Thursday, November 24, 2011

ನಾನು,..



ನಾನು,.. ನಿನ್ನ ಕಣ್ಣ ನೀಲಿ ಕಡಲಲ್ಲಾಡೋ ಮೀನು,
ನಾನು,.. ನಿನ್ನ ಕೆನ್ನೆ ದಿಣ್ಣೆಯ ಮುಸ್ಸಂಜೆ ಬಾನು,
ನಾನು,.. ಉನ್ಮತ್ಥನಾಗೋ ಹೊಂಗನಸೇ ನೀನು...
ನೀನು,   ಕನ್ನಡಿಯಲಿ ಕಾಣೋ ಪ್ರತಿಬಿಂಬ ನಾನು,
ನೀನು,   ಏಕಾಂತದಿ ನುಡಿಯೋ ಪಿಸುದನಿಯೇ ನಾನು,
ನೀನು,.. ನಕ್ಕಾಗ ನಿನ್ನ ಕೆನ್ನೆ ಗುಳಿಯೇ ನಾನು...
* * *

ಆಲಿಸು,,,
ಆಲಂಗಿಸು,,,
ಆಗೊಮ್ಮೆ ಈಗೊಮ್ಮೆ ನಿನ್ನಲ್ಲಿ ಅಂಕುರಿಸೋ ಅಂಜಿಕೆಯ
ಮುತ್ತಾಗಿ ನನ್ನೆದೆಗೆ ನೀ ಅರ್ಪಿಸು...
ಹೋಲಿಸು,,,
ಆಲೋಚಿಸು,,,
ಒಟ್ಟಾರೆ ಒಲವಾಗಿ ನಿನ್ನಲ್ಲಿ ಝೇoಕರಿಸೋ ಸಂಭ್ರಮವ
ಅಲೆಯಾಗಿ ನನ್ನೆಡೆಗೆ ನೀ ತೇಲಿಸು...

ನಾನು,.. ನಿನ್ನ ತುಟಿಯ ಹೂವಿನ ಸಿಹಿಯಾದ ಜೇನು,
ನಾನು,.. ನನಗಿಂತ ಪ್ರೀತಿಸೋ ನನ್ನವಳೇ ನೀನು, 
ನೀನು,.. ನನ್ನೆಲ್ಲಾ ಭಾವವ ಪ್ರಿಯವಾಗಿ ಕಾಣು,..
* * *

ಆಶಿಸು,..
ಆನಂದಿಸು,..
ನೀ ಬೀರೋ ಪ್ರತಿನೋಟ ನನ್ನನ್ನೇ ದಿಟ್ಟಿಸಲಿ ಎಂಬೆಲ್ಲ
ಆಸೆಗಳ ನಿನ್ನಲ್ಲು ನೀ ಪೋಷಿಸು...
ಹರ್ಷಿಸು,..
ಆಕರ್ಷಿಸು,..
ಅನುಗಾಲ ನಿನ್ನನ್ನು ಹಂಬಲಿಸಿ ಎಲ್ಲೆಲ್ಲೊ ಅಲೆವಾಗ
ಮೃದುವಾಗಿ ನನ್ನೆದೆಯ ನೀ ಸ್ಪರ್ಶಿಸು...

ನಾನು,.. ನಿನ್ನ ಕಣ್ಣ ನೀಲಿ ಕಡಲಲ್ಲಾಡೋ ಮೀನು,
ನಾನು,.. ನಿನ್ನ ಕೆನ್ನೆ ದಿಣ್ಣೆಯ ಮುಸ್ಸಂಜೆ ಬಾನು,
ನಾನು,.. ಉನ್ಮತ್ಥನಾಗೋ ಹೊಂಗನಸೇ ನೀನು...
ನೀನು,   ಕನ್ನಡಿಯಲಿ ಕಾಣೋ ಪ್ರತಿಬಿಂಬ ನಾನು...
ನೀನು,   ಏಕಾಂತದಿ ನುಡಿಯೋ ಪಿಸುದನಿಯೇ ನಾನು...
ನೀನು,.. ನಕ್ಕಾಗ ನಿನ್ನ ಕೆನ್ನೆ ಗುಳಿಯೇ ನಾನು...

                                           - ಸಂಪತ್ ಕುಮಾರ್

Saturday, November 05, 2011

ಕಾಯುವಾಗೆಲ್ಲಾ ನಿನ್ನ... (ಯುಗಳ ಗೀತೆ)


ಗಂ: ಕಾಯುವಾಗೆಲ್ಲಾ ನಿನ್ನ, ಕನಸುಗಳು ಮೂಡಿವೆ
        ಕಣ್ಣ ಕುಂಚದಲ್ಲಿ ಬಣ್ಣ ನೂರು ನಿನ್ನವೇ, ಭಾವಚಿತ್ರ ಬಿಡಿಸಿವೆ...
        ನೋಡುವಾಗೆಲ್ಲಾ ನಿನ್ನ, ಮಾಯೆಯೊಂದು ಕಾಡಿದೆ
        ಸ್ವಪ್ನ ರಂಗದಲ್ಲಿ ಪ್ರೇಮ ಸೂತ್ರ ನಿನ್ನದೇ, ಪಾತ್ರಪದ್ಯ ಹಾಡಿದೆ... 

ಗಂ: ಎದೆ ವೀಣೆಯಲ್ಲಡಗಿ ಕುಳಿತಿಹಾ ರಾಗ
        ನಿನ ಬೆರಳನೇ ಬಯಸುತ್ತಿದೆ...
        ಸಮ್ಮೌನ ಸೆಲೆಯಾಗಿ ವಿರಮಿಸಿ ಈಗ
        ತುಟಿ ಕೊಳಲನೇ ನುಡಿಸುತ್ತಿದೆ...

ಹೆ:  ಶಬ್ದಲೋಕದಲ್ಲಿ,,, ನಿಶ್ಶಬ್ಧ ನಮ್ಮ ಪ್ರೇಮ...
       ಮೌನಗೀತೆಯಲ್ಲೊಂದು ಮುದ್ದಾದ ಭಾವನೆಯ ನೀ ಬಿಂಬಿಸು.

------------------------------------------------------------------
ಗಂ: ನಗಿಸುವಾಗೆಲ್ಲಾ ನಿನ್ನ, ತಾರೆಗಳೂ ನಕ್ಕಿವೆ 
        ಮನದ ಹಾಳೆಯಲ್ಲಿ ಖಾಲಿಯಿದ್ದ ಹಾಡಿಗೆ ಸಾಲುಗಳು ಸಿಕ್ಕಿವೆ...
------------------------------------------------------------------

ಗಂ: ಸೌಗಂಧ ಸುಧೆಯೇರಿ ಹೊರಟಿಹಾ ಯಾನ 
       ನೀ ಜೀವಿಸೋ ಪ್ರತಿ ಶ್ವಾಸವೂ...
       ಕಾತುರತೆ ಕರೆಯಾಗಿ ಸೆಳೆಯುವಾ ತಾಣ 
       ನೀ ಸಂಧಿಸೋ ಪ್ರತಿ ದಾರಿಯೂ...
 
ಹೆ:  ವರ್ಷಮಾಲೆಯಲ್ಲಿ,,, ಸ್ವಾತಿ ನಮ್ಮ ಪ್ರೇಮ...
       ಶುಭ್ರವಾಗಿ ಕೈಸೇರಿ ಮುತ್ತಾಗೊ ಮಳೆಹನಿಯ ನೀ ಯಾಚಿಸು.

ಗಂ: ಕಾಯುವಾಗೆಲ್ಲಾ ನಿನ್ನ, ಕನಸುಗಳು ಮೂಡಿವೆ
       ಕಣ್ಣ ಕುಂಚದಲ್ಲಿ ಬಣ್ಣ ನೂರು ನಿನ್ನವೇ, ಭಾವಚಿತ್ರ ಬಿಡಿಸಿವೆ...
       ನೋಡುವಾಗೆಲ್ಲಾ ನಿನ್ನ, ಮಾಯೆಯೊಂದು ಕಾಡಿದೆ
       ಸ್ವಪ್ನ ರಂಗದಲ್ಲಿ ಪ್ರೇಮ ಸೂತ್ರ ನಿನ್ನದೇ, ಪಾತ್ರಪದ್ಯ ಹಾಡಿದೆ...

                                            - ಸಂಪತ್ ಕುಮಾರ್