ಹೇ ಭೂಮಿ, ನಿನಗ್ಯಾರು ಉಡಿಸಿದರೆ, ನೀಲಿ ಸಾಗರದ ಸೀರೆ
ಈ ಪ್ರೇಮಿ, ಚಂದಿರಗೆ ನಿನಗಿಂತ ಸುಂದರಿ ಇನ್ನ್ಯಾರೆ...
ನೀನೇ ಸ್ಪೂರ್ತಿಧಾರೆ...
* * *
ನೀನೇ ಪ್ರೇಮಕ್ಕೂ
ನೀನೇ ಧ್ಯಾನಕ್ಕೂ
ನೀನೇ ಹೃದಯಾಂತರಾಳ ಗಾನಕ್ಕೂ
ನೀನೇನೆ ಒಡತಿ, ನನ್ನೆಲ್ಲ ಸ್ವಪ್ನಕ್ಕೂ...
ತಂಗಾಳಿಯಲ್ಲಿ ತೂಗಾಡುತಿರಲು, ನಿನ್ನ ಮುಂಗುರುಳು,
ಯಾರೇ ಆದರೂ ಪ್ರೀತಿಸಲೇಬೇಕು, ಬೇರೇನನೂ ಯೋಚಿಸುವ ಮೊದಲು...
* * *
ಹೇ ಭೂಮಿ, ನಿನಗ್ಯಾರು ಹಿಡಿಸಿದರೆ ಆ ಸೂರ್ಯನಾ ಚಿಂತೆ,,,
ಈ ಪ್ರೇಮಿ, ಚಂದಿರನು ಇರುವಾಗ ಸುತ್ತುತ್ತ ನಿನ್ನಿಂದೆ...
ಎಂದೂ ನಿನಗೆಂದೇ...
* * *
ನೀನೇ ಸ್ನೇಹಕ್ಕೂ
ನೀನೇ ಮೋಹಕ್ಕೂ
ನೀನೇ ಬದುಕೆಲ್ಲಸಾಗೋ ಯಾನಕ್ಕೂ
ನೀನೇನೆ ಗೆಳತಿ, ನನ್ನೆಲ್ಲ ಜನ್ಮಕ್ಕೂ...
ಸಂಕೋಚದಲ್ಲಿ ತೊಳಲಾಡುತಿರಲು, ನಿನ್ನ ತಿಳಿಕಂಗಳು,
ಯಾರೇ ಆದರೂ ಮೋಹಿಸಲೇಬೇಕು, ಬೇರೇನನೂ ಭಾವಿಸುವ ಮೊದಲು...
* * *
ಹೇ ಭೂಮಿ, ನಿನಗ್ಯಾರು ಕಲಿಸಿದರೆ ಈ ಮೌನದಾ ಭಾಷೆ,,,
ಈ ಪ್ರೇಮಿ, ಚಂದಿರಗೆ ನಿನ್ನೊಡನೆ ದಿನವೂ ಮಾತಾಡುವಾಸೆ...
ಒಮ್ಮೆ ಮಾತಾಡಿಸೆ...
* * *
ಹೇ ಭೂಮಿ, ನಿನಗ್ಯಾರು ಉಡಿಸಿದರೆ, ನೀಲಿ ಸಾಗರದ ಸೀರೆ
ಈ ಪ್ರೇಮಿ, ಚಂದಿರಗೆ ನಿನಗಿಂತ ಸುಂದರಿ ಇನ್ನ್ಯಾರೆ...
ನೀನೇ ಸ್ಪೂರ್ತಿಧಾರೆ...
- ಸಂಪತ್ ಕುಮಾರ್