Saturday, December 08, 2012

ಗಲ್ಲವನು ನಯವಾಗಿ,..


ಗಲ್ಲವನು ನಯವಾಗಿ ಅಂಗೈಯ ಮೇಲಿಟ್ಟು
ಎಲ್ಲವನು ನೀನೋಡು...
ನಿನ್ನವನು ಯಾರೆಂದು, ತಂಗಾಳಿ ಕೇಳಿದರೆ,
ಸಂಕೋಚವ ಬಿಟ್ಟು
ನನ್ನೆಡೆಗೆ ಕೈಮಾಡು...
ಮುಂಗುರುಳ ಮೃದುವಾಗಿ ಕಿವಿಪಕ್ಕ ಇಳಿಬಿಟ್ಟು
ನನ್ನೊಡನೆ ಮಾತಾಡು...
ಪ್ರತಿಇರುಳು ನಾಕಾಣೋ, ಕನಸುಗಳ ಹೇಳುವೆನು
ಸಂಕೋಚವ ಬಿಟ್ಟು
ಎಲ್ಲವನು ನಿಜಮಾಡು...

* * * * *

ಹಳದಿ ಬಳೆಗಳ ಬಿಳಿ ನೀಳ ತೋಳಿನ

ಬೆರಳಿಡಿದು ಕರೆದೊಯ್ದೆ ನಾನು,
ನನ್ನಾಸೆಯ ಬಾನಿಗೆ, ನಿನ್ನನು...
ಗರಿಬಿಚ್ಚಿ ಹಾರಿದೆವು, ಬಹುದೂರ ನಾವು
ಖುಷಿ ಹೆಚ್ಚಿ ಕೂಗಿದೆವು,
ತನ್ಮನವ ತಣಿಸಿದೆವು,
ಪ್ರೀತಿಸುವ ಮುನ್ನ ಮರಳಿದೆವು,..
ಯಾಕೆಂದು ಯೋಚಿಸುವ ಮುನ್ನ,
ಕೆನ್ನೆಯಲಿ ಕಣ್ಣೀರು ನುಸುಳಿದವು...


ನಿರಾಸೆ ನೆಲದಲ್ಲೂ, ನೂರಾಸೆ ಬಿತ್ತುವೆನು

ನಿನ್ನೊಲವ ಹರಿಬಿಟ್ಟು,
ಹಸನಾದ ಫಲನೀಡು...
ಪ್ರತಿಇರುಳು ನಾಕಾಣೋ, ಕನಸುಗಳ ಹೇಳುವೆನು
ಸಂಕೋಚವ ಬಿಟ್ಟು
ಎಲ್ಲವನು ನಿಜಮಾಡು...

* * * * *

ಹಣತೆ ಬೆಳಕಿನ ಒಬ್ಬೊಂಟಿ ಊರಿನ

ಹೂಚಪ್ಪರಕೆ ಬಂದಿದ್ದೆ ನಾನು,
ವಧುವಾಗಿ ನಿಂತಿದ್ದೆ ನೀನು...
ಕತ್ತಲೆಯ ಅಕ್ಷತೆಯು, ಮುಗಿಲಿಂದ ಸುರಿದವು
ನಡುರಾತ್ರಿ ವರಿಸಿದೆವು,
ಸಪ್ತಪದಿ ಸಾಗಿದೆವು,
ಮಧುಚಂದ್ರಕೆ ಮುನ್ನ ಬೆಳಕುಹರಿದವು,..
ಯಾಕೆಂದು ಯೋಚಿಸುವ ಮುನ್ನ,
ಕಂಠದಲಿ ಸಣ್ಣಅಳು ಬಿಕ್ಕಳಿಸಿದವು...


ಪ್ರತಿಹೆಜ್ಜೆ ಇಡುವಲ್ಲೂ, ನಿನ್ನನ್ನೇ ಹುಡುಕುವೆನು

ಬೇರೆಲ್ಲವಾ ಬಿಟ್ಟು,
ಬಾ ಎಂದು ಕರೆನೀಡು...
ಪ್ರತಿಇರುಳು ನಾಕಾಣೋ, ಕನಸುಗಳ ಹೇಳುವೆನು
ಸಂಕೋಚವ ಬಿಟ್ಟು
ಎಲ್ಲವನು ನಿಜಮಾಡು...



                                 - ಸಂಪತ್ ಕುಮಾರ್