Saturday, December 08, 2012

ಗಲ್ಲವನು ನಯವಾಗಿ,..


ಗಲ್ಲವನು ನಯವಾಗಿ ಅಂಗೈಯ ಮೇಲಿಟ್ಟು
ಎಲ್ಲವನು ನೀನೋಡು...
ನಿನ್ನವನು ಯಾರೆಂದು, ತಂಗಾಳಿ ಕೇಳಿದರೆ,
ಸಂಕೋಚವ ಬಿಟ್ಟು
ನನ್ನೆಡೆಗೆ ಕೈಮಾಡು...
ಮುಂಗುರುಳ ಮೃದುವಾಗಿ ಕಿವಿಪಕ್ಕ ಇಳಿಬಿಟ್ಟು
ನನ್ನೊಡನೆ ಮಾತಾಡು...
ಪ್ರತಿಇರುಳು ನಾಕಾಣೋ, ಕನಸುಗಳ ಹೇಳುವೆನು
ಸಂಕೋಚವ ಬಿಟ್ಟು
ಎಲ್ಲವನು ನಿಜಮಾಡು...

* * * * *

ಹಳದಿ ಬಳೆಗಳ ಬಿಳಿ ನೀಳ ತೋಳಿನ

ಬೆರಳಿಡಿದು ಕರೆದೊಯ್ದೆ ನಾನು,
ನನ್ನಾಸೆಯ ಬಾನಿಗೆ, ನಿನ್ನನು...
ಗರಿಬಿಚ್ಚಿ ಹಾರಿದೆವು, ಬಹುದೂರ ನಾವು
ಖುಷಿ ಹೆಚ್ಚಿ ಕೂಗಿದೆವು,
ತನ್ಮನವ ತಣಿಸಿದೆವು,
ಪ್ರೀತಿಸುವ ಮುನ್ನ ಮರಳಿದೆವು,..
ಯಾಕೆಂದು ಯೋಚಿಸುವ ಮುನ್ನ,
ಕೆನ್ನೆಯಲಿ ಕಣ್ಣೀರು ನುಸುಳಿದವು...


ನಿರಾಸೆ ನೆಲದಲ್ಲೂ, ನೂರಾಸೆ ಬಿತ್ತುವೆನು

ನಿನ್ನೊಲವ ಹರಿಬಿಟ್ಟು,
ಹಸನಾದ ಫಲನೀಡು...
ಪ್ರತಿಇರುಳು ನಾಕಾಣೋ, ಕನಸುಗಳ ಹೇಳುವೆನು
ಸಂಕೋಚವ ಬಿಟ್ಟು
ಎಲ್ಲವನು ನಿಜಮಾಡು...

* * * * *

ಹಣತೆ ಬೆಳಕಿನ ಒಬ್ಬೊಂಟಿ ಊರಿನ

ಹೂಚಪ್ಪರಕೆ ಬಂದಿದ್ದೆ ನಾನು,
ವಧುವಾಗಿ ನಿಂತಿದ್ದೆ ನೀನು...
ಕತ್ತಲೆಯ ಅಕ್ಷತೆಯು, ಮುಗಿಲಿಂದ ಸುರಿದವು
ನಡುರಾತ್ರಿ ವರಿಸಿದೆವು,
ಸಪ್ತಪದಿ ಸಾಗಿದೆವು,
ಮಧುಚಂದ್ರಕೆ ಮುನ್ನ ಬೆಳಕುಹರಿದವು,..
ಯಾಕೆಂದು ಯೋಚಿಸುವ ಮುನ್ನ,
ಕಂಠದಲಿ ಸಣ್ಣಅಳು ಬಿಕ್ಕಳಿಸಿದವು...


ಪ್ರತಿಹೆಜ್ಜೆ ಇಡುವಲ್ಲೂ, ನಿನ್ನನ್ನೇ ಹುಡುಕುವೆನು

ಬೇರೆಲ್ಲವಾ ಬಿಟ್ಟು,
ಬಾ ಎಂದು ಕರೆನೀಡು...
ಪ್ರತಿಇರುಳು ನಾಕಾಣೋ, ಕನಸುಗಳ ಹೇಳುವೆನು
ಸಂಕೋಚವ ಬಿಟ್ಟು
ಎಲ್ಲವನು ನಿಜಮಾಡು...



                                 - ಸಂಪತ್ ಕುಮಾರ್

Wednesday, November 28, 2012

ನಿನ್ನ ವಿನಃ ಬೇರೆ ಬಯಸೆನು...

ನಿನ್ನದೊಂದು ನೆನಪು ಸಾಕು
ಸದಾಕಾಲ ಸವಿಯಲು,
ಹೃದಯದೊಂದು ರಾಗ ಸಾಕು
ಸದಾಕಾಲ ಹಾಡಲು,
ಎಂದಿಗೂನೂ, ನಿನ್ನ ವಿನಃ ಬೇರೆ ಬಯಸೆನು,
ಎಲ್ಲೇ ನೀ ಹೋದರೂನೂ, ನಿನ್ನ ಸನಿಹದಲ್ಲೇ ಸುಳಿವೆನು...
    *    *    *    *

ಇದ್ದು ಹೋಗು ಇನ್ನು ಸ್ವಲ್ಪ
ನಿನ್ನಂದ ಪೂರ ಕಣ್ತುಂಬಿಕೊಳ್ಳಲು,
ಕದ್ದು ಕಾಣೋ ಕನಸಿಗೆಲ್ಲ
ನಿಜದ ರೂಪ ನೀಡಲು,

ಯಾವ,.. ಯತ್ನವು ಇಲ್ಲದೆ,,, ಸ್ವಪ್ನಲೋಕ ಸೇರಬಲ್ಲೆ...
ಒಮ್ಮೆ ಅಲ್ಲಾದರೂನೂ,,, ಅಪ್ಪಿಕೊಳ್ಳು ನೀನನ್ನ ಕಂಡಲ್ಲೇ...

ನನ್ನೆದೆಯ ಒರಗಿ ನೀನು,,,
ನಿನ್ನಾಸೆ ಹೇಳುವಾಗ, ಹೌದೆನ್ನುವ ವಿನಃ ಬೇರೆ ನುಡಿಯೆನು...
ಎಂದಿಗೂನೂ, ನಿನ್ನ ವಿನಃ ಬೇರೆ ಬಯಸೆನು,
ಎಲ್ಲೇ ನೀ ಹೋದರೂನೂ, ನಿನ್ನ ಸನಿಹದಲ್ಲೇ ಸುಳಿವೆನು...
    *    *    *    *

ನಿನ್ನ ನಗುವು ಒಂದೇ ಜಮೆಯು
ನನ್ನ ಖುಷಿಯ ಖಾತೆಗೆ,
ನಿನ್ನ ಮೋಹ ಒಂದೇ ಸ್ಫೂರ್ತಿ
ನಾ ಬರೆಯೋ ಎಲ್ಲ ಕವಿತೆಗೆ,

ನಾನು... ರಸಿಕನು ಆಗಿಯೇ,,, ಎಂದೂ ಹೀಗೆ ಬಾಳಬಲ್ಲೆ...
ನನ್ನ ಮನದಾಳದಲ್ಲಿ,,, ರಸಿಕತೆಯು ಚೆಲ್ಲುತ್ತಾ ನೀ ನಿಲ್ಲೆ...

ಕಣ್ಣಲ್ಲಿ ಕೊಟ್ಟ ಭಾಷೆ,,,
ಕಣ್ಮುಚ್ಚೋವರೆಗು ನಾನು, ಕಾಯುವೆನೆ ವಿನಃ ಭಾಷೆ ತಪ್ಪೆನು...
ಎಂದಿಗೂನೂ, ನಿನ್ನ ವಿನಃ ಬೇರೆ ಬಯಸೆನು,
ಎಲ್ಲೇ ನೀ ಹೋದರೂನೂ, ನಿನ್ನ ಸನಿಹದಲ್ಲೇ ಸುಳಿವೆನು...
    *    *    *    *

ನಿನ್ನದೊಂದು ನೋಟ ಸಾಕು
ನನ್ನಜೀವ ತಣಿಯಲು,
ಕಣ್ಣಂಚಿಗೊಂದು ಮುತ್ತು ಸಾಕು
ಕನಸುಗಳ ಹೆಣೆಯಲು,
ಎಂದಿಗೂನೂ, ನಿನ್ನ ವಿನಃ ಬೇರೆ ಬಯಸೆನು,
ನೀನೇ ಸಾಕೆಂದರೂನೂ, ಸ್ವಪ್ನದಲ್ಲಿ ಪುನಃ ಪುನಃ ಬರುವೆನು...

                                                        - ಸಂಪತ್ ಕುಮಾರ್

Wednesday, October 31, 2012

ನೀನು ಒಪ್ಪಬೇಕಿದೆ


ನಿನ್ನ ಕನಸು ಕಾಣದಂತ
ನನ್ನದಾವ ಇರುಳಿದೆ?
ನಿನ್ನ ಅಂದ ಹೊಗಳದಂತ 
ನನ್ನದಾವ ಹಾಡಿದೆ?

ಕಣ್ಣುಮುಚ್ಚಿ ಮಲಗುವಾಗ 
ನಿದಿರೆ ಬರದೆ ಹೋದರೆ,
ನನ್ನ ಸ್ವಪ್ನದಲ್ಲಿ ನೀನು 
ವಿಹರಿಸಿರುವೆ ತಿಳಿದುಕೋ...
ಬೇರೆ ಎಲ್ಲೋ ನೋಡುವಾಗ 
ಕೆನ್ನೆ ಹಸಿಯಾದರೆ,
ಒಂದೇ ಸಮನೆ ಬಿಡದೆ ನಾನು 
ಚುಂಬಿಸಿರುವೆ ಎಂದುಕೋ...

ನಮ್ಮ ಪಯಣದಲ್ಲಿ
ಹಾದಿ ಒಂದೇ ಇರುವಾಗ,
ಕೈಯ ಹಿಡಿದು ಸಾಗಬೇಕಿದೆ,..
ನೀನು ಒಪ್ಪಬೇಕಿದೆ.
* * * * *

ನಿನ್ನ ಧ್ಯಾನವಿಲ್ಲದಂತ
ನನ್ನದಾವ ಉಸಿರಿದೆ?
ನಿನ್ನ ಸ್ಪರ್ಶ ಬಯಸದಂತ
ನನ್ನದಾವ ಕ್ಷಣವಿದೆ?

ಎಲ್ಲೇ ನೀನು ನೆಡೆಯುವಾಗ 
ಹೆಜ್ಜೆ ಬೇರೆಡೆಗೆಳೆದರೆ
ನಿನ್ನ ಸನಿಹದಲ್ಲೇ ಎಲ್ಲೊ
ನಾನಿರುವೆನು ತಿಳಿದುಕೋ...
ಬೇರೆ ಏನೋ ಮಾಡುವಾಗ
ತುಟಿಯು ಹಾಗೆ ನಕ್ಕರೆ,
ನಿನ್ನ ಹೃದಯದಲ್ಲಿ ನನ್ನ 
ಕಚಗುಳಿಯದು ಎಂದುಕೋ...

ನನ್ನ ಬಾಳಿನಲ್ಲಿ 
ಎಲ್ಲ ನೀನೆ ಆಗಿರುವಾಗ,
ನನ್ನೊಲವು ಫಲಿಸಬೇಕಿದೆ,..
ನೀನು ಒಪ್ಪಬೇಕಿದೆ.

                                             - ಸಂಪತ್ ಕುಮಾರ್

Saturday, October 20, 2012

ಹೋತ್ಲಾ, ಹೋತ್ಲಾ, ಹೋತ್ಲಾ...

(Dedicated our fabulous friend Lohith)



ಡ್ರಾಮಾ... ತ ನಿ ನ ನ ನಾ
ಲೋಹಿತ್ ಬರಿ, ಹೋತ್ಲಾ ಕಣಣ್ಣಾ...

ಮನ್ ಡೇ ಆದ್ಮೇಲೆ, ಟ್ಯೂಸ್ ಡೇ ಬರ್ತದೆ
ಸಿಗ್ನಲ್ ಆದ್ಮೇಲೆ, ಸೀಮನ್ಸ್ ಬರ್ತದೆ...
ಒಂದರ ಮೇಲೊಂದ್ ಫೋನ್ ಬರ್ತವೆ
ಮಾತ್ ಆಡಿಸಿದ್ರೆ ರೈಲು ಓಡ್ತವೆ...

ಡಯಟ್ ಅನ್ಕೊಂಡೆ ಮಟನ್ ಹೊಡಿತಾನೆ
ಮೀನು ಸಾರಂದ್ರೆ ಬಾಯ್ನೀರು ಸುರಿಸ್ತಾನೆ
ಗುಂಗುರು ಕೂದಲನ್ನ ಹಿಂದಕ್ಕೆ ಬಾಚ್ತಾನೆ
ಮೂಟೆ ಇಟ್ಟಕೊಂಡೆ ಮಸ್ಸಲ್ಸ್ ಬೆಳೆಸವ್ನೆ

ಕಾಲು ಎಳೆಯೋಕೆ ಮುಂದೇನೆ ಇರ್ತಾನೆ...

ಹೋತ್ಲಾ, ಹೋತ್ಲಾ, ಹೋತ್ಲಾ...
ಮಾತೇ ಹೋತ್ಲಕ್ಕೆ ಮೂಲ...
ಹೂ ಕಣ್, ಹೂ ಕಣ್, ಕೇಳ್ಲಾ...
(... ವಾಟ್ ಇಸ್ ದಿಸ್ ನಾನ್ ಸೆನ್ಸ್ ಯಾರ್ ...?)

ಡ್ರಾಮಾ... ತ ನಿ ನ ನ ನಾ
ಲೋಹಿತ್ ಬರಿ, ಹೋತ್ಲಾ ಕಣಣ್ಣಾ...

---------------------------------------------------------------------------
ಪಂ ಪಂ... ಪಂ ಪಂ ಪಂ ಪಂ ಪಮ್... ಪಂ ಪಂ ಪಂ ಪಂ ಪಮ್... ಪಂ ಪಂ ಪಂ ಪಂ ಪಮ್...

(... ಶಿಷ್ಯಾ ಬಿಡೋ ಬಹುಪರಾಕು ...)
ತುಂಬಾ ಮಾತಾಡಿಸಿದ್ರೆ ತಲೆ ಒಳಗಡೆ ಮೆದುಳು ಇರಲ್ಲ ಬರಿ ಹುಳ ಇರುತ್ತ್ವೆ,
ಸತ್ಯ ಡೂಪ್ಲಿಕೇಟ್, ಸುಳ್ಳು ಒರಿಜಿನಲ್ಲು
ಸಾಮ್ರಾಣಿ ಹೊಗೆ ಹಂಗೆ ಮೂರು ದಿನದ  ಬಾಳು...
(... ಎಕ್ಷ್ತ್ರಾರ್ಡಿನರಿ ...)

ನೂರರಲ್ಲಿ ಹತ್ತು ಸತ್ಯ ಮಿಕ್ಕಿದ್ದು ಸುಳ್ಳು
ಸಣ್ಣ ಡೀಲು ಮಾಡಿದ್ರೆ ಪೇಮೆಂಟ್ ಇದೆ,
ದೊಡ್ಡ ಡೀಲಿಗೆ ಸ್ವಲ್ಪ ಡಿಸ್ಕೌಂಟ್ ಇದೆ...
ಇವಾಗ ನಂಬರ್ ಬರ್ಕಳಿ, ಆಮೇಲೆ ಫೋನ್ ಮಾಡಿ ಕೇಳ್ಕೊಳಿ...
(... ವ್ಹಾ ...)

ಶರತ್ ಗೆ ಕೆಲಸ ಇಲ್ಲ ಫೋಟೋ ಹೊಡಿತಾನೆ
ಶ್ರೀಮಂತ್ ಗೆ ಕೆಲಸ ಇಲ್ಲ, ಫೇಸ್ ಬುಕ್ ಗೆ ಹಾಕ್ತಾನೆ
ಎಲ್ಲಾ ಫೋಟೋ ಲೋಹಿತನವೆ,
ಷೇರ್ ಮಾಡ್ತಿವಿ ನಾವು,
ಕಾಮೆಂಟ್ ಹೊಡ್ಕಳಿ ನೀವು...
---------------------------------------------------------------------------

ಮದ್ವೆ ಮಾತ್ ಬಂದ್ರೆ, ಪ್ಲೇಟ್ ತಿರುವ್ತಾನೆ
ಕೆ.ಜಿ ಗಟ್ಟಲೆ ಕಾಳು ಹಾಕುತ್ತಲೇ ಇರ್ತಾನೆ...
(... ಬ್ಯಾರೆ ಏನ್ ಮಾಡತಾನ್ಲಾ ...?)

ಫೋನ್ ಕಾಲಲ್ಲೇ ಡೀಲು ಮಾಡ್ತಾನೆ
ಟ್ರೀಟ್ ಕೇಳಿದ್ರೆ ಕತೆ ಬಿಡ್ತಾನೆ...
(... ಡೋಂಟ್ ಆಸ್ಕ್ ಯಾರ್ ...)

ನಮ್ ಮಾತಲ್ಲಿ, ವಿಷ್ಯ ಮೊದಲು PJ ಆಮೇಲೆ
ಇವನ ಮಾತಲ್ಲಿ, PJ ಮೊದಲು ವಿಷ್ಯ ಆಮೇಲೆ...

ಹೋತ್ಲಾ, ಹೋತ್ಲಾ, ಹೋತ್ಲಾ...
ಮಾತೇ ಹೋತ್ಲಕ್ಕೆ ಮೂಲ...
ಬ್ಯಾರೆ ಎಲ್ಲಾನೂ ಹೇಳ್ಲಾ...
ಹೂ ಕಣ್, ಹೂ ಕಣ್, ಕೇಳ್ಲಾ...
(... ವಾಟ್ ಇಸ್ ದಿಸ್ ನಾನ್ ಸೆನ್ಸ್ ಯಾರ್ ...?)

ಡ್ರಾಮಾ... ತ ನಿ ನ ನ ನಾ
ಲೋಹಿತ್ ಬರಿ, ಹೋತ್ಲಾ ಕಣಣ್ಣಾ...

ಗಾದೆ ಮಾತೊಂದ ಸ್ವಲ್ಪ ತಿಳ್ಕೊಳಿ
"ಸಾಗರ"ಕ್ಕೆ ಹೋಗಿ ಬಂದ್ರೆ ಸ್ನಾನ ಮಾಡ್ಕಳಿ
ನಿದ್ದೆ ಬಂತಂದ್ರೆ ಲ್ಯಾಬ್ ಅಲ್ಲಿ ಕುಂತ್ಕೋಳಿ
ಕಾಫಿ ಬಂದಾಗ ಕಣ್ ಒರಸ್ಕೊಳಿ
(... ತುಂಬಾ ಆರ್ಡಿನರಿ ...)

ಇವನ ಸಹವಾಸ ಒಂದು ತುರಿಕೆ ಸೊಪ್ಪು, ಎಲ್ಲರೂ ಕೆರಕೋಳಿ
ಇವನ ನಂಬಿಕೊಂಡರೆ ತೆಂಗಿನಕಾಯಿ ಚಿಪ್ಪು, ಎಲ್ಲರೂ ಇಡ್ಕೋಳಿ...

ಹೋತ್ಲಾ, ಹೋತ್ಲಾ, ಹೋತ್ಲಾ...
ಇಸ್ಪೀಟ್ ಕಾರ್ಡು ಕುಲುಕ್ಲಾ...
ಹೂ ಕಣ್, ಹೂ ಕಣ್, ಹಾಕ್ಲಾ
ಮುಂದೆ ಕುಂತವ್ನ, ಮುಂಡಾ ಮುಚ್ಲಾ...
(... ವಾಟ್ ಇಸ್ ದಿಸ್ ನಾನ್ ಸೆನ್ಸ್ ಯಾರ್ ...?)

ಡ್ರಾಮಾ... ತ ನಿ ನ ನ ನಾ
ಲೋಹಿತ್ ಬರಿ, ಹೋತ್ಲಾ ಕಣಣ್ಣಾ...


                              ನಂಗೂ ಲೋಹಿತ್ ಗೊತ್ತಣ್ಣ
                              - ಕೆ. ಸಿ. ಸಂಪತ್ ಕುಮಾರ್

Friday, October 19, 2012

ಪ್ರೀತಿಸದೇನೆ ಹೇಗಿರಲಿ...?


ನಕ್ಕಳು ಅವಳು, ನನ್ನೆದುರಿಗೆ
ಮುತ್ತುದುರಿದವು ಮನಸಿಗೆ,
ಸೋಲೊಪ್ಪಿಕೊಂಡೆನು ಆ ಸೊಬಗಿಗೆ
ಓಲಾಡೋ, ಓಲೆ ಜುಮುಕಿಗೆ...

ಇಷ್ಟೊಂದು ಅಂದದ ಈ ಅಚ್ಚರಿ,
ಕಣ್ಮುಂದೆ ಬಂದಳು, ಏನ್ಮಾಡಲಿ...
ಪ್ರೀತಿಸದೇನೆ ಹೇಗಿರಲಿ...?
-----------------------------------------

ನುಡಿ ಚೆನ್ನ,
ನುಡಿಯುತಿರು ಚಿನ್ನ,
ನಿನ್ನ ನುಡಿಮುತ್ತುಗಳನ್ನ...
ನಗು ಚಿನ್ನ,
ನುಡಿಯುವ ಮುನ್ನ,
ನಗುವ ನಿನ್ನ ನಗು ಚೆನ್ನ...

ಹೊಸಿಲ ನೀನು ದಾಟುವ ಮುನ್ನ
ದೃಷ್ಟಿ ತೆಗೆದು ಚುಂಬಿಸುವೆ ನಾ...
ಬಿಸಿಲು ನಿನ್ನ ಸುಡುವ ಮುನ್ನ
ಅಂಗೈಲಿ ನೆರಳ ನೀಡುವೆನು ನಾ...

ನಡು ಚೆನ್ನ,
ನಡೆಯುತಿರು ಚಿನ್ನ,
ನನ್ನ ಬಾಳದಾರಿಯನ್ನ...
ತೀಡು ಚಿನ್ನ,
ನಡೆವಾಗ ಹಾರಿ
ಕೆನ್ನೆ ಸವರೊ ಮುಂಗುರುಳನ್ನ...

ಹೆದರಿ ನೀನು ಬೆಚ್ಚುವ ಮುನ್ನ
ಭಯವ ತಡೆದು ಅಪ್ಪುವೆನು ನಾ...
ನಿದಿರೆ ನಿನಗೆ ಬರುವ ಮುನ್ನ
ಕಣ್ಣಲಿ ಕನಸ ತುಂಬುವೆನು ನಾ...
-----------------------------------------

ಒಪ್ಪಿಗೆ ಕೊಟ್ಟಳು, ಈ ಪ್ರೀತಿಗೆ
ಮುತ್ತುದುರಿದವು ಮನಸಿಗೆ,
ಸೋಲೊಪ್ಪಿಕೊಂಡೆನು ಆ ಸೊಬಗಿಗೆ
ಹಾಲಂಥ, ಹಣೆಯ ಸಿಂಧೂರಕೆ...

ಇಷ್ಟೊಂದು ಅಂದದ ಈ ಅಚ್ಚರಿ
ಬಾಳಲ್ಲಿ ಬಂದಳು, ಏನ್ಮಾಡಲಿ...
ಪ್ರೀತಿಸದೇನೆ ಹೇಗಿರಲಿ...?

                                      - ಸಂಪತ್ ಕುಮಾರ್

Saturday, September 29, 2012

ಇವಳೇನಾ ನನ್ನವಳು

ಇವಳೇನಾ ನನ್ನವಳು,
ಚೆಲು ಚುಂಬಕ ಚೆಂದುಟಿಯಲಿ
ಚಿಗುರ್ ಮುಗುಳ್ನಗೆ ಚಿಮ್ಮುವವಳು,
ಹೊಂಬೆಳಕಿನ ಚಿತ್ ಕಳೆಯಲಿ
ಚೇತನ ತನ್ಮನದವಳು,
ಚೆಂದಕೆಂದೇ ನನ್ನೆದುರಲಿ ಉದಯಿಸಿದವಳು,
ಚಿನ್ಮಯೀ ಛಾಯೆಯವಳು,
ಇವಳೇನಾ ನನ್ನವಳು,..?

ಇವಳೇನಾ ನನ್ನವಳು,
ನೀಳ್ಮೊಗದ ನಿರ್ಮಲ ನೀರೆಯಿವಳು,
ನಿಶಬ್ಧವ ನಾಚಿಸುವ ನುಡಿಯವಳು,
ನಾಟ್ಯ ಮಯೂರಿಯ ನೆರಳಿವಳು,
ನವಿಲ್ಗರಿಯವು ಮುಂಗುರುಳು,
ನಲ್ಮೆಯ ನಶೆ ನೋಟದವಳು,
ನವ್ಯ ಭಾವ ಚಿಲುಮೆಯಿವಳು,
ಇವಳೇನಾ ನನ್ನವಳು,..?

ಇವಳೇನಾ ನನ್ನವಳು,
ತಲ್ಲಣಿಸುವ ತನ್ ಮನವ ನನ್ನೆಡೆಗೆ
ತೇಲಿಬಿಟ್ಟು ತಣಿಯುವವಳು,
ತಲ್ಲೀನತೆಯ ತಾನಾಗೆ ತನ್ನೆಡೆಗೆ
ನನ್ನಿಂದ ಸೆಳೆಯುವವಳು,
ತೋಳಲತೆಯಿಂದ ಈ ತನುವ ತರುವಿಗೆ
ಸ್ವಪ್ನದಲ್ಲಿ ತಬ್ಬುವವಳು,
ಇವಳೇನಾ ನನ್ನವಳು,..?

ಇವಳೇನಾ ನನ್ನವಳು,
ಸೌಂದರ್ಯದಿ ಸಮವಿಲ್ಲದ
ಸಾತ್ವಿಕತೆಯ ಸುಮ ಇವಳು,
ಸೌಜನ್ಯದ ಸಹಿಯಂತಿಹ
ಸೌಭಾಗ್ಯವತಿ ಸೀತೆಯಿವಳು,
ಸಾವಿಲ್ಲದ ಸವಿ ಸಾಂಗತ್ಯಕೆ
ದಾಂಪತ್ಯದ ಸತಿಯಿವಳು,
ಇವಳೇನಾ ನನ್ನವಳು,..?

(ನನ್ನ ಮನ ಹೇಳಿತು)
ಹಾ...
ಇವಳೇನೇ ನನ್ನವಳು...

                           - ಸಂಪತ್ ಕುಮಾರ್

Thursday, July 19, 2012

ನನ್ನೊಡತಿ

(A small dedication to Kodagu)

ನನ್ನೊಡತಿ,
ಮಡಿಕೇರಿ ಮಣ್ಣ ಕನ್ನಡತಿ,                             
                               
ಕಾವೇರಿಯ ಮಗಳು,
ಶಾಂತಲೆಯೇ ನಗಲು,
ಚೆಂದಗಾತಿ,
ಕೊಡಗಿನ ಕಾಂತಿ,
ನನ್ನೊಡತಿ,
ಮಡಿಕೇರಿ ಮಣ್ಣ ಕನ್ನಡತಿ...
                                  
ಇಬ್ಬನಿಲಿ ನೆಂದ ಇಗ್ಗುತಪ್ಪನ
ನೆತ್ತಿಯಿಂದಿಳಿದು ಬೆವರಂತೆ ಬಾರೇ ಭಾಗೀರಥಿ...
ಮಬ್ಬಿನಲಿ ನಿಂದ ಮಂದಹಾಸವನೆಲ್ಲಾ
ತಬ್ಬಿ ಮಗುವಂತೆ ತಾರೇ ಭಾಗ್ಯವತಿ...
ಅಂದಗಾತಿ,
ಹುತ್ತರಿಯ ಹೂವಿನಾರತಿ...
ಸ್ವಪ್ನಗಾತಿ,
ಮಲೆನಾಡಿನ ಮೊಗಕೆ ಮೂಗುತಿ...
ನನ್ನೊಡತಿ,
ಮಡಿಕೇರಿ ಮಣ್ಣ ಕನ್ನಡತಿ...
                                  
ಅಬ್ಬಿ ಹಸಿರಿಂದ ಹಬ್ಬದಿಗ್ಗಿನಲಿ
ದಿಬ್ಬವನತ್ತಿಳಿದು ಹಿಮದಂತೆ ಹರಿವ ಶಾಕುಂತಿ...
ಕಣ್ಣ ಬಸಿರಿಂದ, ನನ್ನ ಕನಸುಗಳಿಗೆಲ್ಲಾ
ನಿತ್ಯ ಪ್ರೀತಿಯನು ಹೆರುವ ಬಾಣಂತಿ...
ಪ್ರೇಮಜ್ಯೋತಿ,
ಬೆಳದಿಂಗಳ ಬಾನಿನ ಶಾಂತಿ...
ಹೇ, ಸಂಗಾತಿ,
ನಾವೇ ನವಯುಗ ನಳ-ದಮಯಂತಿ...
ನನ್ನೊಡತಿ,
ಮಡಿಕೇರಿ ಮಣ್ಣ ಕನ್ನಡತಿ...
                                  
ಕಾವೇರಿಯ ಮಗಳು,
ಶಾಂತಲೆಯೇ ನಗಲು,
ಚೆಂದಗಾತಿ,
ಕೊಡಗಿನ, ಕಾಂತಿ,
ನನ್ನೊಡತಿ,
ಮಡಿಕೇರಿ ಮಣ್ಣ ಕನ್ನಡತಿ...
                                  
                        - ಸಂಪತ್ ಕುಮಾರ್

Saturday, June 16, 2012

ಎಂದಿನಂತೆ...


ಈಗೀಗ ಈ ಮನವು
ನಿನ್ನೊಲವ ಸುಳಿಯಲ್ಲಿ, ಬಂದಿಯಂತೆ
ನೀನಾಗೆ ಬಳಿಬಂದು
ನನ್ನೆದೆಯ ಅಪ್ಪಿಬಿಡು, ಎಂದಿನಂತೆ...
ಕಣ್ಣುಗಳ ಪೆಟ್ಟಿಗೆಗೆ,
ಕನಸುಗಳ ತುಂಬಿಕೊಡು ಕಂತೆ ಕಂತೆ,,,
ಸಲ್ಲಾಪ ಸವಿಯಲ್ಲಿ
ಗಲ್ಲವನು ಕಚ್ಚಿಬಿಡು, ಎಂದಿನಂತೆ...
* * * * *
ನಿನ್ನ ಹೃದಯ ದೋಣಿಯಲ್ಲಿ ನಾನೇ ಯಾತ್ರಿಕ,
ಪ್ರೇಮದಲ್ಲಿ ತೇಲುವಾಗ, ಮೂಕಭಾಷಿಕ...
ಕಣ್ಣ ಸುತ್ತ ಒಮ್ಮೆ ನೋಡು, ಕನಸ ಕೋಟೆಯ,
ಕಾವಲಾಗಿ ಕಾಯಲೆಂದು, ನಿನ್ನ ಪ್ರೀತಿಯಾ...

ನಾ ನೋಡೋ ಆ ರವಿಯು,
ಮುತ್ತಿಡುವ ನಿನ ಹಣೆಯ, ಬಿಂದಿಯಂತೆ
ನೀನಾಗೆ ಈ ತುಟಿಯ,
ಬೇಕೆಂದೇ ಮುಚ್ಚಿಹಿಡಿ, ಎಂದಿನಂತೆ...
* * * * *
 
ನಿನ್ನ ಕಂಠ ವೀಣೆಯಲ್ಲಿ ನಾನೇ ಗಾಯನ,
ರಾಗಲಹರಿ ಮೀಟುವಾಗ, ರೋಮಾಂಚನ...
ಅರ್ಥ ಬೇಡ ನಾವು ಆಡೋ, ಎಲ್ಲ ಮಾತಿಗೂ,
ನಿನ್ನ ಸನಿಹ ಒಂದೇ ಸಾಕು, ಸಾವಿನಾಚೆಗೂ...

ನನಗೀಗ ಈ ವಿರಹ,
ನೀರಮೇಲೆ ಇದ್ದೂ ಇರದ, ನೀಲಿಯಂತೆ
ನೀನಾಗೆ ನನ್ನೆದುರು,
ಬೆಳಕಾಗಿ ಮಿಂಚಿಬಿಡು, ಎಂದಿನಂತೆ..
* * * * *

ಈಗೀಗ ಈ ಮನವು
ನಿನ್ನೊಲವ ಸುಳಿಯಲ್ಲಿ, ಬಂದಿಯಂತೆ
ನೀನಾಗೆ ಬಳಿಬಂದು
ನನ್ನೆದೆಯ ಅಪ್ಪಿಬಿಡು, ಎಂದಿನಂತೆ...
ಕಣ್ಣುಗಳ ಪೆಟ್ಟಿಗೆಗೆ,
ಕನಸುಗಳ ತುಂಬಿಕೊಡು ಕಂತೆ ಕಂತೆ,,,
ಸಲ್ಲಾಪ ಸವಿಯಲ್ಲಿ
ಗಲ್ಲವನು ಕಚ್ಚಿಬಿಡು, ಎಂದಿನಂತೆ...

                                           - ಸಂಪತ್ ಕುಮಾರ್

Monday, April 23, 2012

ಬೋಣಿ ಆಗದ ಹೃದಯಾನ song - My Version


I wanna wanna say say say say to to to you wanna  wanna be like bad...
I wanna wanna do do do do do that wanna wanna ring like mad... mad… mad...


ಬೋಣಿ ಆಗದ ಹೃದಯಾನ, ವೋಲ್ವೋ ಬಸ್ಸಲ್ಲಿ ಇಟ್ಟಕೊಂಡು
ಹುಡುಗಿಗಾಗಿ ಸೀಟಿಡಿಯೋ ಕ್ಯಾಮೆ ಬೇಕಿತ್ತಾ?
ಅಪ್ಪಿ ತಪ್ಪಿ ನನ್ನನ್ನ, ಅವಳು ಒರಗಿಕೊಂಡಾಗ
ಒಳ್ಳೆಯವನಾಗೆ ಉಳ್ಕೊಳೋ ಕ್ಯಾಮೆ ಬೇಕಿತ್ತಾ?
ಬೇಕಿತ್ತಾ...?  ಬೇಕಿತ್ತಾ...?  ಬೇಕಿತ್ತಾ...?
ಓಡಿ ಹೋಗೋ ಆಸೆಗೆಲ್ಲಾ ಬ್ರೇಕು ಬೇಕಿತ್ತಾ?
ಇವಳ ನೋಡೋದಿಕ್ಕೆ ಕಿವಿ ಪಕ್ಕ ಕಣ್ಣು ಬೇಕಿತ್ತಾ?  
ಚೆನ್ನಾಗಿದ್ದೆ ನಾನು,,, ಲೈನು ಹೊಡಿಲೇ ಬೇಕಿತ್ತಾ...? 

                        *    *    *    *
ಬೋಣಿ ಆಗದ ಹೃದಯಾನ, ವೋಲ್ವೋ ಬಸ್ಸಲ್ಲಿ ಇಟ್ಟಕೊಂಡು
ಹುಡುಗಿಗಾಗಿ ಸೀಟಿಡಿಯೋ ಕ್ಯಾಮೆ ಬೇಕಿತ್ತಾ???
                        *    *    *    *

ಕಿಟಿಕಿ ಕಡೆಗೆ ನೋಡ್ಕೊಂಡು, ನೂರು ಯೋಚನೆ ಮಾಡ್ಕೊಂಡು,
ನಿದ್ದೆ ಬಂದಂಗೆ ಆಕ್ಟಿಂಗ್ ಮಾಡೋ, ನಾನು ಲೂಸಾ...
ಹಿಂಗೆ ಇದ್ದರೆ ಯೂಸ್ ಆಗಲ್ಲ ನಾಲ್ಕು ಪೈಸಾ...
ಆಕಡೆ ಈಕಡೆ ತಿರುಗುವಾಗ, ಸುಮ್ನೆ ಸ್ಮೈಲು ಕೊಟ್ಟುಕೊಂಡು
ಕಷ್ಟ ಆದರು ಡೀಸೆ೦ಟಾಗಿ, ಕೂತ್ಕೊಂಡಿರ್ತೀನ್ರಿ...
ವಯಸ್ಸಿನಲ್ಲಿ ಟೆನ್ಷನ್ ಆಗೋದು ಮಾಮೂಲ್ ಅಲ್ಲವೇನ್ರಿ...
 
ಈ ಟೈಮಲ್ಲೇ FM ರೈನ್ ಬೋ ಆನ್ ಆಗಬೇಕಿತ್ತಾ?
ಕನಸಿನಲ್ಲೇ ಕೈ ಹಿಡ್ಕೊಂಡು, ಡುಯೆಟ್ ಹಾಡ್ಲೇಬೇಕಿತ್ತಾ?
ಚೆನ್ನಾಗಿದ್ದೆ ನಾನು,,, ಲೈನು ಹೊಡಿಲೇ ಬೇಕಿತ್ತಾ...?

                        *    *    *    *
ಬೋಣಿ ಆಗದ ಹೃದಯಾನ ವೋಲ್ವೋ ಬಸ್ಸಲ್ಲಿ ಇಟ್ಟಕೊಂಡು
ಹುಡುಗಿಗಾಗಿ ಸೀಟಿಡಿಯೋ ಕ್ಯಾಮೆ ಬೇಕಿತ್ತಾ???
                        *    *    *    *

ಮಾತಾಡ್ಸೋಕೆ ಮುಂಚೇನೆ, ಅವಳ ಸ್ಟಾಪ್ ಕೊಟ್ಟ ಭಗವಂತ...
ಇಳಿಯೊತನಕ ಅವಳ ಕಡೆಗೇನೆ, ನೋಡ್ತಾ ಕೂರೋದು,
ತಿರುಗಿನೋಡಿ ನಗೋದಿಕ್ಕೆ, ಹುಡುಗೀರ್ ವರ್ಲ್ಡ್ ಫೇಮಸ್ಸು...
ಫೀಲಿಂಗಲ್ಲಿ ಒಮ್ಮೊಮ್ಮೆ, ಪಾಸ್ ತೋರಿಸೋದ್ ಮರೆತುಹೋದರು,
ಕೆಕ್ಕರಿಸಕೊಂಡು ನೋಡ್ತಿರ್ತಾಳೆ, ಲೇಡಿ ಕಂಡಕ್ಟರು,
ಯಾವಾನಿಗೆ ತಿಳಿಯುತ್ತೆ ಸ್ವಾಮಿ, ಹುಡುಗೀರ್ ಕ್ಯಾರೆಕ್ಟ್ರು...

ಬೆಂಗಳೂರು ಹುಡುಗಿ ಅಂತ ತಿಳಿದೂಕೂಡ, ಬೀಳಲೇಬೇಕಿತ್ತಾ...?
ವಿಷ್ಣುವರ್ಧನ್ ಸ್ಟೈಲಲ್ಲಿ ಎದೆ ಮುಟ್ಟಿ, ನೋಡ್ಕೋಬೇಕಿತ್ತಾ...?
ಚೆನ್ನಾಗಿದ್ದೆ ನಾನು,,, ಲೈನು ಹೊಡಿಲೇ ಬೇಕಿತ್ತಾ...?

                        *    *    *    *
ಬಸ್ಸು ಇಳಿಯೋ ಟೈಮಲ್ಲಿ, ಅವಳು ಕೂತು ಹೋದಂತ 
ಸೀಟು ಮುಟ್ಟಿ ನೋಡುವ ಕ್ಯಾಮೆ ಬೇಕಿತ್ತಾ??????


                                       -ಕೆ. ಸಿ. ಸಂಪತ್ ಕುಮಾರ್...

Sunday, April 08, 2012

ಸೋಮ್-ಅಣ್ಣಾ ಬಾಂಡ್

Dedicated to our friend ಸೋಮಣ್ಣ
He is BONDDD...
He is one of a KINDDD...
Don't know... What's there in MINDDD...
Waa Waa...
Waa Waa...
Shut up now, Walk and FINDDD...
Waa Waa...
Greater than what's on your MINDDD...
He is SomannaBOND, He is SomannaBONDDD...

ಮಳವಳ್ಳಿ ಮುದ್ದಿನ ಕೂಸು ಸೋಮಣ್ಣಾಬಾಂಡ್
ರಜನಿಕಾಂತ್-ಗೂನು ಬಾಸು ಸೋಮಣ್ಣಾಬಾಂಡ್
ಹಾಸನದವರಿಗೆ ಅಲ್ಲ ಇವ್ರು ಅಣ್ಣಾ ಬಾಂಡ್
ಮದ್ದೂರಿಗೆಲ್ಲಾ ಚೆಂದ ನಮ್ಮ ಸೋಮಣ್ಣಾಬಾಂಡ್

'ಸೋಮ'ನಿಗಿಂತ ಡೆಡ್ಲಿ ಇವ್ರು ಸೋಮಣ್ಣಾಬಾಂಡ್
ಹುಡುಗೀರಿಗೆ ಫ್ರೆಂಡ್ಲಿ ಇವ್ರು ಸೋಮಣ್ಣಾಬಾಂಡ್
ಕೊಳ್ಳೆಗಾಲದ ನಿಂಬೆ ಹಣ್ಣು ಸೋಮಣ್ಣಾಬಾಂಡ್
ಮಲೆಮಾದಪ್ಪನ ಹುಲಿ ಕಣ್ರೀ ಸೋಮಣ್ಣಾಬಾಂಡ್

ಸೌಂಡು ಇವರಿಗಾಗಲ್ಲ, ಯಾರೂ ಸೀನಂಗಿಲ್ಲ...
ಏನ್ನೂ ಹೇಳಂಗಿಲ್ಲ, ಯಾವುದನ್ನೂ ಕೇಳೋದಿಲ್ಲ...
ಅಡ್ಡಾದಿಡ್ಡಿ ಅಡ್ಡಾಡಲ್ಲ, ಗಂಡಸರಿಗೆ ಡ್ರಾಪ್ ಕೊಡಲ್ಲ...
ಎಲ್ಲೂ ಸಿಗದ ಮಂಡ್ಯದ ಹೂವ
ಪವರ್ ಫುಲ್ಲು ಗಟ್ಟಿ ಜೀವ...
ಮನಸು ಕೆಂಪನೆ ಕ್ಯಾರೆಟ್ ಹಲ್ವಾ
ಮುನಿಸಿಕೊಂಡ್ರೆ ಕೊಳ್ಳಿದೆವ್ವಾ... 

ರಜನಿಕಾಂತ್-ಗೂನು ಬಾಸು ಸೋಮಣ್ಣಾಬಾಂಡ್
ಮಳವಳ್ಳಿ ಮುದ್ದಿನ ಕೂಸು ಸೋಮಣ್ಣಾಬಾಂಡ್
ಹಾಸನದವರಿಗೆ ಅಲ್ಲ ಇವ್ರು ಅಣ್ಣಾ ಬಾಂಡ್
ಮದ್ದೂರಿಗೆಲ್ಲಾ ಚೆಂದ ನಮ್ಮ ಸೋಮಣ್ಣಾಬಾಂಡ್
----------------------------------------------

ಮುದ್ದೆ ಮಟ್ಟನ್ ಸಾರಿನಲ್ಲೂ ಸೋಮಣ್ಣಾಬಾಂಡ್
ಗಟ್ಟಿ ರಾಗಿ ರೊಟ್ಟಿ ಮೇಲೆ ಬೆಣ್ಣೆ ಬಾಂಡ್...
ಶಕೀರಾ ಸಾಂಗಿನಲ್ಲು ಸೋಮಣ್ಣಾಬಾಂಡ್
ಕಿಂಗ್ ಫಿಷರ್ ಕಿಕ್ಕಿನಲ್ಲು ಸೋಮಣ್ಣಾಬಾಂಡ್

'ಶ'ಗು, 'ಸ'ಗು ಡಿಫರೆನ್ಸ್ ಇಲ್ಲ, ಮಾತಲ್ಲೇನೂ ಮೋಸ ಇಲ್ಲಾ...
ಹುಡುಗ ಸ್ವಲ್ಪ ಎಣ್ಣೆಗೆಂಪು, ಹುಡುಗೀರಿಗೆ ಕಣ್ಣು ತಂಪು...
ಮಾಡ್ಕೊಂಡಿಲ್ಲಾ ಒಂದೂ ತಪ್ಪು, ಒಂದ್ ಲೆಕ್ಕದಲ್ಲಿ ಇನ್ನೂ ಪಾಪು...
ಚಂದ್ರ ಹುಟ್ಟಿ ಬರದೆ ಹೋದರೆ ಏನು,
ಇವನೇ ಇಲ್ಲವಾ ಚಾಂದಿನಿ ಚೆಂಡು...
ಕುದುರೆ ಮರೆತು, ಡ್ಯಾಜಲರ್ ಬೈಕು
ಏರಿ ಬಂದ ದಿಲ್ದಾರ್ ಗಂಡು...

ಸಾಫ್ಟವೇರ್ ಇಂಜಿನೀರ್ರ್ ಸೋಮಣ್ಣಾಬಾಂಡ್
ವೀಕೆಂಡಲ್ಲಿ ಕ್ವಾರ್ಟರ್ ಲೆಕ್ಕ, ಸೋಮಣ್ಣಾಬಾಂಡ್
ಟೈಟ್ ಆದ್ರೂ ಸ್ಟೆಡಿ ಇವ್ರು ಸೋಮಣ್ಣಾಬಾಂಡ್
ಹರಿಶ್ಚಂದ್ರನ್ ತುಂಡು ಕಣ್ರೀ ಸೋಮಣ್ಣಾಬಾಂಡ್

ನಾವು ನೀವು ಕೆಮ್ಮಂಗಿಲ್ಲ ಸೋಮಣ್ಣಾಬಾಂಡ್....
------------------------------------------------

ಅಂಬರೀಶ್ ಫ್ಯಾನು ಇವ್ರು ಸೋಮಣ್ಣಾಬಾಂಡ್
ನಾಗೇಶ್ ಫ್ರೆಂಡು ಇವ್ರು ಸೋಮಣ್ಣಾಬಾಂಡ್
ಹೆಣ್ಣುಮಕ್ಕಳಿಗೆ ಅಣ್ಣ ಅಲ್ಲ ಸೋಮಣ್ಣಾಬಾಂಡ್
ಆದ್ರೂ ಎಲ್ಲರೂ ಕರಿಯೋದು 'ಸೋಮಣ್ಣಾ'ಬಾಂಡ್...

                               - ಸೋಮಣ್ಣನ ಫ್ರೆಂಡು,
                                 ಸಂಪತ್ ಕುಮಾರ್

Friday, February 10, 2012

ಕಣ್ಣರೆಪ್ಪೆ ಮುಚ್ಚಿ... (ನೊಂದ ಪ್ರೇಮಿಯೊಬ್ಬಳ ಗೀತೆ...)



ಕಣ್ ರೆಪ್ಪೆ ಮುಚ್ಚಿ ನಿನ್ನನ್ನು ನೆನೆದ ಹೃದಯಾ
ಕಣ್ ಬಿಟ್ಟು ನೋಡಿ ನೀಕಾಣದಾಗ
ತಾನಾಗೆ ಬರುವ ಕಣ್ಣೀರಲ್ಲೂ ಪ್ರೀತಿ ಇದೆಯಾ...?

ಅರೆಮರೆತು ನಾ ಮಲಗಿದಾಗ, ಉಸಿರಲ್ಲೇ ನೇವರಿಸಿದವನೇ
ನಿನ್ನ ಹುಡುಕಾಡಿ ನಾ ಸೋತಿರುವೆ, ಸಿಗಬಾರದೇನು ಒಮ್ಮೆ...

ಕಣ್ ರೆಪ್ಪೆ ಮುಚ್ಚಿ ನಿನ್ನನ್ನು ನೆನೆದ ಹೃದಯಾ
ಕಣ್ ಬಿಟ್ಟು ನೋಡಿ ನೀಕಾಣದಾಗ
ತಾನಾಗೆ ಬರುವ ಕಣ್ಣೀರಲ್ಲೂ ಪ್ರೀತಿ ಇದೆಯಾ...?
    *    *    *    *

ಜೊತೆಯಲ್ಲಿ ನಾವಂದು ಕುಳಿತು, ಮಾತಾಡಿದ ಸಿಹಿಮಾತು
ಇನ್ನೊಮ್ಮೆ ನೀ ಹೇಳು,,,
ಪ್ರೀತೀಯ ಹೂವನದಲ್ಲಿ, ನಾವು ನಡೆದಾಡಿದ ಕಾಲುದಾರಿ
ಆಗೊಯ್ತೆ ಒಬ್ಬೊಂಟಿ ಬಾಳು,,,

ನಡುವಲ್ಲಿ ನಿನ್ನ್ನ ಕೈಸೋಕಿ ಒಮ್ಮೆ, ಕಂಪಿಸಲು ಪೂರ ತನುವಾ...
ಎಚ್ಚೆತ್ತು ನೋಡಿ ನೀನಿಲ್ಲಾದಾಗ
ಬಿಕ್ಕಳಿಸಿ ಬರುವ ಅಳುವಲ್ಲೂ ಪ್ರೀತಿ ಇದೆಯಾ,,,?
    *    *    *    *

ತಪ್ಪೊಂದೂ ನಾ ಮಾಡಿಲ್ಲ, ಈ ಸಜೆಯು ನನಗೇಕೆ...
ಕ್ಷಮೆಕೋರಿ ನಾ ಕರೆದಿರುವೆ, ಇನ್ನೂ ಕೂಡ ಮುನಿಸೇಕೇ...
ನೆನೆಪು ಒಂದೇ ನನಗೀಗ ದಿನದ ಪೂರ್ತಿ ಮೆಲುಕು
ನೋವು ಕವಿದ ಒಲವ ಇರುಳಲಿ, ನೀನೇ ತಾನೇ ಬೆಳಕು...

ಕೈನೀಡಿ ಕರೆದು ಚಂದಮನ ತೋರಿ ನೀನಿತ್ತ ಮುತ್ತ ಸವಿಯಾ,
ನೆನೆಪಾಗಿ ಕೆನ್ನೆ ಹಸಿಯಾಗುವಾಗ,
ಉಮ್ಮಳಿಸಿ ಬರುವ ದುಖ್ಖದಲು ಪ್ರೀತಿ ಇದೆಯಾ...?
    *    *    *    *

ಕಣ್ ರೆಪ್ಪೆ ಮುಚ್ಚಿ ನಿನ್ನನ್ನು ನೆನೆದ ಹೃದಯಾ
ಕಣ್ ಬಿಟ್ಟು ನೋಡಿ ನೀಕಾಣದಾಗ
ತಾನಾಗೆ ಬರುವ ಕಣ್ಣೀರಲ್ಲೂ ಪ್ರೀತಿ ಇದೆಯಾ...?

ಅರೆಮರೆತು ನಾ ಮಲಗಿದಾಗ, ಉಸಿರಲ್ಲೇ ನೇವರಿಸಿದವನೇ
ನಿನ್ನ ಹುಡುಕಾಡಿ ನಾ ಸೋತಿರುವೆ, ಸಿಗಬಾರದೇನು ಒಮ್ಮೆ...

ಕಣ್ ರೆಪ್ಪೆ ಮುಚ್ಚಿ ನಿನ್ನನ್ನು ನೆನೆದ ಹೃದಯಾ
ಕಣ್ ಬಿಟ್ಟು ನೋಡಿ ನೀಕಾಣದಾಗ
ತಾನಾಗೆ ಬರುವ ಕಣ್ಣೀರಲ್ಲೂ ಪ್ರೀತಿ ಇದೆಯಾ...?
                      
                                                     - ಸಂಪತ್ ಕುಮಾರ್