Friday, November 26, 2010

ಪ್ರೀತಿಯೆಂದೆನ್ನೆ ಕೋಮಲೆ...



ಹಸಿರುಮಾವು ಚಿಗುರಲಿ
ಚೈತ್ರವನದ ಕೋಗಿಲೆ
ಹಾಡುವಂತ ರಾಗವ,,,
ಮಾಘಮಾಸ ಬೆಳಗಲಿ
ಚುಮುಗುಡುವ ಚಳಿಯಲಿ
ಮೈ ಕೊರೆಯೋ ಮಂಜಿನಾಟವ,,,
ಬಲ್ಲೋರಾರು ಹೇಳೆಲೆ,
ಅರಿಯದಾದೆ ಕೇಳೆಲೆ...

ಜೀವ ಭಾವ ನಡುವಲಿ
ಸಕಲ ಸುಖದ ಮಡುವಲಿ
ಕಾಡುತಿಹ ವಿರಹವ,,,
ಈ ಜೀವನ ಬಲೆಯಲಿ
ಬಂಧು ಬಳಗ ಸುಳಿಯಲಿ
ತುಬ್ಬುತಿಹ ಏಕಾಂತವ,,,
ಪ್ರೀತಿಯೆಂದೆನ್ನೆ ಕೋಮಲೆ,
ಚುಂಬಿಸುವೆನು ಒಮ್ಮೆಲೇ,,,

ಹರನ ಜಟಾಪೊಟರೆಯಲಿ
ಸಿಲುಕಿಸೋತ ಗಂಗೆಯಲಿ
ಮೂಡಿದಂತ ಮಿಡಿತವ,,,
ಕಮಲ ಕೊಳದ ಬದುವಲಿ
ನೈದಿಲೆ ಮೈ ಮೃದುವಲಿ
ಮುತ್ತಿನನಿಯ ಕುಣಿತವ,,,
ಬಲ್ಲೋರಾರು ಹೇಳೆಲೆ,
ಅರಿಯದಾದೆ ಕೇಳೆಲೇ,,,

ಈ ಕಣ್ಣ ತೆರೆಯಲಿ
ನಿಂತ ನಿನ್ನ ಪಟದಲಿ
ಹುಡುಕದಾದ ಮೋಹವ,,,
ಕರ್ತೃ ಕರ್ಮ ವಿಧಿಯಲಿ
ಪ್ರಾತಃ ಸಂಜೆ ಪುಟದಲಿ
ಓದದಾದ ವಾಕ್ಯವ,,,
ಪ್ರೀತಿಯೆಂದೆನ್ನೆ ಕೋಮಲೆ,
ಬಿಗಿದಪ್ಪುವೆ ಒಮ್ಮೆಲೇ,,,

                                                                - ಸಂಪತ್ ಕುಮಾರ್