Tuesday, July 28, 2015

ಸಹಚಾರಿ

Written in the tune of 'Kareyole' Song from the movie Rangitaranga.

Inspired by that awesome song...

ಸಹಚಾರಿ, ಸಹ ಸಂಚಾರಿ,
ಸಂಗಾತಿ,,, ಸಹಚಾರಿ.
ಸವಿಮಾತ ಸುಧೆಯ ಸುರಿಸೊ,
ಸುಕುಮಾರಿ ಸಹಚಾರಿ. 
ಸಾವಿನ ದಾರಿಯೇ, ಸಿಕ್ಕರೂ ಎದುರು, ಸಂಗವ ಬಿಡದ ಸಹಯಾತ್ರಿ...
ಸಾವಿರ ಜನ್ಮಕು, ಶ್ರೀಮತಿ ನೀನೇ, ಸುಂದರ ನಯನೆ ಸುರನಾರಿ...
ಸಹಚಾರಿ, ಸಹ ಸಂಚಾರಿ
ಸಂಗಾತಿ,,, ಸಹಚಾರಿ.

ಸುಮಬಾಲೆ ಸೆರಗಲ್ಲೊಂದು, ಸೊಗಸಾದ ಸೇವಂತಿ
ಸೂರ್ಯಾಸ್ತಕ್ಕಿಂತ ಸೊಬಗು, ಸತಿ ನಿನ್ನ ಸಂಪ್ರೀತಿ...
ಸುರವಾಣಿ ಸ್ವರವು ನಿನದು, ಸಮ್ಮೋಹ ಸಂಗೀತ
ಸೋಲೋಪ್ಪಿಕೊಂಡೆ ನಾನು, ಸವಿಸ್ವಪ್ನ ಸಂಜಾತ...

ಸೊಂಪಾದ ಸಂಜೆಯಲ್ಲಿ,
ಸಲ್ಲಾಪಕೆ ಸಹವಾಸಿ.
ಸೌಂದರ್ಯಧಾರೆ ನಿನಗೆ,,,
ಸಮವೇನೇ ಸುಮರಾಶಿ?
ಸಾವಿನ ದಾರಿಯೇ, ಸಿಕ್ಕರೂ ಎದುರು, ಸಂಗವ ಬಿಡದ ಸಹಯಾತ್ರಿ...
ಸಾವಿರ ಜನ್ಮಕು, ಶ್ರೀಮತಿ ನೀನೇ, ಸುಂದರ ನಯನೆ ಸುರನಾರಿ...
ಸಹಚಾರಿ, ಸಹ ಸಂಚಾರಿ
ಸಂಗಾತಿ,,, ಸಹಚಾರಿ.
ಸವಿಮಾತ ಸುಧೆಯ ಸುರಿಸೊ,
ಸುಕುಮಾರಿ ಸಹಚಾರಿ. 

                                   - ಸಂಪತ್ ಕುಮಾರ್

Wednesday, July 01, 2015

ನನ್ನ ಪ್ರೀತಿಯ ಹೂ...




    ಅದು, ನಾನು ಬಹಳ ಪ್ರೀತಿಯಿಂದ ನೆಟ್ಟಂತ ಗುಲಾಬಿ ಗಿಡ. ಅದನ್ನು ನಾನು, ನಮ್ಮ ಹಳ್ಳಿಯಲ್ಲಿ ಪಕ್ಕದ ಮನೆಯವರ ಹೂದೋಟದಲ್ಲಿ ನೋಡಿದ್ದು, ಅದರಲ್ಲಿ ಆಗ ಒಂದೇ ಒಂದು ಕೆಂಪು ಗುಲಾಬಿ, ನಮ್ಮ ಅಮ್ಮನ ಹಣೆಯ ಸಿಂಧೂರದಂತೆ, ಚೆಲುವೆಲ್ಲಾ ನನ್ನದೆಂದು ಬೀಗುತ್ತಾ ಹೊಳೆಯುತಿತ್ತು. ಆ ಹೂವಿನ ಅಂದಕ್ಕೆ, ಅದರ ಬಣ್ಣಕ್ಕೆ, ಆ ಸಪೂರ ಹೂ ಎಸಳುಗಳಿಗೆ ಮನ ಸೋತು ಹೋಗಿ, ಪಕ್ಕದ ಮನೆಗೆ ಹೂವಿನ ಗಿಡ ಕೇಳಲು ಹೋದರೆ, "ಇವನ್ಯಾಕೆ ಹೀಗಾದ? ಹುಡುಗಿಯರಂತೆ ಹೂವಿನ ಗಿಡ ಕೇಳುತ್ತಿದ್ದಾನಲ್ಲ..." ಎಂದುಕೊಳ್ಳುವರೋ ಏನೋ, ಒಂದನ್ನೂ ಯೋಚಿಸದೆ ನಾಚಿಕೆ ಬಿಟ್ಟು ಕೇಳಿಯೇ ಬಿಟ್ಟೆ. ಆ ಮನೆಯ ಅಕ್ಕ, ಸುಮ್ಮನೆ ಮುಗುಳ್ನಕ್ಕು, "ತಗೊಳಪ್ಪಾ ರೋಮಿಯೋ, ಈ ಗಿಡಾನ ಅದೇನ್ ಮಾಡ್ತಿಯೋ ನೋಡೋಣ" ಅಂತ ಆ ಗಿಡವನ್ನ ಹೂವಿನ ಸಮೇತ ಕಿತ್ತು, ಸಣ್ಣ ಪ್ಲಾಸ್ಟಿಕ್ ನಲ್ಲಿ ಕಟ್ಟಿ ಕೊಟ್ಟರು. ಮನೆಗೆ ತಂದ ಕ್ಷಣವೇ ಆ ಹೂವು, ಗಿಡದಿಂದ ದೂರಾಗಿ ನಮ್ಮ ದೇವರ ಫೋಟೋ ಮೇಲೆ ಹೋಗಿ ಕೂರುವಂತಾಯಿತು. ಹಾಗೆ ಮಾಡಿದ ನಮ್ಮ ಅಜ್ಜಿಯ ಮೇಲೆ ಸಣ್ಣಗೆ ಕೋಪವೂ, ಬಂದಿತ್ತು. ಅಂತೂ ಅದನ್ನು ತಂದು ನಾನು ಬಾಡಿಗೆಗೆ ಇದ್ದ ಮನೆಯ ಅಂಗಳದಲ್ಲಿ, ಅಲ್ಲಿ ಆಗಲೇ ಇದ್ದ ಕೆಲವು ಹೂಕುಂಡಗಳ ಜೊತೆಗೆ ಇನ್ನೊಂದು ಹೊಸ ಹೂಕುಂಡದಲ್ಲಿ ನೆಟ್ಟುಬಿಟ್ಟೆ.
* * *

    ನೆಟ್ಟ ಸುಮಾರು ಎರಡು ತಿಂಗಳು ಕಳೆದರೂ ಒಂದೂ ಹೂ ಮೊಗ್ಗು ಬಿಡದೆ, ಬರಿ ಬಳ್ಳಿಯಂತೆ ಮೂರು ಕವಲಾಗಿ ಬೆಳೆಯುತ್ತಲೇ ಇತ್ತು. ನನಗೂ ಸಾಕಾಗಿ, ಏನು ಮಾಡಲಿ ಎಂದು ಯೋಚಿಸುತ್ತಾ ಆ ಉದ್ದಕ್ಕೆ ಬೆಳೆದಿದ್ದ ಎರಡೂ ಕವಲುಗಳನ್ನು ಕತ್ತರಿಸಿ ಇನ್ನೆರಡು ಹೂಕುಂಡಗಳಲ್ಲಿ ನೆಟ್ಟೆ. ರೂಡಿಯಂತೆ ದಿನವೂ ಗಿಡಗಳಿಗೆ ನೀರು ಹಾಕುವ ಕೆಲಸ ಸಾಗಿತ್ತು. ಒಂದೆರಡು ದಿನಗಳು ಹೀಗೆ ಕಳೆದವು.

    ಆ ದಿನ ಸಂಜೆ ಆಫೀಸ್ ನಿಂದ, ಬಂದವನೇ ಬೇರೇನನ್ನೂ ಗಮನಿಸದೇ, ಮನೆ ಬಾಗಿಲು ತೆರೆದು ಒಳ ಹೋದೆ. ನಿತ್ಯ ಮನೆ ತಲುಪಿದ ಕೂಡಲೇ ನನಗೆ ಕಾಫಿಯಿಂದಲೇ ಉಳಿದ ಕೆಲಸಗಳು ಶುರುವಾಗುವುದು. ಮುಖ ತೊಳೆದು ಕಾಫಿ ಮಾಡಿಕೊಂಡು, ಕೈಯಲ್ಲಿ ಮೊಬೈಲ್ ಹಿಡಿದುಕೊಂಡು ಅಂಗಳಕ್ಕೆ ಬಂದು ಕುಳಿತೆ. ಸಂಜೆಯಾಗಲೇ ಮುಗಿದು, ಕತ್ತಲಾಗತೊಡಗಿತ್ತು. ಮಂದವಾಗಿ ಚಂದ್ರನೂ ಆಗಸದಲ್ಲಿ ಕಾಣಿಸುತ್ತಿದ್ದ. ಒಂದೆರಡು ಗುಟುಕು ಕುಡಿದು ಮೊಬೈಲ್ ನಲ್ಲಿ ಮೆಸೇಜ್ ಗಳನ್ನ ಓದುತ್ತಾ, ಮಾಮೂಲಾಗಿ ಒಮ್ಮೆ, ಹೂಗಿಡಗಳತ್ತ ನೋಡಿದೆ, ತಕ್ಷಣವೇ ನನ್ನ ಕಣ್ಣುಗಳು ನನಗೂ ತಿಳಿಯದೇ ಅರಳಿದವು, ಮುಖದ ಮೇಲೆ ಆನಂದದ ಮುಗುಳ್ನಗೆಯೊಂದು ಮೂಡಿ ಬಂತು. ನನ್ನ ಗುಲಾಬಿ ಗಿಡ, ನನಗಾಗಿ ತನ್ನ ಮೊಗ್ಗಿನ ಕಂದಮ್ಮಳಿಗೆ ಜನ್ಮ ನೀಡಿತ್ತು. ಆ ಕಡುಕೆಂಪು ಮೊಗ್ಗು, ನಾ ಮೊದಲು ನೋಡಿದ್ದ ಹೂವಿಗಿಂತ ಅಂದವಾಗಿ ರೂಪುಗೊಂಡು ನಿಂತಿತ್ತು.

    ಮೊದಲ ಮೊಗ್ಗು, ಇನ್ನೇನು ನಾಳೆ ಬೆಳಗಾಗುವಷ್ಟರಲ್ಲಿ ಹೂವಾಗಲಿದೆ. ಇಷ್ಟೊಂದು ಪ್ರೀತಿ ತುಂಬಿದ ಹೂವನ್ನು ಏನು ಮಾಡಲಿ, ನಾಳೆ ಹಾಗೆ ಬಿಟ್ಟರೆ ಅದು ದೇವರ ಫೋಟೋ ಸೇರುವುದಂತೂ ನಂಗೆ ಖಾತರಿಯಾಗಿತ್ತು. ಹಾಗಾಗಿ, ಈ ನನ್ನ ಪ್ರೀತಿಯ ಹೂ, ನನ್ನ ಪ್ರೀತಿಯ ಹುಡುಗಿಯ ಮುದ್ದಾದ ಜಡೆಗೆ ಸೇರಿದರೇನೇ, ನನಗೂ, ನನ್ನ ಹೂವಿನ ಆತ್ಮಕ್ಕೂ ಶಾಂತಿ ಸಿಗುವುದು ಎಂದು ತೀರ್ಮಾನಿಸಿಬಿಟ್ಟೆ.

    ಇಷ್ಟರೊಳಗೆ ನನ್ನ ಕೈಯಲ್ಲಿದ್ದ ಕಾಫಿ ಕಪ್ ಖಾಲಿಯಾಗಿದ್ದು ನನಗೆ ತಿಳಿಯಲೇ ಇಲ್ಲ. ಈಗ ಹೊಸದೊಂದು ಚಿಂತೆ ಮನದಲ್ಲಿ ಕಲಹವನ್ನು ಶುರು ಮಾಡಿತ್ತು, ನಾನು ಯಾಂತ್ರಿಕವಾಗಿ ಎದ್ದು ಹೋಗಿ ಗಿಡಗಳಿಗೆ ನೀರು ಚಿಮುಕಿಸಿ, ರಾತ್ರಿಯ ಅಡುಗೆ ತಯಾರಿಸಲು ಮನೆಯ ಒಳಸೇರಿದೆ. ಮನಸ್ಸಲ್ಲಿ ಮಾತ್ರ ನನ್ನ ಬುದ್ದಿಗೂ, ನನ್ನ ಹೃದಯಕ್ಕೂ, ಹೊಸ ಯುದ್ಧ ಶುರುವಾಗಿತ್ತು.
ಯುದ್ದದ ಕಾರಣವಿಷ್ಟೇ, ನನ್ನ ಪ್ರೀತಿಯ ಹೂ ನನ್ನ ಪ್ರೀತಿಯ ಹುಡುಗಿಗಾಗಿ ಎಂದು ನಿಶ್ಚಯಿಸಿಯಾಗಿತ್ತು, ಆದರೆ ಆ ನನ್ನ ಪ್ರೀತಿಯ ಹುಡುಗಿ ಯಾರೆಂಬುದು ನನ್ನಲ್ಲಿನ್ನೂ ನಿಶ್ಚಯವಾಗಿರಲಿಲ್ಲ.

    ಅರ್ಚನಾ, ಕೃತಿಕಾ, ವೈಶಾಲಿ... ಮೂವರಲ್ಲಿ ಯಾರು...???

    ಅರ್ಚನಾ,,, ಒಂದು ಸುಂದರ ಬೆಳದಿಂಗಳು... 
    ಅರ್ಚನಾ, ನಮ್ಮ ಕನ್ನಡದ ಹುಡುಗಿ. ಪ್ರಶಾಂತ ಸ್ವಭಾವ, ನಾಡಾಗಲಿ ಕಾಡಾಗಲೀ ಭೇದ ತೋರದೇ ನಿರ್ಲಿಪ್ತವಾಗಿ ಬೆಳಕನ್ನು ಚೆಲ್ಲುವ ಬೆಳದಿಂಗಳಿನಂತ ಗುಣದವಳು, ತನ್ನ ಪಾಡಿಗೆ ತಾನಿರುವವಳು. ಮೊದಲಸಲ ಅವಳನ್ನು ಕಂಡಾಗಲಿಂದಲೂ ಅವಳ ಮುಖ ನನ್ನ ಮನಸ್ಸಲ್ಲಿ ಅಚ್ಚೊತ್ತಿ ನಿಂತಿದೆ. ನನಗೂ ಅವಳಿಗೂ ತುಸುವೇ ಪರಿಚಯ, ಕೆಲವೇ ಭೇಟಿಗಳು, ಕೆಲವೇ ಕೆಲವು ಸಂಭಾಷಣೆಗಳು. ಅವಳ ಪ್ರತಿ ಮಾತೂ ಸಭ್ಯತೆಯನ್ನು ಪುಟವಿಟ್ಟಷ್ಟು ಸ್ಪಷ್ಟ, ಸರಳ, ಸುಲಲಿತ. ಅವಳಾಡಿದ ಪ್ರತಿ ಮಾತನ್ನೂ, ಬೇಕಿದ್ದರೆ ಅವಳೇ ಮಾತಾಡಿದಷ್ಟು ಸ್ಪಷ್ಟವಾಗಿ ಮತ್ತೆ ನನ್ನಲ್ಲಿ ನಾನೇ ಕೇಳಿಕೊಳ್ಳಬಲ್ಲೆ.

    ಕೃತಿಕಾ,,, ಒಂದು ಸುಂದರ ಮಿಂಚು...
    ಕೃತಿಕಾ, ಉತ್ತರ ಪ್ರದೇಶದ ಹುಡುಗಿ, ಉದ್ಯೋಗನಿಮಿತ್ತ ಇಲ್ಲಿದ್ದಾಳೆ. ತಾನು ನಡೆವ ಕಡೆಯೆಲ್ಲಾ ತನ್ನದೇ ಮಿಂಚನ್ನು ಚೆಲ್ಲಿ, ತನ್ನದೇ ಮೋಹದ ಮೋಡವನು ಸುತ್ತೆಲ್ಲಾ ಕವಿದು, ಎಲ್ಲರನ್ನೂ ತನ್ನೆಡೆಗೆ ಸೆಳೆದು ತನ್ನದೇ ಗುಂಗಿನ ಮಳೆಯಲ್ಲಿ ನೆನೆಸುವವಳು. ಪ್ರತಿಯೊಂದು ಮಾತು ಸುಂದರ ಮುತ್ತು. ನನ್ನದೂ ಅವಳದೂ ಬರಿ ಆನ್-ಲೈನ್ ಪರಿಚಯವಾದರೂ ಕೂಡ, ಒಬ್ಬರನ್ನೊಬ್ಬರು ಬಲ್ಲೆವು. ನಾನವಳನ್ನು ನೋಡಿದಾಗೆಲ್ಲಾ ನನಗೇ ತಿಳಿಯದಂತೆ ಅವಳ ಸುಂದರ ಸಂಭ್ರಮದ ಲೋಕದಲ್ಲಿ ಅವಳಿಗೂ ಅರಿಯದಂತೆ ಅವಳನ್ನು ಹಿಂಬಾಲಿಸತೊಡಗುವೆ.

    ವೈಶಾಲಿ,,, ಒಂದು ನವಿರಾದ ತಂಗಾಳಿ...
    ವೈಶಾಲಿ, ನಮ್ಮ ಕನ್ನಡದ ಸೊಗಡನ್ನೇ ಮೈವೆತ್ತಿ ಬಂದವಳಂತಿದ್ದರೂ, ಅವಳು ಹಿಂದಿ ಹುಡುಗಿ. ಮುಂಗಾರಿನ ಮಳೆಗೂ ಮೊದಲು ನವಿರಾಗಿ ಬೀಸುವ ತಂಪಾದ ತಂಗಾಳಿ ಅವಳು. ನಡೆದರೆ ಎಲ್ಲಿ ನೆಲವೂ ನೋಯುವುದೇನೋ ಎನ್ನುವಷ್ಟು ಮೃಧುಲವಾದ ನಡೆ ಅವಳದು, ಅವಳ ಹಾವ-ಭಾವ ಯಾವುದೋ ದೇವಕನ್ಯೆಯೇ ಈಗ ಈ ಹುಡುಗಿಯಾಗಿ ಬಂದಿರಬಹುದೆನ್ನುವಷ್ಟು ಸುಕೊಮಲ... ನನಗೂ ಅವಳಿಗೂ ಬರಿ ಮುಖ ಪರಿಚಯವಷ್ಟೇ,,, ಆ ಮುಗ್ದ ಮುಖವನ್ನು ನೋಡುತ್ತಾ ಪೂರ್ತಿ ಜೀವನ ಬೇಕಾದರೂ ಕಳೆಯಬಲ್ಲೆ.

    "ಹುಣ್ಣಿಮೆಯ ಚೆಲುವೋ,,,? ಸೌಂದರ್ಯದ ಮಿಂಚೋ,,,? ತಂಗಾಳಿಯ ಸುಧೆಯೋ...? ಯಾವುದು ನನ್ನದು. ಯಾವುದಿರಬಹುದು..."

    ಈ ಯೋಚನೆಗಳ ಸುಳಿಯಲ್ಲಿ ಸಿಲುಕಿ, ಗಾಳಿ ಬೀಸಿದತ್ತ ತೋರಿ ಹೋಗುವ ಗಾಳಿಪಟವಾಗಿ ನನ್ನ ಚಿತ್ತ, ಗೊಂದಲಗಳ ಗೂಡಾಗಿ ಹೋಯ್ತು. ಆ ದಿನ ಅಡುಗೆ ಏನು ಮಾಡಿದೆನೋ, ಏನನ್ನು ತಿಂದೆನೋ, ಒಂದೂ ಅರಿವಾಗಲಿಲ್ಲ. ರಾತ್ರಿ ಮಲಗಿ ದೀಪವನ್ನು ಆರಿಸಿದಾಗಲೇ, 'ಓಹ್, ಇನ್ನೇನು ಕೆಲವು ಘಂಟೆಗಳಲ್ಲಿ ಬೆಳಗು ಕಾದಿದೆ' ಅಂದು ಅರಿವಾಗಿ, ನನ್ನ ಮನಸ್ಸಿಷ್ಟು ತೊಯ್ದಾಡುತ್ತಿರುವುದು ಏಕೆ? ಪರಿಹಾರ ಇಲ್ಲವೇ... ಅನ್ನುತ್ತಲೇ ನಿದ್ದೆ ಹೋದೆ.
* * *

    ಅದು, ತುಂಗೆಯ ಸುಂದರ ತೀರ. ಬೆಳದಿಂಗಳ ಇರುಳಲ್ಲಿ, ಬಳುಕುತ್ತಾ ಮಿನುಗುತ್ತಾ ತಿಳಿಗಲರವದೊಡನೆ ತಣ್ಣಗೆ ಹರಿಯುತ್ತಿದ್ದಳು ತುಂಗೆ. ಅಲ್ಲಿ ಬುಡವಷ್ಟೇ ಬಾಗಿ, ನದಿಯೊಡನೆ ಮಾತಾಡಲು ನಿಂತಿರುವಂತೆ ತೆಂಗಿನ ಮರವೊಂದಿದೆ. ಆ ಸಮನಾದ ತೆಂಗಿನ ಮರದ ಬುಡದ ಮೇಲೆ, ನದಿಯ ಅಲೆಯಲ್ಲಿ ಕಾಲಾಡಿಸುತ್ತಾ ನಾನು ಕುಳಿತಿದ್ದೆ. ನನ್ನ ಎಡಕ್ಕೆ ಅರ್ಚನಾ, ಬಲಕ್ಕೆ ಕೃತಿಕಾ, ಅವಳ ಪಕ್ಕದಲ್ಲಿ ವೈಶಾಲಿ ಕುಳಿತಿದ್ದಾರೆ. ಸಣ್ಣ ಪುಟ್ಟ ಸವಿ ಮಾತುಗಳೊಂದಿಗೆ, ನಾವೆಲ್ಲರೂ ಸಂತಸದಿಂದ ಸುಂದರ ಇರುಳನ್ನು ಸವಿಯುತ್ತಿದ್ದೆವು. ಚಂದ್ರನ ಬೆಳಕನ್ನು ಪ್ರತಿಫಲಿಸುತ್ತಾ ಫಳಫಳನೆ ಹೊಳೆಯುತ್ತಿದ್ದ, ಹಾಲಿನಂತಾ ಆ ತೆರೆ ತೆರೆ ನೀರು, ಈ ಚೆಲುವೆಯರ ಬಿಳಿ ಕಾಲ್ಗಳನು ತಾಕಿ ಇನ್ನೂ ಬೆಳ್ಳಗಾದವೇನೋ ಎನ್ನುವಂತೆ, ನೊರೆ ನೊರೆಯಾಗಿ ಹರಿಯುತ್ತಿದ್ದವು. 

    ಅಷ್ಟರಲ್ಲೇ ಕೃತಿಕಾ, ಈ ನಿರ್ಮಲ ನೀರಲೆಗಳ ಮೇಲೆ ದೋಣಿವಿಹಾರ ಮಾಡುವಾ ಎಂದು, ಅಲ್ಲಿಯೇ ದಡದಲ್ಲಿ ಮರವೊಂದಕ್ಕೆ ಕಟ್ಟಿದ್ದ ನೀಳ್ದೋಣಿಯ ಕಡೆಗೆ ಕೈ ತೋರಿದಳು. ನಾನು, 'ಹೌದಲ್ಲವಾ,,, ಯಾಕಾಗಬಾರದು...' ಎಂದು ಅರ್ಚನಾ ಮತ್ತು ವೈಶಾಲಿಯರ ಕಡೆಗೆ ಹೋಗೋಣವೇ ಎಂದು ಕೇಳುವಂತೆ ಕಣ್ಣರಳಿಸಿ ನೋಡಿದೆ. ಅರ್ಚನಾ, ಮುಗುಳ್ನಗೆಯಿಂದ 'ಹ್ಞೂ...' ಎಂದಳು, ಆದರೆ ವೈಶಾಲಿ ಎಲ್ಲರೂ ಹೊರಟಿರುವಾಗ ತಾನೇಕೆ ಬೇಡವೆನ್ನುವುದು ಅಂದುಕೊಂಡು, ತುಸು ಭಯವಿದ್ದರೂ ಸರಿಯೆಂದು ಕುತ್ತಿಗೆಯಾಡಿಸಿದಳು.

    ದಡದ ಕಡೆಗೆ ಜಿಗಿದು ನಾನು, ದೋಣಿಯತ್ತ ಸಾಗಿ ಮರಕ್ಕೆ ಕಟ್ಟಿದ್ದ ಹಗ್ಗವನ್ನು ಕಳಚಿ ದೋಣಿಯಲ್ಲಿ ಹಾಕಿ, ದೋಣಿಯಲ್ಲಿ ಹತ್ತಿ ಕುಳಿತು, ದೋಣಿ-ಹುಟ್ಟನ್ನು ಹಿಡಿದು, 'ಬನ್ನಿ,,,' ಎಂದು ಅವರತ್ತ ಕೈ ಬೀಸಿದೆ. ಕೃತಿಕಾ ತನಗೇನೋ ಸಿಕ್ಕಷ್ಟು ಸಂಭ್ರಮದಿಂದ ಓಡಿ ಬಂದು ದೋಣಿಗೆ ನನ್ನಂತೇ ಜಿಗಿದು ಕುಳಿತಳು. ದೋಣಿ ಬಳುಕಿ, ತೂಗಾಡಿತು. ಅರ್ಚನಾ ಖುಷಿಯಿಂದ, ದೋಣಿಯಲ್ಲಿದ್ದ ಕೃತಿಕಾಳ ಕೈಹಿಡಿದು, ದಡದಲ್ಲಿದ್ದ ವೈಶಾಲಿಯ ಭುಜಕ್ಕೆ ಕೈಹಿಟ್ಟು ನಿದಾನವಾಗಿ ಹತ್ತಿ ಕೃತಿಕಾಳ ಪಕ್ಕದಲ್ಲಿ ಕುಳಿತಳು. ದಡದಲ್ಲಿ ತುಸು ಭಯದಿಂದ ನಮ್ಮನ್ನೇ ನೋಡುತ್ತಾ, ಹೇಗೇ ಹತ್ತಲಿ ಎಂದು ಯೋಚಿಸುತ್ತಿದ್ದ ವೈಶಾಲಿಯನ್ನು ನೋಡಿ ನಾನು, ದೋಣಿಯನ್ನು ಹುಟ್ಟಿನ ಸಹಾಯದಿಂದ ದಡದ ಕಡೆಗೆ ಇನ್ನೂ ತಳ್ಳಿ, ನನ್ನತ್ತ ಬರುವಂತೆ ಕೂಗಿ ನನ್ನ ಬಲಗೈ ಚಾಚಿದೆ. ನನ್ನ ಕೈ ಹಿಡಿದುಕೊಂಡ ಅವಳು ರೇಶಿಮೆಯ ನೂಲೊಂದು ಗಾಳಿಯಲ್ಲಿ ತೇಲಿಬಂದಂತೆ ನಯವಾಗಿ ದೋಣಿಗೆ ಹತ್ತಿ ಅವರಿಬ್ಬರ ಪಕ್ಕದಲ್ಲಿ ಕುಳಿತಳು. ದೋಣಿಯನ್ನು ಮೆಲ್ಲಗೆ ನೆಡೆಸತೊಡಗಿದೆ.

    ದಡವನ್ನು ಬಿಟ್ಟು ನಡುನೀರಿನ ಕಡೆ ಬಂದ ಮೇಲೆ, ದೋಣಿ ಸರಾಗವಾಗಿ ಸಾಗತೊಡಗಿತು. ಆ ಇರುಳು, ಬೆಳದಿಂಗಳು, ತಂಗಾಳಿ, ಕಡು ಹಸಿರಿನ ದಟ್ಟ ಕಾಡು... ನಾನೀಗ ಅಪ್ಸರೆಯರನ್ನೂ ನಾಚಿಸುವ ಮೂವರು ಸುಂದರಿಯರ ದೋಣಿವಿಹಾರದ ಅಂಬಿಗ.
    'ಮೂರು ಲೋಕವನ್ನೂ ನಿನಗೆ ವರವಾಗಿ ಕೊಡುವೆ, ಇಲ್ಲಿಂದ ಹೊರಗೆ ಬಾ' ಎಂದು ಯಾವ ದೇವರು ನನ್ನನ್ನು ಕರೆದರೂ, ನನಗೀಗ ಸಿಕ್ಕಿರುವ ಐಶ್ವರ್ಯವನ್ನು ನಾನು ಬಿಟ್ಟುಕೊಡದವನಾಗಿದ್ದೆ.

    ಮೂವರೂ ನನಗೆದುರಾಗಿ ಕುಳಿತಿದ್ದಾರೆ, ಮೂವರೂ ಒಂದೇ ತೆರೆನಾದ ಶುಭ್ರ ಬಿಳಿ ನುಣುಪಿನ ಬಟ್ಟೆಯುಟ್ಟು ಬೆಳದಿಂಗಳಿಗೂ ಮೀರಿ ಹೊಳೆಯುತ್ತಿದ್ದಾರೆ. ಕೃತಿಕಾ ನೀರಿನ ತೆರೆಗಳ ನಡುವೆ ಬೆರಳಾಡಿಸುತ್ತಾ ನಲಿಯುತ್ತಿದ್ದಾಳೆ. ಅರ್ಚನಾ ಆಗಸದ ತಾರೆಗಳ ಪ್ರತಿಬಿಂಬದ ಬೆಳಕನ್ನು ಮೊಗದಲ್ಲಿ ಬಿಂಬಿಸುತ್ತಾ, ಕಣ್ಣರಳಿಸಿ ವನ ಸೌಂದರ್ಯವನ್ನು ಸವಿಯುತ್ತಿದ್ದಾಳೆ. ವೈಶಾಲಿ ನಮ್ಮೆಲ್ಲರ ಆನಂದದಲ್ಲೇ ತನ್ನನ್ನು ತಾನು ಕಳೆದುಕೊಂಡವಳಂತೆ, ಅಮ್ಮನ ಸರದೊಡನೆ ಆಡುವ ಮಗುವಿನಂತೆ ಕುಳಿತಿದ್ದಾಳೆ. 

    ಆಗ, ಸಣ್ಣಗೆ ಮಿಂಚೊಂದು ಸಹ್ಯಾದ್ರಿಯ ಕಾನನದ ನಡುವೆ ಮಿಂಚಿ, ಮರೆಯಾಯ್ತು. ಆ ಒಂದು ಕ್ಷಣದ ಬೆಳಕಲ್ಲೇ ಇಡೀ ನಿಸರ್ಗದ ಚೆಲುವನ್ನು ನಮಗೆ ತೋರಿ ಅದು ಮರೆಯಾಯ್ತು. ನಮ್ಮನ್ನು ಇನ್ನಾವುದೋ ಲೋಕಕ್ಕೆ ತೇಲಿಸಿಕೊಂಡು ಬಂದಂತೆ ತಂಗಾಳಿ ಬೀಸುತಿತ್ತು. ಆ ಸಣ್ಣ ಚಳಿಯಲ್ಲೂ, ಏನೋ ಅತೀವ ಆನಂದದ ಮೋಡಿ ನಮ್ಮೆಲ್ಲರನ್ನೂ ಸಮ್ಮೊಹನಗೊಳಿಸಿತ್ತು.

    ವಜ್ರಗಳಂತೆ ಹೊಳೆಯುತ್ತಿದ್ದ ನನ್ನೆದುರು ಕುಳಿತ ಸುಂದರಿಯರ ಕಣ್ಣುಗಳಲ್ಲಿ, ಇದ್ದಕ್ಕಿದ್ದಂತೇ ನಾನೆಂದೂ ಕಾಣದ ಭೀತಿಯೊಂದನ್ನು ನೋಡಿ, ಆ ಚಳಿಯಲ್ಲೂ ಬೆಚ್ಚಿ ಬಿದ್ದು ನಾನು, ಏನಾಯಿತೆಂದು ಹಿಂತಿರುಗಿ ನೋಡಿದೆ. "ಅರೆ!!! ಎಂಥಾ ವಿಪರ್ಯಾಸ...", ಇದೀಗ ತಾನೇ ತಾಯಿಯಂತೆ ನಮ್ಮನ್ನೆಲ್ಲಾ ಮಡಿಲಲ್ಲಿ ತೇಲಿಸುತ್ತಿದ್ದ ತುಂಗೆ, ಈಗ ರಕ್ಕಸಿಯಂತೆ ಬಾಯ್ತೆರೆದು, ತನ್ನ ಪ್ರವಾಹದ ಅಲೆಯ ನಾಲಿಗೆಯನ್ನು ನಮ್ಮತ್ತ ಚಾಚುತ್ತ ನುಗ್ಗಿ ಬರುತ್ತಿದ್ದಳು. ತಕ್ಷಣ ನಾನು 'ಹೆದರಬೇಡಿ,,, ನಾನು ದೋಣಿಯನ್ನು ಹಾಯಿಸುವೆ...' ಎಂದು ಮೂವರಿಗೂ ಧೈರ್ಯ ಹೇಳೋಣವೆಂದು, ಅವರ ಕಡೆಗೆ ತಿರುಗುವಷ್ಟರಲ್ಲೇ ಪ್ರವಾಹದ ದೊಡ್ಡ ಅಲೆಗೆ ಸಿಕ್ಕ ನಮ್ಮ ದೋಣಿ, ಹಾರಿ ಮಗುಚಿ ಬಿತ್ತು. ಆ ನೀರಿನ ನೀಲಿ ನಾಲಿಗೆಯಲ್ಲಿ ಸಿಕ್ಕ ನಾನು, ಆ ಮೂವರನ್ನೂ ಮತ್ತೆ ನೋಡಲೂ ಆಗಲಿಲ್ಲ.

    ನಾನು ನೀರಿನ ಹೊಡೆತಕ್ಕೆ ಸಿಲುಕಿ, ಗಂಟಲು ತುಂಬುವಷ್ಟು ನೀರು ಕುಡಿದು, ಮುಳುಗಿ ಮುಳುಗಿ ಎದ್ದು, ಮೇಲೆ ಬಂದು ನೀರಿನಿಂದ ಹೊರಕ್ಕೆ ತಲೆ ಹಾಕಿದೆ. ಇಷ್ಟೆಲ್ಲಾ ಆಗುವಷ್ಟರಲ್ಲಿ ನನ್ನೆಲ್ಲ ಶಕ್ತಿ ಹುಡುಗಿ ಹೋಗಿ, ಹೆಣವೊಂದು ತೇಲುವಂತೆ ಸೋತು ಈಜತೊಡಗಿದೆ. ಆದರೆ, ಈಗ ಮತ್ತೆ ಏನೂ ನಡೆದೇ ಇಲ್ಲವೇನೋ ಎಂಬಂತೆ ನದಿ ಶಾಂತವಾಗಿ ಹರಿಯುತಿತ್ತು. ಆದರೆ ನಮ್ಮ ದೋಣಿ ಈಗ ನನ್ನ ಕಣ್ಣಿಗೆ ಕಾಣಲೇ ಇಲ್ಲ. 

    "ನನ್ನನ್ನು ನಂಬಿ ದೋಣಿ ಹತ್ತಿದ ಆ ಹುಡುಗಿಯರು ಎಲ್ಲಿ, ಅವರನ್ನು ಬದುಕಿಸುವುದು ನನ್ನ ಕರ್ತವ್ಯವಲ್ಲವೇ,,," ಎಂದು ನನ್ನ ಮನಸ್ಸಾಕ್ಷಿ ಬೆಚ್ಚಿಬಿದ್ದಿತು. ನಾನು ಕೊನೆಯದಾಗಿ ನೋಡಿದ ಆ ಮೂವರ ಭಯ ತುಂಬಿದ ಕಣ್ಣುಗಳು, ನನ್ನಲ್ಲಿ ಮೃತ್ಯುಂಜಯನ ಶಕ್ತಿ ತುಂಬಿದವು.
    ನಾನಿದ್ದ ಜಾಗದ ಸುತ್ತೆಲ್ಲಾ ಈಜಿ ಈಜಿ, ಮುಳುಗಿ ಮುಳುಗಿ ನೋಡಿದೆ, ಯಾರೂ ಕಣ್ಣಿಗೆ ಕಾಣಲಿಲ್ಲ. ದುಃಖ-ಕೋಪ ಎರಡೂ ಒಮ್ಮೆಗೇ ಉಮ್ಮಳಿಸಿ ಬಂತು, "ನಾನೀಗ ಬದುಕಿಯೂ ಏನು ಸಾರ್ಥಕ, ನನ್ನನ್ನೂ ನುಂಗಿಬಿಡು, ಹೇ ರಾಕ್ಷಸೀ" ಎಂದು ನಾನೂ ಮುಳುಗಿ ಸಾಯಬೇಕೆನ್ನುವಷ್ಟರಲ್ಲಿ, ತುಸು ದೂರದಲ್ಲಿ ಒಂದು ಕೈ ಕಾಪಾಡಿ ಎಂದು ಕರೆಯುವಂತೆ ನೀರಿಂದ ಮೇಲೆದ್ದಿದ್ದು ಕಾಣಿಸಿತು. ಮರುಜನ್ಮ ಸಿಕ್ಕವನಂತೆ, ಆ ಕಡೆಗೆ ಈಜಿ ಆ ಕೈಯನ್ನು ಹಿಡಿದು ಕೊಂಡೆ. ಯಾರಿರಬಹುದು ಇವಳು, ಎಂಬ ಒಂದು ಯೋಚನೆ ಬಂತು, ನನ್ನೆಡೆಗೆ ಎಳೆದು ಕೊಂಡು ನೋಡಿದೆ. ಆ ನೀರಿನ ತೆರೆಗಳ ನಡುವೆ ನನಗೆ ಕಂಡದ್ದಿಷ್ಟೇ, ನೀಳ ಗೂದಲು, ಬಿಳಿ ಬಟ್ಟೆ,,, ಯಾರಿರಬಹುದು ಇವಳು, ಮೂವರದೂ ನೀಳಗೂದಲು,,, ಮೂವರದೂ ಒಂದೇ ತರನಾದ ಬಟ್ಟೆ,,, ನನಗೆ ಇವಳು ಯಾರಿರಬಹುದೆಂದು ಹೊಳೆಯಲೇ ಇಲ್ಲ. ಆದರೆ, ಇನ್ನಿಬ್ಬರು ಎಲ್ಲಿ? ಮತ್ತೆ ಸುತ್ತ ನೋಡಿದೆ, ಯಾವ ಕುರುಹೂ ಕಾಣಲಿಲ್ಲ, ದುಃಖ ಬಿಕ್ಕಳಿಸಿ ಬರುತಿತ್ತು, ಕೈ ಕಾಲುಗಳು ತನ್ನ ಪಾಡಿಗೆ ತಾನು ಈಜತೊಡಗಿದವು. ನನ್ನ ಕೈಯ-ಬಿಗಿ ಅವಳನ್ನು ಬಿಡಲಿಲ್ಲ, ಜೀವದ ಕೊನೆಯ ಉಸಿರೇ ಇದೇ ಏನೋ,,, ಎನ್ನುವಷ್ಟರಲ್ಲಿ ದಡ ಸಿಕ್ಕಿತು.

    ಅವಳನ್ನು ನೀರಿನಿಂದ ಎಳೆದು ಎತ್ತಿ ದಡದಲ್ಲಿ ಮಲಗಿಸಿದೆ, ಮರಗಳ ನೆರಳಲ್ಲಿ ಬೆಳದಿಂಗಳ ಬೆಳಕು ಮಾಯವಾಗಿ ಕತ್ತಲಿತ್ತು. ಅವಳ ಅಂಗಾಲು ಹಸ್ತಗಳನ್ನು ಉಜ್ಜಿ, ಅವಳನ್ನು ಎಚ್ಚರಿಸಲು ಪ್ರಯತ್ನಿಸತೊಡಗಿದೆ. ಅಂತೂ ಒಂದೆರಡು ನಿಮಿಷಗಳ ಬಳಿಕ ಕೆಮ್ಮಿ, ತುಸು ಉಸಿರಾಡಿದಳು ಅವಳು. ಅವಳಿಗೆ ಜೀವ ಬಂದಿದ್ದು, ನನಗೂ ಮತ್ತೆ ಜೀವ ಬಂದಂತಾಯ್ತು. ಎದ್ದು ಕುಳಿತ ಅವಳು, ಸುತ್ತಲೂ ಒಮ್ಮೆ ನೋಡಿ ಹೆದರಿಕೆಯಿಂದ ನನ್ನ ತಬ್ಬಿಕೊಂಡಳು. 
    ಎದ್ದು ಕುಳಿತಾಗ ಅವಳ ಮುಖ ಕಂಡು, ನಿಂತು ಹೋಗಿದ್ದ ನನ್ನ ನಾಲಿಗೆಯಿಂದ ಹೊರಬಂದ ಒಂದೇ ಒಂದು ಪದ,,, 
"ವೈಶಾಲಿ..."
* * *

    "ವೈಶಾಲಿ..." ಎನ್ನುತ್ತಲೇ ಮಿಡುಕಿಬಿದ್ದು , ಹಾಸಿಗೆಯಿಂದ ಎದ್ದ ನಾನು, ಭಯದಿಂದ ಬೆವೆತು ಹೋಗಿದ್ದೆ. ಈಗ ಬಿದ್ದಿದ್ದು ಕನಸು ಎಂದು ಮಾನವರಿಕೆಯಾಯ್ತು. ಎದ್ದು ಮಂಚದ ಬಳಿಯಿದ್ದ ನೀರಿನ ತಾಲಿಯಿಂದ, ಒಂದೆರಡು ಗುಟುಕು ನೀರು ಕುಡಿದ ಮೇಲೆ,,, ಕಿಟಕಿಯಿಂದ ಒಂದೆರಡು ತಂಗಾಳಿಯ ಅಲೆಗಳು ತೇಲಿಬಂದವು... 
    ಆ ಕತ್ತಲಲ್ಲೂ ನನ್ನ ಕಣ್ಣುಗಳು ವೈಶಾಲಿಯ ಮುಖವನ್ನು ಸ್ಪಷ್ಟವಾಗಿ ಕಂಡವು.
* * *

    ಇಡೀ ರಾತ್ರಿ ಮತ್ತೆ ಮಲಗದ ನಾನು, ಬೆಳಗಾದ ಕೂಡಲೇ ನನ್ನ ಇಡೀ ಲೋಕದ ಎರಡನೇ ಅತೀ ಸುಂದರಿ - ಆ ಗುಲಾಬಿ ಹೂವನ್ನು ಕೊಯ್ದು, ನವಿರಾಗಿ ಅದರ ಎರಡು ಎಲೆಗಳ ನಡುವೆ ಕೂರಿಸಿ, ಒಂದು ಸುಂದರ ಪ್ರೇಮ ಪತ್ರದೊಂದಿಗೆ, ನನ್ನ ಇಡೀ ಲೋಕದ ಮೊದಲನೇ ಅತೀ ಸುಂದರಿ - ವೈಶಾಲಿಗೆ ಕೊಡಲೆಂದು ಮನೆಯಿಂದ ಹೊರಟೆ. 

- ಸಂಪತ್ ಕುಮಾರ್