Saturday, May 06, 2017

ಕನ್ಯಾಕುಮಾರಿಯಿಂದ ಕಾಶ್ಮೀರಕ್ಕೆ... (ದಿನ-3: ತುಮಕೂರಿನಿಂದ ಬೆಳಗಾವಿ)

ಕನ್ಯಾಕುಮಾರಿಯಿಂದ ಕಾಶ್ಮೀರಕ್ಕೆ

ಮೊದ ಮೊದಲು http://kcsampath.blogspot.in/2017/03/blog-post.html
ಪಯಣಕ್ಕೊಂದು ಪಯಣ http://kcsampath.blogspot.in/2017/03/blog-post_91.html 
ದಿನ-1: ಕನ್ಯಾಕುಮಾರಿಯಿಂದ ಮದುರೈ http://kcsampath.blogspot.in/2017/04/1.html
ದಿನ-2: ಮದುರೈಯಿಂದ ತುಮಕೂರು http://kcsampath.blogspot.in/2017/04/2.html

ದಿನ-3: ತುಮಕೂರಿನಿಂದ ಬೆಳಗಾವಿ

16 ಜನವರಿ 2017
ಸೋಮವಾರ

        ಮತ್ತೆ ಬೆಳಗಾಯಿತು.
        7:30ಕ್ಕೆಂದು ಇಟ್ಟಿದ್ದ ಅಲಾರ್ಮ್ ಹೊಡೆದುಕೊಳ್ಳುತ್ತಿದ್ದರೂ, ಕಣ್ಣು ಬಿಡಲಾಗಲಿಲ್ಲ. ಮತ್ತರ್ಧ ತಾಸು ಮಲಗಿಬಿಟ್ಟೆ.

        ಈ ದಿನವೂ ಮಾಡಬೇಕಿದ್ದ long ride ನೆನಪಾಗಿ, ಕಣ್ಣುಜ್ಜಿಕೊಂಡು ಎದ್ದೆ. ಟಿವಿ ಆನ್ ಮಾಡಿ ಉದಯ ಮ್ಯೂಸಿಕ್ ಹಾಕಿದೆ, love songs ಬರುತಿತ್ತು. ಎದ್ದ ಒಂದೆರಡು ಕ್ಷಣದಲ್ಲೇ, ಮನಸ್ಸು ನಿದ್ದೆಯ ಮಂಪರಿನಿಂದ romantic moodಗೆ ಹಾರಿತು. ಹಾಡುತ್ತಾ. ಹಾಡುತ್ತಾ ತಯಾರಾದೆ.

        ಮೊದಲು ತಿಂಡಿ ಮುಗಿಸಿ, ಅಲ್ಲಿಂದ RE Service Centerಗೆ ಹೋಗಿ ಬಂದು, ಆಮೇಲೆ ನಮ್ಮ ಪ್ರಯಾಣ ಶುರುಮಾಡಬೇಕಾಗಿತ್ತು.

        ಈ ಮೊದಲೆರಡು ದಿನಗಳ ಪ್ರಯಾಣದಲ್ಲಿ, ನಮ್ಮ ಬೈಕುಗಳಲ್ಲಿ ಏನೇನು ತೊಂದರೆಯೆನಿಸುತ್ತಿದೆ ಎಂದು, ಅರ್ಥವಾಗಿತ್ತು. Long rideಗಳಲ್ಲೇ ಬೈಕುಗಳ ಸಮಸ್ಯೆಗಳು ಹೆಚ್ಚು ಕಾಣಿಸುವುದು, ಮತ್ತು ಒಬ್ಬ ನಿಜವಾದ Biker ಎಂದಿಗೂ ಆ ಸಮಸ್ಯೆಗಳಿಗೆ ಬೇಸರಿಸದೆ, ಅವನ್ನು ಕಲಿಕೆಯೆಂದು ಪರಿಗಣಿಸಿ ಸಮಸ್ಯೆಗಳನ್ನು ಪರಿಹರಿಸಿ, ತನ್ನ ಬೈಕನ್ನು ಇನ್ನಷ್ಟು ಪ್ರೀತಿಸುತ್ತಾನೆ.

        ಶರತ್, ಶಿವುರಿಗೆ call ಮಾಡಿ ಹೊರಡೋಣವೇ, ಎಂದು ಕೇಳಿಕೊಂಡು ಹೊಟೇಲಿಂದ ಹೊರಗೆ ಬಂದೆವು. ಕಳೆದ ಎರಡು ದಿನಗಳಲ್ಲಿ ಮೊದಲ ಬಾರಿಗೆ ತುಸು ಚಳಿಯಿದ್ದ ತಂಪಾದ ಬೆಳಗನ್ನು ಕಂಡಂತೆ ಅನಿಸಿತು.

        ಸೀದಾ ತುಮಕೂರಿನ ಹೆದ್ದಾರಿ ಪಕ್ಕದ ಪವಿತ್ರ ಹೋಟೆಲ್ ಗೆ ಹೋದೆವು. ಅಲ್ಲಿ ತಟ್ಟೆ ಇಡ್ಲಿ ಸಕತ್ ಫೇಮಸ್, ಬೆಂಗಳೂರು ತುಮಕೂರು ಹೆದ್ದಾರಿಯಲ್ಲಿ ಸಾಗುವ ಯಾರೂ ಅಲ್ಲಿನ ರುಚಿಯಾದ ತಟ್ಟೆಇಡ್ಲಿ ಸವಿಯದೇ ಹೋಗುವುದಿಲ್ಲ.


         ಆ ದಿನವೂ ಬಹಳಷ್ಟು ಜನರಿದ್ದರು. ನಾವು ಹೋಗಿ ಆರ್ಡರ್ ಮಾಡಿದ ಮರುಕ್ಷಣವೇ ಬಿಸಿ ಬಿಸಿ ತಟ್ಟೆಇಡ್ಲಿ ನಮ್ಮ ಮುಂದೆ ಬಂದವು. ಮೇಲೆ ಅರ್ಧಂಬರ್ಧ ಕರಗಿ ತೇಲುತಿದ್ದ ಬೆಣ್ಣೆ, ಮೊದಲ ತುತ್ತಿಗೂ ಮೊದಲೇ ಬಾಯಲ್ಲಿ ನೀರೂರಿಸಿದವು. ತಿಂಡಿ, ಕಾಫಿ ಮುಗಿಸಿಕೊಂಡು ತುಮಕೂರು ಸಿಟಿಯ ಕಡೆಗೆ ಹೊರಟ ನಾವು, ದಾರಿಯಲ್ಲಿ ಸಿಕ್ಕ ಗ್ಯಾರೇಜೊಂದರಲ್ಲಿ ನಮ್ಮ ಬೈಕುಗಳಿಗೆ ಬೇಕಿದ್ದ ಸಣ್ಣ ಪುಟ್ಟ ರಿಪೇರಿ ಮಾಡಿಸಿಕೊಳ್ಳಲು ಕುಳಿತೆವು.
        ಶಿವು ಮತ್ತು ನಾನು ಆತನ ಬೈಕಿಗೆ ಬೇಕಿದ್ದ ಬ್ಯಾಟರಿ ಕವರ್ ಕೊಳ್ಳಲು, RE Service center ಹುಡುಕಿಕೊಂಡು ಹೋದೆವು. ಒಂದತ್ತು ಕಿ.ಮೀ ದೂರದಲ್ಲಿ ಇದ್ದ ಸರ್ವಿಸ್ ಸೆಂಟರ್ ಗೆ ಹೋಗಿ, ಬರುವಷ್ಟರಲ್ಲಿ ಇಲ್ಲಿ ನಮ್ಮ ಬೈಕುಗಳೆರಡೂ ತಯಾರಿದ್ದವು. ಅಲ್ಲಿಂದ ರೂಮಿಗೆ ಹೋಗಿ, ನಮ್ಮೆಲ್ಲ ಲಗೇಜು ಹೇರಿಕೊಂಡು ಹೊರಟಾಗ ಸಮಯ ಹತ್ತಿರತ್ತಿರ 12. ನಮ್ಮ ಸುತ್ತಲೂ ಸೋಮವಾರದಂದು ಕೆಲಸಗಳಲ್ಲಿ ಬ್ಯುಸಿಯಾಗಿದ್ದ ಜನರನ್ನೂ, ಆದರೆ ಕೆಲಸವನ್ನೆಲ್ಲಾ ಮರೆತು ಆರಾಮವಾಗಿ ಪ್ರವಾಸದಲ್ಲಿರುವ ನಮ್ಮನ್ನೂ ನೋಡಿಕೊಂಡು, ಮನಸ್ಸಲ್ಲಿ ಏನೋ ಒಂದು ಉತ್ಸಾಹ ತುಂಬುವ ಖುಷಿ ಉಕ್ಕಿಬಂತು.



        ಬೆಳಗಿನ ಚಳಿ ಕಳೆದು, ಬಿಸಿಲೇರಿತ್ತು. ಬೈಕುಗಳಲ್ಲಿ ಪೆಟ್ರೋಲ್ ಸದ್ಯಕ್ಕಿದೆ, ಇನ್ನೊಂದು ನೂರೈವತ್ತು ಕಿ.ಮೀ ಸಾಗಿ ಎಲ್ಲಾದರೂ ಪೆಟ್ರೋಲಿಗೆಂದು ಬ್ರೇಕ್ ಕೊಡೋಣ ಅಂತ, ಸಾಗಿದೆವು.
        ಈ ದಿನದ ನಮ್ಮ ಪ್ರಯಾಣದ ಕೊನೆ, ಬೆಳಗಾವಿ.  450 ಕಿ.ಮೀ ದೂರವಿದೆ, ಅಲ್ಲದೆ ಉಳಿದ ಪೂರ್ತಿ ದಿನವೂ ನಮ್ಮ ಕೈಲಿದೆ.
        ಆದರೂ ನಿನ್ನೆಯಂತೆ ನಮ್ಮ ನಿಧಾನಗತಿಯಿಂದ ತಡವಾಗಬಾರದು, ಸ್ವಲ್ಪ ಸ್ಪೀಡ್-ಅಪ್ ಮಾಡಿಕೊಂಡು, ನಾವು ಎಷ್ಟು ಬೇಗ ಕ್ರಮಿಸಬಹುದು ನೋಡೋಣ ಇದರಿಂದ ನಮ್ಮ confidence ಕೂಡ ಹೆಚ್ಚುವುದರಿಂದ ಹಾಗೆ ತೀರ್ಮಾನಿಸಿ ಹೊರಟೆವು. ನಾವು ಮೂವರು ಎಲ್ಲೂ ನಿಧಾನಿಸದೆ, ಒಬ್ಬರಿಗೊಬ್ಬರು ವೇಗ ಹೊಂದಿಸಿಕೊಂಡು ಸಾಗಿದೆವು.

        ಚಿತ್ರದುರ್ಗದಲ್ಲಿ re-fuel ಮಾಡಿಕೊಂಡು, ಮತ್ತೆ ವೇಗವಾಗಿ ಮುಂದೆ ಸಾಗಿದೆವು. ಇನ್ನೇನು ದಾವಣಗೆರೆ ಸಮೀಪವಿತ್ತು. ಮುಂದಿದ್ದ ಶರತ್ ಮತ್ತು ನನ್ನ ಬೈಕುಗಳು, ಸುಮಾರು ನೂರರ ವೇಗಗದಲ್ಲಿದ್ದವು. ರಸ್ತೆ ಬದಿಯಲ್ಲಿ ನಮ್ಮಂಥವರಿಗಾಗಿ ಕಾಯುತ್ತಿದ್ದ ಪೊಲೀಸರು, ದೂರದಿಂದಲೇ ಕೈಯೊಡ್ಡಿ ನಿಲ್ಲಲು ಹೇಳಿದರು. ಎರಡು ದಿನದ ಹಿಂದೆ ತಮಿಳುನಾಡಿನ ಹೆದ್ದಾರಿಯಲ್ಲಿ ಪೊಲೀಸರಿಂದಾದ ಇರಿಸುಮುರಿಸು ನೆನಪಾಯ್ತು. ಬೈಕುಗಳನ್ನು ಅವರ ಜೀಪಿನ ಮುಂದೆ ನಿಲ್ಲಿಸಿ, ಅವರ ಹತ್ತಿರಕ್ಕೆ ಹೋದೆವು. ಹೊರಗೆ ಒಬ್ಬ ಪೇದೆ ಮಾತ್ರ ಇದ್ದರು, ಇನ್ನುಳಿದವರು ಜೀಪಿನಲ್ಲಿ ಕೂತಿದ್ದರು.
        ಹತ್ತಿರಕ್ಕೆ ಹೋದಂತೆಯೇ ಇವರೂ ಕೂಡ, "ಯಾರು ನೀವು, ಎಲ್ಲಿಗೆ ಹೋಗುತ್ತಿರುವುದು" ಎಂದು ಕೇಳಿದರು. ನಾವು ಕನ್ನಡದಲ್ಲಿ ನಮ್ಮ ವಿವರ ತಿಳಿಸಿದೆವು. ಆತ ತಕ್ಷಣವೇ, ಆಶ್ಚರ್ಯದಿಂದ ನಮ್ಮ ಬಗ್ಗೆ ವಿಚಾರಿಸತೊಡಗಿದ. "ಇಲ್ಲಿಂದ ಕಾಶ್ಮೀರದವರೆಗೂ ಹೀಗೇ ಬೈಕಲ್ಲಿ ಹೋಗುವಿರಾ??? ಬೈಕಲ್ಲೇ ಹೋಗಬೇಕೆಂದು ಯಾಕೆ ಅಂದುಕೊಂಡಿರಿ??? ಎಲ್ಲೆಲ್ಲಿ ಹೋಗಲಿದ್ದೀರಿ???" ಎಂದೆಲ್ಲಾ, ವಿಚಾರಿದ.
        ಆತನಾಗಲೇ ನಮ್ಮ ಓವರ್-ಸ್ಪೀಡನ್ನು ಮರೆತಾಗಿತ್ತು.
        ಈ ಪೊಲೀಸ್ ಮಾತ್ರ, ನಮ್ಮ ಜೊತೆಗಿದ್ದ ಶ್ವೇತಾರ ಬಗ್ಗೆ "ಯಾರೀಕೆ?" ಅಂತಲೂ ಕೂಡ, ಒಂದು ಮಾತು ಕೇಳಲಿಲ್ಲ. ನಮ್ಮ ಬಳಿಯೂ, ಅಷ್ಟೇ ಸಂಯಮದಿಂದ ವ್ಯವಹರಿಸಿದ.

        ಅಷ್ಟರಲ್ಲಿ ಹಿಂದೆ ಬರುತ್ತಿದ್ದ ಶಿವೂ-ದೀಪಿಕಾರ ಬೈಕು ನಮಗೆ ಹತ್ತಿರಾಯ್ತು. ಅವರೂ ನೂರರ ಮೇಲಿನ ವೇಗದಲ್ಲಿದ್ದರು. ನಾವು "ಅವರೂ ನಮ್ಮ ಜೊತೆಯವರು" ಎಂದಾಗ, ಆತನೇ ಅವರಿಗೆ ನಿಲ್ಲಿಸುವುದು ಬೇಡ, ಮುಂದೆ ಹೋಗಿ ಎಂದು ಕೈ ತೋರಿಸಿದ.

        ಆತ ನಮಗೆ ಶುಭ ಕೋರಿ, ಕಳುಹಿಸಿದ. ನಾವು ಮುಂದೆ ಊಟಕ್ಕೆ ಹತ್ತಿರದಲ್ಲಿ ಎಲ್ಲಿ ನಿಲ್ಲಿಸಬೇಕೆಂದು ಕೇಳಿದೆವು. ಆತ "ನಿಮಗೆ ಸಾಧಾರಣ ಹೋಟೆಲ್ ಸಾಕೆಂದರೆ, ಇಲ್ಲೇ ಇನ್ನೊಂದು ಕಿ.ಮೀ. ನಲ್ಲಿ ಟೋಲ್-ಗೇಟಿನ ಪಕ್ಕಕ್ಕೆ ಚಿಕ್ಕ ಹೋಟೆಲಿದೆ. ಅಲ್ಲಿ ತುಂಬಾ ಚೆನ್ನಾದ ಚಪಾತಿ ಊಟ ಸಿಗುತ್ತದೆ. ಅಥವಾ ತುಂಬ ಒಳ್ಳೆಯ ಹೋಟೆಲ್ ಬೇಕೆಂದರೆ, ಇಲ್ಲಿಂದ ಇನ್ನತ್ತು ಕಿ.ಮೀ, ಮುಂದೆ ಹೋಗಬೇಕು" ಅಂದ. 
        "ನಾವು ಇಲ್ಲೇ, ಟೋಲ್-ಗೇಟ್ ಬಳಿಯೇ ಊಟ ಮಾಡುತ್ತೇವೆ" ಎಂದು, ಥ್ಯಾಂಕ್ಸ್ ಹೇಳಿ ಹೊರಟೆವು.
        ಆತ ಹೇಳಿದಂತೆಯೇ, ಟೋಲ್-ಗೇಟ್ ದಾಟಿದ ತಕ್ಷಣ, ಎಡಕ್ಕೆ ಚಿಕ್ಕ ಹೋಟೆಲ್ ಕಾಣಿಸಿತು. ಒಂದು ಚಿಕ್ಕ ಕೈತೋಟದ ನಡುವೆ ಮನೆಯಂತೆ ಇದ್ದ ಅಲ್ಲಿ, ನಮ್ಮನ್ನು ಬಿಟ್ಟರೆ ಬೇರಾರೂ ಜನ ಇರಲಿಲ್ಲ.
        ನಾವು ಎಲ್ಲರಿಗೂ ಚಪಾತಿ ಊಟ ಆರ್ಡರ್ ಮಾಡಿದೆವು, ಹೋಟೆಲಿನವನು ಇನ್ನೊಂದು ಕಾಲು ಗಂಟೆ ಸಮಯದಲ್ಲಿ ಊಟ ರೆಡಿ ಮಾಡುವುದಾಗಿ ಹೇಳಿದ. ನಾವು ತುಮಕೂರಿನಿಂದ ಸುಮಾರು 200 ಕಿ.ಮೀ ದೂರವನ್ನು ಬರಿ ಎರಡೂವರೆ ಗಂಟೆಗಳಲ್ಲಿ ಕ್ರಮಿಸಿ ಬಂದಿದ್ದರಿಂದ, ಸ್ವಲ್ಪ ದಣಿವಾರಿಕೊಳ್ಳುತ್ತಾ ಕುಳಿತೆವು. 
        ಹೇಳಿದಂತೆ, ಹದಿನೈದು ನಿಮಿಷದಲ್ಲಿ ಬಿಸಿ ಬಿಸಿ ಚಪಾತಿ ನಮ್ಮೆದುರು ಬಂದವು. ಬಹಳ ರುಚಿಯಾಗಿತ್ತು ಊಟ. Extra extra ಚಪಾತಿ ತಿಂದು, ಊಟ ಮುಗಿಸುವಷ್ಟರಲ್ಲಿ, ನಮಗೆ ಇಲ್ಲಿಗೆ ಬರಲು ಹೇಳಿದ ಪೊಲೀಸರೂ ಅಲ್ಲಿಗೆ ಬಂದರು. ಮತ್ತೆ ಅವರಿಗೆ ಥ್ಯಾಂಕ್ಸ್ ಹೇಳಿ, ನಮ್ಮ ಪಯಣ ಮುಂದುವರಿಸಿದೆವು. 
        ಇನ್ನು ಮುಂದಿನ ಬ್ರೇಕ್ ಹಾವೇರಿ ಬಳಿ ಇರುವ ರಾಕ್ ಗಾರ್ಡನ್ ಗೆ ಎಂದು ತೀರ್ಮಾನಿಸಿದ್ದೆವು. ನನಗೆ ಸರಿಯಾಗಿ ಅದರ ಲೊಕೇಶನ್ ಗೊತ್ತಿರಲಿಲ್ಲ ಆದರೆ, ಹಾವೇರಿ ಎಂದು ಕೇಳಿಸಿಕೊಂಡಿದ್ದೆ, ಅಷ್ಟೇ.
        ಇನ್ನೂ 111 ಕಿ.ಮೀ ದೂರವಿದ್ದರಿಂದ ನಾವು ದೂರ ದೂರ ಉಳಿದು ಸಾಗುತ್ತಾ, ನಾನು ಪೂರ್ತಿ ಹಿಂದಾಗಿಬಿಟ್ಟೆ. ಹಾವೇರಿ ಎಂದು ಹೆಸರು ಕೇಳಿಕೊಂಡಿದ್ದ ನಾನು, ಹೆದ್ದಾರಿಯಲ್ಲಿ ಸಾಗುತ್ತಾ ಹಾವೇರಿಗೆ ಎಡ ತಿರುವು  ಎಂದು ಬರೆದಿದ್ದ ಬೋರ್ಡ್ ನೋಡಿ,  ಇವರೂ ಇತ್ತ ಕಡೆಯೇ ಹೋಗಿರಬಹುದೆಂದು, ಹಾವೇರಿ ಕಡೆಗೆ ಸಾಗಿಬಿಟ್ಟೆ.
        ಹಾವೇರಿ ಸಿಟಿ ಒಳಗೆ ಹೋಗಿ, ಅವರು ಎತ್ತ ಸಾಗಿದರೆಂದು ತಿಳಿಯದೆ,  ಫೋನ್ ಮಾಡಿದರೆ ಯಾರಿಗೂ ಫೋನ್ connect ಆಗಲಿಲ್ಲ. ಸುಮಾರು 20 ನಿಮಿಷ ಕಾದ ಮೇಲೆ, ಶ್ವೇತಾ ಫೋನ್ ಮಾಡಿದರು. "ನಾನು ಹೀಗೆ ಹಾವೇರಿಯ​ ಸಿಟಿ entrance ಅಲ್ಲಿ ಇದೀನಿ. ನೀವೆಲ್ಲ ಎಲ್ಲಿದಿರಾ" ಅಂದೆ.
        "ಹಾವೇರಿಗೇಕೆ ಹೋದ್ರಿ?,,, ನಾವು ಹೆದ್ದಾರಿಲೇ ಮುಂದೆ ಬಂದು ಹುಬ್ಬಳ್ಳಿ ಕಡೆಗೆ ಹೋಗ್ತಿದಿವಿ... ವಾಪಸ್ ಬನ್ನಿ" ಅಂದ್ರು. ಅಲ್ಲಿಂದ ಮತ್ತೆ ವಾಪಸ್ ಹೊರಟು, ಹೆದ್ದಾರಿ ತಲುಪಿ ವೇಗವಾಗಿ ಸಾಗಿದೆ.
        ಅವರು, ನಾನೂ ಬರಲಿ ಎಂದು, ನಿಧಾನವಾಗಿ ಹೋಗುತ್ತಿದ್ದರು. ಅವರನ್ನು ಕೂಡಿಕೊಂಡು ಇನ್ನೊಂದು ಐವತ್ತು ಕಿ.ಮೀ ಸಾಗಿದ ಮೇಲೆ, ರಸ್ತೆಯ ಎಡಕ್ಕೆ ಉತ್ಸವ್ ರಾಕ್ ಗಾರ್ಡನ್, ಸಿಕ್ಕಿತು.

        ಈ ದಿನ ಪ್ಲಾನಿನಲ್ಲಿ ಸಂತೇಬೆನ್ನೂರಿನ ಬಳಿಯ ಕಲ್ಯಾಣಿಯನ್ನು ಕೂಡ ನೋಡುವ ಮಾತಿತ್ತು, ಆದರೆ ಸಮಯದ ಅಭಾವ ಮತ್ತು ನಾವು ಸಾಗಬೇಕಿದ್ದ ದೂರದಿಂದಾಗಿ, ಬರಿಯ ಹೆದ್ದಾರಿಯ ಪಕ್ಕದಲ್ಲೇ ಸಿಗುವ ರಾಕ್ ಗಾರ್ಡನ್ ಒಂದನ್ನಷ್ಟೇ ನೋಡಿ, ಮುಂದೆ ಸಾಗಬೇಕಾಯಿತು.
       


        ಈ ದಿನ ಸೋಮವಾರವಾದ್ದರಿಂದ ಅಷ್ಟೇನೂ ಜನ ಸಂದಣಿಯಿರಲಿಲ್ಲ ಅಲ್ಲಿ. ನಮ್ಮ ಬೈಕುಗಳನ್ನು luggage ಸಮೇತ ಎದುರಲ್ಲೇ park ಮಾಡಿ, ಒಳಗೆ ಹೋದೆವು. ಟಿಕೆಟ್ ಕೊಂಡು ಒಳಗೆ ಹೊಗುತ್ತಿದಂತೆ, ಅಲ್ಲಿ baggage ಕೌಂಟರಿನ ಹುಡುಗ, ಇನ್ನ ಅರ್ಧ ಗಂಟೆ ಅಷ್ಟೇ ಇದು ಓಪನ್ ಇರೋದು, ಅಷ್ಟರಲ್ಲಿ ನೋಡಿಕೊಂಡು ವಾಪಸ್ ಬರಬೇಕು ಅಂತ ಹೇಳಿ, ನಮ್ಮ jackets, knee pads ಗಳನ್ನೆಲ್ಲ ಅಲ್ಲಿ ಇರಿಸಿಕೊಂಡ.

        ಮೊದಲ ಅಂಕಣದಲ್ಲಿ ಕಣ್ಣಿಗೆ ಕಾಣುವುದೆಲ್ಲ, ಬಾರಿಯ ರಾಜಕುಮಾರ್ ಅಭಿನಯಿಸಿದ ಪಾತ್ರಗಳ ಪ್ರತಿಕೃತಿಗಳು. ಕೆಲವು ಬರಿಯ ಹೋಲಿಕೆಯಂತಿದ್ದರೆ, ಕೆಲವು ಅಚ್ಚು ರಾಜಕುಮಾರ್ ಅವರ ಪ್ರತಿರೂಪಿನಂತಿದ್ದವು. ಬೇಡರ ಕಣ್ಣಪ್ಪ ಶಿವಲಿಂಗಕ್ಕೆ ಕಣ್ಣು ನೀಡುವುದು, ಕನಕದಾಸ ಪಾತ್ರ, ಸತ್ಯ ಹರಿಶ್ಚಂದ್ರ, ಕವಿರತ್ನ ಕಾಳಿದಾಸ, ಮಯೂರ ಹೀಗೆ ಹತ್ತಿಪ್ಪತ್ತು ಪ್ರತಿಕೃತಿಗಳು ವೀಕ್ಷಣಾ ಮಾರ್ಗದ ಮೊದಲಿಗೆ ಸಿಗುತ್ತವೆ.

ಕವಿರತ್ನ ಕಾಳಿದಾಸನಾಗಿ ಡಾ|| ರಾಜಕುಮಾರ್
        ದಾಟಿ ಎರಡನೇ ಅಂಕಣಕ್ಕೆ ಒಳ ನೆಡೆದರೆ, modern art ನ ಅನಾವರಣ. ಒಳಾಂಗಣದಲ್ಲಿ ಹೆಮ್ಮರ ಒಂದರ ಪ್ರತಿಕೃತಿಯೊಳಗೆ, ಪ್ರಕೃತಿಯಲ್ಲಿ ಮಾನವ ಜೀವ ವಿಕಸನವನ್ನೇ ರೂಪಿಸಿದ್ದಾರೆ. ಗಾಜು ಮತ್ತಿತರ ವಸ್ತುಗಳಿಂದ ರೂಪಿಸಿದ್ದ ಆ ಕಲಾಕೃತಿ, ಸಾವಿರಾರು ಅರ್ಥ ಕೊಡುವಂತಿತ್ತು.

        ಮುಂದೆ ಸಾಗಿದರೆ, ಹಲವಾರು ಕಲಾಕೃತಿಗಳು ಸಾಲು ಸಾಲಾಗಿ ನಿಂತಿದ್ದವು. ಇನ್ನೊಂದು ಅಂಕಣದಲ್ಲಿ ನಮ್ಮೆಲ್ಲ ಸಂಪ್ರದಾಯಗಳ ಪರಿಚಯವಿತ್ತು. ಹುಟ್ಟು, ಬಾಲ್ಯ, ಮುಂಜಿ, ಮದುವೆ ಮತ್ತು ಸಾವಿನ ಪರಿಚಯ. ಹಲವು ಧರ್ಮಗಳ ಆಚಾರಗಳಂತೆ ಮದುವೆಯ ಶಾಸ್ತ್ರಗಳ ಪ್ರತಿಕೃತಿಗಳು ಇನ್ನೊಂದು ಕಡೆಯಿದ್ದವು.

        ಒಳಾಂಗಣವನ್ನೆಲ್ಲ ದಾಟಿ ಹೊರನೆಡೆದರೆ, ನಮ್ಮ ಕರುನಾಡ ಸಂಸ್ಕೃತಿಯ, ಹಳ್ಳಿ ಜೀವನವನ್ನು ನಮ್ಮೆದುರು ತೆರೆದಿಡುವ ಅಮೋಘ ಕಲಾ ರಾಶಿ ಕಾಣ ಸಿಗುತ್ತದೆ.

        ಮೊದಲಿಗೆ ಹಳ್ಳಿಯಲ್ಲಿರುತ್ತಿದ್ದ ಹಲವಾರು ಕಸುಬು ಆಧಾರಿತ ಕುಟುಂಬಗಳ ಮನೆಗಳು (ಕುಂಬಾರರು, ಕಮ್ಮಾರರು, ಚಮ್ಮಾರರು, ಮರಗೆಲಸದವರು), ಅವರ ಕೆಲಸಗಳ ರೀತಿಗಳು ಎಲ್ಲದರ ಪಡಿಯಚ್ಚು ಕಾಣುತ್ತವೆ.
       ಹಳ್ಳಿಯ ಗೌಡರ ಮನೆಯ ವಾತಾವರಣ, ಹಳ್ಳಿಯ ಬ್ರಾಹ್ಮಣರ ಮನೆಯ ಜಗುಲಿ, ಅಕ್ಕಸಾಲಿಗರ ಅಂಗಡಿ, ಬಳೆಗಾರನ ಸುತ್ತುವರಿದ ಹೆಂಗೆಳೆಯರು, ಹೀಗೆ ಹತ್ತು ಹಲವಾರು ಹಳ್ಳಿಯ ಚಿತ್ರಣಗಳನ್ನು, ಬಣ್ಣ ಕಟ್ಟಿ ಬರೆದಷ್ಟು ಸ್ಪುಟವಾಗಿ ಸೃಷ್ಟಿಸಿ ಇಟ್ಟಿದ್ದಾರೆ.

ಹಳ್ಳಿಯ ಗೌಡರ ಚಾವಡ

ಬ್ರಾಹ್ಮಣರ ಮನೆಯ ಜಗುಲಿ

ಗರಡಿಮನೆಯ ಕುಸ್ತಿ ಅಖಾಡ
        ಕೆರೆಯಂಗಳ, ಉಳುವ ರೈತ, ಕೊಟ್ಟಿಗೆ, ಮಲ್ಲಗಂಬ, ಗರಡಿ ಮನೆಗಳನ್ನೆಲ್ಲ ನೋಡಿ, ಹಳ್ಳಿಯಿಂದ ಹೊರಬಂದು ಪಟ್ಟಣಕ್ಕೆ ಕಾಲಿಟ್ಟಂತೆಯೇ,,, ಕೊನೆಯಲ್ಲಿ ಹೋಟೆಲೊಂದು ಕಾಣುತ್ತದೆ.
        ನಮಗೆ ತಿನ್ನಲು ಏನಾದರೂ ಸಿಗಬಹುದೆಂದು ಹತ್ತಿರಕ್ಕೆ ಹೋದಾಗ ತಿಳಿಯಿತು, ಅದು ಈಗಿನ cafe ಒಂದರ ಪ್ರತಿರೂಪ ಅಷ್ಟೇ ಎಂದು. ಅಲ್ಲಿ ಒಂದು ಟೇಬಲ್ಲಿನಲ್ಲಿ ರಮ್ಯಾ-ಪುನೀತ್ ರಾಜಕುಮಾರ್ ಕೂಡ, ಎಂದೂ ಖಾಲಿಯಾಗದ ಕಾಫಿ ಕಪ್ ಗಳ ಎದುರು, ಒಬ್ಬರನ್ನೊಬ್ಬರು ನೋಡುತ್ತಾ ಕಣ್ಣು ಮಿಟುಕಿಸದೇ ಕುಳಿತಿದ್ದರು. ನಾವೂ ನೋಡಿ ನಕ್ಕು ವಾಪಸ್ಸಾದೆವು.  

        ನಮಗೆ ಒಂದು ಬ್ರೇಕ್ ಸಿಕ್ಕ ಹಾಗೆ ಆಯಿತಾದರೂ, ಆ ರಾಕ್ ಗಾರ್ಡನ್, ಅತ್ತ ಹೋದಾಗ ಎಲ್ಲರೂ ಒಮ್ಮೆ ನೋಡಲೇಬೇಕಾದ ಜಾಗ.

        ರಾಕ್ ಗಾರ್ಡನ್ ರಾಕ್ ಹೋಟೆಲಿನಲ್ಲಿ ತಿನ್ನಲು ನಮಗೇನು ಸಿಗದಿದ್ದರಿಂದ, ನಾವು ನಮ್ಮ Coffee Breakಗೆ ಹುಬ್ಬಳ್ಳಿಗೆ ಹೋಗೋಣ, ಅಲ್ಲಿ ಕಾಫಿ ಜೊತೆಗೆ ಗಿರ್ಮಿಟ್ ಕೂಡ ಸವಿಯಬಹುದು ಎಂದುಕೊಂಡೆವು. ಹುಬ್ಬಳ್ಳಿಯ ಗಿರ್ಮಿಟ್ ಶಾಪ್ ಅಂತ ಗೂಗಲ್ ಮ್ಯಾಪ್ ನಲ್ಲಿ ಹುಡುಕಿಕೊಂಡು ಹೊರಟೆವು. 
        ಇನ್ನ ನಲವತ್ತು ನಿಮಿಷಗಳ ಪ್ರಯಾಣದ ನಂತರ ಹುಬ್ಬಳಿತಲುಪಿದೆವು. ಆದರೆ ಆ ಗಿರ್ಮಿಟ್ ಅಂಗಡಿ, ಊರ ಒಳಗೆಲ್ಲೋ ಇನ್ನೈದು ಕಿ.ಮೀ ನಲ್ಲಿದೆ ಎಂದು ತೋರಿಸುತಿತ್ತು. ಅಷ್ಟೇ ಅಲ್ಲವಾ ಎಂದು ಹೊರಟರೆ, ಅದು ಮಾರ್ಕೆಟ್ ರೋಡೊಂದರ ಒಳಗೆ ನುಸುಳಿ, ಗಲ್ಲಿಗಲ್ಲಿಯಂತ ರೋಡಿನಲ್ಲಿ ಸಾಗಿ, ಸಾಗಾಣೆ ಲಾರಿಗಳಿಂದ Traffic jam ಆಗಿ, ಅಲ್ಲಿಗೆ ತಲುಪುವಷ್ಟರಲ್ಲಿ ಯಾಕಾದರೂ ಹುಬ್ಬಳ್ಳಿ ಊರೊಳಗೆ ಬೈಕನ್ನು ತಿರುಗಿಸಿದೆವೋ ಅನ್ನಿಸಿತು. 
        ಕೊನೆಗೂ ಬೈಕುಗಳು 'ಆಯಟ್ಟಿ ಸ್ಪೆಷಲ್ ಗಿರ್ಮಿಟ್ ಶಾಪ್' ಎದುರು ನಿಂತವು. ಬೇಗನೆ ಒಳ ಹೋಗಿ, ಗಿರ್ಮಿಟ್ ಮತ್ತು ಬಿಸಿ ಮಿರ್ಚ್ಚಿ ಬಜ್ಜಿ ಆರ್ಡರ್ ಮಾಡಿದೆವು. ಅದು ತೀರಾ ಚಿಕ್ಕ ಒಂದೇ ರೂಮಿನ ಹೋಟೆಲ್. ನಾವು ಐವರೂ ಒಳಗೆ ಕುಳಿತಿದ್ದಷ್ಟಕ್ಕೆ, ಹೋಟೆಲ್ ಭರ್ತಿಯಾಯಿತು (ಹೌಸ್ ಫುಲ್). 

ಹುಬ್ಬಳ್ಳಿಯ ಮಿರ್ಚಿ-ಗಿರ್ಮಿಟ್
        ನಮ್ಮ ಕೈಗಳಲಿದ್ದ ಗಿರ್ಮಿಟ್ ತಿನ್ನುವಾಗ, ಅಷ್ಟು ದೂರ ಬಂದಿದ್ದು ವ್ಯರ್ಥವಾಗಲಿಲ್ಲ ಅನಿಸಿತು. ಟೀ ಕುಡಿದು, ಮತ್ತೆ ನಮ್ಮ ಪ್ರಯಾಣ ಬೆಳಗಾವಿಯ ಕಡೆಗೆ ಹೊರಟಿತು.

        ಬೆಳಗಾವಿಯಲ್ಲಿ ಉಳಿಯಲು ಹೋಟೆಲನ್ನು ಶರತ್ ಆಗಲೇ ಬುಕ್ ಮಾಡಿದ್ದರು. ನಾವೀಗ ಮತ್ತೆ 100KM ಸಾಗಬೇಕಿತ್ತು. ಆ ಇಕ್ಕಟ್ಟಿನ ಮಾರ್ಕೆಟ್ ರೋಡುಗಳಿಂದ ನುಸುಳಿ ಹೊರಬರುವಷ್ಟರಲ್ಲಿ, ನಾನು, ಶರತ್ ಮತ್ತು ಶಿವೂರನ್ನು ಫಾಲೋ ಮಾಡಲು ಆಗದೆ ದಾರಿ ತಪ್ಪಿದೆ. ಮುಂದೆ ಮತ್ತೆ ಹೆದ್ದಾರಿಗೆ ಬನ್ನಿ ಸಿಗುವುದಾಗಿ ಫೋನ್ ಮಾಡಿ ಹೇಳಿ, ನಾನೂ ಮ್ಯಾಪ್ ಹಾಕಿಕೊಂಡು ಹುಬ್ಬಳ್ಳಿಯಿಂದ ಹೊರಬಿದ್ದೆ. 

        ಅವರೂ ಹೆದ್ದಾರಿಯಲ್ಲಿ ನಾನಿದ್ದ ಜಾಗಕ್ಕೆ ಬಂದರು, ಮುಂದೆ 100km ಗಳ ದಾರಿ ತುಸು ನಿರಾಯಾಸವಾಗಿ ಕಂಡಿತು. ಕತ್ತಲಾವರಿಸಿ ಸಮಯ 8 ಘಂಟೆಯಾಗಿದ್ದರೂ, ಹೆದ್ದಾರಿಯಲ್ಲಿ lane reflectorಗಳು ಅಚ್ಚುಕಟ್ಟಾಗಿ ಇದ್ದು, ರಸ್ತೆಯೂ ಅದ್ಭುತವಾಗಿತ್ತು. ಎಲ್ಲರೂ ನಮ್ಮ ನಮ್ಮ ಪಾಲಿನ ರೈಡನ್ನು ನಮ್ಮಿಷ್ಟದ ವೇಗದಲ್ಲಿ enjoy ಮಾಡುತ್ತಾ ಸಾಗಿದೆವು. 
        ನಾನು 140km/hr ನಷ್ಟು ವೇಗವನ್ನು ತಲುಪಿ, ನನ್ನ ಬೈಕು ಈಗಲೂ ಒಳ್ಳೆಯ condition ನಲ್ಲಿದೆ ಅಂದು ಖುಷಿಪಟ್ಟೆ. 

        ಸುಮಾರು ಒಂದೂವರೆ ತಾಸಿನಲ್ಲಿ ಬೆಳಗಾವಿ ತಲುಪಿ, ಹೋಟೆಲ್ ಹನುಮಾನ್ ಮುಂದೆ ಬೈಕು ನಿಲ್ಲಿಸಿದಾಗ, ಸಮಯ 9.30. 
        ಮತ್ತೆ ನಮ್ಮ ಗಂಟು ಮೂಟೆಯನ್ನೆಲ್ಲ ಬೈಕುಗಳಿಂದ ಬಿಚ್ಚಿ, ರೂಮೊಳಗೆ ಇಟ್ಟು, fresh ಆಗಿ ಊಟಕ್ಕೆ ಹೊರಬಂದಾಗ 10PM.

        ಶರತ್-ಶ್ವೇತಾ ಮತ್ತು ನಾನು, ಅಷ್ಟು ಹಸಿವಿರದಿದ್ದರಿಂದ ಅಲ್ಲಿಯೇ ಬೆಳಗಾವಿಯ ಚಾಟ್ ಸ್ಟ್ರೀಟ್ ನಲ್ಲಿ, ಐಸ್ ಕ್ರೀಮ್ ಹಣ್ಣು ಹಂಪಲನ್ನು ತಿನ್ನುವುದಾಗಿ ಅತ್ತ ಸಾಗಿದರೆ. ಶಿವೂ-ದೀಪಿಕಾಗೆ ಆರೋಗ್ಯಕರ ಊಟ ಬೇಕಾಗಿ ಎದುರಿಗಿದ್ದ restaurant ಕಡೆಗೆ ಸಾಗಿದರು. 

        ನಾಳೆ ಸುಮಾರು 8ಕ್ಕೆ, ಎಲ್ಲರೂ ತಿಂಡಿ ಮುಗಿಸಿ ಹೊರಟುಬಿಡೋಣವೆಂದು ಕೊಂಡು ರೂಮುಗಳನ್ನು ಸೇರಿದೆವು.

        ಇಷ್ಟು ದಣಿದು ರೂಮೊಳಗೆ ಸೇರಿದರೂ, ಮಲಗಲು ಇನ್ನೂ ಒಂದು ತಾಸು ಬೇಕಾಗುತ್ತಿತ್ತು ನಮಗೆ.
        ದಿನವೆಲ್ಲ ರಸ್ತೆ ಪ್ರಯಾಣದ ಪರಿಣಾಮ, ನಾವು ಧೂಳು, ಬೆವರಿನಿಂದ ತುಂಬಿಹೋಗಿರುತ್ತಿದ್ದರಿಂದ, ಸ್ನಾನ ಮಾಡಿಯೇ ಮಲಗಬೇಕಾಗುತ್ತಿತ್ತು. ಅಲ್ಲದೇ ಇಲ್ಲಿಂದ ಮುಂದೆ-ಮುಂದೆ, ನಮ್ಮ ಬಟ್ಟೆಗಳನ್ನೂ ನಾವು ತೊಳೆದು, ರಾತ್ರಿಯೆಲ್ಲ ಒಣಗಲು ಹಾಕಬೇಕಾಗುತ್ತಿತ್ತು.
        ಎಲ್ಲಿಯೂ ಒಂದು ರಾತ್ರಿಗೆ ಹೆಚ್ಚು ಉಳಿಯುತ್ತಿರಲಿಲ್ಲವಾದ್ದರಿಂದ ಹೋಟೆಲಿನ ಲಾಂಡ್ರಿಯನ್ನೂ ಬಳಸುವುದು ಸಾಧ್ಯವಾಗುತ್ತಿರಲಿಲ್ಲ. ಹಾಗಾಗಿ ಎಷ್ಟು ಸಾಧ್ಯವೋ ಅಷ್ಟು ನಮ್ಮ ನಿತ್ಯದ ಬಟ್ಟೆಗಳನ್ನು ತೊಳೆದು ಒಣಗಲು ಹಾಕಿ ಮಲಗುತ್ತಿದ್ದೆವು. 

        ಬೆಳಗಾವಿಯ ಇರುಳು ಅಷ್ಟು ಬಿಸಿಯಿಲ್ಲದಿದ್ದರೂ, ಚಳಿಯಂತೇನೂ ಅನ್ನಿಸಲಿಲ್ಲ. ಬೆಳಗ್ಗೆಗೆ ಅಲಾರಾಂ ಇಟ್ಟು, ಕಣ್ಮುಚ್ಚಿದಂತೆಯೇ ಸಣ್ಣ ಪುಟ್ಟ ಕನಸಿನ ರಾಶಿ ತೆರೆದುಕೊಳ್ಳತೊಡಗಿತು. 


Day-3 Ride
    - Tumkur to Belgavi
    - Disatance covered - 450 KM
    - Route Map

* * * * *

ದಿನ-4: ಬೆಳಗಾವಿಯಿಂದ ಮಹಾಬಳೇಶ್ವರ http://kcsampath.blogspot.fr/2017/05/4.html

No comments:

Post a Comment