ಬೆಳಗಾವಿಯ ಬೆಳಗಲ್ಲಿ, ಬೇಗ ಏಳಲಿಲ್ಲ ನಾನು.
ನಾನು ಹೊರಡುವಷ್ಟರಲ್ಲಿ, ಎಲ್ಲರೂ ಹೇಳಿದ್ದ ಸಮಯಕ್ಕೆ ಅರ್ಧ ತಾಸಿಗೂ ಹೆಚ್ಚು ತಡವಾಗಿ, ಅವರು ನಾಲ್ವರನ್ನೂ ಕಾಯಿಸಿಬಿಟ್ಟೆ.
" ಎಂದು, ಅವರಿಬ್ಬರ ರೂಮುಗಳಿಗೂ ಫೋನ್ ಮಾಡಿ ಹೇಳಿ, ನನ್ನ ಲಗೇಜನ್ನೆಲ್ಲ ಹೊತ್ತುಕೊಂಡು ಹೋಟೆಲ್ reception ಹತ್ರ ಬಂದೆ.
ನನ್ನ ತಪ್ಪಿಗೆ, ನನ್ನನ್ನು ಇಡೀ ದಿನ ಬಯ್ಯಲು, ಎಲ್ಲರಿಗೂ ಅವಕಾಶ ಸಿಕ್ಕಿತ್ತು. ಇಡೀ ದಿನ ನಾನು ತಿರುಗಿ ಮಾತಾಡದಷ್ಟು, ಅವರು ರೇಗಿಸುವರೆಂದು ಅರ್ಥವಾಗಿತ್ತು.
ಎಲ್ಲರೂ ಬಂದು, ಲಗೇಜನ್ನೆಲ್ಲ ಬೈಕುಗಳಿಗೆ ಕಟ್ಟಿ, ಹೋಟೆಲಿನವರು ಆಫರ್ ಮಾಡಿದ್ದ complementary breakfast ತಿನ್ನಲು ಪಕ್ಕದಲ್ಲಿದ್ದ restaurant ಗೆ ನೆಡೆದೆವು.
" ಹೆಸರಿನ ಹೋಟೆಲಿಗೆ ಬಂದಿದ್ದೆವು. ಅಲ್ಲಿ ಏನ್ ಸಿಗುತ್ತೆ ತಿಂಡಿಗೆ ಅಂದ್ರೆ, "ಸಾರ್, ತಟ್ಟೆ ಇಡ್ಲಿ ಇಲ್ಲಿನ ಸ್ಪೆಷಲ್" ಅಂದ ಅಲ್ಲಿನ ಸರ್ವರ್. "ನಿನ್ನೆ ತುಮಕೂರಲ್ಲೇ ತಿಂದು ಬಂದಿದೀವಿ ಗುರು" ಅಂತ ಹೇಳಿ, ಆದ್ರೂ ಒಂದೆರಡು ತಟ್ಟೆ ಇಡ್ಲಿ ಜೊತೆಗೆ, ದೋಸೆ ಆರ್ಡರ್ ಮಾಡಿ, breakfast ಮುಗಿಸಿದೆವು.
ಇಂದಿನ ನಮ್ಮ ಪಯಣ ಬೆಳಗಾವಿಯಿಂದ ಮಹಾಬಲೇಶ್ವರಕ್ಕಿದ್ದು, 320km ಸಾಗಬೇಕಿತ್ತು. ಸುಮಾರು ಆರು ತಾಸಿನಲ್ಲಿ ನಾವಲ್ಲಿಗೆ ತಲುಪಬಹುದೆಂದುಕೊಂಡೆವು. ಈಗಿನ್ನು ಬೆಳಗಿನ 8.30, ಬಿಸಿಲೇರುವುದಕ್ಕೆ ಮುಂಚೆಯೇ ನಾವು ಹೊರಟಂತಾಯಿತು.
ಬೆಳಗಾವಿಯ ಹೊರವಲಯದಲ್ಲಿ, ಪೆಟ್ರೋಲ್ ತುಂಬಿಸಿಕೊಳ್ಳಲು ನಿಂತೆವು. ಅಲ್ಲೇ ಪಕ್ಕದಲ್ಲಿದ್ದ Emission Test ಶಾಪ್ ನೋಡಿ, ನಮ್ಮ ಎಲ್ಲರ ಬೈಕುಗಳ ಎಮಿಷನ್ ಸರ್ಟಿಫಿಕೇಟ್ expire ಆಗಿರುವುದರ ನೆನಪಾಯಿತು. ಈಗ ಬೆಳಗಾವಿಯಿಂದ ತುಸು ಮುಂದೆ ಹೋದರೆ, ನಮ್ಮ ಗಡಿ ದಾಟಿ ಬೇರೆ ರಾಜ್ಯ ಸಿಗುತ್ತದೆ. ಇಲ್ಲಿಂದ ಮುಂದೆ ಎಲ್ಲಿಯೇ ಆದರೂ ಪೊಲೀಸರು ಹಿಡಿದರೆ, ನಮ್ಮಲ್ಲಿದ್ದ ಒಂದು document ಸರಿಯಿಲ್ಲವಾದರೂ ನಮಗೇ ತಾಪತ್ರಯ ಅಂದುಕೊಂಡು. Emission Test ಮಾಡಿಸಿಕೊಂಡೆವು.
ಆ ಶಾಪ್, ಒಂದೇ ಒಂದು ಚಿಕ್ಕ ಮಳಿಗೆ. ಅದರೊಳಗೆ ಸಣ್ಣ ಟೀ ಅಂಗಡಿಯನ್ನೂ ನೆಡೆಸುತ್ತಾ, ಎಮಿಶನ್ ಟೆಸ್ಟ್ ಕೂಡ ಮಾಡಿಕೊಡುತ್ತಾ, ಆ ಶಾಪ್ ನೆಡೆಸುತ್ತಿದ್ದವನು, ಸುಮಾರು 23 ವಯಸ್ಸಿನ ಹುಡುಗ. ಆತನ ಭಾಷೆ ಬೆಳಗಾವಿಯ ಕನ್ನಡದಂತಿರಲಿಲ್ಲ. "ಯಾವೂರು ನಿಮ್ಮದು" ಅಂತ ಕೇಳಿದಾಗ, "ನನ್ನದು ಉಡುಪಿಯ ಹತ್ತಿರ ಒಂದು ಹಳ್ಳಿ. ಈಗೊಂದು ಆರು ತಿಂಗಳಿಂದ ಈ ಅಂಗಡಿ ನೆಡೆಸಿಕೊಂಡು ಇದೀನಿ" ಅಂದ. ಅಲ್ಲದೆ ತಾನು BCA ಮುಗಿಸಿರುವುದಾಗಿಯೂ, ನಾಳೆ ಒಂದು ಕೆಲ್ಸಕ್ಕೆ ಇಂಟರ್ವ್ಯೂಗೆ ಹೋಗಬೇಕಿರುವುದಾಗಿಯೂ ತಿಳಿಸಿದ.
ಮತ್ತೆ, ಅಲ್ಲಿಗೆ ಕೆಲಸಕ್ಕೆ ಹೋದರೆ, ಈ ಅಂಗಡಿಯನ್ನು ಏನು ಮಾಡುವುದಾಗಿ ಕೇಳಿದಾಗ, "ಇದು ನನ್ನ ಸ್ವಂತದಲ್ಲ, ಬೇರೆ ಕೆಲಸ ಸಿಗುವುವರೆಗೂ ಈ ಅಂಗಡಿ ನೆಡಿಸಿಕೊಂಡು, ಕೆಲಸಕ್ಕೆ ಇದ್ದೀನಿ".
"ನಾನು ಬಿಟ್ಟು ಹೋದ ಮೇಲೆ, ಇನ್ನೊಬ್ಬನನ್ನ ಹುಡುಕಿಕೊಳ್ತಾರೆ ನಮ್ಮ ಓನರ್" ಅಂದ.
ಯಾವ ಮುಜುಗರವೂ ಇಲ್ಲದೇ, ಬೇರೊಂದು ಊರಿಗೆ ಬಂದು, ಆ ರೋಡ್ ಸೈಡಿನ ಚಿಕ್ಕ ಮಳಿಗೆಯಲ್ಲೇ ಇದ್ದುಕೊಂಡು, ಟೀ ಅಂಗಡಿ-ಎಮಿಶನ್ ಟೆಸ್ಟ್ ಎಲ್ಲ ಮಾಡಿಕೊಳ್ಳುತ್ತ, ಜೊತೆಗೆ ತನ್ನ ಓದಿಗೆ ಸರಿಯಾದ ಕೆಲಸವನ್ನೂ ಹುಡುಕುತ್ತಾ, ಭವಿಷ್ಯ ರೂಪಿಸಿಕೊಳ್ಳಲು ನಿಂತಿದ್ದ ಆತನನ್ನು ಕಂಡು ಖುಷಿಯಾಯಿತು. ಒಂದು friendly appreciate ಮಾಡುವ ಮನಸ್ಸಾಯಿತು, ಆದರೆ ಉಳಿದವರು ಸ್ವಲ್ಪ over acting ಮಾಡ್ತಿದಾನೆ ಅಂದುಕೊಳ್ತಾರೆ, ಅಂತ ಸುಮ್ಮನೆ ಒಂದು ಥ್ಯಾಂಕ್ಸ್ ಹೇಳಿ ಹೊರಟುಬಂದೆ.
ಹೈವೇ ತುಂಬಾ ಚೆನ್ನಾಗಿತ್ತು. ಒಂದಷ್ಟು ದೂರ ಸಾಗಿದ ಮೇಲೆ, ಕರ್ನಾಟಕ ಗಡಿ ದಾಟಿ ಮಹಾರಾಷ್ಟ್ರಕ್ಕೆ ಸ್ವಾಗತದ ಬೋರ್ಡು ಸಿಕ್ಕಿತು. ಇಲ್ಲಿಗೆ ಎರಡು ರಾಜ್ಯಗಳನ್ನು ದಾಟಿದಂತಾಯ್ತು, ನಮ್ಮ ಪ್ರವಾಸದಲ್ಲಿ.
ಸುಮಾರು 11.30ರ ವೇಳೆಗೆ ಕೊಲ್ಲಾಪುರ ತಲುಪಿದೆವು. ಶರತ್ ಗೆ ಅವರ ಬೈಕಿನ mileage drop ಆಗಿರುವ ಭಾಸವಾಗಿತ್ತು. ಬೈಕು half clutch ನಲ್ಲಿ ಸಾಗುತ್ತಿರುವ ಅನುಮಾನ ಬಂದು, ಕೊಲ್ಲಾಪುರದಲ್ಲೊಮ್ಮೆ RE ಸರ್ವಿಸ್ ಸೆಂಟರಲ್ಲಿ check ಮಾಡಿಸಿಕೊಂಡು ಹೋಗೋಣವೆಂದು, ತಿಳಿಸಿದರು. ನಮ್ಮ ಮೂವರಲ್ಲಿ ಶರತ್-ಶ್ವೇತಾ ಮುಂದೆ ಸಾಗುತ್ತಿದ್ದವರು, ಮ್ಯಾಪಿನಲ್ಲಿ ಹುಡುಕಿಕೊಂಡು ಸೀದಾ ಸರ್ವಿಸ್ ಸೆಂಟರಿಗೆ ನೆಡೆದರು. ಶಿವು-ದೀಪಿಕ ಮತ್ತು ನಾನು ಅವರನ್ನು ಹಿಂಬಾಲಿಸಿದೆವು.
ಕೊಲ್ಲಾಪುರದ RE ಸರ್ವಿಸ್ ಸೆಂಟರ್ ಅದಾಗಲೇ, ಜನರಿಂದ ತುಂಬಿ ಹೋಗಿತ್ತು. ಆದರೂ ನಾವು ಹೋಗಿ, ಅಲ್ಲಿನ ಮ್ಯಾನೇಜರ್ ಗೆ ನಮ್ಮ ಪ್ರವಾಸದ ವಿಷಯ ತಿಳಿಸಿ, ಶರತ್ ರ ಬೈಕಿನ ಕೆಲಸ ಮಾಡಿಕೊಡಬೇಕಾಗಿ ಕೇಳಿದೆವು. ಆ ಮ್ಯಾನೇಜರ್ ಇನ್ನು ಒಂದು ತಾಸು ಬೇಕಾಗುತ್ತದೆ ಎಂದ. ಆಗಲಿ ಎಂದು ನಾವೆಲ್ಲರೂ ಅಲ್ಲೇ ರಸ್ತೆಯಲ್ಲೇ ಬೈಕುಗಳನ್ನು ನಿಲ್ಲಿಸಿಕೊಂಡು ಕಾಯತೊಡಗಿದೆವು.
ಪ್ರತಿ ವರ್ಷ ನೆಡೆಯುವ Royal Enfield Riders Mania Event ಈ ಬಾರಿ ಕೊಲ್ಲಾಪುರದಲ್ಲಿ, ಇನ್ನೇನು ಕೆಲವು ದಿನದಲ್ಲೇ ಆಯೋಜನೆಗೊಳ್ಳಲಿತ್ತು. ಹಾಗಾಗಿಯೇ ಅಲ್ಲಿ ಅಷ್ಟೊಂದು ಜನರು ಮತ್ತು ಬೈಕುಗಳಿದ್ದವು. Royal Enfield ಕಂಪನಿಯು, ಭಾರತದಾದ್ಯಂತ ಆಯ್ದ ಒಂದು ಜಾಗದಲ್ಲಿ ವರ್ಷಕ್ಕೊಮ್ಮೆ ಈ ಕೂಟವನ್ನು ಆಯೋಜಿಸುತ್ತದೆ. ಹವ್ಯಾಸಿ ಸವಾರರೆಲ್ಲರೂ ಒಂದು ಕಡೆ ಸೇರಿ, RE ಬೈಕುಗಳ ಒಂದು ಜಾತ್ರೆಯಂತಿರುತ್ತದೆ. ಹಲವಾರು ರೀತಿಯ ಪಂದ್ಯಗಳು, ಪ್ರದರ್ಶನಗಳು, ಬಹುಮಾನಗಳು, ಸಂಗೀತ, ಕುಣಿತ ಮೋಜು ಎಲ್ಲವೂ ಇರುತ್ತದೆ ಅಲ್ಲಿ.
ಅಲ್ಲಿ Service Centreನಲ್ಲಿದ್ದ ಹಲವಾರು ಜನ, ನಮ್ಮ ಪ್ರವಾಸದ ಬಗ್ಗೆ ವಿಚಾರಿಸಿ, ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರು.
ನಾವು ಸುಮಾರು ಒಂದು ಗಂಟೆ ಕಾದರೂ, ಶರತ್ ರ ಬೈಕನ್ನು ಇನ್ನೂ ಒಳಗಡೆಗೇ ತೆಗೆದುಕೊಂಡು ಹೋಗಿರಲಿಲ್ಲ. ಆಗ ಮತ್ತೆ ಆ ಮ್ಯಾನೇಜರ್ ಬಳಿ request ಮಾಡಿಕೊಳ್ಳಬೇಕಾಯಿತು, ಶರತ್ ಆತನಿಗೆ ನಮ್ಮ ಪರಿಸ್ಥಿತಿಯನ್ನು ಮತ್ತೆ ವಿವರಿಸಿದ ಮೇಲೆ, ಬೈಕನ್ನು ತೆಗೆದುಕೊಂಡು ಒಳ ಹೋದರು.
ಆಗ ಅಲ್ಲಿಗೆ ತನ್ನ ಬೈಕಿನೊಂದಿಗೆ ಬಂದಿದ್ದ ಒಬ್ಬ ವ್ಯಕ್ತಿ ನಮ್ಮೊಡನೆ, ಮಾತಿಗಿಳಿದ. ಏನು ಸಮಸ್ಯೆಯಾಗಿದೆ, ಯಾಕೆ ಕಾಯುತ್ತಿದ್ದೀರಿ, ಎಲ್ಲಿಗೆ ಹೋಗುವವರಿದ್ದೀರಿ, ಎಂದೆಲ್ಲ ವಿಚಾರಿಸತೊಡಗಿದ.
ಎತ್ತರದ ಸದೃಢ ಮೈಕಟ್ಟು, Low fade ಹೇರ್ ಸ್ಟೈಲ್, Balbo Beard & ಮೀಸೆ, ಬಿಳಿ ಶರ್ಟ್, ಮೊಣಕೈವರೆಗೆ ಮಡಿಚಿದ್ದ ತೋಳಲ್ಲಿ ಎದ್ದು ಕಾಣುವ Tattoo,,, Typical Hansome Biker ನಂತೆ ಆತ ಕಾಣುತ್ತಿದ್ದ. ನಮ್ಮ ಪರಸ್ಪರ ಪರಿಚಯದ ಬಳಿಕ, ಆತನ ಹೆಸರು ಓಂಕಾರ್ ಬುಧಾಳೇ ಎಂಬುದಾಗಿಯೂ, ಆತ Passionate Enfield Rider ಎಂದು ತಿಳಿಯಿತು.
ಅಷ್ಟರಲ್ಲಿ ಅಲ್ಲಿದ್ದ ಮ್ಯಾನೇಜರ್ ಹೇಳಿದ, "ಇವರು ಕಳೆದ ಮೂರು ಬಾರಿಯಿಂದಲೂ RE Rider Mania Champion" ಅಂತ.
ಆತನ Humble n Friendly ವ್ಯಕ್ತಿತ್ವ ನೋಡಿ ಆಶ್ಚರ್ಯವಾಯಿತು. ಆತ ತನ್ನ ಹಲವು ರೈಡ್ ಅನುಭವಗಳನ್ನು ನಮ್ಮೊಡನೆ ಹಂಚಿಕೊಂಡು, ನಮ್ಮ ಪ್ರವಾಸಕ್ಕೆ ಶುಭ ಕೋರಿದ. ನಾವು ಹೋಗುಲಿರುವ Route map ಕೇಳಿ, ಆತನಿಗೆ ಅಲ್ಲೆಲ್ಲಾ ರೈಡರ್ ಫ್ರೆಂಡ್ಸ್ ಇರುವುದಾಗಿಯೂ, ಮುಂದೆ ದೆಹಲಿಯವರೆಗೂ ಎಲ್ಲಿಯೇ ನಮಗೆ ತೊಂದರೆಯಾದರೂ, ಆತನಿಗೆ ತಿಳಿಸಿದಲ್ಲಿ, ಆತ ತನ್ನ ಸ್ನೇಹಿತರಿಂದ ಸಹಾಯ ಒದಗಿಸುವುದಾಗಿ ಭರವಸೆ ಕೊಟ್ಟನು. ಆ ಕ್ಷಣಕ್ಕೆ Royal Enfield is a family ಎನ್ನುವ feeling ಬಂತು. ಆತ ಹೊರಡುವ ಮುಂಚೆ ಆ Champion Rider ಜೊತೆ ಒಂದು selfie ತೆಗೆದುಕೊಂಡೆವು.
ಇನ್ನಷ್ಟು ಹೊತ್ತು ಕಾದ ಮೇಲೂ ಬೈಕು ರಿಪೇರಿಯಾಗಲಿಲ್ಲ. ಸಮಯ ಮಧ್ಯಾಹ್ನ 1 ಗಂಟೆಯಾದರೂ ಮುಗಿಯಲಿಲ್ಲವಲ್ಲ ಎಂದು ಕೇಳಿದಾಗ, ಈಗ 1-2 lunch break ಇರುತ್ತೆ, ಆಮೇಲೆನೇ ರಿಪೇರಿ ಮುಗಿಸ್ತೀವಿ ಅಂದರು. ಬೇರೇನೂ ಮಾಡುವಂತಿರಲಿಲ್ಲ, ನಾವೂ ಊಟ ಮಾಡಲು ಹೋಗುವುದಾಗಿ ತೀರ್ಮಾನಿಸಿದೆವು.
ಅಲ್ಲಿ ಪಕ್ಕದಲ್ಲಿದ್ದ hardware ಅಂಗಡಿಯ ವ್ಯಕ್ತಿ ನಮಗೆ ಎರಡು ಹೋಟೆಲುಗಳನ್ನು ಸೂಚಿಸಿ, ಒಂದು ಸ್ವಲ್ಪ ಲಕ್ಸುರಿ ಹೋಟೆಲ್, ಇನ್ನೊಂದು ಸಾಧಾರಣ ಹೋಟೆಲ್. ಎರಡೂ ಎದುರು ಬದುರಿಗಿವೆ, ನಿಮಗೆ ಯಾವುದು ಬೇಕೋ ಅದಕ್ಕೆ ಹೋಗಿ, ಎರಡರಲ್ಲೂ ಊಟ ಚೆನ್ನಾಗಿರುತ್ತದೆ ಎಂದು ತಿಳಿಸಿದರು.
ಒಂದೂವರೆ ಕಿಲೋಮೀಟರ್ ದೂರವಿದ್ದ ಹೋಟೆಲಿಗೆ, ಇನ್ನೂ ಸಮಯವಿದ್ದಿದ್ದರಿಂದ, ಬೈಕುಗಳನ್ನು ಅಲ್ಲಿಯೇ ನಿಲ್ಲಿಸಿ ನಾವು ಆರಾಮವಾಗಿ ನೆಡೆದುಕೊಂಡು ಹೊರಟೆವು.
 |
| ಮಹಾರಾಣಿ ತಾರಾಬಾಯಿ |
ನೆಡೆಯುತ್ತಾ ಸಾಗುವಾಗ ಎದುರಿಗೆ ಸಿಕ್ಕ ಒಂದು circle ನಲ್ಲಿ, ರಾಣಿಯೊಬ್ಬರ ಪ್ರತಿಮೆಯಿತ್ತು. ಯಾರ ಪ್ರತಿಮೆಯೆಂದು ಹಾಗೇ ರಸ್ತೆ ದಾಟುತ್ತಲೇ, ಪ್ರತಿಮೆಯ ಕೆಳಗಿದ್ದ ಬೋರ್ಡಿನ ಕಡೆಗೆ ಕಣ್ಣು ಹಾಯಿಸಿದೆ. 'ಮಹಾರಾಣಿ ತಾರಾಬಾಯಿ' ಎಂಬ ಹೆಸರಿತ್ತು. ನನಗಾಗ ಆಕೆ ಮರಾಠಾ ರಾಣಿಯೆಂದು, ಯಾವುದೋ ಕಾದಂಬರಿಯಲ್ಲಿ ಓದಿದ ನೆನಪಾಯಿತು. ಆದರೆ ಅಷ್ಟು ವಿವರವಾಗಿ ಹೊಳೆಯಲಿಲ್ಲ.
(* ಆ ದಿನ ರಾತ್ರಿ ಮಹಾಬಲೇಶ್ವರ ತಲುಪಿ ಹೋಟೆಲ್ ರೂಮಿನಲ್ಲಿ ವಿರಮಿಸುತ್ತಿದ್ದಾಗ, ಆಕೆಯ ಬಗ್ಗೆ internet ನಲ್ಲಿ ಹುಡುಕಿದಾಗ ತಿಳಿಯಿತು, ಆಕೆ ಶಿವಾಜಿ ಮಾಹಾರಾಜರ ಮಗ ರಾಜಾರಾಮ ಭೋಸಲೆಯ ಪತ್ನಿಯೆಂದು. ನಂತರ ನಾನು ಓದಿದ್ದ, "ಶಿವಪ್ರಭುವಿನ ಪುಣ್ಯ" ಎಂಬ ಕಾದಂಬರಿಯಲ್ಲಿನ, ಶಿವಾಜಿಯ ಮರಣಾನಂತರದ ಪರಿಸ್ಥಿತಿಯ ಬಗೆಗಿನ ವಿಷಯಗಳು ನೆನಪಾದವು. *)
ನೆಡೆದು ಬಂದು, ಹೋಟೆಲುಗಳ ಎದುರಿಗೆ ನಿಂತು ಎದುರು ಬದುರಿಗಿದ್ದ ಎರಡೂ ಹೋಟೆಲುಗಳನ್ನು ನೋಡಿ, "ಹೋಟೆಲ್ ಮಿರ್ಚಿ" ಎಂದು ಬೋರ್ಡಿದ್ದ ಸಾಧಾರಣ ಹೋಟೆಲ್ ಸಾಕು ನಮ್ಮ ಊಟಕ್ಕೆ ಎಂದು, ಒಳಗೆ ನೆಡೆದೆವು.
ನಮಗಾರಿಗೂ Restaurant with luxury ambiance ಬೇಕೆನಿಸಲಿಲ್ಲ, ಮರಾಠಿ ಶೈಲಿಯ ಸರಳ ಊಟ ಸಾಕಿತ್ತು. ನಮ್ಮಲ್ಲಿ ಯಾರೊಬ್ಬರೂ ಏನೂ ಚಕಾರವೆತ್ತಲಿಲ್ಲ, ನಮಗೆ ಸರಳತೆಯಲ್ಲೇ ಖುಷಿ ಎನಿಸಿತು. ಆಗ ನನಗೆ ಅಲ್ಲಿ ಕುವೆಂಪುರವರ ಒಂದು ಪದ್ಯದ ಈ ಸಾಲುಗಳು ಅರೆಬರೆಯಾಗಿ ನೆನಪಾದವು.
ಸಾಮಾನ್ಯತಾ ಸುಖವೇ ಶಾಂತಿ ಜೀವಾಧಾರ;
ಸಾಮಾನ್ಯತೆಯೇ ಜಗನ್ ಮಾನ್ಯತಾ ಸಂಸಾರ!!!
- ಕುವೆಂಪು
ಕಾಂಪೌಂಡ್ ಗೋಡೆಯ ಮೇಲೆ ಕಮಾನು ಕಟ್ಟಿ, ನೆರಳಿಗೆಂದು ಹಸಿರುಬಣ್ಣದ ತೆಳು ಪ್ಲಾಸ್ಟಿಕ್ ನೂಲಿನ ಬಟ್ಟೆಯನ್ನು ಮುಚ್ಚಿ, ಒಳಗೆ ತುಸು ತಂಪಾಗಿರುವಂತೆ ಆ ಹೋಟೆಲಿನಲ್ಲಿ ವ್ಯವಸ್ಥೆ ಮಾಡಿದ್ದರು.
ಇದ್ದ ನಾಲ್ಕೈದು ಟೇಬಲ್ಲಿನಲ್ಲಿ, ಹಲವರು ಕೂತಿದ್ದರು. ನಮಗೂ ಒಂದು ಟೇಬಲ್ ತೋರಿಸಿ, ಕೂರಲು ಹೇಳಿ, ಒಬ್ಬ ಹುಡುಗ ಆರ್ಡರ್ ತೆಗೆದುಕೊಳ್ಳಲು ಬಂದ. ನಾವು ಮೆನು ನೋಡುತ್ತಾ ಇಲ್ಲಿನ ಮರಾಠಿ ಸ್ಪೆಷಲ್ ಟ್ರೈ ಮಾಡೋಣ, ಅಂತ ಮಾತಾಡಿಕೊಳ್ಳುತ್ತಿದ್ದೆವು. ಆಗ ನಮ್ಮ ಮಾತು ಕೇಳಿಸಿಕೊಂಡು ಆತ, ಕನ್ನಡದಲ್ಲಿಯೇ ಏನೇನು ಚೆನ್ನಾಗಿರುತ್ತೆ ಎಂದು ತಿಳಿಸಿ ಹೇಳಿದ. ನಾವು ಆಗಲಿ ಎಂದು ಅವೆಲ್ಲವನ್ನೂ ತರಲು ಹೇಳಿದೆವು.
ಆತ ಬೆಳಗಾವಿಯನೆಂದೂ, ಅಲ್ಲದೆ ಅದು ಗಡಿಭಾಗವಾದ್ದರಿಂದ, ಹಲವಾರು ಜನರಿಗೆ ಕನ್ನಡ ಬರುತ್ತದೆಂದೂ ತಿಳಿಸಿದ.
ಒಂದತ್ತು ನಿಮಿಷ ಕಾದ ಬಳಿಕ ನಮ್ಮ ಊಟ ಬಂದಿತು. ನಾವು ಅಲ್ಲಿ ತಿಂದ, ನೆನಪಿನಲ್ಲಿಟ್ಟು ಹೇಳಬಹುದಾದ ವಿಶೇಷ ತಿನಿಸುಗಳೆಂದರೆ ಶೆವಗಾ ಫ್ರೈ ಎಂಬ ಸ್ಟಾರ್ಟರ್, ಕೊಲ್ಲಾಪುರದ 'ವೆಜ್ ಕೋಲ್ಹಪುರಿ', ಫೋಡ್ನಿಬಾತ್ ಮತ್ತು ಅಕ್ಕಾಸೀಸೂನ್.
 |
| ಶೇವಗಾ ಫ್ರೈ |
ವೆಜ್ ಕೋಲ್ಹಪುರಿ, ನಮಗೆಲ್ಲ ಗೊತ್ತೇ ಇದೆ. ಇನ್ನು ಶೇವಗಾ ಬಗ್ಗೆ ಹೇಳಬೇಕೆಂದರೆ ಅದು, ನುಗ್ಗೆಕಾಯಿಯನ್ನು ಕತ್ತರಿಸಿ ಬೇಯಿಸಿ, ಎಣ್ಣೆಯಲ್ಲಿ ಶೇಂಗಾ ಪುಡಿಯೊಂದಿಗೆ ಉರಿದು, ಮಾಡಲಾಗಿದ್ದ starter. ಫೋಡ್ನಿಬಾತ್ ಒಂದು ವಾಂಗೀಬಾತ್ ಶೈಲಿಯ ಪುಲಾವ್, ಅಕ್ಕಾಸೀಸೂನ್ ಅಂದರೆ ಹೆಸರುಕಾಳಿನ ಒಂದು ರೀತಿಯ ಪಲ್ಯ. ಎಲ್ಲವೂ ಒಂಥರಾ ಹೊಸ ರುಚಿ, ನಮ್ಮ ನಾಲಗೆಗೆ ಬಹಳ ಹಿಡಿಸಿತು.
ಊಟ ಮುಗಿಸಿ, ಹೊರ ಬಂದಾಗ ಎಲ್ಲರೂ ಮತ್ತೆ ವಾಪಸ್ಸು ಅಲ್ಲಿಯ ತನಕ ನೆಡೆಯಲು ಆಗುವುದಿಲ್ಲ ಎಂದರು. ಆಗ ಒಂದು ಆಟೋ ಹಿಡಿದು, ಒಂದೇ ಆಟೋದಲ್ಲಿ ಐವರೂ ಹೋದೆವು. ಆ ಆಟೋ ಆ ದಿನ, ನಮಗೆಷ್ಟು ಶಾಪ ಹಾಕಿಕೊಂಡಿತೋ ಗೊತ್ತಿಲ್ಲ, ಆದರೆ ಅದರ ಗೋಳು ಆ ಎಂಜಿನ್ ಶಬ್ದದಲ್ಲಿ ಸ್ಪಷ್ಟವಾಗಿ ಕೇಳುತ್ತಿತ್ತು.
ಆ ಸರ್ವಿಸ್ ಸೆಂಟರಿನವರು ಇನ್ನೂ ರಿಪೇರಿ ಮುಗಿಸಿರಲಿಲ್ಲ. ಶರತ್ ಹೋಗಿ ಬೇಗ ಮಾಡಿಕೊಡಿ ಅಂತ, ಆ ಮೆಕ್ಯಾನಿಕ್ ಪಕ್ಕದಲ್ಲಿ ಕುಳಿತುಕೊಂಡರು. ನಾವು ಹೋಗಿ waiting ರೂಮಿನಲ್ಲಿ ಕುಳಿತುಕೊಂಡು ಕಾಯತೊಡಗಿದೆವು.
ನಾನೂ ಮತ್ತು ಶರತ್ ನಮ್ಮ ಬೈಕುಗಳನ್ನು ಬೆಂಗಳೂರಿನಿಂದ ಕನ್ಯಾಕುಮಾರಿಗೆ ಕಳುಹಿಸುವ ಮೊದಲೇ, ಬೈಕಿನ ಟ್ಯೂಬುಗಳಿಗೆ Puncture care solution ಅನ್ನು ಹಾಕಿಸಿಕೊಂಡಿದ್ದೆವು. Tubeless ಟೈರುಗಳಾದರೆ puncture ಆದರೂ ಸಹ ಪಂಕ್ಚರ್ ಶಾಪ್ ಸಿಗುವವೆರೆಗೆ ಹಲವಾರು ಕಿಲೋಮೀಟರು ಹೋಗಬಹುದು. ಆದರೆ ಟ್ಯೂಬುಗಳುಳ್ಳ ಟೈರುಗಳಾದರೆ ಜಾಸ್ತಿ ದೂರ ಹೋಗಲಾಗುವುದಿಲ್ಲ. ಹಾಗಾಗಿಯೇ ಟ್ಯೂಬುಗಳೊಳಗೆ ಅಂಟಿನಂತಹ ಒಂದು ದ್ರವವನ್ನು ತುಂಬಿಸಿದರೆ, ಅಕಸ್ಮಾತ್ ಪಂಕ್ಚರ್ ಆದರೂ ಸಹ, ಅದಾಗಿಯೇ ಅಂಟಿಕೊಂಡು air pressure ಕಡಿಮೆಯಾಗದಂತೆ ತಡೆಯುತ್ತದೆ. ಹಾಗಾಗಿಯೇ ನಾವು, ಆ solution ಅನ್ನು ಟ್ಯೂಬುಗಳಿಗೆ ಹಾಕಿಸಿಕೊಂಡಿದ್ದೆವು. ಶಿವು ಆ ಸೊಲ್ಯೂಷನ್ ಡಬ್ಬಿಗಳನ್ನು ಕೊಂಡಿದ್ದನಾದರೂ, ಬೆಂಗಳೂರಿನಲ್ಲಿ ಅದನ್ನು ಹಾಕಿಸಿಕೊಳ್ಳಲು ಸಮಯ ಸಿಗದೇ, ಹಾಗೇ ಬ್ಯಾಗಿನಲ್ಲಿ ತಂದಿದ್ದನು. ಆಗ ಹೇಗೂ ಇಲ್ಲಿ ಸರ್ವಿಸ್ ಸೆಂಟರಿನಲ್ಲಿ ಕಾಯುತ್ತಿರುವೆವಲ್ಲ ಎಂದು, ಆ ಮರೆತಿದ್ದ ಕೆಲಸವನ್ನು ಇಲ್ಲಿ ಮಾಡಿಸಿಕೊಂಡನು.
ಶರತ್ ರ ಬೈಕಿನ clutch plate ಹಾಳಾಗಿದೆಯೆಂದು ಮೆಕ್ಯಾನಿಕ್ ಹೇಳಿದರು. ಸರಿ ಹೊಸದನ್ನು ಹಾಕಿ ಎಂದಾಗ, ಈಗ ಹೊಸದನ್ನು ಹಾಕಲು ಬಹಳಷ್ಟು ತಡವಾಗಬಹುದು ಎಂದರು. ಆಗ ಇಲ್ಲೊಂದು ಸ್ಪೇರ್ clutch plate ಖರೀದಿಸಿಕೊಂಡು ಒಯ್ಯುವುದಾಗಿಯೂ, ಮುಂದೆ ಹೋಗುವ ಯಾವುದಾದರೂ ಊರಿನಲ್ಲಿ ಸಮಯ ಬಿಡುವು ಮಾಡಿಕೊಂಡು ಮತ್ತೆ ಹೊಸದನ್ನು ಹಾಕಿಸಿಕೊಳ್ಳಬೇಕೆಂದು ಯೋಚಿಸಿ, ಇದ್ದುದನ್ನೇ ಮತ್ತೆ ಸರಿಯಾಗಿ adjust ಮಾಡಿ, oiling ಮಾಡಿಸಿಕೊಂಡು, ಬೈಕನ್ನು ಹೊರ ತಂದರು.
ಅಂತೂ ನಾಲ್ಕು ಗಂಟೆಯಾಯಿತು, ನಾವು ಮತ್ತೆ ನಮ್ಮ ಪ್ರಯಾಣ ಶುರುಮಾಡುವ ವೇಳೆಗೆ.
ಇಲ್ಲಿ ಅನಿರೀಕ್ಷತವಾಗಿ ನಾಲ್ಕು ತಾಸು ಸಮಯ ಕಾಲಹರಣವಾಗಿದ್ದರಿಂದ ನಮ್ಮ ಪ್ಲಾನ್ ಸ್ವಲ್ಪ ಏರುಪೇರಾಯಿತು. ಈಗ ನಾವು ನೋಡಬೇಕೆಂದಿದ್ದ ಒಂದು ತಾಣವನ್ನು, ಹೊರತುಪಡಿಸಿ ಸೀದಾ ಮಹಾಬಲೇಶ್ವರದ ಕಡೆಗೆ ಸಾಗುವುದಾಗಿಯೂ, ಮಹಾಬಲೇಶ್ವರ ಬೆಟ್ಟದ ಕೆಳಗೆ ಕಾಣಸಿಗುವ 'ದೋಮ್ ಲೇಕ್' ಅನ್ನು ನೋಡಬಹುದಾಗಿ ಯೋಜಿಸಿ ಬೈಕುಗಳ ವೇಗವನ್ನು ಹೆಚ್ಚಿಸಿದೆವು.
ಅದು ಸ್ಟೇಟ್ ಹೈವೇ, ಅಲ್ಲದೇ ಡಿವೈಡೆಡ್ ಲೇನ್ ಕೂಡ ಇರಲಿಲ್ಲ. ಆದರೂ ಹೆಚ್ಚು ವಾಹನ ದಟ್ಟಣೆ ಇರಲಿಲ್ಲವಾದ್ದರಿಂದ ನಾವು ಬಹಳ ವೇಗವಾಗಿ ಸಾಗುತ್ತಿದ್ದೆವು. ನಾವು ತಮಿಳುನಾಡಿನಲ್ಲಿ ಪ್ರಯಾಣ ಮಾಡುತ್ತಿದ್ದಾಗ ಅಷ್ಟೇನೂ, ಯಾವುದೋ ಬೇರೆ ರಾಜ್ಯಕ್ಕೆ ಬಂದ ಭಾವನೆಯಿರಲಿಲ್ಲ. ಪ್ರಾಯಶಃ ನಾವು ಇನ್ನೊಂದು ದಿನದಲ್ಲಿ ಕರ್ನಾಟಕ ತಲುಪುವೆವೆಂಬ ಯೋಚನೆ, ಅಲ್ಲಿ ಮನಸಲ್ಲಿ ಇದ್ದದ್ದರಿಂದಲೋ ಏನೋ.
ಆದರೆ ಇಲ್ಲಿ ನಾವು ನಮ್ಮ ನಾಡು ದಾಟಿ ಬಂದೆವು ಎಂಬ ಭಾವನೆ, ಒಂದು ರೀತಿಯ ಹೊಸದಾಗಿ ಏನೋ ನೋಡುತ್ತಿರುವ ಪುಳಕ, ಮುಂದೆ ಮುಂದೆ ಹೇಗಿರುವುದೋ ಎಂಬ ತಳಮಳ ಬಹಳಷ್ಟು ಇತ್ತು. ನನಗೆ ಅತ್ಯಾಕರ್ಷಕವೆಂದು ಯಾವುದೂ ಕಾಣಲಿಲ್ಲವಾದರೂ, ಸುತ್ತಲೂ ಏನಿದೆ, ಎಲ್ಲ ದೃಶ್ಯವನ್ನೂ ಕಣ್ತುಂಬಿಕೊಳ್ಳಬೇಕು, ಯಾವುದೋ ಯೋಚನೆ ಮಾಡುತ್ತಾ ಬೈಕು ಓಡಿಸಿ ಸಿಕ್ಕ ಅವಕಾಶ ಬಿಡದೆ, ಆಸಕ್ತಿದಾಯಕವಾಗಿ ಎಲ್ಲವನ್ನೂ ನೋಡಬೇಕು, ಪ್ರತಿ ಕ್ಷಣದ rideನ್ನೂ ಅನುಭವಿಸಬೇಕು, ಎಂದೆಲ್ಲಾ ಏನೇನೋ ಅಂದುಕೊಳ್ಳುತ್ತಾ, ನಾನು ಪ್ರಯತ್ನಪೂರ್ವಕವಾಗಿ ಅತ್ತಿತ್ತ, ಅತ್ತಿತ್ತ ನೋಡುತ್ತಲೇ, ನನ್ನ ಮುಂದೆ ಸಾಗುತ್ತಿದ್ದ ಶಿವೂ ಮತ್ತು ಶರತ್ ರ ಬೈಕುಗಳನ್ನು ಹಿಂಬಾಲಿಸುತ್ತಿದ್ದೆ.
(ಆಗಿನ್ನೂ ನನಗೆ, ಕಣ್ಣು ತಂತಾನೇ ನಿರಾಯಾಸವಾಗಿ, ಅಪ್ರಯತ್ನವಾಗಿ, ಯಾವುದೋ ಮಾಯಾಲೋಕದಲ್ಲಿ ಕಳೆದುಹೋಗುವ, ಅನುಭವವಿನ್ನೂ ಆಗಿರಲಿಲ್ಲ. ಅದಕ್ಕಾಗಿಯೇ ನಾನು, ಪ್ರಯಾಣವನ್ನು ಪೂರ್ಣ ಮನಸ್ಸಿಟ್ಟು ಸವಿಯಲು ಪ್ರಯತ್ನಿಸುತ್ತಿದ್ದೆ.)
ಮರಾಠ ನಾಡಿನ ಆ ಹಾದಿಯಲ್ಲಿ, ರಸ್ತೆಯ ಎಡ ಬಲಕ್ಕೆ ಎಷ್ಟು ದೂರ ಸಾಗಿದರೂ ಬರೀ ಬೆಳೆದು ನಿಂತ ಕಬ್ಬಿನ ಗದ್ದೆಗಳೇ ಕಾಣುತ್ತಿದ್ದವು. ಬಿಸಿಲಿಳಿದ ಸಂಜೆಯಲ್ಲಿ, ಹಸಿರಾದ ಕಬ್ಬಿನ ಗದ್ದೆಗಳ ಮೇಲೆ, ಗಾಳಿಗೆ ತೂಗಿಬಾಗುತ್ತಿದ್ದ ಕಬ್ಬಿನ ತೆನೆಗಳು ಹಸಿರು ಕೆರೆಯೊಂದರ ಸಣ್ಣ ಅಲೆಗಳಂತೆ ಭಾಸವಾಗುತ್ತಿತ್ತು. ಕಬ್ಬನ್ನು ತುಂಬಿಕೊಂಡು ಸಾಗುತ್ತಿದ್ದ ಎತ್ತಿನ ಬಂಡಿಗಳು, ಟ್ರ್ಯಾಕ್ಟರ್-ಗಳು ಒಂದರ ಹಿಂದೆ ಒಂದರಂತೆ ಆಗಾಗ ಎದುರಾಗುತ್ತಿದ್ದವು.
ಶರತ್-ಶ್ವೇತಾ ಮತ್ತು ಶಿವೂ-ದೀಪಿಕಾರಿಗೆ ಪರಸ್ಪರ ಸಾಥಿಯಿದ್ದದರಿಂದ ಅವರುಗಳು ಹೇಗೆ ಮಾತನಾಡುತ್ತಾ, ಅನಿಸಿಕೆಗಳ ಹಂಚಿಕೊಳ್ಳುತ್ತಾ ಪ್ರಯಾಣವನ್ನು ಸವಿದರೋ ನಾನರಿಯೆ. ನನಗಂತೂ, ಬರಿ ನಾನು, ನನ್ನ ಭಾವನೆಗಳು, ನನ್ನ ಬೈಕಿನ ಶಬ್ದ ಮತ್ತು ಎದುರಿಗೆ ಕಾಣುವ ದೃಶ್ಯ ಇವಿಷ್ಟೇ ಇದ್ದವು ನನ್ನ ಪಾಲಿಗೆ.
ಸಂಜೆ 6 ಗಂಟೆಯ ಸುಮಾರಿಗೆ, ಒಂದು ಬ್ರೇಕ್ ತೆಗೆದುಕೊಳ್ಳೋಣವೆಂದು ನಾವು ಒಂದು ಸಣ್ಣ ರಸ್ತೆಬದಿಯ ಹೋಟೆಲಿನ ಪಕ್ಕ ನಿಲ್ಲಿಸಿದೆವು. ಆದರೆ ಸಂಜೆ ಟೀ/ಕಾಫಿಗೆ ಬದಲಾಗಿ, ಅಲ್ಲಿ ಕಾಣಿಸಿದ ಕಬ್ಬಿನ-ಹಾಲು ಕುಡಿಯೋಣವೆಂದು ಕುಳಿತೆವು.
ನಾನೂ, ಶಿವು ಮತ್ತು ಶರತ್ ದಣಿವಾರಿಸ್ಕೊಳ್ಳುತ್ತಿದ್ದೆವು. ದೀಪಿಕಾ ತಾವು ದಾರಿಯಲ್ಲಿ ಕಂಡ ವಿಷಯಗಳ ಬಗ್ಗೆ ಹೇಳುತ್ತಿದ್ದರು, "ನಾನು ಕಬ್ಬು ತುಂಬಿದ ಗಾಡಿ ಕಂಡಾಗ, ತಿನ್ನಲು ಕಬ್ಬು ಮುರಿದುಕೊಳ್ಳೋಣ ಎಂದುಕೊಂಡೆ, ಆದರೆ ಶಿವು ಬೈಕು ನಿಲ್ಲಿಸಲೇ ಇಲ್ಲ" ಅಂತ ಶಿವೂಗೆ ಬಯ್ದರು. ಶಿವೂ "ಕಬ್ಬು ಯಾಕೆ, ಕಬ್ಬಿನ-ಹಾಲನ್ನೇ ಕುಡಿ ಈಗ" ಅಂದಿದ್ದು, ತಾನು ನಿಲ್ಲಿಸದಿದ್ದು ಸರಿ ಎಂಬುದಾಗಿ ಹೇಳಿದಂತಿತ್ತು. ಶ್ವೇತಾಗೆ ಎಲ್ಲಿ ಹೋದರಲ್ಲಿ ತಮ್ಮ ಗೆಳೆಯರು ಸಿಗುತ್ತಿದ್ದರು. I mean, ನಾಯಿಗಳು, ನಾಯಿ-ಮರಿಗಳು. ಅಲ್ಲಿಯೂ ಯಾವುದೋ ಒಂದು ನಾಯಿ ಬಂದು ಅವರ ಕಾಲ ಬಳಿ ಬಾಲ ಅಲ್ಲಾಡಿಸುತ್ತಿತ್ತು. ಅವರು ಅದರೊಡನೆ ಆಡುತ್ತಾ ಬ್ಯುಸಿಯಾಗಿದ್ದರು. ನಾವು ಎರಡೆರಡು ಲೋಟ ಕಬ್ಬಿನ-ಹಾಲು ಕುಡಿದೆವು.
ಕುಡಿಯುತ್ತಾ ನಾನು, ಕಬ್ಬಿನ-ಹಾಲು ಕುಡಿದರೆ ಬೇಗ ನಿದ್ದೆ ಬರುತ್ತದೆ ಎಂದು, ನನ್ನ ಬಾಲ್ಯದ ಶಾಲಾದಿನಗಳಲ್ಲಿ ಒಮ್ಮೆ ಸಂಜೆಯೇ ಮನೆಯಲ್ಲಿ ಆಲೆಮನೆಯಿಂದ ತಂದಿದ್ದ ಕಬ್ಬಿನ-ಹಾಲನ್ನು ಹೊಟ್ಟೆ ತುಂಬಾ ಕುಡಿದು, ಒಂದತ್ತು ನಿಮಿಷದಲ್ಲೇ ಎಚ್ಚರವಾಗದಂತೆ ಮಲಗಿ, homework ಮಾಡದೇ ಮರುದಿನ ಶಾಲೆಗೇ ಹೋಗಿ, ಹೊಡೆತ ತಿಂದ ನೆನಪನ್ನು ಹೇಳಿದೆ. ಎಲ್ಲರೂ ನನ್ನ ಮೇಲೆ ತಿರುಗಿಬಿದ್ದರು. "ಬರೀ ಓತ್ಲಾ ವಿಷಯಗಳೇ ಆಯ್ತು, homework ಮಾಡದ ಕಳ್ಳನಿಗೆ, ಕಬ್ಬಿನ-ಹಾಲಿನ ಪಿಳ್ಳೆ ನೆವ" ಎಂದು ವಾದಿಸಿ, ಅದರಲ್ಲಿ ನನ್ನದೇ ತಪ್ಪು, ಕಬ್ಬಿನ-ಹಾಲು ನಿರಪರಾಧಿ ಎಂದು ಘೋಷಿಸಿಬಿಟ್ಟರು. ನಾಲ್ವರ ಮುಂದೆ ವಾದ ಮಾಡಲಾಗದೇ, ಹೊರಿಸಿದ ತಪ್ಪನ್ನು ಹೊತ್ತುಕೊಂಡು ಸುಮ್ಮನಾದೆ. ಆ ನಾಲ್ವರ ಮುಖದಲ್ಲೂ ಅಣಕುನಗೆ ಎದ್ದು ಕಾಣುತಿತ್ತು. ನಾನೂ ನಗಲೇಬೇಕಾಯಿತು.
ಮುಂದೆ ಇನ್ನ ಐವತ್ತು ಕಿಲೋಮೀಟರಿನಲ್ಲಿ ದೋಮ್ ಲೇಕ್ ಸಿಗುವುದಾಗಿಯೂ, ಆದಷ್ಟೂ ಬೇಗ ಅಲ್ಲಿ ತಲುಪಬೇಕು ಅಂದುಕೊಂಡು ಇನ್ನೂ ವೇಗವಾಗಿ ಪ್ರಯಾಣ ಮುಂದುವರಿಸಿದೆವು.
Google Map ಸರಿಯಾಗಿ ನಮ್ಮನ್ನು, ದೋಮ್ ಲೇಕ್ ಬಳಿಗೆ ತಲುಪಿಸಿತು.
ಅಲ್ಲಿ ಕೆರೆಯಂಗಳಕ್ಕೆ ಇಳಿಯಲು ಇದ್ದ ಕಿರಿದಾದ ದಾರಿಯಲ್ಲಿ, ಬೈಕುಗಳನ್ನು ಇಳಿಸಿಕೊಂಡು. ಅರ್ಧ ನೀರಿದ್ದ ಕೆರೆಯಂಗಳಕ್ಕೆ ಬಂದು ನಿಂತೆವು. ದೂರದಲ್ಲೆಲ್ಲೋ ಒಂದಿಬ್ಬರು-ಮೂವರು ಕೆರೆಯ ದಂಡೆಯ ಮೇಲೆ ಕೂತಿದ್ದು, ತಿರುಗಾಡುತ್ತಿದ್ದು ಕಾಣಿಸಿತು ಬಿಟ್ಟರೆ, ಹತ್ತಿರದಲ್ಲಿ ಬೇರಾರು ಇರಲಿಲ್ಲ.
ಆ ಕೆರೆಯ ವಿಹಂಗಮ ನೋಟವನ್ನು ಸವಿಯತೊಡಗಿದ ಒಂದತ್ತು ನಿಮಿಷದಲ್ಲೇ, ಮಬ್ಬುಗತ್ತಲಾಗತೊಡಗಿತು. ಆ ಮಂದ ಬೆಳಕಲ್ಲೂ ಒಂದು ಸುಂದರ ದೃಶ್ಯ ವೈಭವ ಕಾಣುತ್ತಿತ್ತು.
 |
| Dhom Lake |
ಸುತ್ತಲೂ ಗುಡ್ಡಗಳಿಂದ ಆವೃತವಾದ ಆ ವಿಶಾಲ ಕೆರೆ, ಮನೋಹರವಾಗಿತ್ತು. ಹಲವಾರು ಫೋಟೋ ತೆಗೆದುಕೊಂಡೆವು. ಶರತ್ ಕತ್ತಲಲ್ಲಿ ಒಂದು experimentನಂತೆ flash ಲೈಟ್ ಹಿಡಿದು ನಿಂತ ನಮ್ಮಗಳ ಫೋಟೋಗಳನ್ನು ಅದ್ಭುತವಾಗಿ ಕ್ಲಿಕ್ಕಿಸಿದರು.