Sunday, April 30, 2017

ಕನ್ಯಾಕುಮಾರಿಯಿಂದ ಕಾಶ್ಮೀರಕ್ಕೆ... ( ದಿನ-2: ಮದುರೈಯಿಂದ ತುಮಕೂರು)

ಕನ್ಯಾಕುಮಾರಿಯಿಂದ ಕಾಶ್ಮೀರಕ್ಕೆ

ಮೊದ ಮೊದಲು http://kcsampath.blogspot.in/2017/03/blog-post.html
ಪಯಣಕ್ಕೊಂದು ಪಯಣ http://kcsampath.blogspot.in/2017/03/blog-post_91.html 
ದಿನ-1: ಕನ್ಯಾಕುಮಾರಿಯಿಂದ ಮದುರೈ http://kcsampath.blogspot.in/2017/04/1.html 

ದಿನ-2: ಮದುರೈಯಿಂದ ತುಮಕೂರು

15 ಜನವರಿ 2017
ಭಾನುವಾರ



        AC ಯ remote ವರ್ಕ್ ಆಗಲಿಲ್ಲ, off ಮಾಡಲು switch ಕೂಡ ಇರಲಿಲ್ಲ. ಹೊರಗೆ ತುಂಬಾ ಸೆಕೆಯಿತ್ತು, ಆದರೆ ರೂಮೊಳಗೆ ಮಾತ್ರ chilling AC temperature ಅಲ್ಲಿ ನಾನು, ತಲೆ ತುಂಬಾ ಹೊದಿಕೆ ಹೊದ್ದು ಮಲಗಿದ್ದೆ. ನನ್ನ ಮೊಬೈಲಿನ ಅಲಾರ್ಮ್ ಏನೇನೋ sound ಮಾಡಿ ನಿದ್ದೆಗೆಡಿಸಿತು.

        ಸುಖನಿದ್ದೆಯಿಂದ ಏಳಲು ಮನಸಿರಲಿಲ್ಲ. ಆದರೆ ಆ ದಿನ ನಮ್ಮ ಪ್ರಯಾಣ ಸ್ವಲ್ಪ ಭಯಂಕರವೇ ಇತ್ತು. ಅದಕ್ಕಾಗಿಯೇ ನಮ್ಮ ಕ್ಯಾಪ್ಟನ್ ಶರತ್ ಎಲ್ಲರಿಗೂ "ನಾಳೆ, 7ಕ್ಕೆ ಎಲ್ಲರೂ ತಯಾರಿದ್ದು, ಮೀನಾಕ್ಷಿ ದೇವಸ್ಥಾನ ನೋಡಲು ಹೊರಡಬೇಕು" ಎಂದು ಹೇಳಿದ್ದರು.
        ನನ್ನಿಂದ ತಡವಾಗಬಾರದೆಂದು, ಎದ್ದು ತಯಾರಾಗಿ ಅವರ ರೂಮಿನ ಬಾಗಿಲು ತಟ್ಟಿದೆ. ಶರತ್ ಮತ್ತು ಶ್ವೇತಾ ಕೂಡ ready ಯಾಗಿದ್ದವರು, ಹೊರಗೆ ಬಂದರು. "ಶಿವು-ದೀಪಿಕಾ ಇನ್ನೂ ಎದ್ದಿಲ್ಲ, phone call ಗೆ ಕೂಡ answer ಮಾಡ್ತಿಲ್ಲ, ಬಾಗಿಲು ತಟ್ಟಿದರೂ ಏಳುತ್ತಿಲ್ಲ... ನಾವು ಸುಮಾರು 20 ನಿಮಿಷದಿಂದ try ಮಾಡ್ತಾನೆ ಇದೀವಿ" ಅಂದರು. ಹೌದಾ, ಅಂತ ಹೇಳಿ ನಾನೂ ಒಂದೆರಡು ಬಾರಿ ಬಾಗಿಲು ಬಡಿದೆ. ಏನೂ ಉತ್ತರ ಬರಲಿಲ್ಲ. ಸ್ವಲ್ಪ ಹೊತ್ತು ಕಾದರೂ ಏಳಲಿಲ್ಲ.
        "ಇನ್ನೂ ಕಾಯುವುದು ಬೇಡ, ಅವರು ಮಲಗಿದ್ದು ನಾವು ದೇವಸ್ಥಾನ ನೋಡಿ ಬರುವಷ್ಟರಲ್ಲಿ ಎದ್ದು ತಯಾರಾದರೆ, ಇಲ್ಲಿಂದ ಮುಂದೆ ಹೊರಟು ಬಿಡೋಣ" ಅಂದರು ಶರತ್.
        ಹಾಗೇ ಆಗಲಿ ಎಂದು ನಾವು ಮೂವರೂ ಹೊರಟೆವು, ಹೊರಡುವ ಮುನ್ನ ಕೊನೆ ಪ್ರಯತ್ನ ಅಂತ ಒಮ್ಮೆ ಬಾಗಿಲು ತಟ್ಟಿದೆ. ಶಿವು ಎದ್ದುಬಂದು ಬಾಗಿಲು ತೆಗೆದ. ಒಂದು ಸಮಾಧಾನದೊಂದಿಗೆ, "ನೀವಿಬ್ಬರೂ ತಯಾರಾಗಿ ದೇವಸ್ಥಾನಕ್ಕೆ ಬನ್ನಿ, ನಾವು ಅಲ್ಲಿಗೆ ಹೋಗಿರುತ್ತೇವೆ" ಎಂದು ದೇವಸ್ಥಾನದ ದಾರಿ ಹಿಡಿದೆವು.
        ರಾತ್ರಿ ನಾವು ಊಟ ಮಾಡಿದ್ದ ಹೋಟೆಲ್, ಮತ್ತೆ ತೆರೆದಿತ್ತು. ಹೋಗಿ ಕಾಫಿ ಕುಡಿದು, ದೇವಸ್ಥಾನಕ್ಕೆ ಹೋದೆವು. Queueನಲ್ಲಿ ನಿಂತಾಗ ಅಲ್ಲಿನ ಸೆಕ್ಯೂರಿಟಿ, ಕ್ಯಾಮೆರಾಗಳನ್ನು ಒಳಗೆ ಬಿಡುವುದಿಲ್ಲ ಎಂದರು. ನಮ್ಮ ಫೋಟೋಗ್ರಾಫರ್ ಶರತ್ ಗೆ, ಬೇಸರವಾಯ್ತು, ಹೊರಗೆ ಹೋಗಿ ಇದ್ದ ಎರಡು ಮೂರು ಕ್ಯಾಮೆರಾಗಳನ್ನು locker ನಲ್ಲಿ ಇಟ್ಟು, ಒಳಕ್ಕೆ ಬಂದೆವು.

        ಮಧುರೈ ಮೀನಾಕ್ಷಿ ಮಂದಿರ, ಬಹು ಪ್ರಸಿದ್ಧ, ಬಹು ವಿಸ್ತಾರವಾದ ದೇವಸ್ಥಾನ. ಮೀನಿನಂಥ ಅಕ್ಷಿಯುಳ್ಳವಳಾದ ಪಾರ್ವತಿಯ ಅವತಾರವೆನ್ನುವ ಮೀನಾಕ್ಷಿದೇವಿ ಹಾಗೂ ಸುಂದರೇಶ್ವರ ಸ್ವಾಮಿಯ, ದ್ರಾವಿಡ ಶೈಲಿಯ ಮಂದಿರ. ನನಗೆ ಆ ದೇವಾಲಯದ ಇತಿಹಾಸವನ್ನು ತಿಳಿದ  ಮಟ್ಟಿಗೆ ಹೇಳಬೇಕೆಂದರೆ, ಈ ದೇವಸ್ಥಾನಕ್ಕೆ ಒಂದು ಸಾವಿರಕ್ಕೂ ಹೆಚ್ಚು ವರ್ಷಗಳ ಇತಿಹಾಸವಿದೆ ಎನ್ನಬಹುದು.
        1311ನೇ ಇಸವಿಯಲ್ಲಿ ನೆಡೆಯಿತೆನ್ನುವ  ವಾರಂಗಲ್ಲು ಯುದ್ಧದಲ್ಲಿ, ಅಲ್ಲಾವುದೀನ್ ಖಿಲ್ಜಿಯ ಸರದಾರ ಮಲ್ಲಿಕಾಫರ್, ದಕ್ಷಿಣದ ಮಹಾನ್ ಹಿಂದೂ ಸಾಮ್ರಾಜ್ಯದ ದೊರೆಗಳಾದ ಹೊಯ್ಸಳರನ್ನು ಪೂರ್ತಿಯಾಗಿ ಸೋಲಿಸಿ, ಎಲ್ಲವನ್ನು ಲೂಟಿ ಹೊಡೆದ ಮೇಲೆ, ಆತನ ಕಣ್ಣುಗಳು ಮಧುರೈನ ಪಾಂಡ್ಯರ ಮೇಲೆ ಬೀಳುತ್ತದೆ.
        ಹೊಯ್ಸಳ ಸಾಮ್ರಾಜ್ಯದಲ್ಲಿ ದೇವಾಲಯಗಳಲ್ಲಾದ ಅನಾಚಾರದ ವಿರುದ್ಧ ಸಿಡಿದೆದ್ದ ರಾಜ, ಸುಂದರ ಪಾಂಡ್ಯನನ್ನೂ, ಯುದ್ಧದಲ್ಲಿ ಸೋಲಿಸಿದ ಮಲ್ಲಿಕಾಫರ್ ಮೀನಾಕ್ಷಿ ಮಂದಿರದ ಭಂಡಾರದಲ್ಲಿದ್ದ ಲಕ್ಷಗಟ್ಟಲೆ ಹೊನ್ನು ಮತ್ತು ದಾಸ್ತಾನನ್ನು ದೋಚುತ್ತಾನೆ.
        ಮುಂದೆ ಒಂದೆರಡು ಶತಮಾನಗಳ ಬಳಿಕ, ಮಧುರೈನಲ್ಲಿ ಸ್ವತಂತ್ರ ರಾಜನಾದ ವಿಶ್ವನಾಥ ನಾಯಕ, 1600 ರಲ್ಲಿ ಮೀನಾಕ್ಷಿ ಮಂದಿರವನ್ನು ಪುನರುಜ್ಜೀವನಗೊಳಿಸುತ್ತಾನೆ. ಮತ್ತೆ 1625 ರಲ್ಲಿ, ದೇವಸ್ಥಾನದ ನಿರ್ಮಾಣವನ್ನು ಕೈಗೆತ್ತಿಕೊಂಡ ತಿರುಮಲನಾಯಕ ಈಗ ನಾವು ಕಾಣುವ ಬಹಳಷ್ಟು ಕಟ್ಟಡಗಳನ್ನು ನಿರ್ಮಿಸುತ್ತಾನೆ.
        ಜನಪದರ ಕಥೆಗಳ ಮೂಲಕ ತಿಳಿಯುವುದೇನೆಂದರೆ, ಆ ವಂಶಜರಿಂದ ತಿರುಮಲನಾಯಕನ ಕಾಲದಿಂದ ಈಗಿನ ತನಕವೂ, ಈ ಮಂದಿರದಲ್ಲಿ ಒಂದಲ್ಲ ಒಂದು ನಿರ್ಮಾಣ/ದುರಸ್ತಿ ಕಾರ್ಯ ನೆಡೆಯುತ್ತಲೇ ಇರುತ್ತದೆಂದು.


ಚಿನ್ನದ ತಾವರೆಯ ಕೊಳ

        ಬೆಳಗಿನ 8 ಘಂಟೆಗೆ, ಒಳ ಬಂದ ನಾವು ಮೊದಲು ದರ್ಶನಕ್ಕೆಂದು ಸಾಲಿನಲ್ಲಿ ನಿಂತೆವು, ಎತ್ತ ತಿರುಗಿದರೂ ಸುಂದರ ಶಿಲ್ಪಗಳೇ ಇದ್ದ ಮಂದಿರವನ್ನು ನೋಡುತ್ತಾ ನೋಡುತ್ತಾ ಸಾಲಿನಲ್ಲಿ ಮುಂದೆ ಸಾಗಿದ್ದೇ ತಿಳಿಯಲಿಲ್ಲ. ಕಪ್ಪುಶಿಲೆಯ, ಮನುಷ್ಯಾಕೃತಿಯಷ್ಟೇ ಅಳತೆಯ, ಬಲಕ್ಕೆ ಸುಂದರವಾದ ತುರುಬು ಮುಡಿಕಟ್ಟಿದ್ದ, ಅದ್ಭುತಾಲಂಕೃತಗೊಂಡಿದ್ದ ಮೀನಾಕ್ಷಿ ಅಮ್ಮನ ದರ್ಶನ ಮುಗಿಸಿ, ಸುಂದರೇಶ್ವರ ಗುಡಿಯನ್ನು ನೋಡಿ ಮುಂದೆ ಬಂದೆವು.
        ದೇವಾಲಯದ ಅಮೋಘ ಶಿಲ್ಪಕಲೆ ತುಂಬಿದ ವಿಶಾಲ ಹಜಾರಗಳು, ಎಷ್ಟು ನೋಡಿದರೂ ಮುಗಿಯದ ಅದ್ಭುತ ಚಿತ್ರಕಲಾ ಗೋಡೆಗಳು, ಮಾಳಿಗೆಗಳು, ಎಲ್ಲವೂ ತಮಿಳು ಸಂಸ್ಕೃತಿಯ ಕಲಾಶ್ರೀಮಂತಿಕೆಯನ್ನು ಮೆರಗುಗೊಳಿಸುತ್ತಿದ್ದವು. ಮೂಕವಿಸ್ಮಿತರಾಗಿ ದೇವಾಲಯದ ಎಲ್ಲಕ್ಕೂ ಕಣ್ಣೊತ್ತಿ ಸಾಗಿದ್ದೆವು.



ಮೀನಾಕ್ಷಿದೇವಿ ಗರ್ಭಗುಡಿ 



        ಅಷ್ಟರಲ್ಲಿ ಶಿವು-ದೀಪಿಕಾ ಕೂಡ ದರ್ಶನ ಮುಗಿಸಿ, ನಮ್ಮನ್ನು ಕೂಡಿಕೊಂಡರು. ಮುಂದೆ ಸಾವಿರ ಕಂಬದ ಮಂಟಪವಿದೆಯೆಂದು, ನೋಡಲು ಹೋದೆವು. ಅಲ್ಲಿ ಸಾವಿರ ಕಂಬಗಳೇನೋ ಇದ್ದವು. ಆದರೆ ಅದು ನಾವೆಣಿಸಿದ್ದಷ್ಟು ಅದ್ಭುತವಾಗಿರಲಿಲ್ಲ, ತುಸು ಸಪ್ಪೆಯೆನಿಸಿತು. ಆ ಕಂಬಗಳ ನಡು ನಡುವೆಯೇ ದೇವಾಲಯಕ್ಕೆ ಸಂಬಂದಿಸಿದ ಐತಿಹಾಸಿಕ ವಸ್ತುಗಳ ಸಂಗ್ರಹಾಲಯವನ್ನು ಇಟ್ಟಿದ್ದರು. ತುಸು ಹೊತ್ತು ನಮ್ಮ ಪಾಡಿಗೆ ನಾವು ಕಂಬಗಳ ಮಧ್ಯೆ ಸುತ್ತಾಡಿ, ಆಮೇಲೆ ಅಲ್ಲಿಂದ ಹೊರಬಂದೆವು.

ಸಾವಿರ ಕಂಬಗಳ ಮಂಟಪ
        ದೇವಸ್ಥಾನದಲ್ಲಿ ಸುಮಾರು ಎರಡೂವರೆ ಘಂಟೆಗಳಷ್ಟು ಹೊತ್ತು ಕಳೆದಿದ್ದೆವು. ಆದರೂ ದೇವಾಲಯದ ಅರ್ಧದಷ್ಟನ್ನೂ ನೋಡಲಿಲ್ಲ ಅನಿಸುತ್ತದೆ.

        ನಿನ್ನೆ ಮಕರ-ಸಂಕ್ರಾಂತಿಯಿತ್ತಲ್ಲವೇ, ನಾವು ಆ ದಿನ ಮನೆಯಲ್ಲಿರುವುದಿಲ್ಲವೆಂದೇ ದೀಪಿಕಾರ ತಾಯಿ ನಮಗೆಲ್ಲ ಎಳ್ಳು-ಬೆಲ್ಲ ಕೊಟ್ಟು ಕಳಿಸಿದ್ದರು. ಅದನ್ನು ನಿನ್ನೆ ಕೊಡದೆ, ಇವತ್ತು ದೇವಸ್ಥಾನದಲ್ಲಿ ಕೊಡೋಣವೆಂದು ದೀಪಿಕಾ ಅಲ್ಲಿಗೆ ತಂದಿದ್ದರು. ನಮಗೂ ಹಸಿವಾಗಿದ್ದರಿಂದ, ದೇವಸ್ಥಾನದಿಂದ ನಮ್ಮ ಹೋಟೆಲಿಗೆ ನೆಡೆಯುವಷ್ಟರಲ್ಲಿ ಅರ್ಧದಷ್ಟನ್ನು ತಿಂದು ಮುಗಿಸಿದೆವು.

        ಹೋಟೆಲಿನಲ್ಲಿ complementary breakfast ಇತ್ತು. ಶರತ್ ನಮಗೆಲ್ಲ ಮಧುರೈ speacial ಇಡ್ಲಿ ಕೊಡಿಸುತ್ತೇನೆ ಎಂದಿದ್ದವರು, ಆಗ ಅಲ್ಲಿ ಕೊಟ್ಟ ಇಡ್ಲಿಯನ್ನೇ "ಇದೇ,,, ಅದು." ಅಂತ ತಿನ್ನಲು ಹೇಳಿದರು.
        "ನಿನ್ನೆ ಹಲ್ವಾ ಕೊಡಿಸಲಿಲ್ಲ,,, ಇವತ್ತು ಇಡ್ಲಿ ಕೊಡಿಸಲಿಲ್ಲ,,, ಕ್ಯಾಪ್ಟನ್ ಸರಿಯಿಲ್ಲ..." ಅಂತ ರೇಗಿಸಿದೆವು. "ಇವತ್ತಿನ ಪ್ಲಾನಲ್ಲಿ ಜಿಗರ್ಥಂಡ ಒಂದು ಉಳಿದಿದೆ,,, ಅದನ್ನಾದ್ರೂ ಕೊಡ್ಸಿ..." ಅಂದೆವು. ನಗುವೊಂದೇ ಅವರಿಂದ ಬಂದ ಉತ್ತರ.

        ತಿಂಡಿ ಮುಗಿಸಿ ರೂಮುಗಳಿಗೆ ತೆರಳಿ,  ಮತ್ತೆ ನಮ್ಮ ವೇಷಭೂಷಣ ತೊಟ್ಟು rideಗೆ readyಯಾಗಿ, ಲಗೇಜಿನೊಂದಿಗೆ ಹೊರಬಂದು check-out ಮಾಡಿ, ಬೈಕುಗಳಿಗೆ ಎಲ್ಲವನ್ನೂ ಲೋಡ್ ಮಾಡಿದೆವು.

        ಈ ದಿನದ ಪ್ಲಾನ್ ಪ್ರಕಾರ, ನಾವು ಇಂದು ಉಳಿಯಲು ತುಮಕೂರು ತಲುಪಬೇಕಾಗಿತ್ತು. ಉರಿಬಿಸಿಲಿನಲ್ಲಿ ಸುಮಾರು 520ಕಿ.ಮೀ. ಗಳ ಪ್ರಯಾಸದ ಪ್ರಯಾಣ, ನಮ್ಮ ಪಾಲಿಗಿತ್ತು.

         ಗಡಿಯಾರ 11 ಘಂಟೆ ತೋರಿಸುತ್ತಿತ್ತು. ನಾನು ಮೇಲೆ ತಿಳಿಸಿದ ತಿರುಮಲನಾಯಕರ, ಅರಮನೆಯನ್ನು ನೋಡಿ ಅಲ್ಲಿಂದ ತುಮಕೂರು ಕಡೆಗೆ ಪ್ರಯಾಣ ಬೆಳೆಸುವ ಎಂದುಕೊಂಡು, ಹೊರಟೆವು.

         ಹೋಟೆಲಿನಿಂದ 5km ದೂರವಿದ್ದ ಆ ಅರಮನೆ, ಸುಮಾರು ನಾನೂರು ವರ್ಷಕ್ಕೂ ಹಳೆಯ ಕಟ್ಟಡ. ಮೊದಲ ನೋಟಕ್ಕೆ ಹಳೆಯ ಕಾಲದ ಒಂದು ಬೃಹತ್ ಬಂಗಲೆಯಂತೆಯೋ ಅಥವಾ ಯಾವುದೋ ಬ್ರಿಟೀಷರ ಕಾಲದ ಬಂಗಲೆಯಂತೆ ಕಾಣುತ್ತದೆ. ಹೊರಗಿನ ಸುತ್ತು ಗೋಡೆಯನ್ನು ದಾಟಿ ಒಳ ಹೋದೊಡನೆ, ಅಮೋಘ ದರ್ಬಾರ್ ಹಾಲ್ ಎದುರಿಗೆ ಸಿಗುತ್ತದೆ.

ತಿರುಮಲನಾಯಕರ ಅರಮನೆ
        ಇಲ್ಲಿಂದ ಒಳಗೆ ಹುಬ್ಬೇರುವಷ್ಟು ಎತ್ತರದ ಕಂಬಗಳ ಮೇಲೆ ನಿಂತಿರುವ ಅದ್ಭುತ ಛಾವಣಿಯಿಂದ ಸುತ್ತುವರಿದ ದರ್ಬಾರ್ ಹಾಲ್. ಮೇಲ್ನೋಟಕ್ಕೆ ಮಾಸಿ ಹೋದಂತಿದ್ದರೂ, ಸುಂದರ ವಿನ್ಯಾಸಗಳ ಸಾಲು ಸಾಲು ಕಮಾನುಗಳು, ಅಲ್ಲಿದ್ದಷ್ಟು ಹೊತ್ತೂ ನಮ್ಮ ಕಣ್ಣುಗಳನ್ನು ಅವುಗಳತ್ತಲೇ ಸೆಳೆಯುತ್ತವೆ.
        ನಾಯಕರು ಕುಳಿತು ದರ್ಬಾರು ನೆಡೆಸುತ್ತಿದ್ದ ಜಾಗದಲ್ಲಿ, ಸಿಂಹಾನವಲ್ಲದಿದ್ದರೂ ಒಂದು ಹಳೆಯ ಕಾಲದ ಕುರ್ಚಿಯನ್ನಿಟ್ಟಿದ್ದಾರೆ. ಆದರೆ ಇನ್ನು ಒಳಗಿನ ಅರಮನೆಯ ಭಾಗಕ್ಕೆ ಪ್ರವೇಶ ನಿಷಿದ್ಧವಿದ್ದರಿಂದ, ಒಳಗೆ ಹೋಗಿ ಪೂರ್ತಿ ಅರಮನೆಯನ್ನು ನೋಡಲು ಆಗಲಿಲ್ಲ.
        ಅಲ್ಲಿನ ಎತ್ತರದ ಮಾಳಿಗೆಗಳಲ್ಲಿ, ಯಾರೂ ತಮಗೆ ತೊಂದರೆ ಕೊಡುವವರಿಲ್ಲದೇ, ಆ ಅರಮನೆಯನ್ನು ಸದ್ಯದ ಮಟ್ಟಿಗೆ ಯಾವ ಯುದ್ಧವಿಲ್ಲದೇ ಪಾರಿವಾಳಗಳು ಗೆದ್ದುಕೊಂಡಿವೆ. ಕಂಬಗಳ ನಡುವಿನ ಹಜಾರದಲ್ಲಿ ಸುತ್ತಾಡುವಾಗ, ತಲೆಯೆತ್ತಿ ಮೂರ್ನಾಲ್ಕು ಬಾರಿ ಯೋಚಿಸಿ  ನೋಡಿಯೇ ನೆಡೆಯಬೇಕಾದ ಸ್ಥಿತಿಯಿದೆ ಅಲ್ಲಿ.


(Shaktiman Spotted after Decades)

        ಅಲ್ಲಿ ಕೆಲವು ಫೋಟೋ ತೆಗೆದುಕೊಂಡು, ಹೊರಬಂದೆವು. ನನ್ನ Jacketನ reflector lining, ಫೋಟೋ flashಗೆ ಹೊಳೆದು ಬಂದಿದ್ದರಿಂದ, ಫೋಟೋ ನೋಡಿದ ಎಲ್ಲರೂ Shaktiman ಎಂದು ನಾಮಕರಣ ಮಾಡಿಬಿಟ್ಟರು.
        ನಮ್ಮ ಲಗೇಜನ್ನೆಲ್ಲ ಬೈಕುಗಳಲ್ಲೇ ಬಿಟ್ಟು ಬಂದಿದ್ದರಿಂದ, ಬೇಗ ಹೊರಗೆ ಬಂದು ಬಿಟ್ಟೆವು. ಅರಮನೆಯ ಪ್ರವೇಶದ ದಾರಿಯಲ್ಲಿ ಸಣ್ಣ ಗಾಡಿಯಲ್ಲಿ ಜಿಗರ್ಥಂಡ ಜ್ಯೂಸ್ ಅಂತ ಬೋರ್ಡು ಹಾಕಿತ್ತು. ಶರತ್ ನಮ್ಮನ್ನೆಲ್ಲ ಕೂಗಿ ಗಾಡಿಯನ್ನು ತೋರಿಸಿ, ಬನ್ನಿ ಎಂದು ಕರೆದರು. ನಾವು ನಿಂತಿದ್ದ ಜಾಗದಿಂದ ಅಲ್ಲಿಗೆ ಹೋಗಬೇಕೆನ್ನುವಷ್ಟರಲ್ಲಿ, ಅಲ್ಲಿದ್ದ ಅರಮನೆಯ ಗೈಡ್ ಒಬ್ಬರು, "ಸರ್, ಅಲ್ಲಿ ಮುಂದೆ ಮೇನ್ ರೋಡಿನಲ್ಲಿ ಮಧುರೈ ಸ್ಪೆಷಲ್ ಜಿಗರ್ಥಂಡ ಅಂಗಡಿಯಿದೆ, ಆ ಅಂಗಡಿಯದ್ದೇ ಒರಿಜಿನಲ್ ಟೇಸ್ಟ್. ಅಲ್ಲಿ ಹೋಗಿ ಟೇಸ್ಟ್ ಮಾಡಿ" ಅಂದ. ಆತ ಹೇಳಿದ್ದು ಒಳ್ಳೆಯದಾಯ್ತೆಂದು, ಶರತ್ ರನ್ನು ಕರೆದು ಮುಂದೆ ಹೊರಟು, ಅಲ್ಲಿಂದ ಮೇನ್ ರೋಡ್ ತಲುಪುತ್ತಿದ್ದಂತೆಯೇ ಅರ್ಧ ಕಿ.ಮೀ ನಲ್ಲಿ ನಮ್ಮ ಬಲಕ್ಕೆ ಒಂದು ಚಿಕ್ಕ ಜ್ಯೂಸು ಅಂಗಡಿ ಕಾಣಿಸಿತು. ಪೂರ್ತಿ ಜನಜಂಗುಳಿಯಿತ್ತು ಅಲ್ಲಿ, ಆ ಜನರನ್ನು ನೋಡಿಯೇ, "ಹಾ, ಇದೇ ಆ ಫೇಮಸ್ ಶಾಪ್" ಅಂದು ಕೊಂಡು, ಬೈಕುಗಳನ್ನು ರಸ್ತೆ ಬದಿ ನಿಲ್ಲಿಸಿ, ಜ್ಯೂಸು ಅಂಗಡಿಯ ಜನಗಳ ನಡುವೆ ನುಗ್ಗಿದೆವು.
        ನಮ್ಮ ವೇಷ ಅವತಾರಗಳನ್ನ ಎಲ್ಲರೂ, ಆಶ್ಚರ್ಯದಿಂದ ನೋಡುತ್ತಿದ್ದರು. ಆದರೆ ನಮ್ಮ ಗಮನ ಜ್ಯೂಸಿನ ಮೇಲಿತ್ತು. ಸ್ಪೆಷಲ್ ಜಿಗರ್ಥಂಡ ಐದು ಎಂದು, ಆರ್ಡರ್ ಮಾಡಿದೆವು. ಒಂದಕ್ಕೆ 50ರೂ. ಎಲ್ಲರೂ ಜ್ಯೂಸು ಹಿಡಿದು, ಹೊರಗೆ ಬಂದು ನಿಂತು, ಮನಸಾರೆ ಸವಿಯತೊಡಗಿದೆವು, ಅಷ್ಟೇನೂ ತನ್ಮಯಗೊಳಿಸುವಷ್ಟು ರುಚಿಕರವಲ್ಲದಿದ್ದರೂ ನಮಗೆ ಒಂದು ಹೊಸ ಅನುಭವ.
        "ಅಲ್ಲಿನ ಗೈಡ್ ಹೇಳದೇ ಇದ್ದಿದ್ದರೆ, ಆ ಗಾಡಿ ಅಂಗಡಿಯ ಜ್ಯೂಸನ್ನೇ, ಇದೆ ಒರಿಜಿನಲ್ ಜಿಗರ್ಥಂಡ ಅಂತ, ನಮಗೆಲ್ಲ ಯಾಮಾರಿಸಿಬಿಡುತ್ತಿದ್ದಿರಿ ಅಲ್ವಾ???" ಅಂತ, ಎಲ್ಲರೂ ಶರತ್ ಗೆ ಕಾಳೆಯುತ್ತಿದ್ದೆವು.
        ನಮ್ಮ ಪಕ್ಕದಲ್ಲಿ ನಿಂತಿದ್ದ ಒಂದು ಕುಟುಂಬದವರು, ನಮ್ಮನ್ನೆಲ್ಲ ಮಾತಾಡಿಸಿ, ನಮ್ಮ ಪ್ರವಾಸದ ಬಗ್ಗೆ ವಿಚಾರಿಸಿ, ಆಶ್ಚರ್ಯ ಪಟ್ಟು "All the best" ಹೇಳಿ ಕಳುಹಿಸಿದರು.

ಮಧುರೈ ಜಿಗರ್-ಥಂಡಾ


        ಈಗ ಮಧ್ಯಾಹ್ನ 1 ಗಂಟೆ, ಹಸಿವಂತೂ ಯಾರಿಗೂ ಆಗಿರಲಿಲ್ಲ. ಇಲ್ಲಿಂದ 500km ಹೋಗಬೇಕಿದೆ. ಹಾಗಾಗಿ ಊಟದ ಯೋಚನೆ ಬಿಟ್ಟು, ಮುಂದೆ ಸದ್ಯಕ್ಕೆ ಇನ್ನೆಲ್ಲೂ ನಿಲ್ಲುವುದು ಬೇಡ, "ಸಾಗುವಾ ದಾರಿ,,, ದೂರಾ..." ಅಂತ ಹೆದ್ದಾರಿ ಹಿಡಿದೆವು. ಅಲ್ಲಿಂದ ಬೆಂಗಳೂರು ಕಡೆಗೆ ಸೀದಾ ಒಂದೇ ಹೆದ್ದಾರಿಯಾದ್ದರಿಂದ, ಮ್ಯಾಪ್ ಅವಶ್ಯಕತೆಯಿಲ್ಲದೆ ನಮ್ಮ ಪಾಡಿಗೆ ನಾವುಗಳು ಒಬ್ಬೊಬ್ಬರಾಗಿ ಸಾಗುತ್ತಿದ್ದೆವು. ಆದರೂ ಒಬ್ಬರ ಕಣ್ಣಿಗೊಬ್ಬರು ಕಾಣುವಷ್ಟು ಅಂತರವನ್ನಂತೂ ಕಾದುಕೊಂಡು ಬರುತ್ತಿದ್ದೆವು.
        ಮಧುರೈ ದಾಟಿ, ತುಸು ದೂರ ಬರುತ್ತಿದಂತೆಯೇ ಹೆದ್ದಾರಿ, ಸಿರುಮಲೈ ರಕ್ಷಿತಾರಣ್ಯದ ಹೊರ ವಲಯದಲ್ಲಿ ಸಾಗುತ್ತದೆ. ಅಚ್ಚುಕಟ್ಟಾದ ಹೆದ್ದಾರಿಯಲ್ಲಿ, ಬೈಕು ಓಡಿಸುವುದು ಕಷ್ಟವೇನಲ್ಲ. ಹಾಗಾಗಿ ಕಣ್ಣು, ಸುತ್ತೆಲ್ಲ ಪರಿಸರವನ್ನು ನೋಡುತ್ತಲೇ ಸಾಗುತ್ತದೆ.
        ಬಲಕ್ಕೆ, ಆ ಸುತ್ತ ಮುತ್ತಲ ಬಯಲು ನಾಡಿನಲ್ಲಿ ದಿಗ್ಗನೆ ಒಂದೊಕ್ಕೊಂದು ಒತ್ತಿಕೊಂಡು ಮನೋಹರವಾಗಿ ಹಬ್ಬಿದ್ದ ಪರ್ವತ ರಾಶಿ ಕಣ್ಣಿಗೆ ಬಿತ್ತು. ಸುಮಾರು 15ಕಿ.ಮೀ ಹಾಗೇ ದಾರಿಯುದ್ದಕ್ಕೂ ನಮ್ಮ ಜೊತೆಯೇ ಬರುತ್ತಿದೆ ಎಂದು ಭಾಸವಾಗುವಂತೆ, ಪರ್ವತ ಮಾಲೆ ನಮ್ಮ ಪಕ್ಕಕ್ಕೆ ಕಾಣುತ್ತಲೇ ಇತ್ತು.



        ಮೊದಲಿಗೆ ಯಾವುದಿದು ಬೆಟ್ಟ ಸಾಲೆಂದು, ತಿಳಿಯದ ನನಗೆ ರಸ್ತೆಯಲ್ಲಿ ಪಕ್ಕದ ಮೈಲುಗಲ್ಲಿನಲ್ಲಿದ್ದ 'ದಿಂಡಿಗಲ್ಲು' ಹೆಸರನ್ನು ಕಂಡೊಡನೆ, ನಾನು ಓದಿದ್ದ Kenneth Andersonರ ನರಭಕ್ಷಕ ಬೇಟೆಯ ಕಥೆಗಳು ನೆನಪಾದವು. ಆ ದಿಂಡಿಗಲ್ಲು ಬೆಟ್ಟವನ್ನು ಮತ್ತು ಸುತ್ತಲ ಕಾಡನ್ನು ಅವರ ಒಂದು ಪುಸ್ತಕದಲ್ಲಿ ವಿವರಿಸಿದ್ದ, ಸಣ್ಣ ಪುಟ್ಟ ವಿಷಯಗಳು ಮನಸಿನ್ನಲ್ಲಿ ಮೂಡಿದವು. ಮತ್ತಷ್ಟು ಕುತೂಹಲದಿಂದ ಕಣ್ತುಂಬಿಕೊಂಡೆ. ಈಗ ಆ ಬೆಟ್ಟಸಾಲು ಇನ್ನಷ್ಟು ರೋಚಕವಾಗಿ ಕಂಡಿತು.

        ಒಂದೆರಡು ಘಂಟೆಗಳು ಸಾಗಿದ ಮೇಲೆ ಊಟದ ನೆನಪಾಗತೊಡಗಿತು. ನನ್ನ ಮುಂದೆ ಸಾಗುತ್ತಿದ್ದ ಶರತ್ ಸ್ವಲ್ಪ slow ಮಾಡಿ, ನನಗೆ ಊಟದ ಸನ್ನೆ ಮಾಡಿ ಮುಂದುವರಿದರು. ಆಗ ನಾನು ನಿಧಾನವಾಗಿ ಸಾಗುತ್ತಾ ಹಿಂದಿದ್ದ ಶಿವು ಹತ್ತಿರಾದಾಗ, ಊಟದ ಸನ್ನೆ ಮಾಡಿದೆ, ಆಗ ಹಿಂದೆ ಕುಳಿತಿದ್ದ ದೀಪಿಕಾ ನನಗೆ ನಿಲ್ಲುವಂತೆ ಹೇಳಿದರು. 
        ನಿಂತು ಏನೆಂದು ಕೇಳಿದಾಗ, ಶಿವು ಹೊಸದಾಗಿ ಕೊಂಡಿದ್ದ riding hand glovesನ ಹೊಲಿಗೆಯೆಲ್ಲಾ ಕಿತ್ತು ಹೋಗಿತ್ತು. ಕೊಳ್ಳುವಾಗಲೇ ಅವನು ಸರಿಯಾಗಿ ಪರಿಶೀಲಿಸಬೇಕಿತ್ತು. ಈಗ, ಅದನ್ನು ಬೆಂಗಳೂರಿನಲ್ಲಿ​ ಬದಲಾಯಿಸಿಕೊಳ್ಳಲು ನಮಗೆ ಸಮಯವಿರಲಿಲ್ಲ. ಹಾಗಾಗಿ ನಿನ್ನೆಯೇ ಅವನು ಯೋಚನೆ ಮಾಡಿ, ನಾವು​ ಸಾಗುವ ದಾರಿಯಲ್ಲಿ ಸಿಗುವ ಒಂದು ಊರಿನವನಾದ ಆತನ ಸ್ನೇಹಿತನಿಗೆ, ತಾನು ಆ gloves ಗಳನ್ನು ಕೊಟ್ಟು, ಆತ ಮರುದಿನ ಅದನ್ನು ಬೆಂಗಳೂರಿನ shop ನಲ್ಲಿ ಬದಲಾಯಿಸಿ ಮುಂದೆ ದೆಹಲಿಗೆ ಅದನ್ನು courier ಮಾಡಿಸಲು, plan ಮಾಡಿಕೊಂಡಿದ್ದ. ಆದ್ದರಿಂದ ಈಗ ಊಟಕ್ಕೆ ನಮ್ಮ ಜೊತೆ ನಿಲ್ಲದೆ, ಸೀದಾ ಆ ಸ್ನೇಹಿತನ ಊರಿಗೆ ಹೋಗಿ ಬರುವುದಾಗಿಯೂ, ಮತ್ತೆ ನಮ್ಮನ್ನು ಬೆಂಗಳೂರಿನಲ್ಲಿ​ join ಆಗುವುದಾಗಿಯೂ ಹೇಳಿದ. 
        ನನ್ನ ಮೊದಲ post ನಲ್ಲಿ, ನಾನು ಶಿವುನ ಬಗ್ಗೆ ವಿವರವಾಗಿ ತಿಳಿಸಿದ್ದೆನಲ್ಲ, ಹಾಗೆಯೇ ಆತನ ಹಲವಾರು ಕೆಲಸಗಳು ಹೀಗೆ ಒಂದಲ್ಲ ಒಂದು ಎಡವಟ್ಟಿನಿಂದ ಕೂಡಿರುತ್ತವೆ.
        ಸರಿ, ಹಾಗೇ ಮಾಡಿ ನೀವು. ನಾವು ಬೆಂಗಳೂರು ತಲುಪಿ phone ಮಾಡುವುದಾಗಿ ಹೇಳಿ ಕಳಿಸಿದೆ.

        ಮುಂದೆ ಹೋಗಿದ್ದ ಶರತ್ ರಸ್ತೆ ಬದಿಯಲ್ಲಿ ಕಾಣಿಸಿದ ಹೋಟೆಲಿನ ಕಡೆಗೆ ಬೈಕನ್ನು ತಿರುಗಿಸಿ ನಿಂತಿದ್ದರು. ಅವರಿಗೆ, ಶಿವುನ ಕತೆಯನ್ನೆಲ್ಲ ಹೇಳಿ, ಹೋಟೆಲ್ ಒಳ ಹೋದೆವು. ತುಸು ದೊಡ್ಡದೇ ಇದ್ದ ಹೋಟೇಲಿನಲ್ಲಿ, ಅದಾಗಲೇ ಸಾಕಷ್ಟು ಜನರಿದ್ದರು. ಟೇಬಲ್ಲಿಗಾಗಿ ಕಾದು, ಅದು ಸಿಕ್ಕಿ ಕುಳಿತಮೇಲೆ, ಆರ್ಡರ್ ಮಾಡಲು ಕರೆದರೆ ಆತ ಬಂದವನೇ "ಸಾರ್, ಲೆಮನ್ ರೈಸಾ? ಕರ್ಡ್ ರೈಸಾ???" ಅಂತ ಕೇಳಿ, ಅಲ್ಲಿ ಬೇರಿನ್ನೇನೂ ಸಿಗುವುದಿಲ್ಲ​ ಎಂದು ಮನವರಿಕೆ ಮಾಡಿಸಿದ. ಅಯ್ಯೋ, ಕಳೆದ ಮೂರು ಹೊತ್ತಿನಿಂದ ಊಟವೇ ಸಿಕ್ಕಿಲ್ಲವಲ್ಲ, ಬರಿ ತಿಂಡಿಯೇ ಗತಿನಾ,,, ಅಂತ ಅದನ್ನೇ ತರಿಸಿಕೊಂಡು ತಿಂದು, ಜ್ಯೂಸ್ ಕುಡಿದು ಬೈಕ್ ಹತ್ತಿದೆವು.
        ಮುಂದಿನ ದಾರಿ ಚೆನ್ನಾಗಿಯೇ ಇದ್ದುದರಿಂದ ಶ್ವೇತಾ ರೈಡ್ ಮಾಡಲು ಕುಳಿತರು. ನಾನು, earphones ನಲ್ಲಿ ಹಾಡು ಹಾಕಿಕೊಂಡು ಅವರ ಹಿಂದೆ ಹೊರಟೆ.
        ಬಿಸಿಲು ಬಹಳಾ ಬಿರುಸಾಗಿತ್ತು, ರಸ್ತೆಯಲ್ಲಿ ಎದುರಾಗಿ ಬೀಸುವ ಗಾಳಿಯೂ ಬಿಸಿ ಬಿಸಿ ಹವೆಯಂತೆ ಮುಖಕ್ಕೆ ರಾಚುತ್ತಿತ್ತು. ಮುಂದೆ ಹೋಗದೇ ಬೇರೆ ವಿಧಿಯಿಲ್ಲ, ಸಾಗುತ್ತಿದ್ದೆವು. ಬಿಸಿಲಿಗೆ ಹೆಲ್ಮೆಟ್ ಒಳಗೇ ಮುಖ ಸುಟ್ಟು ಉರಿಯುತ್ತಿತ್ತು. ಅಯ್ಯೋ ಹೀಗೆ ಆದ್ರೆ ಇನ್ನೆರಡು ದಿನದಲ್ಲಿ, ನನ್ನ ಮುಖ ಎಲ್ಲ tan ಆಗಿ, ಇನ್ನೂ ಕಪ್ಪಗಾಗಿ ಹೋಗಿಬಿಡ್ತಿನಲ್ಲ,,, ಇವರಿಗೆಲ್ಲಾಏನು, ಮಧುವೆ ಆಗಿಬಿಟ್ಟಿದೆ, ಆದ್ರೆ ನಂಗೆ?,, ಇನ್ನು ನನ್ನ ಯಾವ ಹುಡುಗೀನಾದರೂ ಒಪ್ಪುತಾಳ,,, ಅಂತಾ ತರಲೆ ಚಿಂತೆ ಆಗಾಗ ಬಂದು ಬಂದು ಹೋಗ್ತಿತ್ತು.
        ಶ್ವೇತಾ​ ಚೆನ್ನಾಗಿಯೇ ride ಮಾಡುತ್ತಿದ್ದರಾದರೂ, ತುಸು ಮಂದಗತಿಯಲ್ಲಿ ಸಾಗುತ್ತಿದ್ದೆವು. ಮೊಸರನ್ನ ತಿಂದು, ಮಧ್ಯಾಹ್ನದಿಂದ ಬಿಸಿಲಲ್ಲಿದ್ದರಿಂದ, ಕಿವಿಯಲ್ಲಿ ಗುಂಯ್ ಗುಡುವ ಹಾಡು ಬೇರೆ ಲಾಲಿಯಂತನಿಸಿ ತೂಕಡಿಕೆ ಶುರುವಾಯಿತು. ಬೈಕ್ ಹೋಡಿಸುತ್ತಲೇ ಕಣ್ಣು ಮುಚ್ಚಿ ಮುಚ್ಚಿ ಬಿಡತೊಡಗಿದ್ದೆ.
        ಸುಮಾರು 5ಗಂಟೆಯ ಹೊತ್ತಿಗೆ, ನನಗೆ ನಿದ್ರೆ ತಡೆಯಲಾರದೆ ಮುಂದೆ ಹೋಗಿ, ಪಕ್ಕದಲ್ಲಿದ್ದ ಸಣ್ಣ tea shop ನಲ್ಲಿ ನಿಲ್ಲಿಸಿ, ನೀರು ಕುಡಿದು ಮುಖ ತೊಳೆದುಕೊಂಡೆ. ಶ್ವೇತಾ-ಶರತ್ ಕೂಡ ಬಂದು, ಒಂದು break ತಗೊಳೋಣ ಅಂತ ನಿಲ್ಲಿಸಿದರು. 
        ಅವರು ಬಂದು ಕುಳಿತಾಗ, ನಿದ್ರೆ ಬರಲಿಲ್ವಾ ನಿಮಗೆ ಅಂದೆ. ಶ್ವೇತಾ, "ಹಾ,,, ನನಗೂ ನಿದ್ರೆ ಬರ್ತಿತ್ತು" ಅಂದ್ರು. ಶರತ್, "ನನಗಂತೂ ಚೂರೂ ನಿದ್ರೆ ಬರಲಿಲ್ಲ,,, ಮೈಯೆಲ್ಲಾ ಕಣ್ಣಾಗಿ ಕೂತಿದ್ದೆ... ಬೈಕ್ ಓಡಿಸ್ತಿದ್ದಿದ್ದು, ಇವಳಲ್ವಾ ಅದಿಕ್ಕೆ..." ಅಂತ, ಕಿಚಾಯಿಸಿದರು. ಅದಕ್ಕೆ ನಾನೂ, "ಹೌದು, ನಂಗಂತೂ,,, ಇವರು ಬೈಕ್ ಓಡಿಸೋ ತೀರಿಗೆ, ತೂಕಡಿಕೆ ಬಂದೋಯ್ತು", ಅಂತ ಮೊಸರನ್ನದ ತಪ್ಪನ್ನ, ಶ್ವೇತಾರ riding ಮೇಲೆ ಹಾಕಿದೆ. ನಮ್ಮ ಮಾತನ್ನು serious ಅಂದುಕೊಂಡು "ಹೌದಾ,,, ಅಷ್ಟೊಂದು ಕೆಟ್ಟದಾಗಿ ಓಡಿಸಿದನಾ,,, ನಾನು" ಅಂತ ಸಪ್ಪೆ ಮುಖಮಾಡಿ ನಕ್ಕರು. ಪಾಪ ಹತ್ತರತ್ತಿರ 150km ride ಮಾಡಿದ ಅವರಿಗೆ ಸುಳ್ಳು ಹೇಳಿ ರೇಗಿಸಿದೆವಲ್ಲ ಅನಿಸಿತು. 
        ನನ್ನ ಹಳೆಯ knee pad ನ screw ಒಂದು, ನನ್ನ ಬ್ಯಾಗುಗಳಿಗೆ ತೊಡರಿ ಕಿತ್ತು ಹೋಗಿತ್ತು. ಅದನ್ನ ರಿಪೇರಿ ಮಾಡಿಸುವುದು ಮತ್ತೆ, ಸಮಸ್ಯೆಯಾಗಿತ್ತು. ಆಗ, ಹೇಗೂ ಶಿವು-ದೀಪಿಕಾರಿಗಾಗಿ ಬೆಂಗಳೂರಿನಲ್ಲಿ ಕಾಯಲೇಬೇಕಾಗಿತ್ತಾದ್ದರಿಂದ, ಆ time ಬಳಸಿಕೊಳ್ಳೋಣವೆಂದು ಶರತ್, ಬೆಂಗಳೂರಿನಲ್ಲಿದ್ದ ತನ್ನ ತಮ್ಮನಿಗೆ ಹೊಸ knee pads ಖರೀದಿಸಿ ತಂದು, ನಾವು ಬೆಂಗಳೂರನ್ನು ದಾಟುವಲ್ಲಿ ಬಂದು ನಮಗೆ ತಲುಪಿಸಲು ಹೇಳಿದರು.
        ತಡಮಾಡದೆ tea ಕುಡಿದು, ಮತ್ತೆ ಬೆಂಗಳೂರು ದಾರಿ ಹಿಡೆದೆವು. ಧರ್ಮಪುರಿ, ಸೇಲಂ ಹೀಗೇ ಒಂದೊಂದೇ ಊರುಗಳನ್ನು ದಾಟಿ ಮುಂದುವರಿಯುತ್ತಲೇ ಇದ್ದೆವು. ಹಲವಾರು Sunday evening riders ಕೂಡ ನಮಗೆ ಜೊತೆಯಾಗಿ ಸಾಗಿಬಂದರು. ಅಂತೂ ಬೆಂಗಳೂರು ತಲುಪಿದಾಗ ರಾತ್ರಿ 8:30. ನೈಸ್ ರೋಡಿನ ಬಳಿ ಸಿಕ್ಕ ಶರತ್-ರ ತಮ್ಮನಿಂದ knee pads ತೆಗೆದುಕೊಂಡು, Thanks ಹೇಳಿ, ಶಿವು ಎಲ್ಲಿದ್ದಾನೆಂದು ಅವರಿಗೆ ಫೋನ್ ಮಾಡಿದೆವು. 
        ಶಿವು-ದೀಪಿಕಾ ಅವರು ತಂದಿದ್ದ ಅಗತ್ಯಕ್ಕೂ ಹೆಚ್ಚು ಲಗೇಜಿನ ಬಗ್ಗೆ ನಿನ್ನೆ ತಿಳಿಸಿದ್ದೆನಲ್ಲ, ಅದನ್ನು ಸ್ವಲ್ಪ ಕಡಿಮೆ ಮಾಡಿ ಚಿಕ್ಕ ಬ್ಯಾಗನ್ನು ತರಲು, ಬರುವ ದಾರಿಯಲ್ಲಿ ಸಿಗುವ ಅವರ ಅಕ್ಕನ ಮನೆಗೆ ಹೋಗಿರುವುದಾಗಿಯೂ, ಅಲ್ಲಿಂದ ಹೊರಟು ಇನ್ನೊಂದೆರಡು ತಾಸಿನಲ್ಲಿ ನಮ್ಮನ್ನು ನೆಲಮಂಗಲದ ದಾರಿಯಲ್ಲಿ ಸಿಗುವುದಾಗಿ ಹೇಳಿದರು. 
        ನಾವು ಊಟ ಮುಗಿಸಿಕೊಳ್ಳೋಣವೆಂದು, ಶ್ವೇತರಿಗೆ ತಿಳಿದಿದ್ದ ಹೊಸಕೆರೆಹಳ್ಳಿ ಬಳಿಯ ಹವ್ಯಕ ಮೆಸ್ ಒಂದಕ್ಕೆ ಹೋದೆವು. ನಾನಾಗಲೇ ಹೇಳಿದಂತೆ, ಕಳೆದ ಮೂರೂ ಹೊತ್ತಿನಿಂದ ಬರಿ ತಿಂಡಿ ತಿಂದು, ಹೊಟ್ಟೆ ಒಂದು ರುಚಿಯಾದ ಊಟ ಬಯಸುತ್ತಿತ್ತು. ಶುದ್ಧ ಹವ್ಯಕ ಶೈಲಿಯ ಊಟ, ಅದ್ಭುತ ರುಚಿಯೆನಿಸಿತು. ಹಸಿದ ಹೊಟ್ಟೆ ತುಂಬಾ, ಆನಂದವಾಗಿ ತಿಂದು, ಶಿವೂ-ದೀಪಿಕಾರಿಗೂ parcel ಕಟ್ಟಿಸಿಕೊಂಡು, ಹೊರಟೆವು.


        ಹೊರಡುವಾಗ ಅಲ್ಲಿದ್ದ ಹಲವಾರು ಜನ ನಮ್ಮ ಪ್ರವಾಸದ ಬಗ್ಗೆ ವಿಚಾರಿಸಿ, ಶುಭ ಹಾರೈಸಿದರು. ಒಂಥರಾ ಖುಷಿ ಅನುಭವ ಎನಿಸಿತು. ಅಲ್ಲಿಂದ ಸೀದಾ ನೆಲಮಂಗಲದ ದಾರಿ ತಲುಪಿ, ಅಲ್ಲಿ ಶಿವುನ ಬೈಕಿಗಾಗಿ ಕಾಯತೊಡಗಿದೆವು.

        ನೆಲಮಂಗಲ-ತುಮಕೂರು ಟೋಲ್ ರೋಡಿನಲ್ಲಿ, ರಸ್ತೆ ಪಕ್ಕದಲ್ಲಿ ಕುಳಿತು ಸುಮಾರು ಒಂದುವರೆ ಗಂಟೆಗೂ ಹೆಚ್ಚು ಕಾದೆವು. ನಾನು songs ಕೇಳುತ್ತಾ ಕುಳಿತಿದ್ದೆ. ಶ್ವೇತಾ-ಶರತ್ ಅದೂ ಇದೂ ಹರಟುತ್ತಾ time pass ಮಾಡುತಿದ್ದರು. ಕಣ್ಣೆದುರಲ್ಲೇ ಮಿಂಚಿನಂತೆ ಸಾಗುವ truck, busಗಳು, ವೇಗದ ರಭಸಕ್ಕೆ ಅವುಗಳೊಂದಿಗೆ ನಮ್ಮನ್ನೂ ಎಳೆದೊಯ್ಯುತ್ತವೇನೋ ಅನ್ನುವಂತೆ ಹೋಗುತ್ತಿದ್ದವು. ಹುಣ್ಣಿಮೆಯೋ ಹಿಂದು-ಮುಂದು ಅನಿಸುತ್ತೆ, ಚಂದ್ರನೂ ಆಗಸದಲ್ಲಿ ಸುಂದರವಾಗಿ ಬೆಳಗುತ್ತಿದ್ದ. ಒಂದು ರೀತಿ ರಸ್ತೆಬದಿಯ ತಪಸ್ಸಿನಂತಿತ್ತು ಅನುಭವ.
        ಕಾದು ಕಾದು ದಣಿದ ಮೇಲೆ, ಅವರು ಬಂದರು. ಸಮಯ ಹನ್ನೆರಡರ ಆಸುಪಾಸು. ಇನ್ನೂ ನೂರು ಕಿ.ಮೀ ದೂರವಿತ್ತು ತುಮಕೂರು. ಸರಿ, ಮುಂದೆ ಸಾಗಿತೆಮ್ಮ ಪಯಣ.
        ರಾತ್ರಿಯಲ್ಲಿ ಬೈಕ್ ರೈಡ್ ಮಾಡಲೇಬಾರದು ಎಂದು ಪ್ಲಾನಿನಲ್ಲಿ ಮೊದಲೇ ಅಂದುಕೊಂಡಿದ್ದೆವಾದರೂ ಈಗ ನಮ್ಮ ನಿಧಾನಗತಿಯ ಪಯಣ, ಹಲವಾರು ತಾಪತ್ರಯಗಳಿಂದ ತಡವಾಗಿ ಹೋಗಿತ್ತು. ಅಲ್ಲದೇ ತುಮಕೂರಿನಲ್ಲಿ ಹೋಟೆಲ್ ಕಾಯ್ದಿರಿಸಿದ್ದೆವು, ಹಾಗಾಗಿ ಅಲ್ಲಿಗೆ ತಲುಪಲೇಬೇಕಿತ್ತು. ನಾವು ಹಾಕಿಸಿಕೊಂಡಿದ್ದ ಎಕ್ಸ್ಟ್ರಾ ಲೈಟುಗಳನ್ನೂ ಉರಿಸುತ್ತಲೇ, ತುಸು ನಿಧಾನವಾಗಿಯೇ ಜಾಗರೂಕವಾಗಿ ಸಾಗಿದೆವು.

        ತುಮಕೂರಿನ, ವೈಶಾಲಿ ಕಂಫರ್ಟ್ಸ್ ಹೋಟೆಲಿನ ಎದುರು ತಲುಪವಷ್ಟರಲ್ಲಿ, ಮಧ್ಯ ರಾತ್ರಿ 1.30.
        ನಮ್ಮ ಪೂರ್ತಿ ಪ್ರವಾಸದಲ್ಲಿ ಹೋಟೆಲ್ ಬುಕಿಂಗಿನ ಜವಾಬ್ದಾರಿ ವಹಿಸಿದ್ದು ಶಿವು ಮತ್ತು ಶರತ್. ಅವರು ಮೊದಲು ಹೋಗಿ ನಮ್ಮ ಬುಕಿಂಗ್ ರಶೀದಿಯನ್ನು ತೋರಿಸಿ, ರೂಮು ಪಡೆಯುವಲ್ಲಿ, ನಾವು ಉಳಿದವರು ಲಗೇಜುಗಳನ್ನು ರೂಮುಗಳಿಗೆ ಸಾಗಿಸಿದೆವು.

        ನಮ್ಮೆಲ್ಲರನ್ನು ಆಯಾಸ ಮತ್ತು ನಿದ್ದೆ ಅಕ್ಷರಸಃ ಆವರಿಸಿಕೊಂಡಿತ್ತು. ನಮ್ಮ ಮುಖಗಳು, ಬಟ್ಟೆಗಳು ಧೂಳು ಮತ್ತು ಹೊಗೆಮಯವಾಗಿದ್ದವು. ಶರತ್, "ನಾಳೆ ಬೆಳಗ್ಗೆ 8ಕ್ಕೆ ತಯಾರಾಗಿರಿ, ಎಲ್ಲರೂ..." ಅಂದರು. ಸುಮ್ಮನೆ ತಲೆಯಾಡಿಸಿ ರೂಮು ಸೇರಿದೆವು.
        ನಾನಂತೂ ರೂಮೊಳಗೆ ಹೋದ ಐದೇ ನಿಮಿಷದಲ್ಲಿ, ಹಾಸಿಗೆ ಸೇರಿದೆ.
        ಹೊರಗೆ ಚಂದಿರ, ಆಗಸದ ಹಾದಿಯಲ್ಲಿ ಇನ್ನೂ ತನ್ನ ಅರ್ಧ ದಾರಿಯಲ್ಲಿದ್ದ.

Day-1 Ride
    - Madhurai to Tumkur
    - Disatance covered - 520 KM
    - Route Map

* * * * *


ದಿನ-೩: ತುಮಕೂರಿನಿಂದ ಬೆಳಗಾವಿ http://kcsampath.blogspot.in/2017/05/3.html

No comments:

Post a Comment