ಎಂದಿನಂತೆ ಆ ರಾತ್ರಿ, ದಣಿದ ದೇಹ ಹೊತ್ತು ಮೆಲ್ಲಗೆ ನಿಟ್ಟುಸಿರು ಬಿಡುತ್ತಾ ಹಾಸಿಗೆಗೆ ಉರುಳಿದೆ. ನಿಧಾನವಾಗಿ ನಿದಿರೆ ಹತ್ತಿದಂತೆ, ಮನಸ್ಸು ಸರಾಗವಾಗಿ ಚಿಂತೆಗಳ ಸುಳಿಯಲ್ಲಿ ಸುತ್ತುತ್ತಾ ಸಾಗತೊಡಗಿತು. ಕನಸಿನ ನಾಡಲ್ಲಿ ಎಲ್ಲೆಲ್ಲಿ ಅಲೆಯುತ್ತಿದ್ದೆನೋ ನನಗಂತೂ ನೆನಪಿಲ್ಲ, ಅಂತೂ ಕೊನೆಗೆ ನಮ್ಮೂರಿಗೆ ಬಂದು ನಿಂತೆ.
* * * * *
ನಮ್ಮೂರು, ಹಲವಾರು ಬೆಟ್ಟ ಗುಡ್ಡಗಳಿಂದ ಸುತ್ತುವರಿದ ಅರೆ ಮಲೆನಾಡಿನ ದೊಡ್ಡ ಊರು. ಆ ಬೆಟ್ಟಗಳಲ್ಲೊಂದು, ರಂಗನಾಥಸ್ವಾಮಿಯ ಬೆಟ್ಟ. ದೂರದಿಂದ ನೋಡಿದರೆ ಸಣ್ಣ ದಿಣ್ಣೆಯಂತೆ ಕಾಣುವ ಅದು, ಹತ್ತುವಾಗಲೇ ಬೆಟ್ಟವೆಂದು ನಮ್ಮ ಅರಿವಿಗೆ ಬರುವುದು. ಬೆಟ್ಟದ ಮೇಲೆ, ಒಂದು ನೂರು ಚದರ ವಿಸ್ತಾರದ ಸಣ್ಣ ಕೋಟೆಯಂತಿರುವ ಕಟ್ಟಡ. ಕಾಡುಗಲ್ಲುಗಳನ್ನು ಜೋಡಿಸಿಟ್ಟು ಮಾಡಿಸಿದ ತಡೆಗೋಡೆ ಸುತ್ತಲೂ ಇದ್ದರೆ, ನಡುವಲ್ಲಿ ರಂಗನಾಥಸ್ವಾಮಿಯ ಗುಡಿಯಿದೆ.
ಸಕಲ ಜೀವ, ಅಣು ಕಣ ತೃಣವೂ ದೇವರ ಅಂಶವೇ ಆಗಿದ್ದರೂ, ಆ ಪರಮಾತ್ಮನು ಒಂದೊಂದು ಗುಡಿಯಲ್ಲಿ ಒಂದೊಂದು ರೂಪದಲ್ಲಿರುವನೆಂದು ನಾವೆಲ್ಲರೂ ಬಲ್ಲೆವು. ಮಹಾವಿಷ್ಣುವು, ಸೌಮ್ಯ-ಸುಂದರ ಕೋಮಲ-ನೀಳ ಮಾನವನಂತೆ ಶಿಲಾವಿಗ್ರಹ ರೂಪದಲ್ಲಿದ್ದು, ಶ್ರೀರಂಗಪಟ್ಟಣದಲ್ಲಿ ಶೇಷಶಯನಾಗಿಯೂ,
ತಿರುಪತಿಯಲ್ಲ್ಲಿ ವೆಂಕಟರಮಣನಾಗಿಯೂ ನಮಗೆ ದರ್ಶನವಿತ್ತಿದ್ದಾನೆ. ಆದರೆ ಇಲ್ಲಿ, ಈ ಬೆಟ್ಟದ ಗುಡಿಯಲ್ಲಿರುವ ದೈವ, ಒಂದು ಕೆತ್ತನೆಯಿಲ್ಲದ ಶಿಲೆ. ಆದರೂ ಒಂದು ಆಕರ್ಷಕ ಆಕಾರವಿರುವ ಶಿಲೆ. ಇದೂ ಕೂಡ, ರಂಗನಾಥನ ಒಂದು ರೂಪವೆಂದೇ ಭಾವಿಸಿ, ನಮ್ಮ ಪೂರ್ವಜರು ಬಹುಹಿಂದಿನ ಕಾಲದಿಂದಲೂ ಪೂಜಿಸುತ್ತಾ ಬಂದಿರುವುದರಿಂದಲೋ ಏನೋ, ರಂಗನಾಥ ನನ್ನ ಮನದಲ್ಲಿ ಇದೇ ರೂಪದಲ್ಲಿ ನೆಲೆಯೂರಿದ್ದಾನೆ.
ನಮ್ಮ ಕುಟುಂಬ ಜೀವನೋಪಾಯಕ್ಕಾಗಿ ಊರು-ಮನೆ ಬಿಟ್ಟು ಪರವೂರಿಗೆ ಬಂದು
ಬದುಕುತ್ತಿದ್ದರೂ, ವರ್ಷಕ್ಕೊಮ್ಮೆ ಊರ ಜಾತ್ರೆಗೆ ಹೋಗಲೇಬೇಕು. ಆಗಲೇ ಬೆಟ್ಟದ ರಂಗನಾಥ
ಸ್ವಾಮಿಗೆ ನಮ್ಮ ಒಂದು ದಿನದ ಸೇವೆ. ಬೆಟ್ಟದ ಮೇಲೇ ಪೂಜೆ-ತಳಿಗೆಗಳನ್ನು ಮಾಡಿ ಊರಿಗೆ
ಬರುವುದು, ನಮ್ಮ ರೂಡಿ.
* * * * *
ಈಗ ಕನಸಿನಲ್ಲಿ ಮತ್ತೆ ಇಲ್ಲಿಗೆ ಬಂದ ನಾನು, ಬೆಟ್ಟದ ಮೇಲೆ ನಿಂತು, ದೇವರ ಗುಡಿಯನ್ನೇ ನಿಟ್ಟಿಸಿ ನೋಡುತ್ತಿದ್ದೇನೆ. ನೋಡುತ್ತಾ, ನೋಡುತ್ತಾ ನಿಂತ ನನಗೆ "ಇಲ್ಲಿ ಯಾಕೆ ಕೆತ್ತನೆಯಿಲ್ಲದ ಒಂದು ಶಿಲೆಯನ್ನು ರಂಗನೆಂದು ನಮ್ಮ ಪೂರ್ವಜರು ಭಾವಿಸಿದರು?" ಎಂಬ ಸಣ್ಣ ಚಿಂತೆಯ ಹುಳು ನನ್ನನ್ನು ಕಾಡಹತ್ತಿತು. ಇದರ ಇತಿಹಾಸ ಏನಿದ್ದಿರಬಹುದೆಂಬ ಕಲ್ಪನೆಯೊಂದು ಕನಸಿನೊಳಗೇ ನನ್ನಲ್ಲಿ ಮೂಡುತ್ತಾ ಹೋಯಿತು. ಕನಸು ನನ್ನೊಳಗೆ ಪೂರ್ಣಗೊಳ್ಳುತ್ತಾ ಹೋದಂತೆ, ನನ್ನ ಚಿಂತನಾ-ಶಕ್ತಿ, ವಿಮರ್ಷಕ-ಮತಿ, ಕಲ್ಪನಾ-ಪ್ರೌಡಿಮೆಗೆ, ಕನಸಿನಲ್ಲೂ ನನ್ನ ಬಗ್ಗೆ ನನಗೆ ಹೆಮ್ಮೆಯೆನಿಸತೊಡಗಿತು.
ಹೀಗಿದೆ ನೋಡಿ ನಾನು ಕನಸಿನಲ್ಲಿ ಸೃಷ್ಟಿಸಿಕೊಂಡ ಇತಿಹಾಸ:
ಅದು ಹೊಯ್ಸಳರ ಕಾಲ, ಇಲ್ಲಿಗೆ ಸರಿ ಸುಮಾರು ಸಾವಿರ ವರ್ಷಗಳಷ್ಟು ಹಿಂದಿನ ಕಾಲ. ಕನ್ನಡಿಗರ ಶಿಲ್ಪಕಲೆ ಔನ್ನತ್ತ್ಯದಲ್ಲಿತ್ತು. ವಿಶ್ವವೇ ಕಂಡರಿಯದಂತಹ ಶಿಲ್ಪಕಲಾ ಕೌಶಲ, ಚಾತುರ್ಯ, ನಮ್ಮ ಕನ್ನಡಿಗರ ಹೆಮ್ಮೆಯ ಸ್ವತ್ತಾಗಿತ್ತು. ಆ ಕಾಲದಲ್ಲೇ ಅಲ್ಲವೇ ಅಮರ ಶಿಲ್ಪಗಳಾದ 'ಬೆಳಗೊಳದ ಗೊಮ್ಮಟದೇವ', 'ದ್ವಾರಸಮುದ್ರದ ಹೊಯ್ಸಳೇಶ್ವರ' ಮತ್ತು 'ಬೇಲೂರಿನ ಚೆನ್ನಕೇಶವ' ದೇವಾಲಯಗಳು ರೂಪುಗೊಂಡಿದ್ದು.
ಆ ಕಾಲದಲ್ಲಿ ಶಿಲ್ಪಿಗಳೂ ಸಹ, ಋಷಿಗಳಂತೆಯೇ ಬಾಳುತಿದ್ದ ಶ್ರೇಷ್ಟಾತ್ಮರು. ಸಿದ್ದ-ಪುರುಷರುಗಳು ತಪಸ್ಸಿನಿಂದ ದೈವಸಾಕ್ಷಾತ್ಕಾರ ಹೊಂದುತ್ತಿದ್ದರೆ, ಶಿಲ್ಪಿಗಳು ಶಿಲಾತಪಸ್ಸಿನಿಂದ ದೈವವನ್ನೇ ರೂಪುಗೊಳಿಸಿ ಮಹಾತ್ಮರೆನಿಸುತ್ತಿದ್ದರು.
ತಪಸ್ವಿಗಳು, ತಮ್ಮದೇ ಶೈಲಿಯ ನಿಷ್ಠೆ ನೇಮಗಳನ್ನು ಅನುಸರಿಸುತ್ತಿದ್ದಂತೆ, ಶಿಲ್ಪಿಗಳಲ್ಲೂ ಕೆಲವರು ತಮ್ಮದೇ ನಿಷ್ಠೆ ನೇಮಗಳನ್ನು ಪಾಲಿಸುತ್ತಿದ್ದರು. ತಮ್ಮ ಮನಸಿಗೊಪ್ಪದ ಕಲ್ಲುಗಳಿಂದ, ಪಶು ಪಕ್ಷಿಗಳನ್ನೂ ಕೆತ್ತಲಿಚ್ಚೆ ಪಡದ ಅವರು, ದೈವ ವಿಗ್ರಹಗಳನ್ನು ಕೆತ್ತಲು ತಮಗೆ ದೈವ ಪ್ರೇರಣೆಯಾಗುವ, ಸ್ಫೂರ್ತಿ ಸಿಗುವ ಶಿಲೆಗಳನ್ನು ಅರುಸುತ್ತಾ ಕಾಡುಮೇಡುಗಳನ್ನು ಸುತ್ತುತ್ತಿದ್ದರು.
ಹೀಗೇ, ತನಗೆ ಸ್ಫೂರ್ತಿ ಕೊಡುವ ಒಂದು ಶಿಲೆಯನ್ನು ಅರಸುತ್ತಾ ಹೊರಟ ಹೊಯ್ಸಳ ನಾಡಿನ ಒಬ್ಬ ಶಿಲ್ಪಿ, ಕಾಡುಮೇಡುಗಳನ್ನು ದಾಟಿ ತನ್ನ ನಾಡಿನಿಂದ ಹಲವಾರು ಮೈಲುಗಳು ಸಾಗಿ ಬಂದನು. ಮಲೆನಾಡಿನ ಮೇರುಗಿರಿಗಳ ಶೃಂಗಮಾಲೆ ಶುರುವಾಗುವ ನಡುನಾಡಿಗೆ ಬಂದ ಅವನು, ಅಲ್ಲೇ ಇದ್ದ ಸಣ್ಣದೊಂದು ಬೆಟ್ಟವನ್ನತ್ತಿ ಕುಳಿತು, ಇನ್ನು ಮುಂದೆ ಸಾಗಬೇಕಾದ ಕಡಿದಾದ ದಟ್ಟಕಾಡಿನ ಶಿಖರಮಾಲೆಯನ್ನು ಅಲೆಯುವುದು ಹೇಗೆ ಎಂದು ಯೋಚಿಸುತ್ತಾ, ಮುಳುಗುತ್ತಿದ್ದ ಸೂರ್ಯನನ್ನು ನೋಡಿ, ಅಲ್ಲೇ ರಾತ್ರಿಯನ್ನು ಕಳೆಯುವುದಾಗಿ ಅಂದುಕೊಂಡನು. ಆಗ ಅಲ್ಲೇ ಬಿದ್ದಿದ್ದ ಸಣ್ಣ ಸಣ್ಣ ಕಲ್ಲುಬಂಡೆಗಳ ರಾಶಿಯಲ್ಲಿ ಒಂದು ತುಸು ದೊಡ್ಡದಿದ್ದ ಶಿಲೆಗೆ ತಲೆಯಿಟ್ಟು ಆಗಸವನ್ನೇ ನೋಡುತ್ತಾ ಮಲಗಿಕೊಂಡನು.
ಬೆಟ್ಟದ ಮೇಲೆ ಏನನ್ನೋ ಯೋಚಿಸುತ್ತಾ ಮಲಗಿದ್ದ ಆ ಶಿಲ್ಪಿಯ ದೇಹರೋಪವನ್ನು ನೋಡಿದರೆ, ಇಳಿವಯಸ್ಸಿನ ಈತ ಒಬ್ಬ ಉತ್ತಮ ಮನೆತನದ ಪುರುಷನೆಂದು, ಯಾರಾದರು ಗುರುತಿಸಬಹುದಿತ್ತು. ಆದರೆ ಅಂದು, ಅಲೆದು ಅಲೆದು ಬಹಳಷ್ಟು ದಣಿದಿದ್ದರಿಂದ ಆತನ ದಟ್ಟವಾಗಿ ಬಿಳುಪೇರುತ್ತಿದ್ದ ಕೇಶರಾಶಿ ಕೆದರಿಕೊಂಡಿತ್ತು, ಕಳೆಗುಂದಿದ ಮೊಗದಲ್ಲಿ ಮುಪ್ಪಿನಿಂದ ಗುಳಿಬಿದ್ದಿದ್ದ ಕಣ್ಣುಗಳಲ್ಲಿ, ಕಣ್ಣೀರು ಮಡುಗಟ್ಟಿತ್ತು. ಆಗಸವನ್ನೇ ದಿಟ್ಟಿಸುತ್ತ ಮಲಗಿದ್ದ ಆತನ ಮನಸ್ಸಿನ್ನಲ್ಲಿ ಆಗ, ತನ್ನ ಜೀವನದ ಒಂದೊಂದೇ ಮಜಲುಗಳು ಹಾದು ಹೋಗತೊಡಗಿದವು.
ತಾನು ಶಿಲ್ಪಿಯೊಬ್ಬನ ಮಗನಾಗಿ ಹುಟ್ಟಿದ್ದು,,, ರಕ್ತಗತವಾಗಿ ಬಂದ ಶಿಲ್ಪಕಲೆಯಲ್ಲಿ ಶೇಷ್ಟತೆಯನ್ನು ಸಾಧಿಸಬೇಕೆಂದು, ಶಿಲ್ಪದೀಕ್ಷೆ ಪಡೆದದ್ದು,,, ಬ್ರಹ್ಮಚಾರಿಯಾಗಿ ವರ್ಷಾನುವರ್ಷಗಳ ಕಾಲ ಶಿಲ್ಪವಿಜ್ಞಾನವನ್ನು ಕರಗತ ಮಾಡಿಕೊಂಡಿದ್ದು,,, ತನ್ನಿಡೀ ಬದುಕನ್ನೇ ಶಿಲ್ಪಕಲೆಗಾಗಿ ಮುಡಿಪಾಗಿಟ್ಟು, ಅಚ್ಚರಿಗಳ ಮೇಲೆ ಅಚ್ಚರಿಯಂತೆ ಗುಡಿ-ಗೋಪುರಗಳನ್ನು ತನ್ನ ನಾಡಿನಲ್ಲಿ ಸೃಷ್ಟಿಸುವ ಮಹಾಕಾರ್ಯದಲ್ಲಿ ತಾನೂ ಮುಖ್ಯಶಿಲ್ಪಿಯಾಗಿ ಭಾಗಿಯಾಗಿದ್ದು,,, ರಾಜಾದಿಗಳಿಂದ ಗೌರವ ಸ್ವೀಕರಿಸಿದ್ದು,,, ಆತನ ಮನದಲ್ಲಿ ಮತ್ತೆ ಸ್ಪಷ್ಟವಾಗಿ ಗೋಚರಿಸಿತೊಡಗಿದವು.
ಹೀಗೇ, ತನ್ನ ಬದುಕಿನ ಪುಟಗಳನ್ನು ತಿರುವಿ ಹಾಕುತ್ತಾ, ಆತನಿಗೆ ಇತ್ತೀಚಿನ ದಿನಗಳ ನೆನಪಾದವು. ಆತನ್ನನ್ನು ಮುಪ್ಪು ಆವರಿಸಿ, ಸಹಜವಾಗಿ ಮೈ ಬಲ ಇಳಿದು ಹೋಗಿ, ಕೈ ಕಾಲ್ಗಳು ನಡುಗುತ್ತಿದ್ದವಾದ್ದರಿಂದ ಶಿಲ್ಪಕಲೆಯಲ್ಲಿ ಹಿಂದೆ ಇದ್ದ ಕುಶಲತೆ, ಚಾಕಚಕ್ಯತೆ ಕಡಿಮೆಯಾಗಿತ್ತು. ಇನ್ನು ತನ್ನಿಂದ ಉತ್ಕೃಷ್ಟ ಶಿಲ್ಪಕೃತಿಗಳನ್ನು ಮಾಡಲಾಗದು ಎಂದು, ಆತನಿಗೆ ಅರಿವಾಗತೊಡಗಿತ್ತು.
ಆ ಸಮಯದಲ್ಲಿ, ಆತನಿದ್ದ ನಾಡಿನ ಮಾಂಡಲೀಕರು (ಹೊಯ್ಸಳ ರಾಜರ - ಸಣ್ಣ ಸಾಮಂತ ನಾಯಕ), ತನ್ನ ಜೀವನದ ಪುಣ್ಯವರ್ಧನೆಗಾಗಿ ಒಂದು ದೇವಾಲಯವನ್ನು ಕಟ್ಟಬೇಕೆಂದುಕೊಂಡು ಶಿಲ್ಪಿಗಳಲ್ಲಿಗೆ ಬಂದು "ತಾವೇ ಮುಖ್ಯ ಶಿಲ್ಪಿಯಾಗಿ ನಿಂತು, ದೇವಾಲಯ ನಿರ್ಮಾಣವನ್ನು ಪೂರ್ಣಗೊಳಿಸಿಕೊಡಬೇಕು" ಎಂದು ಬೇಡಿಕೊಂಡನು. ಬೇರೆ ವಿದಿಯಿಲ್ಲದೆ ಆ ಮಹಾಕಾರ್ಯವನ್ನು ಸ್ವೀಕರಿಸಿದ ಶಿಲ್ಪಿ, ಮಾಂಡಲೀಕರು ಒದಗಿಸಿಕೊಟ್ಟ ಧನ-ಧಾನ್ಯ-ಜನಬಲದೊಂದಿಗೆ ಕಿರಿಯ ಶಿಲ್ಪಿಗಳ ತಂಡವೊಂದನ್ನು ಸಿದ್ದಗೊಳಿಸಿ, ಒಂದೆರಡು ವರ್ಷಗಳಲ್ಲಿ ಕೇಶವನ ದೇವಾಲಯವನ್ನು ಸುಂದರ ಹಾಗೂ ನಯನ ಮನೋಹರವಾಗಿ ಪೂರ್ಣಗೊಳಿಸಿದನು. ಗರ್ಭಗುಡಿಯಲ್ಲಿನ 'ವರಹಸ್ತ ಕೇಶವ'ನ ವಿಗ್ರಹವನ್ನು ತಾನೇ ಕೈಯಾರ ಕೆತ್ತನೆಗೊಳಿಸಿದ್ದನು, ಆ ಮಹಾಶಿಲ್ಪಿ.
ಆ ದೇವಾಲಯದ ಲೋಕಾರ್ಪಣೆಯ ದಿನ, ಮಾಂಡಲೀಕರ ಮೇಲಿನ ಭಕ್ತಿಗೆ ಎಲ್ಲ ಹಳ್ಳಿಯ ಗೌಡರುಗಳು, ಅಧಿಕಾರಿಗಳು, ಪ್ರಜೆಗಳು ಲೆಕ್ಕವಿಲ್ಲದಷ್ಟು ಜನ ಸೇರಿದರು. ಅನ್ನದಾನ, ಚಿನ್ನದಾನ, ಗೋ-ದಾನ ಮಹಾ-ದಾನಗಳು ಸುಸೂತ್ರವಾಗಿ ನೆಡೆದವು, ಪ್ರಥಮ ಪೂಜೆಗೆ ಮಂದಿರ ಸಿದ್ದವಾಗಿತ್ತು, ಗರ್ಭಗುಡಿಯ ತೆರೆ ಸರಿದಾಗ ಕೇಶವ ಮೂರ್ತಿ, ವರಹಸ್ತನಾಗಿ ಸ್ವರ್ಣ ಪುಷ್ಪಾಲಂಕೃತವಾಗಿ, ಮಹಾವಿಷ್ಣುವೇ ಪ್ರಕಟಗೊಂಡಂತೆ ನಿಂತಿತ್ತು. ಮಹಾಮಂಗಳಾರತಿಗೆ ಕ್ಷಣವೊಂದರ ಮೊದಲು ಕೇಶವಮೂರ್ತಿಯ ವರಹಸ್ತ (ಬಲಗೈ ಹಸ್ತ) ಬಿರುಕುಗೊಂಡಿತು. ವೈದಿಕರು, ಮಾಂಡಲೀಕರು, ಶಿಲ್ಪಿಗಳು ಸಕಲ ಜನಗಣವೂ ಸಿಡಿಲಾಘಾತವಾದಂತೆ ಸ್ತಬ್ಧವಾಗಿ ಹೋದರು.
ಮಾಂಡಲೀಕರು ಶಾಪಗ್ರಸ್ತವಾದಂತೆ, ಏನೊಂದೂ ತೋಚದಾಗಿ, ಭಾರವಾದ ಹೆಜ್ಜೆಗಳನ್ನಿಕ್ಕುತ್ತಾ ತಮ್ಮ ಭವನಕ್ಕೆ ಹಿಂದಿರುಗಿದರು. ಆ ಮಹಾಶಿಲ್ಪಿಗೆ ಅದು, ತನ್ನ ಜೀವನದ ಮೊದಲ ಸೋಲಾಗಿತ್ತು. ಆ ಸೋಲು, ಮಹಾವಿಷ್ಣು ವಾಮನನಾಗಿ ಬಲಿಚಕ್ರವರ್ತಿಯನ್ನು ಪಾತಾಳಕ್ಕೆ ತುಳಿದಂತೆ, ಶಿಲ್ಪಿಯ ಆತ್ಮವನ್ನು ಅವಮಾನದ ಮಹಾಪಾತಾಳಕ್ಕೆ ತುಳಿದು ಹಾಕಿತ್ತು. ಖಿನ್ನಗೊಂಡ ಶಿಲ್ಪಿ, ಗರ ಬಡಿದವನಂತೆ ಕುಳಿತುಬಿಟ್ಟ.
ಅತ್ತ, ತನ್ನ ಭವನಕ್ಕೆ ಹಿಂದಿರುಗಿದ ಮಾಂಡಲೀಕನಿಗೆ ಇನ್ನೊಂದು ಮಹಾಘೋರ ವಾರ್ತೆ ಕಾದಿತ್ತು. ಮಾಂಡಲೀಕನ ಮಂಡಲದ ಗಡಿಯಲ್ಲಿ, ಶತ್ರು ಸೇನೆ ದಾಳಿಮಾಡಿ ಗಡಿಠಾಣ್ಯವನ್ನು ಲೂಟಿಮಾಡಿ ಧ್ವಂಸಗೊಳಿಸಿದ್ದಲ್ಲದೇ, ಆ ಚಿಕ್ಕ ಸಮರದಲ್ಲಿ ಗಡಿಯಲ್ಲಿದ್ದ ಮಾಂಡಲೀಕನ ಮಗನನ್ನು ಬಲಿತೆಗೆದುಕೊಂಡಿತ್ತು. ಸುದ್ದಿಯನ್ನು ಕೇಳಿ, ಮಹಾಕೋಪಗೊಂಡ ಮಾಂಡಲೀಕನಿಗೆ, ಇಷ್ಟೆಲ್ಲಾ ಅನಿಷ್ಟಕ್ಕೆ ಕಾರಣ, ಮಂದಿರದ ಪ್ರಥಮ-ಪೂಜೆಗೂ ಮೊದಲು ಕೇಶವಮೂರ್ತಿಯ ವರಹಸ್ತ ಬಿರುಕುಬಿಟ್ಟು ಪೂಜೆ ಭಗ್ನಗೊಂಡಿದ್ದು ಮತ್ತು ಇದಕ್ಕೆಲ್ಲಾ ಮೂಲ ಕಾರಣ ಆ ಮಹಾಶಿಲ್ಪಿಯ ನಿರ್ಲಕ್ಷೆಯ ಕೆಲಸ, ಎಂದು ರೋಮ-ರೋಮವೂ ಕೋಪದಿಂದ ಉರಿಯತೊಡಗಿತು. ಆದರೂ ಆ ಶಿಲ್ಪಿಗೆ ಮರಣದಂಡನೆ ವಿಧಿಸಲು ಮನಸೊಪ್ಪದೆ, ಬಹಿಷ್ಕಾರ ವಿಧಿಸಿ ಗಡಿಪಾರುಮಾಡುವಂತೆ ಶಿಕ್ಷೆ ವಿಧಿಸಿ, ವೈದಿಕರುಗಳಿಗೆ ಶಾಂತಿಹೋಮಗಳನ್ನು ನಡೆಸಿ ಬೇರೊಂದು ಕೇಶವ ಮೂರ್ತಿಯನ್ನು ಪ್ರತಿಷ್ಠಾಪಿಸಲು ತಿಳಿಸಿ, ತಾನು ಮಗನ ಸಾವಿನ ಸೇಡನ್ನು ತೀರಿಸಿಕೊಳ್ಳಲು ತನ್ನೆಲ್ಲ ಸೈನ್ಯದೊಂದಿಗೆ ಯುದ್ದಕ್ಕೆ ಹೊರಟು ಹೋದನು.
ಘಾಸಿಗೊಂಡ ಹರಿಣದಂತಾಗಿದ್ದ ಶಿಲ್ಪಿ, ಗಡಿಪಾರು ಶಿಕ್ಷೆಯ ವಿಷಯ ಕೇಳಿ, ಮೂರ್ಛೆಹೋದಂತಾದನು. ತನ್ನ ಇಡೀ ಬದುಕಿನ ತಪಸ್ಸಿನ್ನೇ, ಈ ಒಂದು ದಿನ, ಅಣಕಿಸುತ್ತಿರುವಂತೆ ಭಾಸವಾಯ್ತು. ಆ ಕ್ಷಣದಲ್ಲಿ ಸಾವಿನ ಯೋಚನೆಯ ಬದಲು, ಮತ್ತೆ ಹೊಸ ಛಲವೊಂದು ಹುಟ್ಟಿತು. ಆ ಶಿಲೆಯಲ್ಲಿ ಮಾಸಿಹೋದ ಕೇಶವನನ್ನು, ಇನ್ನೊಂದು ಮಹಾಶಿಲೆಯಲ್ಲಿ ಮತ್ತೆ ರೂಪಿಸಿ ಸಾಕ್ಷಾತ್ಕಾರ ಹೊಂದುವೆನೆಂದು ಶಪಥ ಮಾಡಿ, ತನ್ನ ಶಿಲ್ಪಿಸಾಮಗ್ರಿಗಳೊಂದಿಗೆ ಗಡಿದಾಟಿ, ಹೊಸ ಯಾನವೊಂದಕ್ಕೆ ಹೊರಟು ಬಂದಿದ್ದನು.
ಇಷ್ಟೆಲ್ಲಾ ಹಿಂದಿನ ಘಟನೆಗಳು, ಮತ್ತೆ ಈಗ ಬೆಟ್ಟದ ಮೇಲೆ ಮಲಗಿದ್ದಾಗ ಮನಸ್ಸಿನಲ್ಲಿ ಮೂಡಿಬಂದೊಡನೆ, ದುಃಖ ಉಮ್ಮಳಿಸಿ ಬಂದು ಎದ್ದು ಕೂತನು. ಸುತ್ತಲೂ ದಟ್ಟಗೆ ಕವಿದಿದ್ದ ಕಡುಗಪ್ಪು-ಕತ್ತಲನ್ನು ನೋಡಿ, ಇನ್ನಷ್ಟು ಬೆಚ್ಚಿದನು. ಬೆಟ್ಟದ ಮೇಲಿನ ಶೀತದಗಾಳಿಗೆ ಮೈ ನಡುಗುತ್ತಿತ್ತು. ಅಂತೂ ತಾನು, ಪಣತೊಟ್ಟಿರುವ ಮಹಾಕಾರ್ಯವನ್ನು ಸಾಧಿಸುವುದು ಸಾಧ್ಯವೋ, ಏನೋ ಎಂದುಕೊಳ್ಳುತ್ತಾ, ಚಳಿಗೆ ಉತ್ತರೀಯವನ್ನೇ ಹೊದಿಕೆ ಮಾಡಿಕೊಂಡು ಮತ್ತೆ ಆ ಶಿಲೆಗೆ ತಲೆಯಿಟ್ಟು ಮಲಗಿದನು.
ಆ ಕ್ಷಣದಲ್ಲಿ ಆತನಿಗೆ ನಿದಿರೆಯತ್ತಿ, ಸಣ್ಣ ಕನಸೊಂದು ಮೂಡಿತು. ಕನಸಿನಲ್ಲಿ "ತಾನು ಚೆನ್ನಕೇಶವನ ಪಾದದ ಮೇಲೆ ತಲೆಯಿಟ್ಟು ಮಲಗಿ, ತನ್ನ ಕಾರ್ಯ ಸಿದ್ದಿಸುವುದೇ ಎಂದು ಅಳುತ್ತಿದ್ದಾನೆ. ಆಗ ಕೇಶವನ ವರಹಸ್ತದಿಂದ ಸಂಪಿಗೆ ಹೂವುಗಳು, ಆತನ ತಲೆಯಮೇಲೆ ಮಹಾಪ್ರಸಾದವಾಗಿ ಬೀಳುತ್ತಿವೆ" ಅನಿಸುತು. ತಕ್ಷಣ ಬೆಚ್ಚಿಬಿದ್ದು ಎಚ್ಚೆತ್ತ ಶಿಲ್ಪಿಗೆ, ಅತ್ಯಾಶ್ಚರ್ಯವೆಂಬಂತೆ ತನ್ನ ತಲೆಯ ಮೇಲೆ ಕಾಡು ಸಂಪಿಗೆ ಹೂಗಳು ಉದುರಿ ಬಿದ್ದಿರುವುದು ಕಾಣುತ್ತದೆ. ಏನಾಯ್ತೆಂದು ತಿರುಗಿ ನೋಡಿದರೆ, ತಾನು ತಲೆಯಿಟ್ಟು ಮಲಗಿದ್ದ ಶಿಲೆಯ ಹಿಂದಕ್ಕೆ ಕಾಡುಸಂಪಿಗೆ ಮರವೊಂದಿದೆ, ಅದರ ಹೂಗಳು ಗಾಳಿಗೆ ಆಗಾಗ ಉದುರಿ ಹಾರಿ ಬಂದು, ತನ್ನ ಮೇಲೆ ಬಿದ್ದಿವೆ ಎಂದು ಅರಿವಾಗುತ್ತದೆ. ಆದರೆ ಅದನ್ನು ಕೇಶವನ ವರಪ್ರಸಾದವೆಂದು ತಿಳಿದು, ತೆಗೆದು ಕಣ್ಣಿಗೊತ್ತಿಕೊಂಡನು. ಆ ಇರುಳಲ್ಲಿ, ತಾನು ತಲೆಯಿಟ್ಟು ಮಲಗಿದ್ದ ಶಿಲೆಯನ್ನು ದಿಟ್ಟಿಸಿ ನೋಡಿದನು, ಕೇಶವನ ಸುಂದರ ಮೂರ್ತಿ ಕಣ್ಮುಂದೆ ಬಂದು ಮರೆಯಾಯ್ತು.
"ಹಾ!!!,,, ಇದೇ, ಆ ಕೇಶವನ ಸ್ಥಾನ" ಎಂದು ಕೈ ಮುಗಿದು ನಮಸ್ಕರಿಸಿದನು. ಬೆಳಗು ಮೂಡುವುದರೊಳಗೆ, ಆ ಶಿಲೆಯ ಅಕ್ಕ ಪಕ್ಕದ ಸಣ್ಣ ಸಣ್ಣ, ಕಲ್ಲುಗಳನ್ನು ಪಕ್ಕಕ್ಕೆ ಸರಿಸಿ, ಇಬ್ಬನಿಯಲ್ಲಿ ನೆನೆದಿದ್ದ ಕಲ್ಲಿಗೆ ತಾನು ತಂದಿದ ತೈಲವನ್ನು (ಶಿಲೆಗಳು ಮೃದುಗೊಂಡು ಶುಭ್ರವಾಗಿ, ಕೆತ್ತನೆಗೆ ಸರಿಯಾಗಲಿ ಎಂದು ಬಳಸುವ ತೈಲವನ್ನು) ಶಿಲೆಯ ಎಲ್ಲ ಭಾಗಕ್ಕೂ ಮೆತ್ತಿದನು. ನಂತರ, ಶಿಲೆಯ ನೆತ್ತಿಗೆ "ಇದೇ ಕೇಶವನ ಹಣೆ..." ಎಂದು, ನಾಮ ತಿಲಕವನ್ನಿಟ್ಟು ಮತ್ತೆ ಮತ್ತೆ ಕೈಮುಗಿದನು.
"ಈ ನನ್ನ ಕೇಶವನಿಗೆ, ಈ ನಿಜ ರೂಪದಲ್ಲೇ ಪ್ರಥಮ ಪೂಜೆಯನ್ನರ್ಪಿಸಿ, ನಂತರ ವಿಗ್ರಹವನ್ನಾಗಿಸುವೆ" ಎಂದುಕೊಂಡು, ಕತ್ತಲಲ್ಲೇ ಪೂಜೆಗೆ ನೀರು ಮತ್ತು ಹೂವನ್ನು ಹೊಂದಿಸುವೆನೆಂದು, ಭಕ್ತಿ ಪರವಶನಾಗಿ ಬೆಟ್ಟದ ಇನ್ನೊಂದು ಕಡೆಯ ಕೆಳಭಾಗದಲ್ಲಿದ್ದ ಸಣ್ಣ ಕೆರೆಯ ಕಡೆಗೆ ಇಳಿಯತೊಡಗಿದನು. ಅವನ ಕೆಲವು ಹೆಜ್ಜೆಗಳಲ್ಲಿಯೇ, ಅಲ್ಲಿ ಇಬ್ಬನಿ ತುಂಬಿದ ಬಂಡೆಯೊಂದರ ಮೇಲೆ ಕಾಲಿಟ್ಟು, ಬೆಟ್ಟದಿಂದ ಜಾರಿ ಪ್ರಪಾತಕ್ಕೆ ಉರುಳಿದ ಶಿಲ್ಪಿ, ಭಕ್ತಿ ಪರವಶನಾಗಿಯೇ ಸಾವನ್ನಪ್ಪಿದನು.
ಇತ್ತ, ಆ ಮಹಾಶಿಲೆಯು ಎಣ್ಣೆಯನ್ನು ಹೀರಿಕೊಂಡು, ನಾಮತಿಲಕ ಗಟ್ಟಿಯಾಗತೊಡಗಿತು. ದಿನಗಳು ಸಾಗಿದಂತೆ ನಾಮ ಅಚ್ಚೊತ್ತಿಕುಳಿತು, ಶಿಲೆ ಹೊಸ ಕಳೆಯಿಂದ ಮಿರ ಮಿರನೆ ಮಿಂಚತೊಡಗಿತು.
ಇದಾದ ಹಲವು ದಿನಗಳ ತರುವಾಯ, ಸುತ್ತ ಮುತ್ತಲ ಹಳ್ಳಿಯ ದನಗಾಹಿಗಳು, ಬೆಟ್ಟದ ಮೇಲೆ ನಾಮತಿಲಕ ಹೊತ್ತ ಶಿಲೆಯನ್ನುಕಂಡೆವೆಂದು ಹತ್ತಿರದ ಹಳ್ಳಿಗಳಿಗೆ, ವಿಷಯ ಮುಟ್ಟಿಸಿದರು. ಆಶ್ಚರ್ಯಗೊಂಡು ಬಂದ ಹಳ್ಳಿಗರು, "ಯಾರೋ ಪುಣ್ಯಪುರುಷರು ಪೂಜಿಸಿ ಭಗವಂತನನ್ನು ಸಾಕ್ಷಾತ್ಕರಿಸಿಕೊಂಡ ದೈವ ಶಿಲೆಯಿದು, ಶ್ರೀ ರಂಗನಾಥನ ರೂಪವಿದು" ಎಂದು ತಿಳಿದು ಪೂಜಿಸಲಾರಂಬಿಸಿದರು. ಆ ಮಹಾತ್ಮರು ಪೂಜಿಸಿದ ಬಹುದಿನದ ನಂತರವೂ ನಾಮ ಇನ್ನೂ ಮಾಸದೆ ಉಳಿದಿರುವುದು, ತೈಲ ಲೇಪನದಿಂದ ಎಂದು ತಿಳಿದ ಭಕ್ತರು, ರಂಗನಾಥನಿಗೆ ತೈಲ ಮಜ್ಜನದ ಸೇವೆಯನ್ನೂ ನಡೆಸಲಾರಂಬಿಸಿದರು. ಭಕ್ತ ಗಣ ದಿನೇ ದಿನೆ ಬೆಳೆಯುತ್ತಾ ಹೋಯಿತು.
* * * * *
ಇಷ್ಟೆಲ್ಲಾ ಮಹಾಕಥನ ನನ್ನ ಕನಸಲ್ಲಿ ನಡೆದಿದ್ದೇ ತಡ ರೊಮಾಂಚನಗೊಂಡ ನಾನು, ನಿದಿರೆಯಿಂದ ಎಚ್ಚೆತ್ತು ಕುಳಿತೆ. ನನಗೆ ನಾನೇ, ಸತ್ಯ ಸಾಕ್ಷತ್ಕಾರಗೊಂಡ ಮಹಾಜ್ಞಾನಿಯಂತೆ ಮನಸಿನಲ್ಲೇ, ಬೀಗತೊಡಗಿದೆ.
ಇನ್ನೂ ಸಮಯ ನಡುರಾತ್ರಿಯಾಗಿದ್ದರಿಂದ, ಮತ್ತೆ ಮಲಗಿದೆ. ಮನಸ್ಸು ಮಾತ್ರ ಅದೇ ಹೆಮ್ಮೆಯಿಂದ ಬೀಗುತ್ತಿತ್ತು. ನಿಧಾನವಾಗಿ ನಿದಿರೆ ಹತ್ತಿತು. ಅರೇ,,, ಈಗ ಮತ್ತೊಂದು ಕನಸು,,, ಹೊಸ ಕನಸು. ಕನಸಿನಲ್ಲೇನಾಯ್ತು, ನೋಡೋಣ ಬನ್ನಿ.
* * * * *
ಈಗ ಕನಸಲ್ಲಿ, ನಾನು ಒಂದು ಗ್ಯಾರಾಜಿನ ಮುಂದೆ ಇದ್ದೆ. ಅದೂ ನನ್ನ ಮೆಚ್ಚಿನ ಬೈಕಿನ ಮೇಲೆ ಕುಳಿತು, ಸೀದಾ ಗ್ಯಾರಾಜಿನ ಒಳಗೆ ಹೋದ ನಾನು ಅಲ್ಲಿ ಕುಳಿತಿದ್ದ ಇಬ್ಬರನ್ನು ನೋಡಿ, ನನ್ನ ಬೈಕನ್ನು ಮಾರಬೇಕಿದೆ ಎಂದೆ. ಅವರಲ್ಲಿ ಒಬ್ಬ, ಎದ್ದು ಮೇಲೆ ಬಂದು, ನನ್ನನ್ನೂ ಬೈಕನ್ನೂ ಒಂದು ಸುತ್ತು ಸುತ್ತಿ ನೋಡಿ, "ಸರಿ,,, ಮಾರಬಹುದು" ಎಂದು ನನ್ನನ್ನು ಬೈಕಿನಿಂದ ಇಳಿಯಲು ಹೇಳಿದ. ನಾನು ಕೆಳಗಿಳಿದ ಕೂಡಲೇ, ಬೈಕನ್ನು ಹತ್ತಿ ಕುಳಿತ ಆತ ಒಂದು ಟ್ರಯಲ್ ಡ್ರೈವ್ ನೋಡುವೆ ಅನ್ನುತ್ತಲೇ ಸೀದಾ ಬೈಕನ್ನು ಚಲಾಯಿಸಿಕೊಂಡು ಗ್ಯಾರಾಜಿನ ಹೊರಗೆ ಹೋದ. ಏನು ಮಾಡಬೇಕೆಂದು ಅರಿಯದಂತಾದ ನಾನು, ಹಿಂದಕ್ಕೆ ತಿರುಗಿ ಅಂಗಡಿಯಲ್ಲಿ ಕುಳಿತಿದ್ದವನ ಕಡೆಗೆ ನೋಡಿದೆ, ನನ್ನ ದುರಾದೃಷ್ಟಕ್ಕೆ ಅವನೂ ಕಾಣಲಿಲ್ಲ.
ಎದೆಯಲ್ಲಿ ನೂರು ಕುದುರೆ ಓಡಿದಂತೆ, ಹೃದಯ ದಡ ದಡ ಬಡಿಯತೊಡಗಿತು. ಬೈಕನ್ನು ಹತ್ತಿ ಹೋದವನು ಯಾರು?, ಇಲ್ಲಿ ಇದ್ದವನು ಯಾರು?, ಎಂಬುದು ಒಂದೂ ತಿಳಿಯದವನಾದೆ.
ತಕ್ಷಣ ಹೊಳೆಯಿತು, ಇವರು ಗ್ಯಾರಾಜಿನವರಲ್ಲ, ಇಲ್ಲಿಗೆ ಬಂದು ಕುಳಿತಿದ್ದ ಯಾರಿಗೋ, ಬೈಕನ್ನು ಕೊಟ್ಟು ನಾನು ಎಡಬಿಡಂಗಿಯಾದೆ. ನನ್ನ ಬೈಕು ಕಳ್ಳರ ಪಾಲಾಯಿತು ಎಂದು ಅರಿವಾಗತೊಡಗಿತು. ಆದರೂ, ಏನೋ ಒಂದು ಮೊಂಡು ನಂಬಿಕೆಯಿಂದ, ಅವನು ವಾಪಾಸು ಬೈಕಿನೊಡನೆ ಬಂದೇ ಬರುವನೆಂದು, ನನಗೇ ನಾನೇ ಸಾಂತ್ವನ ಹೇಳಿಕೊಳ್ಳತೊಡಗಿದೆ. ಏನು ಮಾಡಿದರೂ, ಲಕ್ಷಕ್ಕೂ ಹೆಚ್ಚು ಬೆಲೆಬಾಳುವ ಬೈಕು, ವಾಪಸ್ಸು ಸಿಗುವ ಸಣ್ಣ ನಂಬಿಕೆಯೂ ಬರದಾಯಿತು. ಹೃದಯದ ಭಯ ಜೋರಾಗತೊಡಗಿ, ಇನ್ನೇನು ಎದೆಯೊಡೆದು ಸತ್ತೇ ಹೋದೆ ಎನ್ನುವಷ್ಟರಲ್ಲಿ ಮತ್ತೆ ಎಚ್ಚರವಾಯಿತು.
ಎದ್ದ ಒಂದೇ ಕ್ಷಣದಲ್ಲಿ, ಇದು ಕನಸು ಎಂದು ತಿಳಿದು, ಎಂದೂ ಅನುಭವಿಸದ ನೆಮ್ಮದಿಯ ಭಾವವನ್ನು ಅನುಭಸಿದೆ.
* * * * *
ಅಬ್ಬಾ!!! ಒಂದೆರಡು ಘಳಿಗೆಗಳ ಹಿಂದೆ ಕಂಡ ಕನಸು, ನನ್ನ ತೀಕ್ಷ್ಣ ಬುದ್ದಿಯ ಬಗ್ಗೆ ನನ್ನಲ್ಲಿ ನನಗೆ ಬಹಳಷ್ಟು ಹೆಮ್ಮೆಯನ್ನುಂಟು ಮಾಡಿತ್ತು. ಆದರೆ ಇದೀಗ ಕಂಡ ಕನಸು ನನ್ನ ಮಂಕು ಬುದ್ದಿಯ ಬಗ್ಗೆ ಒಂದೇ ಕ್ಷಣದಲ್ಲಿ, ನನ್ನ ಬಗ್ಗೆ ನನಗೇ ಹೇಸಿಗೆಯನ್ನುಂಟುಮಾಡಿತ್ತು.
ಆ ಕನಸಿಗೂ, ಈ ಕನಸಿಗೂ ಏನಿರಬಹುದು ಸಂಬಧ ಎಂದು ಯೋಚಿಸಿದಾಗ, ದಿಗಿಲುಗೊಂಡಿದ್ದ ನನ್ನ ಮನಸಿಗೆ, "ದೇವರ ಬಗ್ಗೆ ಏನೇನೋ ಕಥೆಯನ್ನು, ಕನಸಿನಲ್ಲಿ ಕಟ್ಟಿದ್ದಕ್ಕೆ, ಅದೇ ದೇವರು ಶಿಕ್ಷೆಯನ್ನು ಇನ್ನೊಂದು ಕನಸಲ್ಲಿ ಕೊಟ್ಟನೆಂದು" ಅನಿಸಿತು.
"ನನ್ನನ್ನು ಮನ್ನಿಸಿಬಿಡು, ರಂಗನಾಥಾ..." ಎಂದು ಬೇಡಿಕೊಂಡೆ. ಮನಸ್ಸು ಕೊಂಚ ನಿರಾಳವಾಯ್ತು.
ಮತ್ತೆ ಹೊದಿಕೆಯೆಳೆದು ಮಲಗುವ ಎನ್ನುವಷ್ಟರಲ್ಲಿ, ಬೆಳಗಿನ ಕಿರಣಗಳು ಆಗಲೇ ಕಿಟಕಿಯಲ್ಲಿ ಮೂಡತೊಡಗಿದ್ದವು.
- ಸಂಪತ್ ಕುಮಾರ್