ್ಟೆನಲ್ಲಾ ಎಂದು ಬಹಳವೇ ಬೇಸರವಾಯ್ತು.

        ಅವಸರದಲ್ಲಿ, ಸ್ವಲ್ಪ rash-drive ಮಾಡಿಕೊಂಡೇ ಏರ್-ಪೋರ್ಟಿನಿಂದ ಬಂದರೂ, ಮನೆ ತಲುಪುವಷ್ಟರಲ್ಲಿ ಸಮಯ 4 ಘಂಟೆಯಾಗಿತ್ತು. ಒಂಚೂರೂ ತಡ ಮಾಡದೇ, ಮತ್ತೊಮ್ಮೆ ಎಲ್ಲ ಲಗೇಜುಗಳನ್ನು, ದುಡ್ಡು - ID cards - Documents ಎಲ್ಲವನ್ನೂ check ಮಾಡಿಕೊಂಡೆ. ನಾನೂ fresh ಆಗಿ ಹೊರಟಾಗ ನನ್ನ ವಾಚು 4.30 ತೋರಿಸುತ್ತಿತ್ತು.

        ನಾಳೆ ಶನಿವಾರ, ಸಂಕ್ರಾತಿ ಬೇರೆ ಇರುವುದರಿಂದ ಬಹಳಷ್ಟು ಜನ ತಮ್ ತಮ್ಮ ಊರುಗಳಿಗೆ ಹೊರಡುತ್ತಾರೆ. ಸಿಟಿ ಪೂರಾ ಟ್ರಾಫಿಕ್ ಜಾಮ್ ಆಗುವುದು ಗೊತ್ತಿದ್ದರಿಂದಲೇ, ನಾನು 6.45ರ ಬಸ್ಸಿಗೆ, ಮನೆಯಿಂದ 4ಕ್ಕೆ ಹೊರಟರೆ ಅಲ್ಲಿಗೆ ಸರಿಯಾಗಿ ತಲುಪಬಹುದೆಂದು ಯೋಚಿಸಿದ್ದೆ. ಈಗಾಗಲೇ ಅರ್ಧ ಘಂಟೆ ತಡವಾಗಿತ್ತು, ತಕ್ಷಣ ಟಾಕ್ಸಿ ಬುಕ್ ಮಾಡಿ, ಮನೆಯಿಂದ ಹೊರಗೆ ಬಂದು ಕಾಯುತ್ತ ನಿಂತೆ. ನನ್ನ 23 ದಿನಕ್ಕಾಗುವ ಲಗೇಜ್, ಬೈಕಿನ ಸಾಮಾನುಗಳು, ನನ್ನ ಹೆಲ್ಮೆಟ್, ನನ್ನ ಜಾಕೆಟ್ ಗಳು, ಎಲ್ಲವನ್ನೂ ನಾಲ್ಕು ಬ್ಯಾಗುಗಳಲ್ಲಿ ತುರಿಕಿಕೊಂಡು, ರೈಲು ನಿಲ್ದಾಣದ ಕೂಲಿಯಂತೆ ಎಲ್ಲ ಬ್ಯಾಗುಗಳನ್ನೂ ಹೊತ್ತು ಮನೆಗೆ ಬೀಗ ಹಾಕಿ ಹೊರಬಂದೆ. ನಾಲ್ಕನೇ ಮಹಡಿಯಿಂದ ಕೆಳಗೆ ಬರುವಷ್ಟರಲ್ಲೇ ನಂಗೆ ಹೆಗಲೆಲ್ಲಾ ನೋವು ಬಂದು, ಅಬ್ಬಾ ಇಷ್ಟು ಲಗ್ಗೇಜನ್ನು ಮುಂದಿನ 23 ದಿನ ಹೇಗಪ್ಪಾ ಹೊತ್ತು ತಿರುಗುವುದು ಅನ್ನುವ ದಿಗಿಲು ಹತ್ತಿತು.

        ಕ್ಯಾಬ್ ನೊಳಗೆ ಲಗೇಜ್ ಹಾಕಿ ಕುಳಿತು, "ಮಡಿವಾಳಕ್ಕೆ ಡ್ರಾಪ್ ಇರೋದು ಬೇಗ ಹೋಗಿ" ಅಂದೆ. ಅಷ್ಟೊತ್ತಿಗಾಗಲೇ ಸಿಟಿ ಪೂರಾ ಟ್ರಾಫಿಕ್ ಶುರುವಾಗಿತ್ತು. ಮ್ಯಾಪ್ ನಲ್ಲಿ ದೂರ 13ಕಿ.ಮೀ ಬೇಕಾಗಬಹುದಾದ ಸಮಯ ಒಂದೂವರೆ ಘಂಟೆ ಎಂದು ತೋರಿಸುತಿತ್ತು.
        ಶರತ್ ಮತ್ತು ಶಿವು ಇಬ್ಬರೂ ಹೊರಟರೋ ಎಂದು ಫೋನ್ ಮಾಡಿ ಕೇಳಿದೆ, ಅವರು ಮನೆಯಿಂದ ಹೊರಟು ದಾರಿಯಲ್ಲಿಂದಾರೆಂದೂ, ಅವರೂ ಟ್ರಾಫಿಕ್ ನಲ್ಲಿ ಸಿಕ್ಕಿಕೊಂಡಿರುವರೆಂದು ತಿಳಿಯಿತು. ಕ್ಯಾಬ್ ಡ್ರೈವರ್ ಜೊತೆ ಮಾತಾಡುತ್ತ ಕುಳಿತೆ, ಆತನೂ ಹಾಸನದ ಬಳಿಯ ಆಲೂರಿನವರೆಂದು ಹೇಳಿದನು.
        ನನಗೆ, "ನೀವು ಹಾಸನದವರು ಅಂದಿರಿ, ಮಡಿವಾಳದಿಂದ ಎಲ್ಲಿಗೆ ಹೊರಟಿರಿ" ಎಂದು ಕೇಳಿದ. ನಾನು ನಮ್ಮ ಪ್ರವಾಸದ ಬಗ್ಗೆ ಹೇಳಿದೆ. ಸ್ವಲ್ಪ ಆಶ್ಚರ್ಯಗೊಂಡ ಆತ, ಹೇಗೆ,,? ಎತ್ತ,,? ಎಂದೆಲ್ಲ ಕೇಳತೊಡಗಿದ. ಆತನ ಉತ್ತರ ಭಾರತದ ಕಡೆಯ ಅನುಭವಗಳೆನ್ನೆಲ್ಲ ಹೇಳಿದ. ಹೇಗೋ Time pass ಅಂತೂ ಆಗುತಿತ್ತು. ಆದರೆ ಮಡಿವಾಳ ತಲುಪುವಷ್ಟರಲ್ಲಿ 7.10 ಆಗಿತ್ತು. 13ಕಿ.ಮೀ ಗೆ ಎರಡೂವರೆ ಘಂಟೆಯಷ್ಟು ಸಮಯ ಹಿಡಿಯಿತು. "ಒಳ್ಳೆಯದಾಗಲಿ ಸರ್, ಹುಷಾರಾಗಿ ಹೋಗಿ ಬನ್ನಿ... All the Best" ಎಂದು ನನ್ನನ್ನು ಅಲ್ಲಿ ಇಳಿಸಿ ಹೋದ. ಅಷ್ಟರಲ್ಲಿ ಶರತ್-ಶ್ವೇತಾ ಅಲ್ಲಿ ತಲುಪಿದ್ದರು. ನಾವು ಹೋಗಬೇಕಿದ್ದ ಬಸ್ ಕೂಡ ಟ್ರಾಫಿಕ್ ಅಲ್ಲಿ ಸಿಕ್ಕಿ ತಡವಾಗಿ ಬರುತ್ತದೆಂದು ಅವರು ಕೇಳಿಕೊಂಡು, ನಮಗಾಗಿ ಕಾಯುತ್ತಿದ್ದರು.

        ನಾನು ತಲುಪುವ ಮೊದಲೇ ರತ್ನವೇಲ್ ಕ್ಯಾಮೆರಾ ತೆಗೆದುಕೊಂಡು ಏರ್ಪೋರ್ಟ್ ನಿಂದ ಅಲ್ಲಿಗೆ ಸೀದಾ ಬಂದು ನನಗೆ ಕಾಯುತ್ತ ನಿಂತಿದ್ದ. ಅದನ್ನು ನನಗೆ ಒಪ್ಪಿಸಿ, ನನಗೆ "All the best" ಹೇಳಿ, ಪ್ರವಾಸದ ವೇಳೆ ಏನೇ ತೊಂದರೆಯಾದರೂ ತನಗೆ ತಿಳಿಸಬೇಕೆಂದೂ, ತಾನು ಸಹಾಯ ಮಾಡುವುದಾಗಿಯೂ ತಿಳಿಸಿ , ವಾಪಸ್ ಹೊರಟನು. ನನ್ನ ಕೆಲಸಕ್ಕಾಗಿ ನಿನ್ನೆಯಿಂದಲೂ ನನ್ನ ಜೊತೆ ಅಲೆದು, ಈ ದಿನವೂ ಪೂರ್ತಿ ಆಫೀಸ್ ತಪ್ಪಿಸಿ ಏರ್ಪೋರ್ಟ್ ನಲ್ಲಿ ಕಳೆದು, ಮತ್ತೆ ಅಲ್ಲಿಂದ, ಬೆಂಗಳೂರಿನ ಆ ತುದಿಯಿಂದ ಈ ತುದಿಗೆ, ಈ ಕೆಟ್ಟ ಟ್ರಾಫಿಕ್ ನಲ್ಲಿ ಬಂದು ನನಗೆ ಕ್ಯಾಮೆರಾ ಕೊಟ್ಟು ಇನ್ನು 15ಕಿ.ಮೀ ವಾಪಸ್ ಇದೇ ಟ್ರಾಫಿಕ್ ನಲ್ಲಿ ಮನೆಗೆ ಹೋಗಲು ಹೊರಟಿದ್ದ ಆತನ ಸಹಾಯಶೀಲತೆ, ಸ್ನೇಹಗುಣವನ್ನು ಮೊದಲಿನಿಂದಲೂ ಬಹಳಷ್ಟು ಕಂಡಿದ್ದ ನನಗೆ, ಇಂದು ಆತನ ಬಗ್ಗೆ ಇದ್ದ ಗೌರವ ಮತ್ತು ಸ್ನೇಹ ಇನ್ನೂ ಹೆಚ್ಚಾಯಿತು. ಒಂದು ಸ್ನೇಹಮಯ ಅಪ್ಪುಗೆಯ ಮೂಲಕ ವಿಧಾಯ ಹೇಳಿ, ನಿರತವಾಗಿ ನಾನಿರುವ ಜಾಗಗಳ ಬಗ್ಗೆ ದಿನವೂ ಸಂಪರ್ಕದಲ್ಲಿರುವೆ ಎಂದು ತಿಳಿಸಿ ಆತನನ್ನು ಕಳುಹಿಸಿಕೊಟ್ಟೆ.

        ಇತ್ತ ಶಿವು-ದೀಪಿಕಾ ಕೂಡ ಅಷ್ಟೊತ್ತಿಗೆ ಅಲ್ಲಿಗೆ ತಲುಪಿದರು. ಎಲ್ಲರೂ ಈಗ ತಡವಾಗಿ ಬರಲಿರುವ ಬಸ್ಸಿಗೆ ಕಾಯತೊಡಗಿದೆವು. ಅಂತೂ ಬಸ್ಸು ಹತ್ತಿ ಬೆಂಗಳೂರು ದಾಟುವುದರಲ್ಲಿ ಸಮಯ ಸುಮಾರು 9 ಆಗಿತ್ತು. ನಮ್ಮ ಲಗೇಜುಗಳ ರಾಶಿಯನ್ನು ಬಸ್ಸಿನಲ್ಲಿ ತುಂಬಿಕೊಂಡು ಕುಳಿತೆವು, ನಾವು ಇರುವವರು ಐದು ಜನ, ನಮ್ಮ ಬ್ಯಾಗುಗಳು ಬಾಕ್ಸುಗಳು ಸುಮಾರು ಹದಿನೈದು. Sleeper coach ನ ನೆಡೆದಾಡುವ ದಾರಿಯನ್ನೆಲ್ಲ ನಮ್ಮ ಬ್ಯಾಗುಗಳೇ ತುಂಬಿದ್ದರಿಂದ ಕಂಡಕ್ಟರ್ ನಮ್ಮ ಮೇಲೆ ಸಿಡಿಮಿಡಿಗೊಂಡ. ಅದು ಗೊತ್ತಾಗಿಯೇ ನಾವು ಆತನ ಕಡೆಗೆ ಗಮನವೇ ಕೊಡಲಿಲ್ಲ. ಸುಮ್ಮನೆ ನಮ್ಮ ಸೀಟುಗಳಲ್ಲಿ ಕುಳಿತುಕೊಂಡೆವು.

        ಇಂದು ಬೆಳಗಿನಿಂದ ನೆಡೆದ ನನ್ನ ಇಷ್ಟೆಲ್ಲಾ ಕೆಲಸುಗಳ ನಡುವೆ, ನಾನು ಏನನ್ನೂ ತಿಂದಿರಲಿಲ್ಲ. ಹಸಿವು ಜೀವ ಹಿಂಡುತ್ತಿತ್ತು. ಮುಂದೆ 10.30ರ ಸಮಯಕ್ಕೆ ಹೊಸೂರಿನ ಬಳಿಯಲ್ಲಿ ಪ್ರಯಾಣಿಕರ ಊಟಕ್ಕೆ ಬಸ್ಸು ನಿಂತಿತು. ತುಂಬಾ ಹಸಿದ ಹೊಟ್ಟೆಗೆ ಜಾಸ್ತಿ ತಿನ್ನಲೂ ಆಗಲಿಲ್ಲ, ಎಲ್ಲರೂ ಇಡ್ಲಿ ತಿಂದು ಬಿಸಿ ಬಿಸಿ ಕಾಫಿ ಕುಡಿದೆವು. ಅದು ರುಚಿಯಾಗೆ ಇತ್ತೋ, ಇಲ್ಲ ನನಗೆ ರುಚಿ ಅನಿಸಿತೋ ಗೊತ್ತಿಲ್ಲ, ಆದ್ರೂ ಅದು ಒಂಥರಾ ಚೆನ್ನಾಗಿತ್ತು, ದೇಹ ನಿರಾಳವಾಯ್ತು.

        ಇನ್ನು ಬೆಳಿಗಿನವರೆಗೆ ನೆಮ್ಮದಿಯಾಗಿ ಮಲಗಲು ಎಲ್ಲರೂ ನಿದ್ದೆಗೆ ಹೊರಳಿದೆವು. ನಮ್ಮನ್ನು ಹೊತ್ತ ಬಸ್ಸಿನ ಚಕ್ರಗಳು ಕನ್ಯಾಕುಮಾರಿಯ ಕಡೆಗೆ ನಿಧಾನವಾಗಿ ಉರುಳಿದವು.                 
* * *

ಹಾರ ಹೊರಟ ಹಕ್ಕಿ, ರೆಕ್ಕೆ ಕೊಡವಿಕೊಂಡಂತೆ
ಹಾಡೋ ಮೊದಲು ಕೊರಳು, ಶೃತಿಯನೆತ್ತಿಕೊಂಡಂತೆ
ಕವಿಯುತಿರುವ ಇರುಳು, ಕನಸನೊತ್ತು ಬಂದಂತೆ,
ಹೊರಟಿತೆಮ್ಮ ಪಯಣ, ಮಹಾಯಾನಕೆ ಬೆಸೆದುಕೊಂಡಂತೆ.
* * * * *

ದಿನ-1-ಕನ್ಯಾಕುಮಾರಿ-ಮಧುರೈ http://kcsampath.blogspot.fr/2017/04/1.html

Thursday, March 30, 2017

ಯಾವ ಪಾಪಕೆ ?


ನಸುನಗುವ ಕನಸೊಂದು
ಕಣ್ಣೀರ ಮಸುಕಲ್ಲಿ, ಮಂಜಾಗಿ ಹೋಯಿತೇ
ಎದೆಸುಡುವ ನೋವೊಂದು
ಇನ್ನೀಗ ಮನಸಲ್ಲಿ, ಒಂದಾಗಿ ಹೋಯಿತೇ

ಯಾವ ಪಾಪಕೆ ನನಗೆ, ಈ ಸಜೆಯಲ್ಲಿ ಪಾಲು,,,
ಜೀವಂತ ಶವವಾಗಿ, ಮುಂದಿಹುದು ಬಾಳು...
* * * * *

ಹಸಿರಾಗಿ ಬಾಳಲು, ಅವಕಾಶ ನೂರಿದ್ದವು,,,
ಸಿಡಿಲೇಟಿಗೆ ಸಿಕ್ಕಿ, ನುಚ್ಚು ನೂರಾದವು...
ಒಂದಾಗಿ ಸಾಗಲು, ಜೀವಗಳು ಸೇರಿದ್ದವು,,,
ಹುಸಿಶಾಪಕೆ ಬೆಚ್ಚಿ, ಬೇರೆ ಬೇರಾದವು...

ಬೆಳಕಿತ್ತ ಹಣತೆಯು
ಕೋಪದ ಉರಿಯಲ್ಲಿ, ಮನೆಯನೇ ಸುಟ್ಟಿತೇ
ಒಲವಿತ್ತ ಹೃದಯವು
ಉತ್ತರವ ಕಾಯದೇ, ಮಾತನ್ನೆ ಬಿಟ್ಟಿತೇ...

ಯಾವ ಪಾಪಕೆ ನನಗೆ, ಈ ಸಜೆಯಲ್ಲಿ ಪಾಲು,,,
ಜೀವಂತ ಶವವಾಗಿ, ಮುಂದಿಹುದು ಬಾಳು...
* * * * *

ಹೂವಾಗಿ ಅರಳಲು, ಎಷ್ಟಾಸೆ ನಮಗಿತ್ತು
ವಿಧಿಯ ವಿಷದುಗುರು, ಚಿಗುರನ್ನೇ ಚಿವುಟಿತು..
ಜೀವನದ ಯಾನಕ್ಕೆ, ಹುಟ್ಟೊಂದು ಬೇಕಿತ್ತು
ಜೋರಾದ ಅಲೆಯೆದ್ದು, ದೋಣಿಯೇ ಮುಳುಗಿತು...

ಶಕುನಗಳ ಶೂಲವು
ಶುಭವಾದ ಒಲವನ್ನೇ, ಬಲಿಯಾಗಿ ಕೊಟ್ಟಿತೇ...
ಕೈ ಹಿಡಿದು ತುಸುದೂರ
ಬಂದಿದ್ದ ಪಯಣವು, ಕೊನೆಯನ್ನು ಮುಟ್ಟಿತೇ...

ಯಾವ ಪಾಪಕೆ ನನಗೆ, ಈ ಸಜೆಯಲ್ಲಿ ಪಾಲು,,,
ಜೀವಂತ ಶವವಾಗಿ, ಮುಂದಿಹುದು ಬಾಳು...

                                 - ಸಂಪತ್ ಕುಮಾರ್

Thursday, March 09, 2017

ಕನ್ಯಾಕುಮಾರಿಯಿಂದ ಕಾಶ್ಮೀರಕ್ಕೆ... (ಮೊದ ಮೊದಲು)

ಕನ್ಯಾಕುಮಾರಿಯಿಂದ ಕಾಶ್ಮೀರಕ್ಕೆ


ಮೊದ ಮೊದಲು


ನವೆಂಬರ್ 25, 2016
ಶುಕ್ರವಾರ 

        ಆ ದಿನ ಸಂಜೆ ನನ್ನ ಸ್ನೇಹಿತ ಶರತ್ ನಿಂದ WhatsApp ಮೆಸೇಜ್ ಒಂದು ಬಂತು.
        ಎಲ್ಲೋ ಅಪರೂಪಕ್ಕೊಮ್ಮೆ ಬರುವ ಶರತ್ ನ ಮೇಸಜ್, ಯಾವುದೋ Forwarded ಇರಬೇಕು ಅಂದುಕೊಂಡು, ತೆರೆದು ಓದಿದೆ.
        ಯಾವುದೇ ಔಪಚಾರಿಕ ಮಾತುಗಳಿಲ್ಲದೇ,
        "ಕಾಶ್ಮೀರದಿಂದ-ಕನ್ಯಾಕುಮಾರಿ ಬೈಕ್ ಟ್ರಿಪ್ ಮಾಡೋಣ ಬರ್ತೀರಾ?", ಅಂದ್ರು.
        ಈ ಮೊದಲು ಎಲ್ಲಿಗೂ ಇಷ್ಟು long ride ಮಾಡಿರದಿದ್ದ ನಾನು, ಈಗ ಶರತ್ ಕರೆದ ಕೂಡಲೇ "ಸರಿ, ಬರ್ತೀನಿ" ಎಂದು ಒಪ್ಪಿಕೊಂಡೆ.
        ನನಗೂ ಬೇರೇ ಬೇರೇ ವಿಷಯಗಳಿಂದ ಬೇಸರಗೊಂಡಿದ್ದ ಮನಸ್ಸಿಗೆ ಎಲ್ಲಾದರೂ ದೂರ ಒಬ್ಬನೇ ಹೋಗಿಬರಬೇಕೆಂದು ಬಹಳ ದಿನಗಳಿಂದ ಅನ್ನಿಸುತಿತ್ತು.  ಈಗ ಶರತ್ ಗೆ ಬರುತ್ತೀನಿ ಎಂದು ಒಪ್ಪಿಕೊಳ್ಳಲೂ ಕೂಡ ಇದೇ ಮುಖ್ಯ ಕಾರಣವಾಗಿತ್ತು.
        ಎಷ್ಟು ದಿನ ರಜೆ ಬೇಕಾಗಬಹುದು, ಎಷ್ಟು ಖರ್ಚಾಗಬಹುದು, ಹೀಗೆ ಎಲ್ಲವನ್ನೂ ಕೇಳಿಕೊಂಡೆ. ಒಂದು ಅಂದಾಜಿನಲ್ಲಿ ಅವರು ನನಗೆ ಉತ್ತರಿಸಿದರು.
        ಶರತ್ ಜೊತೆಗಿನ ಮಾತಿನಿಂದ, ಆತನ ಕೆಲವು ಗೆಳೆಯರು, ಕೆಲವು ಸಹೋದ್ಯೋಗಿಗಳು ಹೀಗೆ ಹಲವಾರು ಜನ ಸೇರಿ ಒಂದು ಪ್ಲಾನ್ ಮಾಡಿದ್ದಾರೆ, ಅವರೊಡನೆ ನಾನೂ ಒಬ್ಬ ಸೇರಿದರಾಯ್ತು ಎಂದುಕೊಂಡೆ.
* * *

        ಮರುದಿನವೇ ಆಫೀಸಲ್ಲಿ, ರಜೆ ಕೇಳಿಯೂಬಿಟ್ಟೆ. ಮೂರು ವಾರ ರಜೆ ಬೇಕು ಎಂದೊಡನೆ, ನಮ್ಮ ಮ್ಯಾನೇಜರ್ ಕೇಳಿಯೇಬಿಟ್ಟರು "Hey, are you getting married?" ಅಂತ.
                                      "Not so lucky" ಅಂದೆ.
                       "Then?"
                                      "I'm going for Kashmir to Kanyakumari ride on bike"
                       "Ohhh!!! man... Are you serious???"
                                      "Yeah, almost plan is finalized" ಅಂದೆ.
        ಈ ಮೊದಲು ನಾನು ಯಾವತ್ತೂ ಇಷ್ಟು ರಜೆ ತೆಗೆದುಕೊಂಡಿರಲಿಲ್ಲವಾದ್ದರಿಂದ, "Okay" ಅಂದುಬಿಟ್ಟರು.
* * *

        ಇಲ್ಲಿಂದ ಮುಂದೆ ಶುರು ಆಯಿತು ನಮ್ಮ ಪ್ಲಾನಿಂಗ್ಸ್ ಎಲ್ಲ. ನಿಮಗೆಲ್ಲ ಗೊತ್ತೇ ಇದೆ ಆಲ್ವಾ, ಪ್ಲಾನಿಂಗ್ ಶುರು ಆಗೋದೇ ಒಂದು WhatsApp ಗ್ರೂಪ್ ಮಾಡೋದ್ರಿಂದ. ಹಾಗೇ ಇಲ್ಲೂ ಒಂದು ಗ್ರೂಪ್ ಶುರುವಾಯ್ತು, K2K - Dream Ride ಅಂತ ಗ್ರೂಪ್, ಬರಿ ಮೂರೇ ಜನ ಮೆಂಬರ್ಸ್.
        ನಾನು ಶರತ್ ಗೆ ಕೇಳಿದೆ,
                                "ಏನಿದು ಮೂರೇ ಜನ ಇದೀವಿ, ಬೇರೆ ಇನ್ನ್ಯಾರು ಬರ್ತಿಲ್ವ" ಅಂತ.
        "ಇನ್ನಿಬ್ಬರು ಇದಾರೆ, ಆದ್ರೆ ಅವರು ಇನ್ನು ಗ್ಯಾರಂಟೀ ಆಗಿಲ್ಲ ಅಂದ್ರು".
ನನಗೆ ಆ ಕ್ಷಣವೇ, ಅನುಮಾನ ಆಯ್ತು, ನನ್ನ ಪ್ರಕಾರ ಮೂರೇ ಜನ ಹೋಗೋದು ಅಂತ. ಆದರೂ ನಾನು ಶರತ್ ಗೆ ಹೇಳಿಯೇಬಿಟ್ಟೆ, 
                                "ನಾನಂತೂ ರಜೆ ಹಾಕಿ ಆಗಿದೆ, ಈಗ ಟ್ರಿಪ್ ಹೋಗ್ಲೇಬೇಕು" ಎಂದೆ. 
        "ಆಯ್ತು, ಯಾರೂ ಬರಲಿಲ್ಲ ಅಂದ್ರೂ,,, ನಾವೇ ಮೂರು ಜನ ಹೋಗೋಣ" ಅಂದ್ರು.
                                "ಆಯ್ತು,,," ಅಂತ ಶುರು ಆಯ್ತು ಪ್ಲಾನಿಂಗ್.

        ಏನೇನು ಅವಶ್ಯಕ ಸಾಮಗ್ರಿ ತಗೊಳ್ಬೇಕು ಅಂತ ಒಂದು ಅವರು ಮಾಡಿಟ್ಟಿದ್ದ ಪಟ್ಟಿ ಕಳಿಸಿದ್ರು. ನಾನು ಅದನ್ನ ನೋಡಿ, ಯೋಚಿಸುತ್ತಾ, ಅಲ್ಲಿ ಇಲ್ಲಿ ವಿಷಯ ಸಂಗ್ರಹಿಸುತ್ತಾ ಒಂದೆರಡು ದಿನಗಳನ್ನ ಕಳೆದೆ.
* * *

        ಆ ಒಂದೆರಡು ದಿನಗಳಲ್ಲಿ ನಾನು ನನ್ನಲ್ಲಿ ಈಗಾಗಲೇ ಇರುವ ವಸ್ತುಗಳೇನು, ಇನ್ನು ಹೊಸದಾಗಿ ಕೊಂಡುಕೊಳ್ಳಬೇಕಾದ ಸಾಮಗ್ರಿಗಳೆಷ್ಟು, ಅವುಗಳ ಸರಿ ಸುಮಾರು ಬೆಳೆಗಳೆಷ್ಟು ಎಂಬುದನ್ನು ಲೆಕ್ಕ ಹಾಕಿಕೊಂಡು, ಒಂದು ಸಪ್ಪೆ ಮುಖದ smiley ಯೊಂದಿಗೆ, ಗ್ರೂಪ್ ನಲ್ಲಿ ಹೀಗೊಂದು ಮೆಸೇಜ್ ಹಾಕಿದೆ. 
                                "ನನ್ನ accessories ಖರ್ಚು, ಟ್ರಿಪ್ ನ ಖರ್ಚಿಗಿಂತಾ ಜಾಸ್ತಿ ಆಗ್ತಿದೆ..."
        ಅದಕ್ಕೆ ಶರತ್' ಹೇಳಿದ್ರು,
        "ನೀವೇ ಹೀಗಂದ್ರೆ ಹೇಗೆ, ನಾನು ಇಬ್ಬರಿಗೆ ತಗೊಳ್ಬೇಕು,.." ಅಂತಾ.
                                "ಇಬ್ರಾ,,, ಶ್ವೇತಾನು ಬರ್ತಿದಾರ ಟ್ರಿಪ್ ಗೆ..?" ಅಂದೆ. 
        "ಇಲ್ವಾ ಮತ್ತೆ, ಈ ಗ್ರೂಪ್ ಅಲ್ಲಿ ಇರೋ ಇನ್ನೊಬ್ರು ಯಾರು ಅಂದುಕೊಂಡಿದೀರಾ..."
                                "ಓಹ್, ನಾನು,,, ಅದು ನಿಮ್ಮ ಫ್ರೆಂಡ್ ಯಾರೋ ಇರ್ಬೇಕು, ಅಂದುಕೊಂಡೆ"
                                "Oh God,,, she is ready for this much long trip, that too on bike as pillion rider... Great..."
        "ಹ್ಞೂ..."
        "ನಿಮ್ಮ ಫ್ರೆಂಡ್ಸ್ ಯಾರಾದ್ರೂ ಬರ್ತಾರಾ ಕೇಳಿ ನೋಡಿ"
                                "ಸರಿ, ಒಂದ್ ಸಲ ಕೇಳಿ ನೋಡ್ತೀನಿ" ಅಂದೆ.

        ಆವಾಗಲೇ ನನಗೆ ಗೊತ್ತಾಗಿದ್ದು, ಈಗ ತಯಾರಿರೋದು ಎರಡೇ ಬೈಕು, ಮೂರೇ ಜನ ಅಂತ. ಅಂತೂ, ಏನೇ ಆದರು ಟ್ರಿಪ್ ಹೋಗೋದು ಗ್ಯಾರಂಟೀ ಆಗಿದ್ದರಿಂದ, ತಯಾರಿ ಮಾಡಿಕೊಳ್ಳೋದು ನೆಡಿತಾನೆ ಹೋಯ್ತು.

        ಶರತ್ ಅವರಿಂದ ಆಮೇಲೆ ಗೊತ್ತಾಯ್ತು ಈ ಪ್ರವಾಸದ ಬಗ್ಗೆ ಮೊದಲ ಯೋಚನೆ ಮಾಡಿದ್ದೇ ಶ್ವೇತ, ಎಂದು. ಇವರಿಬ್ಬರೂ ಈಗಾಗಲೇ ದಕ್ಷಿಣ ಭಾರತದ ಹತ್ತಿರತ್ತಿರ ಎಲ್ಲಾ ಪ್ರವಾಸಿ ತಾಣಗಳನ್ನು ನೋಡಿಯಾಗಿರಬಹುದು. ಅಲ್ಲದೆ, ಈಗ್ಗೆ ಕೆಲವು ತಿಂಗಳ ಹಿಂದಷ್ಟೇ ತಮ್ಮ ಕಾರಿನಲ್ಲಿ ಇಡೀ ಕರ್ನಾಟಕ ಪ್ರವಾಸ ಮುಗಿಸಿದ್ದರು. ಆ ಪ್ರವಾಸದ ಸಮಯದಲ್ಲೇ ಶ್ವೇತಾರಿಗೆ ಕಾಶ್ಮೀರ-ಕನ್ಯಾಕುಮಾರಿಯ ಪ್ರವಾಸದ ಬಗ್ಗೆ ಆಸಕ್ತಿ ಮೂಡಿ, ಶರತ್ ರಿಗೂ ಅದರ ಹುಚ್ಚು ಹಿಡಿಸಿ, ಒಪ್ಪಿಸಿದ್ದಾರೆ. ಅದು ಫಲಿಸುವ ಸಮಯ ಈಗ ಶುರುವಾಗಿದೆ ಎಂದು ತಿಳಿಯಿತು. ಇದನ್ನೆಲ್ಲ ಕೇಳಿದ ನನಗೆ ಇವರ ಮೇಲಿನ ಗೌರವ ಮತ್ತು ಹೆಮ್ಮೆ ಇನ್ನೂ ಒಂದು ಪಟ್ಟು ಹೆಚ್ಚಾಯಿತು.

        ನಾವು ಹೊರಡುತ್ತಿರುವುದು ಜನವರಿಯಲ್ಲಿ ಆದ್ದರಿಂದ, ಕಾಶ್ಮೀರದಲ್ಲಿ ಹಿಮಪಾತ ಬಹಳವಿರುತ್ತದೆ. ಬಹಳಷ್ಟು ಬಾರಿ ಹಿಮಪಾತದಿಂದಾಗಿ ರಸ್ತೆಗಳು ಮುಚ್ಚಿರುತ್ತವೆ, ಮತ್ತೆ ಭಾರತೀಯ-ಸೈನ್ಯ ಆ ಹಿಮವನ್ನು ಸರಿಸಿ ರಸ್ತೆ ತೆರವುಗೊಳಿಸಬೇಕಾಗುತ್ತದೆ. ಇವುಗಳ ಸಮಾಯಾಪರಿ ಇಷ್ಟೇ ಎಂದು ಹೇಳಲಾಗುವುದಿಲ್ಲವಾದ್ದರಿಂದ, ಕೆಲವೊಮ್ಮೆ ವಾರಗಟ್ಟಲೆ ರಸ್ತೆ ಮುಚ್ಚಿರುತ್ತದೆ. ನಾವು ಬೆಂಗಳೂರಿನಿಂದ ಕಾಶ್ಮೀರದ ಶ್ರೀನಗರಕ್ಕೆ ಬೈಕ್ ಅನ್ನು ಸಾಗಿಸಲು, ಲಾರಿಯಲ್ಲಿ ಹಾಕಿದರೆ ನಮಗೆ ಅದು ತಲುಪುವ ದಿನ ಖಂಡಿತವಾಗಿ ಅಂದಾಜು ಸಿಗಲೇ ಇಲ್ಲ. ಇನ್ನು, ನಾವು ಇಲ್ಲಿಂದ  ವಿಮಾನದಲ್ಲಿ ಶ್ರೀನಗರ ತಲುಪಲಾಗದಿದ್ದರೂ, ಜಮ್ಮುವರೆಗೆ ತಲುಪಬಹುದೆಂಬ ಖಾತರಿಯಿತ್ತು. ಹೀಗಾದಾಗ, ಅಕಸ್ಮಾತ್ ಲಾರಿ ಜಮ್ಮು ಮತ್ತು ಕಾಶ್ಮೀರದ ಮಧ್ಯದಲ್ಲೆಲ್ಲೋ ಸಿಲುಕಿದರೆ, ನಾವು ಪ್ರವಾಸ ಶುರು ಮಾಡುವ ಮೊದಲೇ ಹಲವಾರು ದಿನಗಳನ್ನು ಜಮ್ಮುವಿನಲ್ಲೋ, ಅಥವಾ ಶ್ರೀನಗರದಲ್ಲೋ ಕಳೆಯಬೇಕಾಗ ಬಂದು, ನಮ್ಮ ಯೋಜನೆಯೇ ಹಾಳಾಗಬಹುದಾದ ಸಾಧ್ಯತೆ ಬಹಳಷ್ಟಿತ್ತು. 
        ಇದನ್ನೆಲ್ಲಾ ಯೋಚಿಸಿ ನಮ್ಮ ಕ್ಯಾಪ್ಟನ್ ಶರತ್, "ನಾವು ಪ್ರವಾಸವನ್ನು ಕನ್ಯಾಕುಮಾರಿಯಿಂದ ಶುರು ಮಾಡೋಣ, ಇಲ್ಲಿಂದ ನಾವು ಪಶ್ಚಿಮ ಭಾರತವನ್ನೆಲ್ಲ ಸುತ್ತಿ, ಕಾಶ್ಮೀರ ತಲುಪವ ವೇಳೆಗೆ ಫೆಬ್ರವರಿ ಶುರುವಾಗಿರುತ್ತದೆ. ಆಗ ನಮ್ಮ ಅದೃಷ್ಟಕ್ಕೆ ಹಿಮಪಾತ ಕಡಿಮೆಯಾಗಿದ್ದರೆ, ಕಾಶ್ಮೀರ ತಲುಪಬಹುದು. ಇಲ್ಲವಾದಲ್ಲಿ ಜಮ್ಮುವಿನಿಂದ, ಬೈಕುಗಳನ್ನು ಬೆಂಗಳೂರಿಗೆ ಸಾಗಾಣೆಗೆ ಹಾಕಿ, ನಾವು ವಿಮಾನ ಹತ್ತಿ ಬರಬಹುದು" ಎಂದು ಯೋಜನೆಯನ್ನು ಬದಲಾಯಿಸಿದರು. 
        ನನಗಂತೂ ಕಾಶ್ಮೀರದಿಂದ ಪ್ರವಾಸ ಶುರು ಮಾಡುವ ಆಸೆ ಇನ್ನೂ ಇತ್ತು, ಆದರೂ ಪರಿಸ್ಥಿತಿ ನಮ್ಮ ಕೈಲಿ ಇಲ್ಲವಾದ್ದರಿಂದ ಒಲ್ಲದ ಮನಸಿನಿಂದ ಒಪ್ಪಿಕೊಂಡೆ. 

        ಈಗ, ನಮ್ಮ ಪ್ರವಾಸದ ನಕ್ಷೆ (Trip Map Finalize) ಯೋಜಿಸುವುದು ಉಳಿದಿತ್ತು. ನಾವು ಮೂವರು ಒಂದೊಂದಷ್ಟು ದಿನಗಳನ್ನು plan ಮಾಡುವುದೆಂದು ತೀರ್ಮಾನಿಸಿಕೊಂಡೆವು.
        ನಾವು ಯೋಜಿಸಿದ ನಕ್ಷೆ ಹೀಗಿತ್ತು, 
        "ಕನ್ಯಾಕುಮಾರಿ(ಭಾರತದ ದಕ್ಷಿಣ ತುದಿ) - ಮಧುರೈ - ತುಮಕೂರು - ಬೆಳಗಾವಿ - ರಾಯಘಡ - ಲೋಣಾವಾಲಾ - ಲೋಹಘಡ - ಮುಂಬೈ - ಅಹಮದಾಬಾದ್ - ಕಛ್ - ಗುಹಾರ್ ಮೋತಿ (ಭಾರತದ ಪಶ್ಚಿಮ ತುದಿ) - ಡೋಲವಿರಾ - ಮೌಂಟ್ ಅಬು - ಕುಂಭಲ್ ಘಡ - ಉದಯಪುರ - ಚಿತ್ತೋರ್ ಘಡ - ಅಜಮೇರ್ - ಜೈಪುರ - ಆಗ್ರಾ - ದೆಹಲಿ - ಅಮೃತಸರ - ಜಮ್ಮು - ಶ್ರೀನಗರ"
        ಒಟ್ಟು 22 ದಿನಗಳಲ್ಲಿ ಪ್ರಯಾಣ ಮುಗಿಸಿ, 23ನೇ ದಿನ ವಾಪಸಾಗಬೇಕು.
        ಆಯಾ ಸ್ಥಳಗಳಲ್ಲಿ ಯಾವ ಯಾವ ತಾಣಗಳನ್ನು ನೋಡುವುದು, ಎಲ್ಲಿ ಉಳಿದುಕೊಳ್ಳಿವುದು ಎಂದೂ ತೀರ್ಮಾನಿಸಿ ಅಂತಿಮಗೊಳಿಸಿದೆವು.
* * *

        ಟ್ರಿಪ್ ಹೋಗೋದು ಅಂದಾಗಲೇ ನಾನು, ನನ್ನ ಫ್ರೆಂಡ್ ಶಿವು ನನ್ನೂ ಕೂಡ ಕರೆಯೋಣ ಅಂತ ಅಂದುಕೊಂಡಿದ್ದೆ. ಆದ್ರೆ, ಅವನು ಹೆಂಡತಿನ ಬಿಟ್ಟು ಟ್ರಿಪ್ ಬರೋಲ್ಲ ಅಂದುಕೊಂಡು ಸುಮ್ಮನಾಗಿದ್ದೆ. ಆದರೆ ಈಗ ಶರತ್ ಜೊತೆ ಶ್ವೇತಾನೂ ಬರ್ತಿರೋದ್ರಿಂದ, ಅವನನ್ನ ಒಂದು ಸಲ ಕೇಳಿನೋಡೋಣ ಅಂತ ತೀರ್ಮಾನಿಸಿದೆ.
        ಸುಮಾರು ಹತ್ತು ವರ್ಷಗಳಿಂದ ಹತ್ತಿರದ ಸ್ನೇಹಿತ ಆಗಿದ್ದರಿಂದ, ಶಿವುನ ಸ್ವಭಾವ ನನಗೆ ಬಹಳ ಚೆನ್ನಾಗಿ ಗೊತ್ತಿತ್ತು. ಅವನದ್ದು ಒಂದು ಬೇರೇ ತರಹದ ಸ್ವಭಾವ. ನಾವು ರೂಮ್ ಮೇಟ್ಸ್, ಅವನ ಜೊತೆ ಬಹಳ ಏಗಿದಮೇಲೆ ಒಂದು ಲಾಜಿಕ್ ಕಂಡು ಹಿಡಿದುಕೊಂಡಿದ್ವಿ. ಅದು ಬಹಳ ಸಲ ಕೆಲಸ ಮಾಡಿತ್ತು. ಈಗ್ಲೂ, ಅದನ್ನೇ ಮಾಡೋಣ ಅಂದುಕೊಂಡೆ. 
        ಅದೇನಂದ್ರೆ, ಏನೇ ಕೆಲಸ ಮಾಡೋದಾಗ್ಲಿ ಇಲ್ಲವೇ ಎಲ್ಲಿಗೇ ಹೋಗೋದಾಗ್ಲಿ ಇದ್ದಾಗ, ಅವನನ್ನ ನಮ್ಮ ಜೊತೆ ಬಾ ಅಂತ ಮೊದಲೇ ಕರೆದರೆ ಅಥವಾ ಬಹಳ ಒತ್ತಾಯ ಮಾಡಿದ್ರೆ, ಅವನೂ ಯಾವತ್ತೂ ನಮ್ಮ ಜೊತೆ ಬಂದವನಲ್ಲ. ಬಂದರೂ ಅದು ಇನ್ನೇನೋ ಎಡವಟ್ಟು ಮಾಡಿಕೊಂಡು ಬರುತ್ತಿದ್ದಿದ್ದು ಮಾಮೂಲಾಗಿತ್ತು. ಇದೆಲ್ಲಾ ನೋಡಿ ನೋಡಿ ಸಾಕಾಗಿ, ನಾವು ಎಲ್ಲೇ ಹೋಗಬೇಕಾಗಿ ಬಂದಾಗ, ಸುಮ್ಮನೆ ನಮ್ಮ ಪಾಡಿಗೆ ನಾವು ತಯಾರಿ ಮಾಡಿಕೊಂಡು ಹೊರಡ್ತಾ ಇದ್ರೆ, ಆಗ ಅವನಾಗೆ ಬಂದು ಕೇಳೋನು, ಎಲ್ಲಿಗ್ರೋ ಹೋಗ್ತಿದೀರಾ,,, ನಾನೂ ಬರ್ತೀನಿ... ಅಂತಾ ಏನೂ ರಗಳೆಯಿಲ್ಲದೇ ಹೊರಟು ಬರೋನು. ಈ ಲಾಜಿಕ್ ಒಂದೆರಡು ಸಲ ಅಲ್ಲಾ, ಬಹಳಾಸಲ ಕೆಲಸ ಮಾಡಿದ್ದರಿಂದ, ಇದನ್ನೇ ಇಲ್ಲೂ ಒಂದು ಪ್ರಯತ್ನ ಮಾಡೋಣ ಅಂದುಕೊಂಡೆ. ನಮ್ಮ ಪ್ರವಾಸ ಶುರುವಾಗುವುದು, ಸಂಕ್ರಾಂತಿ ದಿನದಂದು ಎಂದು ತೀರ್ಮಾನಿಸಿಯಾಗಿತ್ತು, ಅದು ಇನ್ನೂ ಒಂದು ತಿಂಗಳಿಗೂ ದೂರವಿದೆ, ಹಾಗಾಗಿ ಇನ್ನುಇನ್ನೊಂದೆರಡು ವಾರ ಕಳೆದು ಶಿವುಗೆ ಈ ಅಸ್ತ್ರ ಪ್ರಯೋಗಿಸೋಣ ಎಂದು ಸುಮ್ಮನಾದೆ. 

        ಈ ಒಂದೆರಡು ವಾರಗಳಲ್ಲಿ ನಾವು, ಪ್ರವಾಸಕ್ಕೆ ಬೇಕಾದ Safety Jackets, Hand Gloves, Knee Guards, Tank Bags, Saddle Bags ಮತ್ತು Bike spare parts & accessories ಎಲ್ಲ ಹೊಂದಿಸಿಕೊಂಡೆವು.

        ನಾವು ಕನ್ಯಾಕುಮಾರಿಗೆ ಬೈಕುಗಳನ್ನು ಮೊದಲು ಸಾಗಿಸಿ, ಆಮೇಲೆ ಸಂಕ್ರಾಂತಿಯ ಹಿಂದಿನ ದಿನ ನಾವು ಅಲ್ಲಿಗೆ ಬಸ್ಸಲ್ಲಿ ಹೋಗುವುದಾಗಿ ಯೋಚಿಸಿದೆವು. ತಮಿಳುನಾಡಿನಲ್ಲಿ ಕೂಡ, ಪೊಂಗಲ್ ಹಬ್ಬವನ್ನು ಜೋರಾಗಿ ಆಚರಿಸುವುದರಿಂದ, ನಮಗೆ ಹಿಂದಿನ ಹೋಗಲು ಬಸ್ ಟಿಕೆಟ್ ಸಿಗುವುದು ಕಷ್ಟ ಎಂದು, ಮೊದಲೇ ನಾವು ಮೂವರಿಗೂ ಟಿಕೆಟ್ ಮುಂಗಡ ಬುಕಿಂಗ್ ಮಾಡಿಸಿಬಿಟ್ಟೆವು.
* * *

ಡಿಸೆಂಬರ್ 22, 2016
ಗುರುವಾರ

        ಆ ದಿನ ರಾತ್ರಿ ನನ್ನ ಗೆಳೆಯರ WhatsApp ಗ್ರೂಪ್ ಗೆ, ಸುಮ್ಮನೆ ಒಂದು message ಹಾಕಿದೆ.
        "ಆಣ್-ತಮ್ಮಾಸ್, ಮುಂದಿನ ತಿಂಗಳು ನಾನು ಕನ್ಯಾಕುಮಾರಿ ಟು ಕಾಶ್ಮೀರ್ ಟ್ರಿಪ್ ಹೋಗ್ತಿದೀನಿ"
        ಒಬ್ಬೊಬ್ಬರಾಗಿ ಎಲ್ಲರೂ, ಹೇಗೆ? ಯಾವಾಗ? ಯಾರ್ಯಾರು? ಅಂತ ಕೇಳತೊಡಗಿದರು. ನಾನು ಎಲ್ಲ ವಿಷಯವನ್ನೂ ಕೇಳತೊಡಗಿದೆ.
        ಆಗ ಚೇತನ್ ಅನ್ನುವ ಫ್ರೆಂಡ್ ಒಬ್ಬ, ತಾನು ಅರ್ಧದಷ್ಟು ಟ್ರಿಪ್ ಗೆ ಬರ್ತೀನಿ ಎಂದ, ನಾನು "ಸರಿ" ಎಂದೆ. ಆಗ ಹರೀಶ್ ಇದ್ದವನು, "ಎಲ್ಲರೂ ರಿಪ್ಲೈ ಮಾಡ್ತಿದಾರೆ, ಶಿವು ಯಾಕೆ ಸೈಲೆಂಟ್?" ಅಂದ.
        ಆಗ ಶಿವುಯಿಂದ ಮೊದಲ ರಿಪ್ಲೈ ಬಂತು, "ಅವನು ನನ್ನ ಕರೆದೆ ಇಲ್ಲ..." ಅಂತ.
        ನಾನು, "You are always welcome" ಅಂದೆ.
        ಎಲ್ಲರೂ ಅದೂ ಇದೂ ನೆಪ ಹೇಳಿ, ಬರೋಕೆ ಆಗೋಲ್ಲ ಅಂದ್ರು.
        ಹೀಗೇ ಅದೂ ಇದೂ, ತಮಾಷೆಯ ಮಾತುಗಳು ಮುಗಿದು ಮಲಗುವ ವೇಳೆಗೆ ಮೊದಲು, ಶಿವುಯಿಂದ ನಂಗೆ ಒಂದು personal chat ಸಂದೇಶ ಬಂತು,
        "ಯಾವಾಗ ಕಾಶ್ಮೀರ ತಲುಪ್ತಿರ? ಏನು ಟ್ರಿಪ್ ಪ್ಲಾನ್? ಹೇಗೆ ಪ್ಲಾನ್ ಮಾಡಿದಿರಾ?" ಅಂತ.
        ನಾನು ಎಲ್ಲವನ್ನೂ ವಿವರವಾಗಿ ಹೇಳತೊಡಗಿದೆ. ಶರತ್-ಶ್ವೇತಾರ ಪರಿಚಯ ಅವನಿಗೆ ಇಲ್ಲವಾದ್ದರಿಂದ ಅವರ ಪರಿಚಯ ಹೇಳಿ, ಅವರ ಪ್ರವಾಸಗಳ ಹುಚ್ಚು, ಫೋಟೋಗ್ರಫಿ ಹವ್ಯಾಸ, ಅವರ ಹಲವಾರು you-tube video ಗಳ ಬಗ್ಗೆ ವಿವರಿಸಿ ಹೇಳಿದೆ.
        ಶಿವು ನನ್ನ ಬೆಸ್ಟ್ ಫ್ರೆಂಡ್ಸ್ ಗಳಲ್ಲಿ ಒಬ್ಬ, ಅವನು ನನ್ನ ಜೊತೆ ಟ್ರಿಪ್ ಬರಲೇ ಬೇಕೆಂಬ ಆಸೆ ನನ್ನಲಿದ್ದರೂ, ನಾನು ಎಲ್ಲಿಯೂ, "ನೀನು, ಬರಲೇಬೇಕು,,," ಎಂದು ಒಮ್ಮೆಯೂ ಹೇಳಲೇ ಇಲ್ಲ.
        ಶಿವು ಹೇಳಿದ,
        "ನಾನು ಫೆಬ್ರವರಿ 6, 7ಕ್ಕೆ ಲಖನೌಗೆ ಒಂದು ಮದುವೆಗೆ ಹೋಗಬೇಕಿದೆ, ಆ ಸಮಯದಲ್ಲೇ ರಾಜಸ್ಥಾನದ ಪ್ರವಾಸ ಮಾಡಲು ಯೋಚಿಸುತ್ತಿದ್ದೆ"
                             "ನಮ್ಮ ಟ್ರಿಪ್ ಪ್ಲಾನ್ ಅಲ್ಲಿ ರಾಜಸ್ಥಾನ ಕೂಡ ನೋಡಿಕೊಂಡು ಹೋಗ್ತೀವಿ."
                             "ಇದೆಲ್ಲಕ್ಕಿಂತ ಹೆಚ್ಚಾಗಿ ನಮ್ಮದು, ಭಾರತದ ದಕ್ಷಿಣ ತುದಿಯಿಂದ - ಉತ್ತರ ತುದಿಗೆ (ಒಂದು ರೀತಿಯ ಸಾಹಸಮಯ ಪ್ರಯಾಣವೇ ಸರಿ) ಬೈಕ್ ಟ್ರಿಪ್ ಮಾಡಬೇಕೆನ್ನುವುದು"
                             "ಇಂಥ ಕನಸನ್ನು, ಸಾಧ್ಯ ಮಾಡುವುದು ಕೆಲವೇ ಕೆಲವು ಜನ ಮಾತ್ರ", ಎಂದೆ.
        "ಈಗ ಆಫೀಸ್ ನಲ್ಲೊಮ್ಮೆ, ರಜೆ ಕೇಳಿ ನೋಡ್ತೀನಿ, ನನಗೂ ಮೂರು ವಾರಗಳ ರಜೆ ಸಿಕ್ಕರೆ, ನಿಮ್ಮ ಜೊತೆ ಟ್ರಿಪ್ ಗೆ ನಾನೂ ಬರ್ತೀನಿ" ಅಂದ.
                            "ಸರಿ, ಹಾಗೇ ಮಾಡು. ನೀನೂ ನಮ್ಮ ಜೊತೆ ಬಂದ್ರೆ, ಅದು ನಿಜಕ್ಕೂ ತುಂಬ ಖುಷಿನೇ"
        "ದೀಪಿಕ ಕೂಡ ರಜೆ ಕೇಳಿ ನೋಡ್ತಾಳೆ ಆಫೀಸ್ ಅಲ್ಲಿ, ಅವಳಿಗೂ ರಜೆ ಸಿಕ್ಕರೆ ನಾವು sure join ಆಗ್ತಿವಿ"
                            "ಓಹ್, ಸೂಪರ್..."
                            "ಏನೂ, ಭಯಪಡಬೇಕಾಗಿಲ್ಲ... ನಮ್ಮ ಜೊತೆ ಶ್ವೇತ ಅವರು ಬರ್ತಿರೋದ್ರಿಂದ, ಸ್ವಲ್ಪ ಎಚ್ಚರಿಕೆಯಿಂದಾನೆ ಪ್ಲಾನ್ ಮಾಡಿದೀವಿ. ದೀಪಿಕ ಕೂಡ ಬಂದ್ರೆ, ಇಬ್ಬರಿಗೂ ಕಂಪನಿ ಕೂಡ ಇರುತ್ತೆ. ಬೇಸರ ಕೂಡ ಏನಾಗೋಲ್ಲ"
                            "ನಾಳೆ ಒಳಗೆ ನಂಗೆ, ಏನು ಅಂತ ಹೇಳಿ .." ಅಂದು ಸುಮ್ಮನಾದೆ.
* * *

        ಮರುದಿನ ಅವರಿಬ್ಬರೂ ಬರುವುದಾಗಿ ತಿಳಿಸಿದರು. ಅಂತೂ, ನಮ್ಮ ಲಾಜಿಕ್ ಮತ್ತೆ ಕೆಲಸ ಮಾಡಿತು, ಅಂತ ಖುಷಿಯಾಯ್ತು.
        ಶರತ್-ಶ್ವೇತಾಗೆ, ಶಿವು-ದೀಪಿಕ ಟ್ರಿಪ್ ಗೆ ಬರ್ತಿರೋ ಬಗ್ಗೆ ಹೇಳಿದೆ. ಪರಿಚಯದವರು, ಅಲ್ಲದೇ couple, join ಆಗ್ತಿರೋದ್ರಿಂದ ಅವರಿಬ್ಬರು ಖುಷಿಪಟ್ಟರು. ಮೂವರಿಂದ, ಐವರು ಆಗಿದ್ದು ನಮ್ಮ ಖರ್ಚಿನ ಲೆಖ್ಖಕ್ಕೂ ಒಳ್ಳೆಯದೇ ಅಂದುಕೊಂಡೆವು. ಶಿವು-ದೀಪಿಕರನ್ನ, ನಮ್ಮ K2K-Dream Ride ಗ್ರೂಪ್ ಗೆ ಸೇರಿಸಿ, ಪರಸ್ಪರ ಪರಿಚಯ ಮಾಡಿಸಿದೆ.
        ಈಗ ಮತ್ತೆ, ಶಿವು-ದೀಪಿಕಾರಿಗೂ ಕೂಡ ಕನ್ಯಾಕುಮಾರಿಗೆ ಬಸ್ ಟಿಕೆಟ್ ಬುಕ್ ಮಾಡಲು ಹೇಳಿ, ಉಳಿದ ಪ್ರವಾಸದ ಯೋಜನೆಗಳ ಬಗ್ಗೆ ಎಲ್ಲರೂ ಹೆಚ್ಚೆಚ್ಚು ವಿಷಯ ಕಲೆಹಾಕುತ್ತಾ, ನಮ್ಮ ಕನಸಿನ ಪಯಣಕ್ಕೆ ದಿನಗಳನ್ನು ಲೆಕ್ಕ ಹಾಕತೊಡಗಿದೆವು.
* * *

ಇಲ್ಲಿಂದಲೇ ಮೊದಲುಗಳು,,,
ಏಕ-ಮನಸ್ಕರ ಮಿಲನಗಳು,,,
ಬರುವ-ನಾಳೆಗೆ ಹೊಸ ಕನಸುಗಳು,,,
ಬದುಕ-ಹಾಳೆಗೆ ಹೊಸ ಕವನಗಳು...
ಇಲ್ಲಿಂದಲೇ ಹಲವು ಮೊದಲುಗಳು...
* * * * *

2. ಪಯಣಕ್ಕೊಂದು ಪಯಣ
http://kcsampath.blogspot.in/2017/03/blog-post_91.html