Friday, May 22, 2015

ಹುಟ್ಟು ಕಥೆ



* * * * * * * * *

    ಕಲ್ಕೆರೆ ತಿರುವಲ್ಲಿ ಚಂದ್ರಣ್ಣ ಬಸ್ಸಿನಿಂದಿಳಿದಾಗ ಸಮಯ ಸುಮಾರು ಮಧ್ಯಾಹ್ನ ಮೂರುವರೆ, ಚಳಿಗಾಲದ ಬಿಸಿಲದು ಬೆಚ್ಚಗಿನ ಅನುಭವ ನೀಡುತ್ತಿತ್ತು. ಕಲ್ಕೆರೆಯ ತೆರೆ ತೆರೆ ನೀರನೊಮ್ಮೆ ತಿಳಿ ತಿಳಿ ಕಂಗಳಿಂದ ನೋಡಿ, ತಿಮ್ಮನಹಳ್ಳಿಯ ಕಡೆಗೆ ಹೆಜ್ಜೆ ಹಾಕತೊಡಗಿದನು. ಅಮಿತಾಳನ್ನು ನೋಡಿ ಹತ್ತಿರತ್ತಿರ ತಿಂಗಳು ಕಳೆದಿತ್ತು, "ಹೇಗೂ ಗಣರಾಜ್ಯೋತ್ಸವಕ್ಕೆ ನಾಳೆ ಗುರುವಾರ ಒಂದಿನ ರಜೆಯಿದೆ, ಹೋಗಿ ಬಂದರಾಯ್ತು", ಎಂದುಕೊಂಡು ಬಂದಿದ್ದ ಚಂದ್ರಣ್ಣ.

    ಹಾಸ್ಟೆಲ್ನಲ್ಲಿ ಮಧ್ಯಾಹ್ನದ ಅಡುಗೆಯ ವ್ಯವಸ್ತೆ ಮಾಡಿ, ಮ್ಯಾನೇಜರ್ ಗೆ ಹೇಳಿ ಎಷ್ಟು ಬೇಗನೆ ಪಂಚನಹಳ್ಳಿಯಿಂದ ಹೊರಟು ಬಂದ್ರೂ, ಇಷ್ಟೊತ್ತಾಗಿತ್ತು ತಲುಪುವ ಹೊತ್ತಿಗೆ. ಡಾಕ್ಟರು ಹೇಳಿದ್ದ ದಿನ ಮುಗಿದು ಮೂರು ದಿನ ಆಗಿದ್ದರೂ ಅಮಿತಾಳಿಗೆ ಇನ್ನೂ ಹೆರಿಗೆ ಆಗಿರಲಿಲ್ಲ. ಅದನ್ನೇ ಯೋಚಿಸುತ್ತಾ, ಹೆಂಡತಿಗೆಂದು ಬೇಲೂರಲ್ಲಿ ಕೊಂಡಿದ್ದ ಹಣ್ಣುಗಳಲ್ಲಿ ಒಂದನೆತ್ತಿಕೊಂಡು, ಹಸಿದ ಹೊಟ್ಟೆಗೆ ಸೇರಿಸುತ್ತಾ ನೆಡೆಯತೊಡಗಿದನು.
* * * * * * * * *

(ಹಿಂದಿನ ಕಥೆ)

    ತನ್ನ ಅತ್ತಿಗೆಯ ತಂಗಿ (ಅತ್ತಿಗೆಯ ಚಿಕ್ಕಮ್ಮನ ಮಗಳು) ಅಮಿತಳನ್ನ, ಅಣ್ಣನ ಮದುವೆಯಲ್ಲೇ ಚಂದ್ರಣ್ಣ ನೋಡಿದ್ದನು. ಆಗ, ತಾನು ಇವಳನ್ನೇ ಮದುವೆಯಾಗುವೆನೆಂಬ ಕಲ್ಪನೆಯಾಗಲಿ ಅವನಿಗಿರಲಿಲ್ಲವಾದರೂ, ಅತ್ತಿಗೆಯಾಗುವವಳ ಚೆಲುವೆಯಾದ ತಂಗಿಯ ಮೇಲೆ ಇರಬಹುದಾದ ಯುವಕ ಸಹಜ ಆಕರ್ಷಣೆಯಂತೂ ಇದ್ದೇ ಇತ್ತು. ಒಂದೆರಡು ಬಾರಿ ಹೀಗೆಯೇ ಹಬ್ಬಕ್ಕೆಂದು ತಂದೆಯೊಡನೆ, ಹೊಸನೆಂಟರ ಊರಾದ ತಿಮ್ಮನಹಳ್ಳಿಗೆ ಬಂದಿದ್ದನು, ಆಗಲೂ ಇವಳನ್ನು ಹತ್ತಿರದಿಂದ ಕಂಡಿದ್ದನು.  ಚಂದ್ರಣ್ಣ ಮನಸಿನ್ನಲ್ಲಿ ಏನೇನು ಅಂದುಕೊಂಡಿದ್ದನೋ ಏನೋ, ಅಂತೂ ರೋಗಿ ಬಯಸಿದ್ದೂ ಹಾಲು-ಅನ್ನ ವೈದ್ಯ ಹೇಳಿದ್ದೂ ಹಾಲು-ಅನ್ನ ಎಂಬಂತೆ, ಕುರುವಂಗಿಗೆ ವಾಪಸ್ಸು ಬಂದಮೇಲೆ ಇವನ ತಂದೆ ರಾಮಣ್ಣ, ಹೆಂಡತಿ ರುದ್ರಮ್ಮನ ಬಳಿ "ನಮ್ಮನೆಗೆ ಆ ತಿಮ್ಮನಹಳ್ಳಿ ರಾಜಣ್ಣನ ಮಕ್ಕಳಲ್ಲಿ ಒಬ್ಬಳನ್ನ ತಂದ್ಕೊಬೇಕು ಕಣೆ,,, ಒಳ್ಳೆ ಗುಣ, ನೋಡೋಕು ಚೆನ್ದಾಗವ್ರೆ, ಕೆಲಸದಲ್ಲೂ ಗಟ್ಟಿಗಿತ್ತೀರಂತೆ... ಹೊಲದಾಗೆ ಗಂಡಾಳು, ಮನೆಯಾಗೆ ಗೌಡತಿ..." ಎಂದು ಹೇಳುತ್ತಿರುವುದು ಸರಾಗವಾಗಿ ಚಂದ್ರಣ್ಣನ ಕಿವಿಗೆ ಬೀಳುವಂತೆ ಮಾಡಿದ್ದ, ಆ ಪ್ರೇಮ ಶಿವ.
    ಇದು ನನ್ನ-ಅಮಿತಳ ವಿಷಯವೇ ಆಗ್ಲಪ್ಪ ಅಂತ ಚಂದ್ರಣ್ಣ ಒಂದು ಅರ್ಜಿಯನ್ನೂ ಹಾಕಿ ಬಿಟ್ಟಿದ್ದನೋ ಏನೋ. 
    ಆಗಿನ್ನೂ ಚಂದ್ರಣ್ಣನಿಗೆ ಕೆಲಸ ಸಿಕ್ಕಿರಲಿಲ್ಲ. 
* * * * * * * * 
 
    ಅವನು ಬಾಲ್ಯದಲ್ಲಿ, ಹೈಸ್ಕೂಲಿಗೆ ಚಿಕ್ಕಮಗಳೂರು ಪೇಟೆ ಸೇರಿದಾಗಿನಿಂದಲೇ, ತನ್ನ ಬುದ್ದಿ ತಾನು ತೆಗೆದುಕೊಂಡು ಸಂತೆ ವ್ಯಾಪಾರ ಶುರು ಮಾಡಿದ್ದನು. ಕೈಯಲ್ಲಿ ಏನಿಲ್ಲದಿದ್ದರೂ ಸಾಲಕ್ಕೆ ತರಕಾರಿ ಮೂಟೆಗಳನ್ನು ಕೊಂಡು, ಅವನ್ನು ಅಲ್ಲೇ ಮಧ್ಯಾಹ್ನದ ಹೊತ್ತಿಗೇ ಚಿಲ್ಲರೆಗೆ ಮಾರಿ, ಮೂವತ್ತೋ ಐವತ್ತೋ ಸಂಪಾದಿಸುತ್ತಿದ್ದನು. ನೆಡೆ-ನುಡಿಯೇ ಬಂಡವಾಳ, ನಗುವೇ ಗಿರಾಕಿಗಳಿಗೆ ಗಾಳ.
    ಈ ಎಲ್ಲಾ ರಾಜಕಾರಣಗಳ ನಡುವೆ ಅದೆಷ್ಟು ದಿನ ಶಾಲೆಗೆ ತಪ್ಪಿಸಿಕೊಂಡಿದ್ದನೋ ಅವನಂತೂ ಲೆಕ್ಕಕ್ಕೆ ಇಟ್ಟಿರಲಿಲ್ಲ, ಆದರೆ ಸರಸ್ವತಮ್ಮ ಲೆಕ್ಕ ಇಡುವುದಿಲ್ಲವೇ?
    ೮, ೯ನೇ ಕ್ಲಾಸುಗಳು ಮೇಷ್ಟ್ರೇ ಪಾಸು ಮಾಡುತ್ತಿದುದರಿಂದ, "ಹೇ, ಓದದೆಲ್ಲಾ ನೀರು ಕುಡಿದಂಗೆ..." ಅಂದುಕೊಂಡಿದ್ದ ಅವನಿಗೆ, ಎಸ್ಸೆಸೆಲ್ಸಿ ಫೇಲಾದಾಗಲೇ ಗೊತ್ತಾಗಿದ್ದು, ತಾನು ಓದೋದರಲ್ಲಿ ಬಹಳ ಹಿಂದೆ ಅಂತ. 

    ಮನೆಯ ೭ ಗಂಡು ಮಕ್ಕಳಲ್ಲಿ ದೊಡ್ಡವರು ೫ ಜನವೂ ಕಾಲೇಜು ಮುಖ ನೋಡಿರಲಿಲ್ಲ, ಇನ್ನು ಕೊನೆ ಮಗ ಒಬ್ಬ, ಅವನು ಮೂರನೇ ಕ್ಲಾಸಲ್ಲೇ ಶಾಲೆಗೆ ಕದ್ದು, ಊರಿನ ಹೊಲ-ಗದ್ದೆ ಬಯಲಲ್ಲಿ ರಾಜ್ಯಭಾರ ನೆಡೆಸುತ್ತಿದುದರಿಂದ, ರುದ್ರಮ್ಮನಿಗೆ ಇದ್ದುದರಲ್ಲಿ ಚುರುಕಾಗಿದ್ದ ಆರನೇ ಮಗ ಚಂದ್ರಣ್ಣನ ಮೇಲೆ, ಇವನಾದರೋ ಕಾಲೇಜು ಓದಿ, ದೊಡ್ಡ ವಿದ್ಯಾವಂತನಾಗಬಹುದು ಎಂಬ ಆಸೆ ಇಟ್ಟುಕೊಂಡಿದ್ದಳು.
    ಹಳ್ಳಿ ಗೊರಡು ಹೆಂಗಸಾದರು ಸಹ ರುದ್ರಮ್ಮನಿಗೆ, ಓದು-ವಿದ್ಯೆ ಎಂದರೆ ಏನೋ ಭಾರೀ ಆಸೆ. ಶಾಲೆಗೆ ಹೋಗುವ ಮಕ್ಕಳು, ಚೆನ್ನಾಗಿ ಓದೋ ಹುಡುಗರು ಎಂದರೆ ಭಾರೀ ಅಕ್ಕರೆ ಅವಳಿಗೆ. ದುಡಿಮೆಯ ಗಂಡು ರಾಮಣ್ಣ, ಮಕ್ಕಳಿಗೆ ಶಾಲೆಗೆ ಕಳುಹಿಸಲು ದುಡ್ಡು ಕೊಡದಿದ್ದರೆ, ತಾನೇ ಕದ್ದು ಮುಚ್ಚಿ ದುಡ್ಡು ಕೊಟ್ಟು "ಪುಸ್ತಕ, ಬಟ್ಟೆ ಕೊಂಡುಕೊಳ್ಳಿ" ಎನ್ನುತಿದ್ದಳು. ಪೇಟೆಯ ಬ್ರಾಹ್ಮಣರ ಕೇರಿಗೆ, ಜಗುಲಿಯ ಮೇಲೆ ಕುಳಿತು ಓದುವ ಮಕ್ಕಳನ್ನು ನೋಡಲೆಂದೇ ಅಲ್ಲಿಗೆ ಹೋಗಿ, ನೋಡಿ ಖುಷಿಪಡುತ್ತಿದ್ದಳು. ಮನೆಗೆ ಬಂದಾಗ ಆಟ ಆಡಿಕೊಂಡು ಕಿತ್ತಾಡೋ ತನ್ನ ಮಕ್ಕಳನ್ನ ಕಂಡಾಗ, ಸಂಕಟದ ಸಿಟ್ಟಿನಿಂದಲೇ "ಎಲ್ಲಾರ ಮನೆ ಮಕ್ಕಳೂ ವಿದ್ದೆ ವಿದ್ದೆ ಅಂದ್ರೆ, ನಮ್ಮ ಮನೆವೂ ಇದಾವೆ ಮುದ್ದೆ ಮುದ್ದೆ ಅಂತ ಸಾಯ್ತವೆ..." ಎಂದು ಶಪಿಸುತ್ತಿದ್ದಳು.
    ಇಂಥ ರುದ್ರಮ್ಮನಿಗೆ ಕೊನೆಗೆ ಇದ್ದ ಒಂದೇ ಒಂದು ಆಶಾಕಿರಣ ಚಂದ್ರಣ್ಣನೂ ಎಸ್ಸೆಸೆಲ್ಸಿ ಫೇಲಾಗಿದ್ದು ಕೇಳಿ ಬಿಕ್ಕಿ ಬಿಕ್ಕಿ ಅತ್ತಿದ್ದಳು, ಬಾಯ್ತುಂಬ ಬಯ್ದು ಮಂಗಳಾರತಿ ಮಾಡಿದ್ದಳು. ಆಗಲೇ, ಚಂದ್ರಣ್ಣ "ಥೂ,.. ಹಾಳಾಗೋಗ್ಲಿ ಅತ್ತೆಗೆ, ನಮ್ಮವ್ವನ ಕಾಟಕ್ಕಾದ್ರು, ಮತ್ತೆ ಪರೀಕ್ಷೆ ಕಟ್ಟಿ ಹೆಂಗೋ ಪಾಸಾಗಬೇಕು" ಅಂತ ಹೇಳಿ, ಕಠಿಣ ಶ್ರಮದಿಂದ ಜಸ್ಟ್ ಪಾಸಾಗಿಬಿಟ್ಟನು, (ವೈಯುಕ್ತಿಕವಾಗಿ ಅಷ್ಟು ಮಾಡಲಿಕ್ಕೇ ಅದು ಅವನಿಗೆ ಕಠಿಣ ಶ್ರಮವಾಗಿತ್ತು). 

    ಬಹಳಷ್ಟು ಜನರಿಗೆ ಸಾಮಾಜಿಕ ಬದುಕಿನಲ್ಲಿ, ವ್ಯಾಪಾರದಲ್ಲಿ ಇರುವ ಬುದ್ದಿ ಓದಿನಲ್ಲಿ ಇರುವುದಿಲ್ಲ ಎಂದು, ಮತ್ತೊಮ್ಮೆ ಹೇಳಬೇಕಾಗಿಲ್ಲ. ಇದೇನು ಲೋಕಾರೂಡಿಯೋ, ಇಲ್ಲ ಎಲ್ಲಾ ಕೊಡುವ ಶಿವಪ್ಪನ ಹಲ್ಲು-ಕಡಲೆಯ ಆಟವೋ, ಗೊತ್ತಿಲ್ಲ. ಆದರೂ ಇದಂತೂ ಸತ್ಯ.
    ಈ ಕಾರಣಕ್ಕಾಗೆ ರಾಮಣ್ಣ, ತನ್ನ ಮಕ್ಕಳಿಗೆ ಉಳುಮೆಯೇ ಗತಿ, ಇವರೂ ನನ್ನಂಗೆ ಎರೆ ಮಣ್ಣಿಗಷ್ಟೇ ದೊರೆಗಳಾಗೋರು ಎಂದೇ ತೀರ್ಮಾನ ಮಾಡಿಬಿಟ್ಟಿದ್ದ. ಸೊಸೆಯಾಗುವವರು ಹೊರಗೆ-ಒಳಗೆ ಎಲ್ಲೂ ದುಡಿಯಲು ತಕ್ಕವ್ರಾಗ್ಬೇಕು ಎಂಬುದು ಅವನ ಮನಸ್ಸು, ಹಾಗೆಯೇ, ಅಂತ ಒಳ್ಳೆ ಹೆಣ್ಣು ಮಕ್ಕಳ ಬಗ್ಗೆ ತಿಳಿದಾಗಲೆಲ್ಲ ಅವನು ಮೆಚ್ಚಿ ಮಾತನಾಡುತ್ತಿದ್ದನು.
    ಇಲ್ಲಿ ತಿಮ್ಮನಹಳ್ಳಿ ರಾಜಣ್ಣನ ಮಕ್ಕಳ ಬಗ್ಗೆ ರುದ್ರಮ್ಮಳಿಗೆ ಹೇಳಿದ್ದಕ್ಕೂ ಇದೇ ಕಾರಣವಾಗಿತ್ತು. ಅದೂ ಅಲ್ಲದೆ ಒಳ್ಳೆ ಸಂಬಂಧ, ಹಿರಿ ಸೊಸೆಯ ಚಿಕ್ಕಮ್ಮನ ಮಕ್ಕಳು, ನಮ್ಮ ಮಕ್ಕಳಲ್ಲಿ ಒಬ್ಬರಿಗೆ ಸಾಲಾವಳಿ ಆಗ್ತಾರೆ ಅಂತ ತೀರ್ಮಾನಿಸಿಬಿಟ್ಟಿದ್ದ.
* * * * * * * * *

      ಆ ಹಿರಿಜೀವಗಳು ನಿರ್ಧರಿಸಿದರೇನೊ ನಿಜ, ಆದರೆ ಅವರಿಗೆ ಮುಂದೆ ನಿಂತು ಮದುವೆ ಮಾಡುವ ಭಾಗ್ಯವಾಗಲೀ, ಅವರಿಂದ ಆಶೀರ್ವಾದ ಪಡೆಯುವ ಪುಣ್ಯವಾಗಲೇ ಈ ಕಿರಿಜೀವಗಳಿಗೆ ಇರಲಿಲ್ಲ. ಅನಾರೋಗ್ಯದಿಂದ ರುದ್ರಮ್ಮ ಮೊದಲು ತೀರಿಕೊಂಡಳು, ತೀರಿಕೊಳ್ಳುವ ಮೊದಲು ಚಂದ್ರಣ್ಣ ಅವಳಾಸೆಯಂತೆ ಕಾಲೇಜು ವಿದ್ಯಾಭ್ಯಾಸದ ಆಸೆಯನ್ನಂತೂ ಪೂರೈಸಿದ್ದ.
    ಅಷ್ಟರಲ್ಲೇ, ರುದ್ರಮ್ಮ ಅಗಲಿದ ಕೊರಗೋ, ಅಥವಾ ಅವನ ಆಯುಶ್ಭಲದ ಕೊನೆಯೋ ಏನೋ, ಅನಾರೋಗ್ಯ ರಾಮಣ್ಣನನ್ನು ಚೇತರಿಸಿಕೊಳ್ಳಬಿಡಲಿಲ್ಲ, ಮೂರು ವರ್ಷಗಳಿಂದ ಅವನು ಖಾಯಿಲೆ ಬಿದ್ದು "ನಾನು ಕಣ್ಣು ಮುಚ್ಚಿ, ನನ್ನ ಮೇಲೆ ಮಣ್ಣು ಮುಚ್ಚಿದರೆ ಸಾಕು" ಎನ್ನುವ ಸ್ತಿತಿ ತಲುಪಿದ್ದ. ಅಷ್ಟರಲ್ಲಿ ಆತ ತನ್ನೆಲ್ಲ ಜವಾಬ್ದಾರಿಯನ್ನು ನಿರ್ವಹಿಸಿದ್ದನಾದರೂ, ಕೊನೆಯ ಇಬ್ಬರು ಗಂಡು ಮಕ್ಕಳ ಮದುವೆಯಾಗಿರಲಿಲ್ಲ, ಕಿರಿಯ ಮಗ ಇನ್ನೂ ಚಿಕ್ಕವನಾಗಿದ್ದರಿಂದ ರಾಮಣ್ಣನ ಕೊನೆ ಆಸೆ ಚಂದ್ರಣ್ಣನ ಮದುವೆಯನ್ನು ನೋಡುವುದಾಗಿತ್ತು. ಚಂದ್ರಣ್ಣನಿಗೆ ಇನ್ನು ಎಲ್ಲೂ ಸಂಬಂದ ನೋಡಿರಲಿಲ್ಲವಾದ್ದರಿಂದ ಅವನಿಗೆ ಅಷ್ಟನ್ನಾದಾರು ಮಾಡಿ ಕೊನೆಗಾಣಬೇಕೆಂದು, ರಾಜಣ್ಣನ ಮಕ್ಕಳ ವಿಷಯವಾಗಿ ಯೋಚಿಸಿದ. ಈ ವಿಷಯವಾಗಿ ತನ್ನ ಹಿರಿಮಗನೊಡನೆ ಮಾತನ್ನೂ ಆಡಿದ.
    ಇಷ್ಟೆಲ್ಲಾ ನಡೆವಾಗ ಹಲವು ವರ್ಷಗಳು ಉರುಳಿದ್ದರಿಂದ, ಇತ್ತ ಚಂದ್ರಣ್ಣನ ಎಲ್ಲ ಅಣ್ಣಂದಿರಿಗೂ ಮಧುವೆಯಾಗಿದ್ದಂತೆ, ಅತ್ತ ಅಮಿತಳ ಇಬ್ಬರು ಅಕ್ಕಂದಿರಿಗೂ ಮದುವೆಯಾಗಿಬಿಟ್ಟಿತ್ತು. ಕುರುವಂಗಿಯ ವಿಷಯವೆಲ್ಲ ತಿಮ್ಮನಹಳ್ಳಿಯವರಿಗೆ ತಿಳಿದಿತ್ತು, ತೀರಿಹೋದ ರುದ್ರಮ್ಮನ ಬಗ್ಗೆ, ಹಾಗು ಅವಳು ಸತ್ತು ಮೂರು ವರ್ಷವಾದರೂ ಚೇತರಿಸಿಕೊಳ್ಳದ ರಾಮಣ್ಣನ ಬಗ್ಗೆ ಮರುಕವನ್ನೂ ಪಟ್ಟಿದ್ದರು.
* * * * * * * * *

      ಈಗ ತನ್ನ ತಂದೆ ಜೀವನದ ಕಡೇ ಮೆಟ್ಟಿಲ್ಲಲ್ಲಿರುವಾಗ, ಅವನ ಆಸೆಯನ್ನು ಪೂರೈಸಬೇಕೆಂದು ಚಂದ್ರಣ್ಣನ ಹಿರಿ ಅಣ್ಣ ತಿಮ್ಮನಹಳ್ಳಿಯವರೊಡನೆ, ಮದುವೆ ಪ್ರಸ್ತಾಪವನ್ನೆತ್ತಿದ್ದನು. ಮನೆಗೆ ಹಿರಿಮಗನಾಗಿದ್ದರಿಂದಲೂ, ಚಂದ್ರಣ್ಣ ಈ ವೇಳೆಗೆ ಒಂದು ಸರ್ಕಾರಿ ಕೆಲಸವನ್ನು ಸಂಪಾದಿಸಿಕೊಂಡಿದ್ದರಿಂದಲೂ, ಅದೂ ಅಲ್ಲದೆ ತನ್ನ ಹೆಂಡತಿಯ ಚಿಕ್ಕಮ್ಮನ ಮನೆಯೇ ಆಗಿದ್ದುದರಿಂದಲೂ ಯಾವ ಮುಜುಗರವಿಲ್ಲದೆ ತಾನೊಬ್ಬನೇ ಮುಂದೆ ನಿಂತು, ಮದುವೆಯ ಮಾತು ಕಥೆಯಾಡಿ ನಿಶ್ಚಯಿಸಿದ್ದನು. ಅದನ್ನು ತಂದೆಗೆ ಹೇಳಿ ಸಮಾಧಾನಪಡಿಸಿದ್ದನು.
    ಇದೆಲ್ಲ ಆದ ವಾರವೊಂದೆರಡು ಕಳೆವುದರಲ್ಲಿಯೇ ವೈದ್ಯರು "ಇವರ ಸಮಯ ಬಂದಾಗಿದೆ, ಇವರ ಜೀವ ಇಂದಾದರೆ ಇಂದೇ, ನಾಳೆಯಾದರೆ ನಾಳೆ,,," ಅದೇ ಹೆಚ್ಚು ಎಂದುಬಿಟ್ಟರು.     ಆಗ ರಾಮಣ್ಣ ಉಸಿರಿಲ್ಲದ ಉಸಿರಿಂದ ಮಗ ಚಂದ್ರಣ್ಣನ ಕಿವಿಯಲ್ಲಿ ಉಸುರಿದ್ದು ಇಷ್ಟೇ "ಮಗಾ, ನಾ ಸಾಯ್ತೀನೋ...  ನಿನ್ನ ಮುಂದಿನ ಸುಖದ ಜೀವನ ನೋಡೊ ಭಾಗ್ಯ,,, ನಂಗಿಲ್ಲ ಕಣ್ಲಾ... ನಿನ್ನ ಕೈ ಹಿಡಿಯೋ ಆ ಮಗೀನ ಮಖಾನ,,, ಒಂದ್ಸಲ,,, ನೋಡ್ಬೇಕು ಅನ್ನಿಸ್ತೈತೆ,.. ಹೋಗಿ ಕರ್ಕಂಡು ಬತ್ತೀಯ ಮಗಾ...".

    ತಂದೆಯನ್ನ ನೋಡೋಕೆ ಕೆಲಸ ಮಾಡುತಿದ್ದ ಊರಿಂದ ಪ್ರತಿ ವಾರ ಬಂದು ಹೋಗುತ್ತಿದ್ದ ಚಂದ್ರಣ್ಣ, ಆ ದಿನ ಬೆಳಿಗ್ಗೆಯೇ, ಕೂಡಲೇ ಹೊರಟು ಬರಬೇಕೆಂದು ಬಂದ ತುರ್ತುತಂತಿಯನ್ನು ನೋಡಿ, "ಅಯ್ಯ, ಈಗಾಗಲೇ ತೀರಿ ಹೋಗಿದ್ದಾನೆ, ಅದನ್ನು ಮರೆಮಾಚಿ ಬೇಗ ಬರಬೇಕೆಂದು ಹೇಳಿದ್ದಾರೆ" ಎಂದುಕೊಂಡು, ನಿಂತ ನಿಲುವಲ್ಲೇ ಹೊರಟು ಬಂದಿದ್ದನು. 
     ಇನ್ನು ಈ ಕ್ಷಣವೋ ಮರುಕ್ಷಣವೋ ಎನ್ನುತ್ತಿರುವ ತಂದೆಯ ಜೀವವನ್ನು ಇಲ್ಲಿ ಬಿಟ್ಟು ಅಮಿತಳನ್ನು ಕರೆದುಕೊಂಡು ಬರಲು ಆ ಊರಿಗೆ ಹೋಗುವುದಾದರೂ ಹೇಗೆ? ಮದುವೆಯಿಲ್ಲ, ನಿಶ್ಚಿತಾರ್ತವಿಲ್ಲ, ನಿಮ್ಮ ಮಗಳನ್ನ ಕಳುಹಿಸಿಕೊಡಿ ಎಂದು ಕೇಳುವುದಾದರೂ ಹೇಗೆ, ಎಂದು ಕಣ್ಣೀರು ತುಂಬಿ ಕುಳಿತುಕೊಂಡನು.     ಆಗ ಅವನ ಅತ್ತಿಗೆ ಬಂದು "ಈಗ ನೀನೋಗಿ, ಅವಳನ್ನ ಕರ್ಕೊಂಡು ಬರಾದಾದ್ರು ಎಲ್ಲಿ, ಇಲ್ಲೇ ನಿನಿಗೆ ಗೊತ್ತಿರೋ ಯಾರನ್ನಾರ ಕರಕೊಂಡು ಬಾ", "ನಾವೇ ಯಾರು ಅಂತ ಗುರುತು ಹಿಡೇತಿಲ್ಲ ಅಯ್ಯ, ಇನ್ನ ಯಾವತ್ತೋ ನೋಡಿರೋ ಅವಳನ್ನ ಏನು ಗುರುತು ಹಿಡಿಯುತ್ತೆ... ಬೇಗ ಹೋಗು" ಎಂದಳು.
     ಆಗ ಇನ್ನೈದು ನಿಮಿಷದಲ್ಲಿ ಬರುವುದಾಗಿ ಹೇಳಿ ಹೊರಟ ಚಂದ್ರಣ್ಣ, ಸೀದಾ ತಾನು ಈಗ ಕೆಲವು ವರ್ಷದ ಹಿಂದೆ ಚಿಕ್ಕಮಗಳೂರ ಪೇಟೇಲಿ ವ್ಯಾಪಾರ ಮಾಡುತ್ತಿದ್ದಾಗ ತನಗೆ ಪರಿಚಯಸ್ಥನಾಗಿದ್ದ ಪಕ್ಕದೂರಿನ ಸಹ ವ್ಯಾಪಾರಿಯ ಮನೆಗೆ ಹೊರಟನು. ಆತ ವಿಷಯ ತಿಳಿದೊಡನೆ, "ಚಂದ್ರ, ನಿಂಗೆ ಇಷ್ಟೂ ಸಹಾಯ ಮಾಡಲ್ಲೇನೊ ನಾನು... " ಎಂದು, ಮಗಳನ್ನು ಕರೆದುಕೊಂಡು ತಾನೂ ಆಸ್ಪತ್ರೆಗೆ ಬಂದನು.     ವಿಧಿಯ ವ್ಯೂಹ ಎಂಬಂತೆ, ಇದೇ ವ್ಯಕ್ತಿ ತನ್ನ ಮಗಳನ್ನು ಮದುವೆಯಾಗಬೇಕಾಗಿ ಚಂದ್ರಣ್ಣನಲ್ಲಿ ಸಂಬಂಧ ಕೇಳಿದ್ದನು, ಆಗ ತನ್ನ ತಂದೆಯ ಆಸೆಯನ್ನು ತಿಳಿ ಹೇಳಿ, ನನ್ನ ಮದುವೆಯ ಮಾತಾಗಿದೆಯೆಂದು, ನುಡಿದಿದ್ದನು ಚಂದ್ರಣ್ಣ. ಎಲ್ಲಕ್ಕೂ ಋಣಾನುಬಂಧ ಬೇಕು ಎಂದು ಈ ವಿಷಯವನ್ನು ಅಲ್ಲಿಗೇ ಬಿಟ್ಟುಬಿಟ್ಟಿದ್ದರು.     ಈಗ ಅದೇ ಹೆಣ್ಣನ್ನು ಕರೆತಂದು "ಅಯ್ಯಾ, ನೋಡು ಬಂದಿದಾಳೆ ರಾಜಣ್ಣನ ಮಗಳು ಅಮಿತ, ನೀನೇ ನೋಡಿದ್ದ ಹೆಣ್ಣು, ನಾ ಮದುವೆಯಾಗೋಳು" ಎಂದನು. ಸಾವಿನ ಕತ್ತಲೆ, ಕಣ್ಣಿಗೆ ಕವಿಯತೊಡಗಿದ್ದ ರಾಮಣ್ಣನ ಬುದ್ದಿ, ಈಗಿನ ದಿನವಾವುದು, ಸಮಯವೆಷ್ಟು, ಎಂಬುದರ ಚಿಂತೆ ಮಾಡುವಷ್ಟೂ ಎಚ್ಚರವಾಗಿರಲಿಲ್ಲ. ಈಗಿರುವಾಗ ಅವಳನ್ನ ಕರೆತರಲು ಯಾರು ಹೋದರು, ಹೇಗೆ ಬಂದರು, ಇವಳು ಅವಳೇನಾ ಎನ್ನುವುದನ್ನು ಇನ್ನೇಗೆ ತಾನೇ ಯೋಚಿಸೀತು,,,?

    ತನ್ನಾಸೆಯಂತೆ ಬಂದ ಅವಳನ್ನು ಕುರಿತು, ಅವಳಿಗಾಗಿ ಕಾದಿಟ್ಟಿದ್ದ ಎರಡು ಮಾತುಗಳನ್ನ ಹೇಳತೊಡಗಿದನು "ಅವ್ವಾ, ಚೆನ್ದಾಗಿದಿಯೇನೇ? ನಿಮ್ಮ ಅಯ್ಯ ಕ್ಷೇಮವೇ...?" ಎಂದು ಕೇಳಿ, ಅವಳ ಉತ್ತರವನ್ನು ನಿರೀಕ್ಷಿಸದೆ, "ದೇವರು, ಧರ್ಮ ಮರೀಬ್ಯಾಡವ್ವ, ಗಂಡನ್ನ, ಮನೆತನಾನ ಬೆಳಗು, ನನ್ ತಾಯಿ..."  ಎಂದು ಹೇಳಿ ಮಾತು ನಿಲ್ಲಿಸಿದನು. ಆ ಹುಡುಗಿ ಕಾಲು ಮುಟ್ಟಿ ನಮಸ್ಕರಿಸಿದಳು. ಆಗ ಶಾರದಮ್ಮ ಅವಳನ್ನ ಹೊರಗೆ ಕರೆದುಕೊಂಡು ಹೋಗಿ ಕೂರಿಸಿದಳು.     ಅಷ್ಟರಲ್ಲಿ "ಶಿವ, ಶಿವಾ..." ಎಂಬ ಎರಡು ಕೊನೆ ಉಸಿರು ಹೊರಟಿತು, ಆ ಒಂದು ಕ್ಷಣದ ಭಾವೋದ್ವೇಗದ ಮೌನವನ್ನು, ಮರುಕ್ಷಣದ "ಅಯ್ಯಾ..." ಎಂಬ ಎಲ್ಲರ ದುಃಖದ ಕರಾಳ ಕೂಗು ನುಂಗಿಹಾಕಿತು. 
    ಕೊನೆಯ ಆಶಿರ್ವಾದ ಮಾಡಿದ್ದ  ರಾಮಣ್ಣನ ಆತ್ಮ ಶಿವಾಧೀನವಾಗಿ ತಾನೂ ದೇವರಾಯಿತು.                                       
* * * * * * * * * 

    ಮದುವೆಯಾಗಿ ಮೊದಲನೇ ವರ್ಷ ಅದು, ಹಾಸನದ ಮಲೆಸೀಮೆ ತಿಮ್ಮನಹಳ್ಳಿಯ ಹೆಣ್ಣು ಅನಿತಾಳನ್ನು ಚಿಕ್ಕಮಗಳೂರು ಹೊಂಜೋಳಿಗೆಸೀಮೆಯ (ಜವಣಿಗೆ ಸೀಮೆಯ) ಕುರುವಂಗಿ ಗಂಡು ಚಂದ್ರಣ್ಣಗೆ ಕೊಟ್ಟು ಮದುವೆ ಮಾಡಿದ್ದರು. ಕುರುವಂಗಿ ರಾಮೇಗೌಡನ  ಒಂಬತ್ತು ಮಕ್ಕಳಲ್ಲಿ ಚಂದ್ರಣ್ಣ ಆರನೆಯವನು, ಹಾಗೋ ಹೀಗೋ ಕಾಲೇಜು ಓದಿ, ಸರ್ಕಾರಿ ಹಾಸ್ಟೆಲ್ ಕೆಲಸಕ್ಕೆ ಸೇರಿದ್ದ. ಪಂಚನಹಳ್ಳಿಲಿ ಇವನ ಕೆಲಸ, ಒಂದು ಕಡಿಮೆ ಬಾಡಿಗೆಯ ಮನೆ ಮಾಡಿಕೊಂಡು ಅಲ್ಲೇ ಹೊಸ ಸಂಸಾರ ಹೂಡಿದ್ದರು.

    ಅಮಿತಾ ವಿದ್ಯಾವಂತೆ ಅಲ್ಲದಿದ್ದರೂ ವಿವೇಚನೆ, ಬುದ್ದಿವಂತಿಕೆ ಮತ್ತು ಗುಣದಲ್ಲಿ ಯಾರಿಗೇನೂ ಕಮ್ಮಿ ಇರಲಿಲ್ಲ. ಮದುವೆಯಾದ ಮೇಲೆ ಕುರುವಂಗಿಯಲ್ಲಿ ಒಂದು ವಾರವೂ ಇರಲಿಕ್ಕೆ ಸಮಯ ಹೊಂದಲಿಲ್ಲ, ಹಾಗಾಗಿ ಹೊಸ ಸಂಸಾರ ಶುರುವಾಗಿದ್ದೇ  ಪಂಚನಹಳ್ಳಿಯಲ್ಲಿ, ಎಲ್ಲ ಹೊಸದಾಗಿ ಇರುವಾಗಲೇ, ಹೊಸ ಬಳಗ, ಹೊಸ ನೆಂಟರು ಹಾಗೆ ಹೊಸ ಜನ, ಹೊಸ ಜೀವನ ಜಾಗ, ಎಲ್ಲದಕ್ಕೂ ಅಮಿತಾ ಹೊಂದಿಕೊಂಡುಬಿಟ್ಟಳು. ಇನ್ನು ಚಂದ್ರಣ್ಣ ಬಹಳ ಮೃದು ಸ್ವಭಾವದವನು, ಒಳ್ಳೆತನ, ನಗು, ತಮಾಷೆಗಳೆಲ್ಲ ತನಗಾಗೆ  ಹೇಳಿ ಮಾಡಿಸಿದ ಗುಣಗಳೇನೋ ಎಂಬಂತೆ ಇದ್ದ ವ್ಯಕ್ತಿ. ಅಲ್ಲಿನ ಜನರೊಂದಿಗೆ ಬೆರೆತು, ಸ್ನೇಹ, ಗೌರವ ಸಂಪಾದಿಸಿ ಜೀವನದ ದಾರಿ ಮಾಡಿಕೊಂಡು ಬದುಕುತ್ತಿದ್ದರು.

    ಚಿಕ್ಕ ಚೌಕಟ್ಟಿನ, ಕಷ್ಟ-ಸುಖ ಸಮರಸದ ಕುಟುಂಬಕ್ಕೆ ಒಬ್ಬ ಹೊಸ ಸದಸ್ಯನ ಆಗಮನಕ್ಕೆ ದಿನಗಣಿಕೆ ಶುರುವಾಯಿತು. ತಾವು ತಂದೆ ತಾಯಿಗಳಾಗುತಿದ್ದೇವೆ ಎಂಬುದನ್ನು ತಿಳಿದಾಗಿನಿಂದಲೇ, ಖುಷಿಯ ಜೊತೆಗೇ ಮುಂದಿನ ಚಿಂತೆಯನ್ನೂ ಸಮವಾಗಿ ಅನುಭವಿಸಲಾರಂಬಿಸಿದ್ದರು ಆ ಬಡದಂಪತಿಗಳು. ಹೀಗೆ ಗರ್ಭಿಣಿ ಅಮಿತಾಗೆ ಎಂಟು ತಿಂಗಳು ತುಂಬಿದಾಗ, ಅವರಣ್ಣ ಮತ್ತು ಅಮ್ಮ, ಅವಳನ್ನು ತವರಿಗೆ ಕರೆದುಕೊಂಡು ಬಂದರು. ಅದಾದ ಮೇಲೆ ಒಮ್ಮೆ ಮಾತ್ರ ಅವಳನ್ನು ನೋಡಲು ತಿಮ್ಮನಹಳ್ಳಿಗೆ ಬಂದು ಹೋಗಿದ್ದ ಚಂದ್ರಣ್ಣ, ಮತ್ತೆ ಬರುತ್ತಿರುವುದು ಈಗಲೇ.
* * * * * * * * *


                                                      (ಮತ್ತೆ ಕಥೆಯ ಮೊದಲಿನ ಭಾಗಕ್ಕೆ)

      ಕಲ್ಕೆರೆ ಗಡಿಯಿಂದ ತಿಮ್ಮನಹಳ್ಳಿಗೆ ನಾಲ್ಕು ಮೈಲಿ ದೂರ, ಎತ್ತಿನ ಗಾಡಿ ಬಿಟ್ಟರೆ ಕಾಲ್ನೆಡಿಗೆಯೇ ಗತಿ, ಅದೋ ಬರಿ ಎಂಟತ್ತು ಮನೆಗಳ ಊರು, ಊರಿಗೆಲ್ಲಾ ಆಗಿ ಸರ್ಕಾರಿ ನೌಕರಿಗೆ ಸೇರಿದ್ದವನು ಇದ್ದದ್ದು ಒಬ್ಬನೇ ಒಬ್ಬ, ಅವನ ಬಿಟ್ಟರೆ ಚಂದ್ರಣ್ಣನೇ ನೌಕರಿಲಿ ಇರೋ ಒಬ್ಬನೇ ಒಬ್ಬ ಅಳಿಯ. ಎಲ್ಲರಿಗೂ ಇವನ ಮೇಲೆ ಸ್ವಲ್ಪ ಹೆಚ್ಚೇ ಪ್ರೀತಿ, ಗೌರವ. ಊರಿನ ಹುಡುಗರೆಲ್ಲಾ ಇವನಿಗೆ ಭಾವ ಮಕ್ಕಳೇ ಆಗಿದ್ದರಿಂದ, ಆ ಊರು ಎಂದೂ ಇವನಿಗೆ ಬೇಜಾರಾಗಿರಲಿಲ್ಲ. ಖುಷಿಯಿಂದಲೇ, ಹಾದಿಯ ಎರಡೂ ಬದಿಯಲ್ಲಿ ಬೆಳೆದು ಕವಿದುಕೊಂಡಿದ್ದ ಸೀಮೆ-ಸೀಗೆ ಗುತ್ತಿಯ ಹೂಗಳನ್ನೂ, ಅವುಗಳ ಕಪ್ಪು ಹಣ್ಣುಗಳನ್ನು ಕುಕ್ಕಿ ತಿನ್ನುತ್ತಿದ್ದ ಗುಬ್ಬಿ, ಉಣ್ಣೆಗೊರವನ ಹಕ್ಕಿಗಳನ್ನೂ ನೋಡುತ್ತಾ ಮುಂದೆ ನಡೆದನು. ನೋಡಿದರೆ ಮತ್ತೊಮ್ಮೆ ನೋಡಬೇಕೆನ್ನುವ ರೂಪ  ಚಂದ್ರಣ್ಣನದು, ಎತ್ತರಕ್ಕೆ ಸರಿಯಾದ ಸದೃಡ ದೇಹಸಿರಿ, ಬೆಳ್ಗೆಂಪು ಬಣ್ಣ, ದಟ್ಟ ಹುಬ್ಬು, ತುದಿ ಬಾಗಿದ ಮೀಸೆ, ನಾನೇ ಚೆಂದ ಎನ್ನುವ ಆ ಚೂಪು ಮೂಗು, ಕೆನ್ನೆಗಳಿಗೆ ಜೋಡಿಯಾಗಲೆಂದೇ ತೀಡಿದಂತೆ ಕಾಣುವ ಗಲ್ಲ, ಎಲ್ಲರಿಗೂ ಒಂದೇ ನೋಟಕ್ಕೆ ಇವನು ನಮ್ಮ ಚಂದ್ರಣ್ಣ ಎಂಬಂತೆ ಮಾಡಬಲ್ಲ ಕಣ್ಣುಗಳು. 
    ಗೌರವ, ಪ್ರೀತಿ, ಸಲುಗೆ, ಸಂಭ್ರಮ, ಸಂತಸ, ಗಾಂಬಿರ್ಯಗಳನ್ನೆಲ್ಲ ಒಟ್ಟಿಗೆ ಬೀರಬಲ್ಲ ನೋಟ ಅವನದು. ಚಿಂತೆಯೆಂಬ ಕಲೆಗಳಿದ್ದರೂ, ನೀರ ಮೇಲಿನ ಪ್ರತಿಬಿಂಬದಲ್ಲಿನ ಶುಭ್ರ ಚಂದ್ರನಂತ ಮೊಗದವನು ಚಂದ್ರಣ್ಣ. ಆಗಾಗ ಎಡಗೈ ಎತ್ತಿ ಗಾಳಿಗೆ ಹಾರಾಡುತ್ತಿದ್ದ ಆ ದಟ್ಟ ಮೃಧು ಕೂದಲುಗಳನ್ನೊಮ್ಮೆ ಕ್ರಾಪಿಗೆ ಸರಿಯಾಗಿ ಕೂರಿಸುತ್ತ ಸಾಗುತ್ತಿತ್ತು ಅವನ ದಾರಿ.

    ಕಲ್ಕೆರೆಯಿಂದ ಮುಂದೆ ಅರ್ದ ಮೈಲಿ ದೂರದಲ್ಲಿ ದಲಿತರ ಕೇರಿಯೊಂದು ಸಿಗುತ್ತದೆ, ಅದನ್ನ ದಾಟಿ ಇನ್ನೊಂದು ಮೈಲಿಗೆ ಒಂದು ಎಡ ತಿರುವು, ಸುತ್ತಲ ನಾಲ್ಕು ಹಳ್ಳಿಗೆ ಆಗುವಂತೆ ಅಲ್ಲೊಂದು ಟ್ರಾನ್ಸ್ಫಾರ್ಮರ್ ಇಟ್ಟಿದುದರಿಂದ ಆ ಜಾಗಕ್ಕೆ ಹಳ್ಳಿ ಭಾಷೆಯಲ್ಲಿ 'ಟ್ರಾನ್ಸಫರಂ ಪೆಟ್ಟಿಗೆ' ಎಂಬ ಹೆಸರು ಬಿದ್ದೋಗಿತ್ತು, ಅಲ್ಲಿಂದ ತಿಮ್ಮನಹಳ್ಳಿಯ ದಾರಿ ಶುರು. ಅಲ್ಲಿಯ ಸುತ್ತಲ ಕಾವಲು, ಜಮೀನೆಲ್ಲ ಆ ಊರಿನವರದ್ದೆ ಆದ್ದರಿಂದ ಊರಿನ ದನ ಮೇಯಿಸುವ ಹುಡುಗರು, ಹೊಲದ ಕೆಲಸ ಮಾಡುತ್ತಿರೋರು ಎಲ್ಲ ದಾರಿಗೇ ಸಿಗುತ್ತಾರೆ.
    ಹಾದಿಯ ಎಡಭಾಗದಲ್ಲಿದ್ದ ಸಣ್ಣ ಕಟ್ಟೆಯಲ್ಲಿ ಎತ್ತುಗಳಿಗೆ ನೀರು ತೋರಿಸಿಕೊಂಡು, ಹಾದಿಯ ಬಲ ಭಾಗದಲ್ಲಿದ್ದ ತನ್ನ ಹೊಲದ ಕಡೆಗೆ ದಾಟಿ ಬರುತ್ತಿದ್ದ ಮಲ್ಲೇಶಪ್ಪ, ಎದುರಿಗೆ ಸಿಕ್ಕವನೇ,
    "ಏನು ಭಾವಾರು, ಈಗ ಬಂದ್ರ" ಎಂದನು. ಅದಕ್ಕೆ ಚಂದ್ರಣ್ಣ "ಹೂ ಕಣ್ ಭಾವ, ಚೆನ್ನಾಗಿದಿರ...?" ಎಂದ.
    "ಏನೋ ಹಿಂಗಿದಿವಿ ನೋಡಪ, ನಿನ್ನಂಗೆ ನೌಕ್ರಿ ಅಲ್ಲ, ಸಂಬಳ ಎಣಿಸ್ಕೊಳಕೆ" ಅಂದ,
    "ಓ,.. ನೀವು, ಆಲೂಗೆಡ್ಡೆ ಸಾವುಕಾರು, ದುಡ್ಡು ಬಿಚ್ಚಲ್ಲ ಅಂದ್ರೂ, ಮಾತು ಮಾತ್ರ ಊರುದ್ದಕ್ಕೆ ಆಡ್ತೀರ ಕಣಪ್ಪಾ" ಎಂದು ಕಾಲೆಳದನು ಚಂದ್ರಣ್ಣ.
    "ಹೌದು ಕಣಯ್ಯಾ, ಬಿಸಿಲ್ಲಲ್ಲಿ ಮೈ ಎಲ್ಲಾ ಬೆವತು ಕರ್ರಗಾಗಿ, ಕಾಲು ಎಲ್ಲ ಸುಟ್ಟು ಹೋಗ್ತಿದ್ದ್ರೆ, ನಿನಗೂ ಗೊತ್ತಾಗ್ತಿತ್ತು..."
    "ಇಸ್ತ್ರಿ ಮಾಡಿರ ಅಂಗಿ ಹಾಕ್ಕೊಂಡು, ಮೆಟ್ಟು ಹಾಕ್ಕಂಡೇ ನಿಂತ್ಕ ಭಾವ ದನ ಮೇಯ್ಸಕೆ, ಯಾರಾನ ಬೇಡ ಅಂದ್ರಾ,,,"
    "ಹೌದೋ ಗಂಡೇ, ನೀನ್ ಹೇಳಿದಂಗೆ ಆರಂಭ ಮಾಡೋಕೆ ಬಂದ್ರೆ, ದನ ಇರಲಿ, ಹೊಲ ಕೂಡ ಎದ್ದು ಬಂದು ಆಯ್ತವೆ" ಎಂದವನೇ,
    "ಬಿಸಿಲೈತೆ, ನೀವು ನಡ್ರಿ, ನಾ ಇನ್ನೊಂದು ಸ್ವಲ್ಪ ಹೊತ್ತು ದನ ಮೇಯಿಸ್ಕೊಂಡು ಬತ್ತಿನಿ" ಅಂದು ಚಂದ್ರಣ್ಣನ ಕಳಿಸಿದ.

    ಹೀಗೆ ತುಟಿಯೊಳಗೇ ನಗುತ್ತಾ,  ಮುಂದೆ ಹೆಜ್ಜೆ ಹಾಕಿ ಊರ ಹತ್ತಿರ ಬಂದಾಗ, ಎಲ್ಲೋ ಹೊಲದ ಬಯಲಿಂದ ಕೈಯಲ್ಲಿ ಒಂದು ಕುಡುಗೋಲು ಹಿಡ್ಕೊಂಡು ಬರ್ತಿದ್ದ ತೋಟಪ್ಪ, "ಯಾರರೀ ಅದು, ಊರಿಗೆ ಬಂದ್ರೆ ತೊಡೆ ಮುರಿತಿವೆ" ಅಂದು ಗೇಲಿ ಮಾಡ್ಕೊಂಡು ಚಂದ್ರಣ್ಣಂಗೆ ಎದುರಾದ.

    ತೋಟಪ್ಪ, ಮಲ್ಲೇಶಪ್ಪ ಎಲ್ಲರೂ ಅಮಿತಂಗೆ ಅಣ್ಣಂದಿರು ಅಂದ್ರೆ ದೊಡ್ಡಪ್ಪನ ಮಕ್ಕಳು. ಹಾಗಾಗಿ ಭಾವಮಕ್ಕಳ ಸಲುಗೆಯಿಂದ ಬಹಳ ತಮಾಷೆಯಿಂದ ಇವರ ಮಾತುಗಳು ನೆಡಿತಿದ್ದವು.

"ನಮ್ಮನ್ನ ಯಾರಯ್ಯ ಇಲ್ಲಿ ಮುಟ್ಟೋರು..." ಎಂದು ಎದುರುತ್ತರ ಕೊಟ್ಟು, ಜಗಳ ಆಡೋ ರೀತಿಲೇ ಮಾತಾಡೋಕೆ ಶುರು ಮಾಡ್ಕೊಂಡು ಊರೊಳಗೆ ಬಂದ್ರು.

    ಊರಲ್ಲಿ ಮೊದಲಿಗೆ ಸಿಗೋದೆ ತೋಟಪ್ಪನ ಮನೆ, ಅವರಮ್ಮ ರುದ್ರಮ್ಮ. ಮನೆ ಮುಂದೇನೆ ಕುಂತಿದ್ದೊಳು,
    "ಏನ ಚಂದ್ರ ಈಗ ಬಂದೇನೋ, ಬಾ ಒಳಿಕೆ" ಅಂತ ಕರೆದು, ಕಾಲುತೊಳಿಯೋಕೆ ಒಂದು ಚಂಬು ನೀರು ತಂದು ಕೊಟ್ಟಳು.     "ಹೂ ಈಗ ಬಂದೆ, ಚೆನಾಗಿದಿಯೇನತ್ತೆ ನೀನು" ಅಂತ ಕೇಳಿ, ಒಳಗಡೆಗೆ ಹೋದ.

    "ಮಗಳು ಹುಟ್ಟಿದ್ರೆ ನನ್ನ ಮಗನಿಗೆ ಕೊಟ್ಟು ಮದುವೆ ಮಾಡ್ಬೇಕು, ಕಣಾ ಭಾವ" ಅಂದು ಕೇಳಿದ ತೋಟಪ್ಪನಿಗೆ,
    "ಈ ಕಾಡಹಳ್ಳಿಗೆ ಯಾರು, ಹೆಣ್ಣು ಕೊಡ್ತಾರೆ ಹೋಗಯ್ಯೋ" ಎಂದು ಛೇಡಿಸಿದ.
    "ಯಾಕಪಾ, ಹಾರ ಪೇಟ ಹಾಕ್ಕೊಂಡ್ ಬಂದು, ನಮ್ ಕಾಡಳ್ಳಿ ಹೆಣ್ಣನ್ನ ಮದುವೆ ಮಾಡ್ಕೊಂಡು ಹೋದೆ, ಆಗ ಎಲ್ಲಿ ಹೋಗಿತ್ತೋ ಗ್ಯಾನ" ಎಂದು ಅವನು ಕೇಳಿದ.
    "ನನ್ನ ಮದುವೆ ಆಗೋಕೆ, ಸಿಟಿ ಹೆಣ್ಣುಗಳೆಲ್ಲ ಇದ್ದರು ಕಣಪ್ಪ, ಏನೇನೊ ಆಗಿ ಗುಂಡಿಗೆ ಬಿದ್ದೆ ನೋಡು" ಅಂದ.
    "ಓಹೋಓ, ಈ ನವರಂಗಿ ಸುಳ್ಳಿಗೇನೂ ಕಮ್ಮಿ ಇಲ್ಲ ಕಣಯ್ಯಾ ಕುರುವಂಗಿ ಜನ" ಅಂದ್ಕೊಂಡು, ಕಾಫಿ ಸವಿಯತೊಡಗಿದರು.

    ಚಂದ್ರಣ್ಣ ಬರ್ತಿರೋದನ್ನ ದೂರದಿಂದಲೇ ನೋಡಿದ್ದ, ಅಮಿತಳ ಅಣ್ಣ ವಿಲಾಸಣ್ಣನ ಮಗಳು ಪವಿತ್ರ,
    "ಚಂದ್ರ ಮಾವ,,, ಈಗ ಬಂದ" ಅಂತ ಕೇಳ್ಕೊಂಡು, ದೊಡ್ಡಪ್ಪನ (ತೋಟಪ್ಪನ) ಮನೆಗೆ  ಓಡಿ ಬಂದವಳೇ ಚಂದ್ರಣ್ಣನ ಕಾಲುಗಳನ್ನು ತಬ್ಬಿಕೊಂಡು ನಿಂತಳು.
    ಅವಳನ್ನ ಎತ್ತಿಕೊಂಡು, "ಬರ್ತೀನಿ ಭಾವ" ಅಂದು ಹೇಳಿ ಮನೆಗೆ ಹೊರಟನು.
    "ನಡೀರಿ, ನಾನು ಕರ ಬಿಟ್ಕೊಂಡು, ಆಮೇಲಿಂದ ಅಲ್ಲಿಗೆ ಬತ್ತಿನಿ" ಅಂತ, ತೋಟಪ್ಪ ಅವರನ್ನ ಕಳಿಸಿಕೊಟ್ಟು ಹುಲ್ಲು ತರಲು ಹಿತ್ತಲಿನ ಕಡೆಗೆ ಹೆಜ್ಜೆ ಹಾಕಿದ.

    ಪವಿತ್ರ 7 ವರ್ಷದ ಹುಡುಗಿ, ಯಾರಾದ್ರು ಅವಳಿಗೆ "ನೀನು ಯಾರನ್ನ ಮದುವೆ ಆಗ್ತಿಯೇ, ಪವಿ?" ಅಂತ ಕೇಳಿದ್ರೆ, "ನಮ್ಮ ಚಂದ್ರ ಮಾವನ್ನ..." ಅಂತ ಹೇಳ್ಬಿಡ್ತಿದ್ದಳು, ಅಷ್ಟೊಂದು ಹಚ್ಚಿಕೊಂಡುಬಿಟ್ಟಿದ್ದಳು ಅವಳು ಚಂದ್ರಣ್ಣಂಗೆ.
    "ಏನವ್ವಾ, ಸೊಸೆ... ಏನ್ ಮಾಡ್ತಿದ್ದೆ..." ಅಂತ ಜೇಬಲ್ಲಿ ಇದ್ದ ಚಾಕಲೇಟು ಕೊಟ್ಟು ಚಂದ್ರಣ್ಣ ಕೇಳಿದ,
    "ಇಲ್ಲೇ ಆಟ ಆಡ್ತಿದ್ದ್ವಿ ಮಾವ" ಅಂತ ಹೇಳಿ, ಅವಳು ಮಾವನ್ನ ಮನೆಗೆ ಕರಕೊಂಡು ಹೋದಳು.

    ತೋಟಪ್ಪನ ಮನೇಲಿ ಸ್ವಲ್ಪ ಹೊತ್ತು ಕುಳಿತುಕೊಂಡು ಬಂದಿದ್ದರಿಂದ ದಣಿವು ಆರಿತ್ತು ಚಂದ್ರಣ್ಣಂಗೆ. ನಾದಿನಿ ಕೌಸಲ್ಯ (ಅಮಿತಳ ತಂಗಿ) ಬಂದು,  ಚಂದ್ರ ಭಾವನ್ನ ಮಾತಾಡ್ಸಿ ಕಾಫಿ ಮಾಡ್ತೀನಿ ಅಂದು, ಅಡುಗೆಮನೆಗೆ ಹೋಗತೊಡಗಿದಳು, "ಬೇಡ ಕಣವ್ವಾ, ಕಾಫಿ ರುದ್ರತ್ತೆ ಮನೇಲಿ ಕುಡಿದು ಬಂದೆ" ಅಂದು ಅವಳಿಗೆ ಹೇಳಿದನು. ಅಷ್ಟರಲ್ಲೇ ಪವಿ ತಂದುಕೊಟ್ಟ ಲುಂಗಿ ಪಂಚೆ ಉಟ್ಟುಕೊಂಡು, ನಡುಮನೆಯ ಪಣತದ ಮೇಲಿದ್ದ ದಿಂಬನ್ನ ಬೆನ್ನಿಗೆ ಒರಗಿಸಿಕೊಂಡು ಕುಳಿತುಕೊಂಡ. ಅಮಿತ ಇನ್ನು ಮಧ್ಯಾಹ್ನದ ನಿದ್ದೆಯಿಂದ ಎದ್ದಿರಲಿಲ್ಲವಾದ್ದರಿಂದ, ಇವನೂ ಕೊಂಚ ನಿದ್ರೆಗೆ ಜಾರಿದ.                                                                        *   *   *

    ದನಕರುಗಳೆಲ್ಲಾ ಗೊರಸು ಗೆಜ್ಜೆಗಳ ಸದ್ದನ್ನು ಮಾಡುತ್ತಾ, ತಮ್ಮ ಆಹ್ವಾನಕ್ಕಾಗಿ ಕೊಟ್ಟಿಗೆ ಬಾಗಿಲು ತೆರೆಯಬೇಕಾಗಿ ಮನೆಯವರಿಗೆ ಸೂಚನೆ ಕೊಡುವಂತೆ ದಡಬಡಾಯಿಸಿ ನುಗ್ಗಿ ಬರತೊಡಗಿದವು. ಅವುಗಳ ಹಿಂದೆ "ಏ ಕೌಸಿ, ಆ ಹೊರಿಕರ ಹಸಿನ ಕೊಟ್ಟಿಗೆಗೆ ನುಗ್ಗತೈತೆ ಹಿಡಕಳೆ ಅದ,,," ಅಂತ, ಹಸುಗಳಿಗಾಗಿ ಹಾಕಿದ್ದ ಹಸಿರು ಅಕ್ಕಿ ಹುಲ್ಲನ್ನು ತಿನ್ನಲು ಓಡುತ್ತಿದ್ದ ದೊಡ್ಡ ಹೊರಿಕರುವನ್ನು ಹಿಡಿಯಲಿಕ್ಕೆ ಹೇಳಿ, ಕೂಗಿಕೊಂಡು ಯಾರೋ ಬರುತ್ತಿದ್ದರು. 
    ಹಾಗೇ ಯಾರೋ ಒಂದಿಬ್ಬರು ಮನೆಯ ಜಗುಲಿಯೊಳಗೆ ಬಂದು ಕುಕ್ಕೆ, ಕುಡ್ಲುಗಳನ್ನು ನೆಲಕ್ಕೆ ಹಾಕಿದರು. ಕೌಸಲ್ಯ, ಚೆಂಬಲ್ಲಿ ನೀರು ತಂದು ಅಲ್ಲಿದ್ದವರಿಗೆ ಕೊಟ್ಟಳು. ಯಾರೋ ಒಬ್ಬರು ನಡುಮನೆಯಿಂದಾಸಿ ಅಡುಗೆ ಕೋಣೆಗೆ ಹೋದರು. 
    ಇದೆಲ್ಲವೂ ಬರಿ ಕೇಳಿಬರುತ್ತಿದ್ದ ಶಬ್ಧಗಳಿಂದಾಗಿಯೇ ಚಂದ್ರಣ್ಣನ ಕಣ್ಣುಗಳಲ್ಲಿ ಮಂಪರು ಕನಸಿನಂತೆ ಮೂಡಿ ಬರುತ್ತಿದ್ದ ಚಿತ್ರಣಗಳು.
* * * * * * * * *

      ಆಗ ತಾನೇ ಕಣ್ಣು ಮುಚ್ಚಿದ್ದ ಚಂದ್ರಣ್ಣ ಮತ್ತೆ ಕಣ್ಣುಬಿಟ್ಟಾಗ ಕತ್ತಲಾಗಿ ಮನೆಯಲ್ಲಿ ದೀಪ ಉರಿಯತೊಡಗಿತ್ತು, "ಶಿವ ಶಿವಾ... ಪರಮಾತ್ಮ" ಅಂತ ಕಣ್ಣುಜ್ಜಿಕೊಂಡು ಎದ್ದಾಗ, ಕೆಳಗಡೆ ನೆಲದಲ್ಲಿ ಹಾಸಿದ್ದ ಚಾಪೆಯ ಮೇಲೆ ಕುಳಿತು ಅವನ ಮಾವ ರಾಜಣ್ಣ, ಪವಿತ್ರ, ಅಮಿತಳ ಅಣ್ಣ ವಿಲಾಸಪ್ಪ, ಚಂದ್ರಣ್ಣನ ಮಾತಾಡ್ಸೋಕೆ ಬಂದಿದ್ದ ತೋಟಪ್ಪ ಕುಳಿತು ಅದೂ ಇದು ಹರಟುತ್ತಾ, ಸಾಯಂಕಾಲದ ತಿಂಡಿಗಾಗಿ ಮಾಡಿದ್ದ ಚುರುಮುರಿಯನ್ನ ಮೆಲ್ಲುತ್ತಾ ಕುಳಿತಿದ್ದರು.
    "ಏನ್ ನೆಂಟರು, ಒಳ್ಳೆ ನಿದ್ದೆ ಮಾಡೆಬಿಟ್ಟ್ರಲ್ಲ..." ಎಂದು ತೋಟಪ್ಪ ಕೇಳಿದಾಗ, "ಸ್ವಲ್ಪ ಸುಸ್ತು ಹರೀತು ನೊಡಿ..." ಎಂದು ಉತ್ತರಿಸಿ, ಎಲ್ಲರೊಡನೆ ಕುಶಲೋಪರಿ ಮಾತಾಡಿದನು. ಅಲ್ಲಿಂದ ಎದ್ದು, ಅಡುಗೆ ಮನೆಗೆ ಹೋಗಿ, ಅಲ್ಲಿ ನಿಧಾನವಾಗಿ ಸಾವರಿಸಿಕೊಂಡು ಕುಳಿತಿದ್ದ ಅಮಿತಳನ್ನು ನೋಡಿ ನಕ್ಕು, ಮುಖ ತೊಳೆಯಲಿಕ್ಕೆ ಬಚ್ಚಲು ಮನೆಗೆ ಹೋದನು.

    "ಮಾವಾ, ನಾಳೆನೂ ಇಲ್ಲೇ ಇರ್ತಿಯಾ,.." ಅಂತ ಕೇಳಿಕೊಂಡು ಪವಿತ್ರ ಹಿಂಬಾಲಿಸಿಯೇ ಬಂದಳು.
    "ಹೂ ಕಣಾವ್ವಾ ಇರ್ತೀನಿ, ಯಾಕೆ ಹೇಳು...?" ಎಂದು ಮುಖ ತೊಳೆಯುತ್ತಲೇ ಕೇಳಿದನು.
    "ನಾಳೆ ಬೆಳಿಗ್ಗೆ ಕಾವಲಿಗೆ ಹೋಗಿ ಚೊಟ್ಟೆ ಹಣ್ಣು ಕುಯ್ಕೊಂಡು ಬರುವಾ..?" ಎಂದು ನುಲಿಯುತ್ತ ನುಡಿದಳು.
    "ಅಲ್ಲ್ವೇ, ನಿಂಗೆ ಸೇಬು ದ್ರಾಕ್ಷಿ ಎಲ್ಲ ಮಧ್ಯಾಹ್ನ ತಾನೇ ತಂದು ಕೊಟ್ಟಿದೀನಿ, ಆದ್ರು ಚೊಟ್ಟೆ ಹಣ್ಣಿನ ಚಟ ಬಿಡಲಿಲ್ಲ ನೋಡು ನೀನು... ಆಯ್ತು ಹೋಗೋನಂತೆ.., ನೀನು ಮುಖ ತೊಳ್ಕೊಂಡ..." ಅಂತ ಕೇಳಿದ.
    ಅದಕ್ಕವಳು "ಹೋ, ನನ್ದಾಗ್ಲೆ ಕಾಫಿನೂ ಆತು..." ಅಂದಳು.
    "ನಿಮ್ಮ ಚಿಕ್ಕಪ್ಪ, ಬಂದನಾ..." ಅಂತ ಅಮಿತಳ ತಮ್ಮ ವಿರುಪಾಕ್ಷನ ಬಗೆಗೆ ಕೇಳಿದ.
    "ವಿರುಪಣ್ಣಯ್ಯ, ಸೌದೆಗೆ ಇವತ್ತು ಒಂದು ಮರ ಕಡಿಯಕೆ ಹೋಗೈತೆ,.." ಎಂದು, ಅಮಿತಳ ಬಾಣಂತನಕ್ಕೆ ಸೌದೆಯ ಸಲುವಾಗಿ ಒಂದು ಒಣಗಿದ್ದ ಜಾಲಿ ಮರ ಕಡಿಯೋಕೆ ಹೋಗಿರುವ ವಿಷಯ ತಿಳಿಸಿದಳು.
    "ಓ, ಹೌದಾ" ಎನ್ನುತ್ತಿರುವಂತೆಯೇ, ಹಿತ್ತಿಲಕಡೆ ಗಾಡಿ ಬಂದು ನಿಂತ ಶಬ್ಧವಾಯಿತು. ಅದರೊಟ್ಟಿಗೆಯೇ
    "ಅವ್ವಾ, ಅಣಯನ್ನ ಕಳಿಸೇ ಸೌದೆ ಇಳಿಸಕೆ..." ಅಂತ ವಿರುಪ ಕೂಗಿದನು.

    ಆಗ ಒಳಗೆ ಕುಳಿತಿದ್ದ ವಿಲಾಸಪ್ಪ, ರಾಜಣ್ಣ, ದೇವೀರವ್ವ,  ತೋಟಪ್ಪ ಎಲ್ಲರೂ ಹಿತ್ತಿಲಿನ ಕಡೆಗೆ, ಬೆಳದಿಂಗಳಿದ್ದರೂ ಒಂದು ಲಾಟೀನು ಹಿಡಿದು ಹೊರಟರು. ಚಂದ್ರಣ್ಣನೂ ಟವೆಲ್ಲು ಹೆಗಲಿಗೆ ಹಾಕಿಕೊಂಡು, ಪವಿತ್ರನ್ನ ಎತ್ತಿಕೊಂಡು ಹಿತ್ತಿಲ ಕಡೆಗೆ ಹೋದನು.
* * * * * * * * *

      ಊರಲೆಲ್ಲರಿಗೂ, ದಿನ ಪ್ರವಚನದ ದೆವ್ವದ ಕಥೆಗಳಿಗೆ ಸ್ಥಿತಿಚಿತ್ರವೆಂಬಂತೆ, ಆ ಊರಿನ ಸುತ್ತಲೂ ಹೆಚ್ಚು ಹುಣಸೆ, ನೇರಳೆ, ಹಲಸು, ಆಲದ ಮರಗಳೇ ಇದ್ದವು. ಆ ಹಿತ್ತಿಲು ಸ್ವಲ್ಪ ದೊಡ್ಡದೇ ಇತ್ತಾದರೂ ಒಂದು ತುಸು ದೂರದ ಮೂಲೆಯಲ್ಲಿ ತಿಪ್ಪೆ, ಇನ್ನೊಂದು ಕಡೆಗೆ ಎರಡು ಬೃಹತ್ ಹಲಸಿನ ಮರಗಳು, ಮತ್ತೊಂದು ಕಡೆ ಸಾಲಾಗಿ ಹುಟ್ಟಿ ಮರವಾಗಿದ್ದ ಮೂರ್ನಾಲ್ಕು ಸೀಬೆ ಮರಗಳು, ನಡುವೆ ನಾನೂ ಇರುವೆ ಎಂಬಂತೆ ಹಬ್ಬಿ ಬೆಳೆದು ನಿಂತಿದ್ದ ಸೀಮೆ ಸೀಗೆ ಗುತ್ತಿಗಳು, ಸ್ವಲ್ಪ ಕತ್ತಲಾದರೂ ಒಬ್ಬರೇ ಹೋಗಲು ಭಯವಾಗುವಂತ ಜಾಗ ಎನ್ನುವಂತಿತ್ತು. ಚಂದ್ರಣ್ಣ ಅಲ್ಲಿಗೆ ಬಂದಾಗ, ಆ ಬೆಳದಿಂಗಳ ಬೆಳಕಲ್ಲೇ, ಇಬ್ಬರು ಗಾಡಿಯಿಂದ ಸೌದೆ ಕೆಳಗೆ ಎಸೆಯುತ್ತಿದ್ದರು, ಲಾಟೀನು ಹಿಡಿದು ದೇವೀರವ್ವ ಕುಳಿತಿದ್ದಳು. ಆ ಬೆಳಕಿನಲ್ಲಿ ಕುಳಿತಿದ್ದ ವಿರುಪ, ಕೊಡಲಿ ಕೈಜಾರಿ ಉಗುರು ಹಾರಿ ಹೋಗಿದ್ದ ಬಲಗಾಲಿನ ಹೆಬ್ಬೆರಳಿಗೆ ಸುತ್ತಿದ್ದ ಬಟ್ಟೆಯನ್ನು ಬಿಡಿಸುತ್ತಿದ್ದನು. ಮಗನ ಮೇಲೆ ಪ್ರೀತಿಯೋ, ಸಿಟ್ಟೋ ಅಥವಾ ಮಮತೆಯೋ ಏನೆಂದು ತಿಳಿಯಲಾರದಂತೆ ದೇವೇರವ್ವ,"ಇವನೊಬ್ಬ ದಯ್ಯ, ದಿನಕ್ಕೊಂದುಕಿತ ರಕ್ತ ಚೆಲ್ಲದೇ ಹೋದ್ರೆ, ತಿಂದಿದ್ದು ಅರಗಾದೆ ಇಲ್ಲ" ಎಂದು ಬಯ್ಯುತ್ತಿದ್ದಳು.

     ಅಲ್ಲಿಂದ ವಿರುಪಾಕ್ಷನ್ನ ಕರ್ಕೊಂಡು, ಪವಿನೂ ಎತ್ತಿಕೊಂಡು ಚಂದ್ರಣ್ಣ ಮನೆಗೆ ಬಂದವನೇ, ಸೀದಾ ಅಡುಗೆ ಮನೆಗೆ ಹೋಗಿ ಅಮಿತಳ ಪಕ್ಕ ಕುಳಿತುಕೊಂಡ. ಒಂದೇ ಸಾರಿ ಇಪ್ಪತ್ತು ಜನ ಊಟಕ್ಕೆ ಕೂರಬಹುದಿತ್ತು ಆ ಅಡುಗೆ ಮನೇಲಿ, ಒಂದು ಮೂಲೆಗೆ ದೊಡ್ಡ ಓಲೆ, ಕಪ್ಪಗಾಗಿದ್ದ ದೊಡ್ಡ ಹೊಗೆ ಗೂಡು, ಪಕ್ಕದಲ್ಲೇ ಸೌದೆಯ ಗೂಡು, ಮಿರಿಮಿರಿ ಮಿಂಚುತ್ತಿದ್ದ ಕೆಂಡದ ಕಿಡಿ ರಾಶಿಯ ಮುಂದೆ ಕೌಸಲ್ಯ ಅಡುಗೆ ಮಾಡೋಕೆ ಕೂತಿದ್ದಾಳೆ, ಸ್ವಲ್ಪ ಪಕ್ಕದಲ್ಲಿ ಚಾಪೆ ಮೇಲೆ, ತಲೆಗೆ ಟೋಪಿ ಕಟ್ಟಿಕೊಂಡು, ಶಾಲು ಹೊಚ್ಚುಕೊಂಡು ಅಮಿತ ಕೂತಿದ್ದಾಳೆ.
    "ರೀ,,, ನಾಳೆ ರಜೆ ನಾ" ಅಂತ ಕೇಳಿದ್ಲು ಅಮಿತ.
    "ಹೂ, ರಜೆ ಕೇಳಿದೀನಿ" ಅಂದ.
    "ಹೇಗಿದಿಯ ನೀನೀಗ, ನೋವು ತುಂಬಾ ಇದೀಯ?" ಅಂತ ಕೇಳಿದ.
    "ಇಲ್ಲ, ತುಂಬಾ ನೋವೇನಿಲ್ಲ.." "ಡಾಕ್ಟರ್ ಹೇಳಿದ್ದ ದಿನ ಮುಗಿತಲ್ಲ, ಅದಿಕ್ಕೆ ಸ್ವಲ್ಪ ಹೆದಿರಿಕೆ ಅಷ್ಟೇ" ಅಂದಳು.
    "ಏನಾಗೊಲ್ಲ ಬಿಡು, ನಾಳೆ ನಾವೇ ಆಸ್ಪತ್ರೆಗೆ ಹೋಗ್ತಿವಲಾ... ಏನು ಹೇಳ್ತಾರೆ ನೋಡೋಣಂತೆ" ಎಂದನು ಚಂದ್ರಣ್ಣ.

    "ಭಾವ, ನಾನು ಹೇಳಿದ್ದ ಬಳೆಗಳ ತಂದ್ರಾ..." ಅಂತ ಕೌಸಲ್ಯ ಚುರುಮುರಿಯ ಬೊಟ್ಟಲನ್ನು ಚಂದ್ರಣ್ಣಗೆ ಕೊಟ್ಟಳು, ಅದಕ್ಕವನು "ನಾನು ಮರೆತುಬಿಟ್ಟೆ ಕಣವ್ವಾ, ಇನ್ನ ಹದಿನೈದು ದಿನಕ್ಕೆ ಮತ್ತೆ ಬರ್ತಿನಲ್ಲ ಆವಾಗ ತರ್ತೀನಂತೆ ಬಿಡು" ಎಂದ.
    "ಅವರಿಗೆ ಹೇಗೇ ಗೊತ್ತಾಗುತ್ತೆ, ಬಳೆ, ಬಿಂದಿ ಎಲ್ಲ... ನಾನೇ ನಿನ್ನ ಒಂದಿನ ಹಾಸನಕ್ಕೆ ಕರ್ಕೊಂಡು ಹೋಗ್ತೀನಿ, ಏನೇನು ಬೇಕೋ ಅದೆಲ್ಲ ತಗೊಳ್ವಂತೆ, ಆಯ್ತಾ..." ಅಂದಳು ಅಮಿತ.
    ಅಷ್ಟರಲ್ಲೇ ಬಿಸಿ ಬಿಸಿ ಬೆಲ್ಲದ ಕಾಫೀ ಚಂದ್ರಣ್ಣನ ಮುಂದೆ ಬಂತು, ಬೆಚ್ಚಗಿನ ಕೋಣೆಯಲ್ಲಿ ಪ್ರೀತಿಯ ಹೆಂಡತಿಯ ಪಕ್ಕಕುಳಿತು ಮುದವಾಗಿ ಮಾತಾಡುತ್ತ, ಕಾಫೀ ಸವಿಯತೊಡಗಿದನು.
    ಮುಸ್ಸಂಜೆ ತನ್ನಷ್ಟಕ್ಕೆ ತಾನೇ ಮುಂದುವರಿದು, ಕತ್ತಲಾಯಿತು.
* * * * * * * * *

    ತಿಮ್ಮನಹಳ್ಳಿಯ ಮನೆ ಅಮಿತಳ ಅಜ್ಜನ ಕಾಲದ್ದು, ದೊಡ್ಡ ಮಣ್ಣಿನ ಗೋಡೆಗಳು, ದಪ್ಪ ದಪ್ಪ ತೊಲೆಗಳು, ವಿಶಾಲ ಜಗುಲಿ, ನಡುಮನೆಗಳು ಇದ್ದಂತೆಯೇ, ಗಂಡಸರೆಲ್ಲಾ ಹರಟುತ್ತಾ ಕೂರಲು ಒಂದು ಕೋಣೆ ಇತ್ತು. ಅಲ್ಲಿ ಅಜ್ಜಂದಿರೆಲ್ಲ ಬೀಡಿ ಸೇದುತ್ತ, ಹುಡುಗರುಗಳು ಕವಡೆ ಆಡುತ್ತಾ, ಅದು-ಇದು ಹರಟುತ್ತಾ ರಾತ್ರಿ ಊಟದ ಮೊದಲು ದಣಿವಾರಿಸಿಕೊಳ್ಳುತ್ತಿದ್ದರು.
    ಚಂದ್ರಣ್ಣ ಅಲ್ಲಿಗೆ ಬಂದಾಗ, ಗಾಡಿಯಿಂದ ಸೌದೆ ಇಳಿಸಿ, ಎಲ್ಲರು ಅಲ್ಲಿ ಬಂದು ಕೂತಿದ್ದರು.  ತಿಳಿಹಳದಿ ಬಣ್ಣ ಚೆಲ್ಲುವ ವಿದ್ಯುತ್ ದೀಪ ಮಿರಮಿರ ಉರಿಯುತ್ತಿತ್ತು, ಸಣ್ಣಗೆ ಶೀತದ ಗಾಳಿ ಕಿಟಕಿಯಿಂದ ಬೀಸುತಿತ್ತು. ಅಲ್ಲಿದ್ದ ಭಾವ-ಮಕ್ಕಳು ಚನ್ದ್ರಣ್ಣನಿಗೆ "ಬನ್ನಿ ಭಾವ, ಒಂದಾಟ ಆಡುವ" ಅಂದು ೫-ಮನೆಯ ಚೌಕ ಬರಹದ ಆಟಕ್ಕೆ ಕೂರಿಸಿಕೊಂಡರು.
    ತೋಟಪ್ಪ ಆಗ, "ಅದೇನು ನೌಕರಿ ಅಳಿಮಯ್ಯನಯ್ಯಾ ನೀನು, ಚಿಕ್ಕ ಹುಡುಗರಂಗೆ ಆಡ್ತಿದಿಯ", "ದುಡ್ಡು ಕಟ್ಟಿ ಆಡಬಾರದಾ?" ಅಂತ ಕೆಣಕಿದನು.
    "ನಾನು ಕಟ್ಟುತೀನಪ್ಪ ನೀವು ಜೇಬಿಂದ ದುಡ್ಡು ತೆಗಿಬೇಕಲ್ಲ" ಎಂದನು.
    "ಯೋ, ಅದೆಷ್ಟು ಆಡ್ತೀಯ ನೋಡೆಬಿಡ್ತಿನಿ, ಆಡಪ್ಪ ನೀನು" ಎಂದು, ಹತ್ತು ರೂಪಾಯಿಯ ನೋಟು ಎತ್ತಿ
ಮಧ್ಯಕ್ಕಿಟ್ಟುಬಿಟ್ಟನು. "ನೂರು ರೂಪಾಯಿ ಇಟ್ಟು ಆಡ್ರಿ ನೆಂಟ್ರೆ, ಗಂಟಲ್ಲಿ ಇಟ್ಟಿರೋ ದುಡ್ಡೆಲ್ಲ ಹೊರಗೆ ತೆಗಿಸ್ತೀನಿ ಇವತ್ತು" ಅಂದು ಚಂದ್ರಣ್ಣ ಆಟ ಶುರು ಮಾಡಿದನು. ಮೂಲೇಲಿ ಕೂತಿದ್ದ ರಾಜಣ್ಣ, ಮತ್ತೊಬ್ಬ ಅಜ್ಜ ಇವರ ಜಗಳವನ್ನು ನಗುತಾ ನೊಡುತಿದ್ದರು.
    ಯಾರು ಸೋತರೋ ಯಾರು ಗೆದ್ದರೋ ಯಾರಿಗೂ ಗೊತ್ತಿಲ್ಲ, ಆದರೆ ಕೌಸಲ್ಯ ಊಟಕ್ಕೆ ಕರೆಯುವ ಹೊತ್ತಿಗೆ ಎಲ್ಲರೂ ನಕ್ಕು ನಕ್ಕು ಸೋತಿದ್ದರು.
    ಎಲ್ಲರೂ ಊಟಕ್ಕೆ ಅಡುಗೆಯ ಮನೆಗೆ ಹೋಗುವ ಹೊತ್ತಿಗೆ ಅಮಿತ ಊಟ ಮಾಡಿ, ಹೊರಬಂದಳು. ಎಡೆ-ಮಣೆ ಮೇಲೆ ಕಂಚಿನ ತಟ್ಟೆಯಲ್ಲಿ ಬಿಸಿ ಮುದ್ದೆ, ತುಪ್ಪದ ಅನ್ನವನ್ನು ಚಪ್ಪರಿಸಿ ಸವಿದು, ಮಲಗಲು ಅಟ್ಟ ಸೇರಿದನು ಚಂದ್ರಣ್ಣ.
    ಕಂದು ಕೈ-ಹೆಂಚಿನ ಮಾಳಿಗೆಯ ಕೆಳಗೆ, ಬೆಚ್ಚಗಿನ ಕಂಬಳಿಯ ಹೊದ್ದು ಘುಯ್-ಗುಡುತಿದ್ದ ಜೀರಿಂಬೆಗಳ ಸದ್ದಲ್ಲಿ ತಣ್ಣಗೆ ಚಂದ್ರಣ್ಣ ನಿದಿರೆಗೆ ಜಾರಿದನು, ಆಗಸದ ಚಂದ್ರಣ್ಣ ತನ್ನ ರಾತ್ರಿ ಪಾಳಿಯನ್ನಾಗಲೇ ಶುರು ಮಾಡಿದ್ದನು.
* * * * * * * * *

    ಇರುಳು ಹನ್ನೊಂದು ಘಂಟೆಯ ಜಾವ, ಅಮಿತಳಿಗೆ ಹೆರಿಗೆ ನೋವು ಶುರುವಾಗತೊಡಗಿತು, ತುಸು ತುಸುವೇ ನರಳುತ್ತ ಅಳತೊಡಗಿದಳು. ಆಗ ಅಮಿತಳ ಅವ್ವ ದೇವೀರವ್ವ, ಅಮಿತಳ ಅಣ್ಣನನ್ನು ಕಳಿಸಿ ರುದ್ರಮ್ಮಳನ್ನು ಕರೆಸಿದಳು. ರುದ್ರಮ್ಮ ತಿಮ್ಮನಹಳ್ಳಿಯ ಬಹಳಷ್ಟು ಹೆಣ್ಣು ಮಕ್ಕಳಿಗೆ ಹೆರಿಗೆ ಮಾಡಿಸಿ, ಬಾಣಂತನ ಮಾಡಿ ಪಳಗಿದ್ದ ಕೈ. ಆಕೆಯ ಸೂಲಗಿತ್ತಿತನದ ಅನುಭವ ಯಾವ ವೈದ್ಯರಿಗೂ ಕಮ್ಮಿ ಇರಲಿಲ್ಲ.
    ಕರೆದ ಕೂಡಲೇ ಬಂದಳು ರುದ್ರಮ್ಮ, ಎಷ್ಟಾದರು ಅಮಿತ, ಅವಳೇ ಆಡಿಸಿ ಬೆಳೆಸಿದ ಕೂಸಲ್ಲವೇ. ರುದ್ರಮ್ಮನ ಹಿಂದೆಯೇ ತೊಟಪ್ಪನೂ ಓಡಿ ಬಂದ. ರುದ್ರಮ್ಮ ಬಂದವಳೇ ಅಮಿತಳ ನಾಡಿ ನೋಡಿ, ಹೊಟ್ಟೆಯ ನೋವು, ನರಳಾಟ ನೋಡಿ. "ಎಲ್ಲ ಒಳ್ಳೆದಾದ್ರೆ, ಈಗಲೇ ಹೆರಿಗೆ ಆಗಬಹುದು" ಅಂದಳು."ಮನೇಲೆ ಆದ್ರು ಆಗಬಹುದು, ಇಲ್ಲ ಬೆಳಿಗ್ಗೆ ಹಾಸನಕ್ಕೆ ಹೋಗಣ" ಅಂತ ಎಲ್ಲರಿಗು ಹೇಳಿ. ಅಮಿತಳ ನೆತ್ತಿ ಸವರುತ್ತ ಸಮಾಧಾನ ಹೇಳತೊಡಗಿದಳು.
    ಎಲ್ಲವನ್ನೂ ಕೇಳುತಿದ್ದ ಚಂದ್ರಣ್ಣ, ಮುಂದೇನೋ ಎಂದು ಚಡಪಡಿಸತೊಡಗಿದನು.

    ಒಂದೆರಡು ಘಂಟೆ ಹಾಗೋ ಹೀಗೋ ಪ್ರಯತ್ನಿಸಿ ನೋಡಿದ ರುದ್ರಮ್ಮ, ಹೆರಿಗೆಯಾಗೋದು ತುಸು ಕಷ್ಟ ಅನಿಸತೊಡಗಿ, ಈಗಿಂದೀಗಲೇ ಹಾಸನದ ಆಸ್ಪತ್ರೆಗೆ ಹೊರಡೋಣವೆಂದು ಎಲ್ಲರಿಗು ತಿಳಿಸಿದಳು.
* * * * * * * * *

    ಅರೆನಿದ್ರೆಯಿಂದ ಎದ್ದ ಎತ್ತುಗಳು ತಮಗೆ ಕಾಣುತಿದ್ದ ಮೂರ್ನಾಲ್ಕು ಲಾಟೀನು ಕಟ್ಟಿದ್ದ ಗಾಡಿ ನೊಡಿ ಎಲ್ಲಿಗೋ ಪಯಣ ಅನಿವಾರ್ಯ ಎಂಬಂತೆ ಗಾಡಿಯ ನೊಗಕ್ಕೆ ಭುಜ ಕೊಟ್ಟು ನಿಂತುಕೊಂಡವು. ಎತ್ತನ್ನು ಕಟ್ಟುವ ಮೊದಲೇ ಗಾಡಿಗೆ ಕಮಾನು ಕಟ್ಟಿ, ಶೀತವಾಗದಂತೆ ರಾಗಿಹುಲ್ಲನ್ನು ಹಾಸಿ, ಅದರ ಮೇಲೆ ಹಾಸಿಗೆ, ಕೌದಿಗಳನ್ನ ಹಾಸಿದ್ದರು. ಚಂದ್ರಣ್ಣ ಮತ್ತು ತೋಟಪ್ಪ ಅಮಿತಳನ್ನು ಎತ್ತಿಕೊಂಡು ಬಂದು ಗಾಡಿಯಲ್ಲಿ ಮಲಗಿಸಿದರು. ರುದ್ರಮ್ಮ ಮತ್ತು ದೇವಿರಮ್ಮ, ಹತ್ತಿ ಬಟ್ಟೆಗಳನ್ನು ಜೊತೆಗೆ ಇಟ್ಟುಕೊಂಡು ಗಾಡಿಯಲ್ಲಿ ಅಮಿತಳ ತಲೆಕಡೆಗೆ ಒಬ್ಬರು, ಕಾಲಿನ ಬಳಿ ಒಬ್ಬರು ಕೂತುಕೊಂಡರು. ತೋಟಪ್ಪ ಒಂದು ಲಾಟೀನು ಹಿಡಿದು ಬೆಳಕು ತೋರುತ್ತ ಮುಂದೆ ನೆಡೆದ, ಹಿಂದೆಯೇ ವಿಲಾಸಣ್ಣ ಮೆತ್ತಗೆ ಗಾಡಿ ಹೊಡೆಯತೊಡಗಿದ, ಚಂದ್ರಣ್ಣ ಗಾಡಿಯ ಹಿಂದಿದ್ದ ಲಾಟೀನು ಬೆಳಕಲ್ಲಿ ಶಾಲು ಹೊದ್ದು ಹೆಜ್ಜೆ ಹಾಕಿದ. ಅಮಿತಳ ನರಳಾಟ ಮಾತ್ರ ಅವನ ಮನಸ್ಸನ್ನು ಘಾಸಿ ಮಾಡುತ್ತಿತ್ತು. 

    ಇತ್ತ ದಾರಿಯಲ್ಲಿ ಗಾಡಿಯ ಬೆಳಕು ಮರೆಯಾಗುವವರೆಗೂ ಜಗುಲಿಯಲ್ಲೇ ನಿಂತಿದ್ದು, ಕೌಸಲ್ಯ ಬಾಗಿಲು ಹಾಕಿಕೊಂಡು ಒಳಗೆ ಹೋಗಿ ದೇವರಿಗೆ ದೀಪ ಹಚ್ಚಿ ಕೈ ಮುಗಿದು ಮಲಗಿದಳು.
* * * * * * * * *

    ಚಳಿಗಾಳಿ ಮೈ ಸೀಳಿ ಸೀದಾ ಎದೆಯ ಗೂಡನ್ನೇ ನಡುಗಿಸುವಂತೆ ಬೀಸುತಿತ್ತು. ಮಣ್ಣಿನ ದಾರಿಗೆ ಗಾಡಿ ತೂಗಿ ತುಳುಕಿ ಸಾಗುತಿತ್ತು, ಎಲ್ಲರ ಮನಸ್ಸೂ ಏನೋ ಎಂತೋ ಎಂದು ತೊಯ್ದಾಡುತ್ತಿತ್ತು. ಮಧ್ಯಾಹ್ನ ಬರುವಾಗ ಬಿಸಿಲಿಂದ ಮನಸನ್ನು ಬೆಚ್ಚಗೆ ಮಾಡಿದ್ದ ಅದೇ ದಾರಿ, ಈಗ ಚಂದ್ರಣ್ಣನಿಗೆ ಚಳಿಯಿಂದ ಮನಸ್ಸನ್ನು ಕಲ್ಲು ಮಾಡುತಿತ್ತು. ಹೊಂಡ-ಗುಂಡಿಗಳ ದಾರಿಯನ್ನು ದಾಟಿ, ಗಾಡಿ ಕಲ್ಕೆರೆ ತಿರುವಿಗೆ ಬಂದು ನುಣ್ಣನೆಯ ಟಾರು ರೋಡಲ್ಲಿ ಸಾಗತೊಡಗಿತು. ಗಾಡಿಯ ಸದ್ದು ತುಸು ಕಡಿಮೆಯಾಗುತ್ತಾ ಬರುತಿತ್ತು, ಅಮಿತಳ ನೋವಿನ ಆರ್ತನೆ ಏರುತಿತ್ತು. ಹೆರಿಗೆಯ ಸಮಯದಲ್ಲಿ ಹೆಂಡತಿಯ ನರಳಾಟ, ಎಂತಹ ಕಲ್ಲು ಮನಸಿನ ಗಂಡನಿಗೂ ಹೃದಯವನ್ನು ನೀರಾಗಿಸಿಬಿಡುತ್ತದೆ, ಹೀಗಿರುವಾಗಿ ಹಾಲು ಮನಸಿನ ಚಂದ್ರಣ್ಣನ ಹೃದಯವನ್ನು ಹಿಂಡಿ ಹಿಪ್ಪೆ ಮಾಡುತ್ತಿತ್ತು.
* * * * * * * * *

    ಹಾಸನ ಇನ್ನೂ ಹತ್ತು ಮೈಲು ದೂರದಲ್ಲಿತ್ತು, ರುದ್ರಮ್ಮ ಗಾಡಿಯ ತೆರೆಯನ್ನು ಸರಿಸಿ, "ಮಗಾ ಚಂದ್ರ, ಇಲ್ಲೇ ರೋಡಿನ ಪಕ್ಕ ಯಾವುದಾನ ಮನೆ ಸಿಕ್ಕರೆ ಅಲ್ಲಿ ಗಾಡಿ ನಿಲ್ಲಿಸಿ, ಮನೆಯವರ ಎಬ್ಬಿಸಿ ನೀರು ಕಾಯಿಸಿಕೊಂಡು ಬಾ" ಎಂದಳು. ಪುಣ್ಯಕ್ಕೆ ಒಂದು ಹತ್ತು ಮಾರು ದೂರದಲ್ಲೇ ಒಂದು ಮನೆಯೇನೋ ಕಾಣಿಸಿತು.

    ಸಮಯ ಬೆಳಗಿನ ಜಾವ ಸುಮಾರು ಆರು ಘಂಟೆ, ಇಬ್ಬನೆಯ ಮಳೆಯಲ್ಲಿ ಬೆಳಕು ಕಳೆದು ಹೋಗಿತ್ತು. ಚಂದ್ರಣ್ಣ ಓಡಿ ಹೋಗಿ, ಮನೆಯವರನ್ನು ಎಬ್ಬಿಸಿ, ಪರಿಸ್ಥಿತಿಯನ್ನು ತಿಳಿಸಿ ಬಿಸಿನೀರು ಬೇಕೆಂದು ಬೇಡಿಕೊಂಡ. ಗಡಿಬಿಡಿಗೊಂಡ ಆ ಮನೆಯವರು, ಅವನಿಗೆ ಸಮಾಧಾನ ಹೇಳಿ, ಓಲೆ ಹಚ್ಚಲು ಶುರು ಮಾಡಿದರು.

    ಈಗ ಪರಿಸ್ಥಿತಿ ನಿಜಕ್ಕೂ ಎಲ್ಲರಿಗೂ ಸವಾಲಿನದಾಗಿತ್ತು, ಗಾಡಿಯ ಕಿರಿದಾದ ಜಾಗದಲ್ಲಿ ಅಮಿತಳಿಗೆ ರುದ್ರಮ್ಮ ಹೆರಿಗೆ ಮಾಡಿಸಬೇಕಿತ್ತು, ಅಮಿತಳ ಒದ್ದಾಟಕ್ಕೆ ಗಾಡಿ ತೊಯ್ದಾಡದಂತೆ ವಿಲಾಸಣ್ಣ ಗಾಡಿಯ ಬಿಗಿ ಹಿಡಿಯಬೇಕಿತ್ತು, ಗಾಡಿಯ ಎತ್ತುಗಳು ಅಲುಗಾಡಿ ಹಿಂದೂ ಮುಂದೂ ಹೋಗದಂತೆ ತೋಟಪ್ಪ ಹಿಡಿದುಕೊಳ್ಳಬೇಕಿತ್ತು. (ಏಕೆಂದರೆ ಗಾಡಿಯಿಂದ ಅವಳನ್ನು ಇಳಿಸುವಂತೆಯೂ ಇರಲಿಲ್ಲ, ಇಳಿಸಿದರೂ ಎಲ್ಲಿ ತಾನೇ ಅವಳನ್ನು ಮಲಗಿಸುವುದು. ಗಾಡಿಯನ್ನು ಎತ್ತುಗಳಿಂದ ಬಿಚ್ಚಿ ನಿಲ್ಲಿಸುವಂತೆಯೂ ಇಲ್ಲ, ನಿಲ್ಲಿಸಿದರೆ ಗಾಡಿ ತಗ್ಗಾಗಿ ನಿಂತು ಎಲ್ಲರೂ ಕೆಳಗೆ ಜಾರುತ್ತಾರೆ).

    ಇಷ್ಟೆಲ್ಲವನ್ನೂ ಅವರು ಮೂರು ಲಾಟೀನು ಬೆಳಕಲ್ಲಿ, ಆ ಕೊರೆಯುವ ಚಳಿಯಲ್ಲಿ ಮಾಡಬೇಕಿತ್ತು.
* * * * * * * * *

    ಪ್ರಸವವಂತೂ, ತೊಂದರೆಯಿಲ್ಲದೆ ಆಯಿತು, ಮಗು ಮೆತ್ತಗಿನ ಮುದ್ದೆಯಾಗಿ ಸಣ್ಣಗೆ ಚೀರುತ್ತಾ ಜನ್ಮ ತಾಳಿತು. ಇದ್ದಬದ್ದ ಹತ್ತಿ, ಸೀರೆ ಬಟ್ಟೆಗಳನ್ನೆಲ್ಲಾ ಬಳಸಿ ಶುಚಿಗೊಳಿಸಿದರು. ಹೊಕ್ಕಳ ಬಳ್ಳಿ ಕತ್ತರಿಸದೇ, ಹಾಗೇ ಕಾಯತೊಡಗಿದರು. ಎಲ್ಲಿ ನಂಜು ತಾಕುತ್ತದೋ ಎಂಬ ಭಯ ರುದ್ರಮ್ಮಳಿಗೆ ಕಾಡುತಿತ್ತು, ಅಂತೂ ಸರಿಯಾದ ಸಮಯಕ್ಕೆ ಚಂದ್ರಣ್ಣ ಬಿಸಿನೀರು ತಂದನು, ಹಿಂದೆಯೇ ಆ ಮನೆಯವರು ಬಿಸಿಯಾಗಿ ಶುಂಟಿ ಕಷಾಯ, ಕಾಫಿ ಕಾಯಿಸಿಕೊಂಡು ತಂದರು.

    ರುದ್ರಮ್ಮ, ತಾಯಿ ಹಾಗು ಮಗುವಿನ ಹೊಕ್ಕುಳ ತುದಿಗೆ ನೂಲು ಕಟ್ಟಿ, ಕತ್ತರಿಸಿ ನಂಜು ತಾಕದಂತೆ ಬಿಸಿಯಲ್ಲಿ ತೊಳೆದು ನೆಮ್ಮದಿಯ ಉಸಿರು ಬಿಟ್ಟಳು. ದೇವೀರಮ್ಮ, ಮಗುವಿಗೆ ಶೀತದ ಗಾಳಿ ಸೋಕದಂತೆ ಮಗುವಿನ ಪುಟ್ಟ ಮುಖವೂ ಪುಟ್ಟದಾಗಿ ಕಾಣುವಷ್ಟೇ ಬಿಟ್ಟು, ಮಗುವನ್ನು ಪೂರಾ ಶುಭ್ರ ಬಿಳಿಪಂಚೆಯಲ್ಲಿ ಸುತ್ತಿ, ಮೇಲೆ ಕೌದಿಯನ್ನು ಸುತ್ತಿ ರುದ್ರಮ್ಮಳ ಕೈಗೆ ಕೊಟ್ಟಳು.
ಇಷ್ಟೆಲ್ಲಾ ನಡೆದರೂ ಕೂಡ ಮಗು ಸಣ್ಣಗೆ ಉಸಿರೆಳೆಯುತ್ತಾ, ಮೆಲುದನಿಯಲ್ಲಿ ಚೀರುವ ಸದ್ದು ಕೇಳುತಿತ್ತೇ , ಒಮ್ಮೆಯೂ ಅಳಲಿಲ್ಲ. ಅದನ್ನು ಅಷ್ಟಾಗಿ ಯಾರೂ ಗಮನಿಸಲೂ ಇಲ್ಲ.

    ಎಲ್ಲರೂ ಲಾಟೀನು ಬೆಳಕಲ್ಲಿ ಮಗುವಿನ ಮುಖ ನೋಡಿದರು, ಹತ್ತಿರದ ಮನೆಯ ಹೆಂಗಸು
"ಅವ್ವಾ, ಮಗಾ ಸೂರ್ಯ ಹುಟ್ಟೋ ಹೊತ್ತಲ್ಲಿ, ಅವನಷ್ಟೇ ಕೆಂಪಾಗಿ ಹುಟ್ಟೈತೆ... ಭಾರಿ ಮುದ್ದಾಗೈತೆ",
"ಅಯ್ಯೋ ಯಾವುದೋ ಕಾಡು-ಹಳ್ಳಿ ದಾರೀಲಿ ಮಗ ಹುಟ್ಟೈತೆ ಅನ್ಕೋಬೇಡಿ, ಇದು ದೇವರ ಜಾಗ ಕಣ್ರವ್ವಾ, ಗಾಡಿ ಹಿಂದುಗಡೆ ಮರ ಐತಲಾ, ಅದು ಕಕ್ಕೆ-ಮರದಮ್ಮನ ಗುಡಿ. ದೇವರ ಎದುರಿಗೆ ಹುಟ್ಟೈತೆ ಮಗ, ಒಳ್ಳೆ ಯೋಗ ಇದು" ಅಂತ, ಮಗುವಿನ ದೃಷ್ಟಿ ತಕ್ಕೊಂಡ್ಲು. ರುದ್ರಮ್ಮ ಚಂದ್ರಣ್ಣನ ಕರೆದು "ಗಂಡು ಮಗ ಕಣೋ ಅಳಿಮಯ್ಯ,,," ಅಂದ್ಲು.

    ಎಲ್ಲವನ್ನೂ ನೋಡುತ್ತಾ ದಿಗ್ಮೂಡನಾಗಿ ನಿಂತಿದ್ದ ಚಂದ್ರಣ್ಣ, ಎಲ್ಲ ಮಾತನ್ನು ಕೇಳಿ ಮನಸಲ್ಲಿ ಖುಷಿಯಿಂದ ಒಮ್ಮೆ ಕಂಪಿಸಿದನು. ಏನೋ ಒಂದನ್ನು ಹೋರಾಡಿ ಗೆದ್ದ ಸಂತೃಪ್ತ ನಗು ಮೊಗದಲ್ಲಿ ಮೂಡಿತು. ಸೀದಾ ಹತ್ತಿರದ ಮನೆಯವರ ಬಳಿಗೆ ತೆರಳಿ, ಅವರ ಮನೆಯಿಂದ ಕರ್ಪೂರ ತೆಗೆದುಕೊಂಡು, ಆ ಮರದ ದೇವರಿಗೆ ಕರ್ಪೂರ ಹಚ್ಚಿ, ಮನಸಾರೆ ವಂದಿಸಿ. ಅಲ್ಲಿದ್ದ ಕುಂಕುಮ ಪ್ರಸಾದ ತಂದು ಗಾಡಿಯಲ್ಲಿದ್ದವರಿಗೂ ಕೊಟ್ಟು, ಮಗುವಿನ ನೆತ್ತಿಯ ಬಳಿಯಿಟ್ಟನು.

    ಅಷ್ಟೊತ್ತಿಗೆ ಅಲ್ಲಿ ಕಾಫಿ ಕುಡಿದು, ಮತ್ತೆ ಊರಿನ ಕಡೆಗೆ ಗಾಡಿ ತಿರುಗುಸಿದ್ದರು ತೋಟಪ್ಪ ಮತ್ತು ವಿಲಾಸಣ್ಣ. ಎಲ್ಲರೂ ಗೆಲುವಾಗಿ ಊರ ಕಡೆಗೆ ನೆಡೆಯತೊಡಗಿದರು. ಸಮಯ ಸುಮಾರು ಬೆಳಗಿನ ಎಂಟರ ಜಾವ, ದಾರಿಯಲ್ಲಿ ಊರೊಂದರ ಶಾಲೆಯಲ್ಲಿ ಭಾರತ ಗಣರಾಜ್ಯ ದಿವಸದ ಸಲುವಾಗಿ, ಧ್ವಜಾರೋಹಣ ನೆಡೆಯಿತ್ತಿತ್ತು. ವಿದ್ಯಾವಂತ ವ್ಯಕ್ತಿಯಾಗಿದ್ದ ಚಂದ್ರಣ್ಣ ಭಾರತ ಪತಾಕೆಗೆ ಮನದಲ್ಲೇ ಗೌರವ ಸಲ್ಲಿಸಿದ.

    ಬರುವಾಗ ಇದ್ದ ದುಃಖ ದುಮ್ಮಾನಗಳ, ದುಪ್ಪಟ್ಟು ಸಂತೋಷ ಉನ್ಮಾದಗಳಿಂದ ದಾರಿ ಸಾಗತೊಡಗಿತು.
* * * * * * * * *

    ಗಾಡಿ ಕಲ್ಕೆರೆ ತಿರುವಲ್ಲಿ ತಿಮ್ಮನಹಲ್ಲಿಯ ಕಡೆಗೆ ಹೊರಳಿ ಸಾಗತೊಡಗಿತು, ಮುಂದಿನದು ತುಸು ಹೋಂಡಾ-ಗುಂಡಿಗಳ ರಸ್ತೆ. ಇರುಳೆಲ್ಲಾ ನರಳಿ ನರಳಿ, ಗಾಡಿಯ ತುಲುಕಾಟ, ಮೊದಲ ಹೆರಿಗೆಯ ನೋವು, ಪ್ರಸವ, ಹೀಗೆ ಬಹಳಷ್ಟು ನೋವುಂಡು ದಣಿದಿದ್ದ ಅಮಿತ ಜೀವ, ಈಗೊಂದೆರಡು ಘಳಿಗೆಯಿಂದಷ್ಟೇ ತುಸು ನಿದಿರೆಗೆ ಜಾರಿದ್ದಳು. ಈಗ ಗಾಡಿಯ ಅಲುಗಾಟಕ್ಕೆ ಎಚ್ಚೆತ್ತು, ಮಗ್ಗುಲಲ್ಲಿದ್ದ ಮಗುವನ್ನುನೋಡತೊಡಗಿದಳು, ಮಗು ಈಗಲೂ ಅಳುತ್ತಿರಲಿಲ್ಲವಷ್ಟೇ. ಹಿಂದೆ ಚಂದ್ರಣ್ಣ, ತೋಟಪ್ಪ ಇಬ್ಬರೂ ಅದೂ ಇದೂ ಹರಟುತ್ತಾ, ಚಳಿಗೆ ಆಗಾಗ ಅಂಗೈ ಉಜ್ಜಿ ಬೆಚ್ಚಗೆ ಮಾಡಿಕೊಳ್ಳುತ್ತಾ ನೆಡೆದು ಬರುತ್ತಿದ್ದರು. ಹಾದಿ ಬದಿಯ ಪೊದೆಗಳಿಂದ, ಮರಗಳಿಂದ ಹಕ್ಕಿಗಳು ಚಿಲಿಪಿಲಿ ಹಾಡುತ್ತ ತಮಗೂ ಏನೋ ಖುಷಿಯ ಸುದ್ದಿಯಿದೆಯೇನೊ ಎಂಬಂತೆ ಹಾರಿ-ಹಾರಿ ದಾರಿಯ ಸೊಬಗನ್ನು ಇಮ್ಮಡಿಗೊಳಿಸಿದ್ದವು.
* * * * * * * * *

    ಗಾಡಿ ಇನ್ನೇನು ಮನೆಗೆ ಹತ್ತಿರಾಗುತ್ತಿದೆ ಎಂಬಷ್ಟರಲ್ಲಿ ಒಂದೆರಡು ಬಾರಿ ಗೊರ-ಗೊರ ಸದ್ದು ಮಾಡಿ ಉಸಿರಾಡಲಾಗದೇ ಮಗು ಮುಖ ತಿರುವಿ ಮಲಗಿಕೊಂಡಿತು. ಏನಾಯ್ತೆಂದು ಅಂಜಿದ ರುದ್ರಮ್ಮ ಮಗುವನ್ನು ತನ್ನ ಮಡಿಲಿಗೆ ಎತ್ತಿಕೊಂಡು, ತನ್ನ ಮುಖವನ್ನು ಮಗುವಿನ ಎದೆಯ ಬಳಿಯಿರಿಸಿ ನೋಡಿದಳು. ಅವಳ ಜೀವ ಒಮ್ಮೆಲೇ ಕಂಪಿಸಿತು, ಮಗುವಿನ ಉಸಿರಾಟ ನಿಂತಿತ್ತು. ತನಗೆ ತಿಳಿದ ಗುಟ್ಟನ್ನು, ಒಂಚೂರು ಬಿಟ್ಟುಕೊಡದೆ ಮಗುವಿನ ಬಾಯೊಳಗೆ ತನ್ನ ಕಿರುಬೆರಳನ್ನಿಟ್ಟು, ಎದೆಗವಚಿ ಕುಳಿತುಕೊಂಡಳು. ಮನೆ ಬಂದ ಕೂಡಲೇ, ದಡಬಡನೆ ಇಳಿದು ಮಗುವಿನ ಸಮೇತ ಮನೆಯ ಮುಂಭಾಗದಲ್ಲೇ ಇದ್ದ ನೀರು ಮನೆಯ ಕಡೆ ನುಗ್ಗಿ ನೆಡೆದಳು.

    ಎಷ್ಟೋ ಮಕ್ಕಳಿಗೆ ಬಾಣಂತನ ಮಾಡಿದ್ದ ರುದ್ರಮ್ಮನು ಹೀಗೆ ಮಾಡಿದ್ದನ್ನು ಕಂಡು ತತ್ ಕ್ಷಣಕ್ಕೆ ಯಾರೂ ಗಾಬರಿಯಾಗಲಿಲ್ಲ.
ಎಲ್ಲರೂ ಅಮಿತಳನ್ನು ಮೆತ್ತಗೆ ಎತ್ತಿ ಗಾಡಿಯಿಂದ ಇಳಿಸಿ, ಮನೆಯೊಳಗೆ ಮಲಗಿಸಿದರು. ದಣಿದು ಉಸಿರೆಳೆಯುತ್ತಿದ್ದ ಎತ್ತುಗಳನ್ನು ಗಾಡಿ ಮನೆಯ ಕಡೆಗೆ ನೆಡಿಸಿದರು. ದೇವೀರಮ್ಮ, ಪ್ರಸವದ ಬಟ್ಟೆಗಳನ್ನು ಹೂತುಹಾಕಲಿಕ್ಕೆ ತೋಟಪ್ಪನಿಗೆ ಹಾರೆ ತರಲು ಹೇಳಿ ಹಿತ್ತಲಿಗೆ ನೆಡೆದಳು.

    ಇತ್ತ ನೀರುಮನೆಯಲ್ಲಿ ನಿತ್ಯದ ಹಾಗೆ ಅಂಡೆ ಒಲೆಯಲ್ಲಿ ಬೆಂಕಿ ದಗದಗನೆ ಉರಿಯಿತಿತ್ತು, ಕೆಂಡಗಳ ರಾಶಿಯನ್ನು ಕೌಸಲ್ಯ ಒಲೆಯ ಮುಂದುಗಡೆಗೆ ಎಳೆಯುತ್ತಿದ್ದಳು, ರುದ್ರಮ್ಮ ಕೆಂಡದ ಕಾವಿನಲ್ಲಿ ಮಗುವನ್ನು ತೊಡೆಯ ಮೇಲೆ ಮಲಗಿಸಿಕೊಂಡು, ಕೈಯನ್ನು ಕೆಂಡದ ಕಡೆಗೆ ಹಿಡಿದು ಬೆಚ್ಚಗೆ ಮಾಡಿಕೊಂಡು ಮಗುವಿನ ಹೊಟ್ಟೆ, ಬೆನ್ನು ಅಂಗಾಲನ್ನೆಲ್ಲಾ ಉಜ್ಜುತ್ತಿದ್ದಳು. ಅಲ್ಲಿಗೆ ಬಂಡ ಚಂದ್ರಣ್ಣ "ಏನಾಯ್ತು ಅತ್ತೆ" ಎಂದ.

    ಮೊದಲೇ ಚಿಕ್ಕ ಮುಖದ ರುದ್ರಮ್ಮ, ಮುಖವನ್ನು ಇನ್ನೂ ಚಿಕ್ಕದು ಮಾಡಿಕೊಂಡು "ಮಗು ಉಸಿರಾಡ್ತಿಲ್ಲ ಕಣಾ, ಚಂದ್ರ" ಅಂದಳು. ಚಂದ್ರಣ್ಣನಿಗೆ ನಿಂತ ನೆಲ ಕುಸಿದಂತಾಯ್ತು, ಹೆರೆಗೆಯಾದ ಜಾಗದಿಂದ ಸೀದಾ ವಾಪಸು ಮನೆಗೆ ಬರುವಾಗ ಒಬ್ಬರಿಗೂ, ಮಗುವನ್ನು ಅಲ್ಲಿಂದ ಮುಂದೆ ಹಾಗೇ ಆಸ್ಪತ್ರೆಗೆ ತೆಗೆದುಕೊಂಡು ಹೋಗಬೇಕೆಂದು ಯಾರಿಗೂ ಅನಿಸಲಿಲ್ಲವೇಕೆ. ನಾನೂ ಆ ಸಮಯದಲ್ಲಿ ಮರುಳನಂತೆ ಸುಮ್ಮನೆ ಮನೆ ಕಡೆಗೆ ವಾಪಸ್ಸು ಬಂದದ್ದೇಕೆ, ಎಂಬುದೇ ತೋಚದಂತೆ, ಹಾಗೇ ನೆಲೆದ ಮೇಲೆ ಕುಸಿದು ಕುಳಿತು, ಮಗುವಿನ ಕಡೆಗೆ ಬಾಗಿದ.

    ಚಂದ್ರಣ್ಣನ ಪ್ರತಿಕ್ರಿಯೆಯನ್ನು ನೋಡಿ ರುದ್ರಮ್ಮ ಕಂಗಾಲಾಗಿ ಹೋದಳು, ಮಗುವಿನ ತಂದೆಗೇ ಇಷ್ಟೊಂದು ಆಘಾತವಾದರೆ, ತಾಯಿಗೆ ವಿಷಯ ಮುಟ್ಟಿದರೆ ಗತಿಯೇನು, ಎಂದು ಒಮ್ಮೆಗೇ ಅಂಜಿ, ಮಿಡುಕಿ ಬಿದ್ದಳು. ಯಾವುದೋ ಹುಚ್ಚು ಉಮ್ಮಸ್ಸು ಬಂದವಳಂತೆ, ಮಗುವಿನ ಎದೆಗೆ ಬಿಸಿಯ ಶಾಖದೊಡನೆ ಮೆತ್ತಗೆ ಗುದ್ದತೊಡಗಿದಳು.

    ಮಗುವಿನ ದೇಹವೇನೋ ಬೆಚ್ಚಗಾಯಿತು, ಆದರೂ ಉಸಿರಾಟದ ಲಕ್ಷಣವೇನೋ ಕಾಣಿಸುತ್ತಿರಲಿಲ್ಲ, ರುದ್ರಮ್ಮ ಮಾತ್ರ ಮಗುವಿನ ಬಾಯಿಗೆ ಬೆರಳು ಹಾಕಿ ಜೊಲ್ಲನ್ನು ಒರೆಸುತವುದನ್ನು ಬಿಟ್ಟಿರಲಿಲ್ಲ. ತನ್ನ ಪ್ರಯತ್ನ ಮುಂದುವರಿಸಿ, ಮಗುವನ್ನು ತಲೆಕೆಳಗೆ ಮಾಡಿ ಬಾಯಿಯಲ್ಲಿ ಬೆರಳಾಡಿಸಿದಾಗ ಜೊಲ್ಲಿನೊಡನೆ ಕಫವೂ ಬರತೊಡಗಿತು. ತಕ್ಷಣವೇ ಅವಳಿಗೆ ಔಷದ ಹೊಳೆಯಿತು, ಮಗುವನ್ನು ಚಂದ್ರಣ್ಣನಿಗೆ ಕೊಟ್ಟು ಹೀಗೇ ಒಲೆಯ ಕೆಂಡದ ಕಾವಿನಲ್ಲೇ ಕುಳಿತಿರುವಂತೆ ತಿಳಿಸಿ, ತನ್ನ ಮನೆಗೆ ಓಡಿದಳು.

    ಇಷ್ಟಕ್ಕೆಲ್ಲಾ ಕಾರಣ ಅಮಿತ ಬಸುರಿಯಾಗಿದ್ದಾಗ ಆಕೆ ಶೀತದ ಗಾಳಿ ಕುಡಿದಿದ್ದು, ಮತ್ತು ಊಟದಲ್ಲಿ ಪಥ್ಯ ತಪ್ಪುತ್ತಿದ್ದಿದ್ದು.

    ಅಳಲೆಕಾಯಿ, ಶುಂಟಿ, ಲವಂಗದ ಮಿಶ್ರಣ ಮಾಡಿ ಏನೋ ಮದ್ದನ್ನು ಅರೆದುಕೊಂಡು ಒಂದೆರಡು ಕ್ಷಣದಲ್ಲೆ ವಾಪಸಾದಳು ರುದ್ರಮ್ಮ, ಗಾಳಿಯೊಡನೆ ತಾನೂ ಬೀಸಿಬಂದೆ ಎನ್ನುವಷ್ಟು ವೇಗದಲ್ಲಿ, ಏದುಸಿರು ಬಿಡುತ್ತಾ.

    ಸೀದಾ ಬಚ್ಚಲು ಮನೆಗೆ ನೆಡೆದು, ಸೀರೆಯನ್ನು ಮೊಳಕಾಲ್ತನಕ ಮೇಲಕ್ಕೆತ್ತಿ ಕಟ್ಟಿಕೊಂಡು,  ಕಾಲು ಚಾಚಿ ಮಗುವನ್ನು ಕಾಲ ಮೇಲೆ ಹಾಕಿಕೊಂಡು ಕುಳಿತಳು. ಕೌಸಲ್ಯಳಿಗೆ ಬಿಸಿನೀರನ್ನು ಅಂಡೆಯಿಂದ ಇನ್ನೊಂದು ಚಿಕ್ಕ ಪಾತ್ರೆಗೆ ತೋಡಿ ಹಾಕಲು ಹೇಳಿ, ಮಗುವಿನ ಮೂಗು ಹಿಡಿದು, ಮದ್ದನ್ನು ಮಕ್ಕಳಿಗೆ ಹಾಲು ಕುಡಿಸುವ ಹೊಳ್ಳೆಗೆ ಹಾಕಿ, ಮಗುವಿನ ಬಾಯಿಗೆ ಉಯ್ದು, ಹಾಗೇ ಎದೆ ಹಾಗೂ ಬೆನ್ನನ್ನು ನೀಯತೊಡಗಿದಳು.

    ಅಷ್ಟರಲ್ಲಾಗಲೇ ಮಗುವಿನ ದೇಹದ ಶಾಖ ಸರಿಯಾಗಿ, ಶ್ವಾಸ ನಾಳ ಹಾಗೂ ಗಂಟಲಲ್ಲಿ ಕಟ್ಟಿದ್ದ ಕಫ ನೀರಾಡಿತ್ತು, ಮದ್ದು ಅರೆದು ಕುಡಿಸಿದ್ದರಿಂದ ಮಗು ಚೂರು ಚೂರೇ ಕಫವನ್ನು ಕಕ್ಕತೊಡಗಿತು. ರುದ್ರಮ್ಮ ತನ್ನ ಕೈ ನೋವು ಬರುವವರೆಗೂ ಮಗುವಿನ ಬೆನ್ನು-ಎದೆಯನ್ನು ತೀಡಿ, ತೀಡಿ ಕಫವನ್ನು ವಾಂತಿ ಮಾಡಿಸಿದಳು.

    ತುಸು ಹೊತ್ತಿನ ಬಳಿಕ ರುದ್ರಮ್ಮ ಒಂದು ನೆಮ್ಮದಿಯ ನಿಟ್ಟುಸಿರೆಳೆದು, ಮಗುವನ್ನು ತನ್ನ ಕಾಲ ಮೇಲೆ ಅಂಗಾತ ಮಲಗಿಸಿ ಅಂಡೆಯಿಂದ ಆಗ ತಾನೇ ತೋಡಿದ ಹದಗೊಳಿಸಿದ ಸುಡು ನೀರನ್ನು ಮಗುವಿನ ಬೆನ್ನ ಮೇಲೆ ಹೊಯ್ದೊಡನೆ ಮಗು ಕಿಟಾರನೆ ಕಿರುಚಿ, ಗಂಟಲು ಕಟ್ಟಿದ ತಡೆಯನ್ನು ಒಡೆದು, ಚೀರಿ ಅಳತೊಡಗಿತು.

    ಆ ಒಂದು ಅಳುವಿನ ಸದ್ದು ಚಂದ್ರಣ್ಣನ ಕಿವಿಯೊಳಗಿಂದ, ಮೈ-ಮನ ನರ-ನಾಡಿಗಳ ತಾಕಿ, ಎದೆಗೂಡನು ದಾಟಿ, ಹೃದಯಾಳದ ಸಂತಸದ ನಿಧಿಯನ್ನು ಸ್ಪೊಟಿಸಿತು.
* * * * * * * * *

                                                                                    ಇದು ಕಟ್ಟು ಕಥೆಯಲ್ಲ, ನನ್ನ ಹುಟ್ಟು ಕಥೆ
                                                                                    ಸಂಪತ್ ಕುಮಾರ್

Monday, May 11, 2015

ಸಾಗಿ ಬರಲೇ, ನಿನ್ನ ಜೊತೆಗೆ,,,


ಸಾಗಿ ಬರಲೇ ನಿನ್ನ ಜೊತೆಗೆ,,,
ಹೆಜ್ಜೆಗಳನು,
ಹೊಂದಿಸುತ್ತಾ...
ಬೆಸೆದುಕೊಂಡ ಕೈಗಳಲಿ,
ಬೆರಳುಗಳನು,
ಬಂದಿಸುತ್ತಾ...
* * *

ಮಳೆಯ ಹನಿಯು, ನಿನ್ನ ತಾಕಿ ಬೀಳುತಿಹುದು
ತಾನು ಶುಭ್ರವಾಗಲೆಂದು
ಗಾಳಿ ಅಲೆಯು, ನಿನ್ನ ಸೋಕಿ ಬೀಸುತಿಹುದು
ಸೌಗಂಧ ತಾ ಪಡೆಯಲೆಂದು...

ಬನದ ತುಂಬಾ, ನಿನ್ನದೇ ಹಸಿರಿದೆ.
ಎಲ್ಲೆ ಮೀರಿ,,,
ಮನದ ತುಂಬಾ, ನಿನ್ನದೇ ಹಸಿವಿದೆ.
* * *

ಸಾಗಿ ಬರಲೇ ನಿನ್ನ ಜೊತೆಗೆ,,,
ಹೆಜ್ಜೆಗಳನು,
ಹೊಂದಿಸುತ್ತಾ...
ಸಿಗುವ ಎಲ್ಲ ತಿರುವುಗಳಲೂ,,,
ಸ್ವಪ್ನಗಳನು,
ಸಂದಿಸುತ್ತಾ... 
* * *

ರವಿಯು ಕೂಡ, ಸಂಜೆವರೆಗೂ ಕಾಯುತಾನೆ
ನಿನ್ನ ಒಮ್ಮೆ ನೋಡಲೆಂದು
ತಾರೆ ಕೂಡ, ನಿನ್ನ ನೋಡಿ ನೋಯುತಾವೆ
ಇಂತ ಹೊಳಪು ಯಾವುದೆಂದು

ಜಗದ ತುಂಬಾ, ನಿನ್ನ ಕಣ್ಣ ಬೆಳಕಿದೆ. 
ನನ್ನೂ ಮೀರಿ,,,
ನನ್ನ ತುಂಬಾ, ನಿನ್ನ ಪ್ರೀತಿ ಬೆಳೆದಿದೆ
* * *

ಸಾಗಿ ಬರಲೇ ನಿನ್ನ ಜೊತೆಗೆ,,,
ಹೆಜ್ಜೆಗಳನು,
ಹೊಂದಿಸುತ್ತಾ...
ಪ್ರೀತಿ ಸಿಗುವ, ಪ್ರತಿ ಕ್ಷಣಕೂ,,,
ಮನಸಾರೆ,
ವಂದಿಸುತ್ತಾ...

                                                             - ಸಂಪತ್ ಕುಮಾರ್