Monday, September 27, 2010

ನಾನೊಬ್ಬ,,,


 ನಾನೊಬ್ಬ, ಓಡೋ ಅಶ್ವ
 ಗೆಲ್ಲೋದೊಂದೇ ನನ್ನ ಗುರಿ
 ಸೋಲೇನೇ ನನ್ನ ವೈರಿ
 ನಾನೊಬ್ಬ, ಹಸಿದ ಸಿಂಹ
 ಬೇಟೇನೇ ನನ್ನ ಗುರಿ
 ಹಿಡೀಬೇಕು ಎಷ್ಟು ಸಾರಿ ಬಿದ್ದರೂ ಸರಿ

 ನಾನೊಬ್ಬ, ಕಟುಕನ ಕೈಯ ಕತ್ತಿ
 ಬಲಿಪಶುವೇ ನನ್ನ ಗುರಿ
 ಸಾಯಿಸೋನೆ ನಾ ರಕ್ತದಲ್ಲೇ ಮಿಂದರೂ ಸರಿ
 ನಾನೊಬ್ಬ, ರೈತನ ನೇಗಿಲ ತುದಿ
 ಉಳುವುದೊಂದೇ ನನ್ನ ಗುರಿ
 ಸವೆದು ಸವೆದು  ನಾ ಮಣ್ಣಾದರೂ ಸರಿ

 ನಾನೊಬ್ಬ, ಆವಿಯಾದ ನೀರ ಹನಿ
 ನೆಲವೊಂದೇ ನನ್ನ ಗುರಿ
 ಮಳೆಯಾಗಲೇ ಬೇಕು ಋತುಗಳೆಷ್ಟೇ ಕಳೆದರೂ ಸರಿ
 ನಾನೊಬ್ಬ, ಪ್ರೇಮಿ ತುಟಿಯ ಮುತ್ತು
 ನಲ್ಲೆ ಕೆನ್ನೆಯೇ ನನ್ನ ಗುರಿ
 ನಾಚಿ ನಾಚಿ ಆಕೆ ನೀರಾದರೂ ಸರಿ

 ಸದ್ಯಕ್ಕೆ ನಾ, ಬೂದಿ ಮುಚ್ಚಿದ ಕಿಡಿ
 ತರ್ಕ ಬೇಡ, ಯಾವುದು ತಪ್ಪು ಯಾವುದು ಸರಿ?
 ಪದ್ಯ ಓದಿ ಸುಮ್ಮನೆ, ಸಣ್ಣದೊಂದು ನಗೆಯ ಬೀರಿ...
                        -ಸಂಪತ್ ಕುಮಾರ್

1 comment: