Tuesday, June 09, 2015

ಇದು ಸುಂದರ ಸ್ನೇಹ...

    ನಂಗೆ ಅವನು ಏಳೋ ಮುಂಚೆನೇ ಎಚ್ಚರ ಆಯ್ತು. ನಮ್ಮ ರೂಮಿನ ಕಿಟಕಿಯ ಪರದೆಗಳ ನಡುವಿಂದ ಹೊಂಬಿಸಿಲು ಚೆಲ್ಲಿ, ಹೊದಿಕೆಯಿಂದ ಹೊರಬಂದಿದ್ದ ಅವನ ಕಾಲುಗಳನ್ನು ಬೆಚ್ಚಗಾಗಿಸುತಿತ್ತು.
    ನಾನು ತಲೆಯೆತ್ತಿ, ನನ್ನ ಪಕ್ಕ ಅಲುಗಾಡದೇ ಮಲಗಿದ್ದ ಗಂಡು ದೇಹವನ್ನೊಮ್ಮೆ ನೋಡಿದೆ. ಪ್ರತಿದಿನ ನಾನು ಮಾಡುವಷ್ಟಾದರೂ ವ್ಯಾಯಾಮವನ್ನು, ಅವನು ಮಾಡಿದ್ದಿದ್ದರೆ ಅವನ ದೇಹದಲ್ಲಿ ಇಷ್ಟು ಬೊಜ್ಜು ಇರುತ್ತಿರಲಿಲ್ಲವಲ್ಲಾ ಎಂಬ ಸಣ್ಣ ಯೋಚನೆಯೊಂದು ನನ್ನ ಮನಸ್ಸಿನಲ್ಲಿ ಹಾದು ಹೋಯಿತು.
    ಹಾಸಿಗೆಯಲ್ಲಿ ಹಾಗೇ ಹೊರಳುತ್ತಾ ನನ್ನ ಕಡೆಗೆ ಸ್ವಲ್ಪ ತಿರುಗಿದ, ಸಂಜಯ್. ಎಷ್ಟೇ ಹೊರಳಾಡಿದರೂ, ಅವನಿಗೆ ಪೂರ್ತಿ ಎಚ್ಚರ ಆಗೋದು ಅವನ ಅಲಾರಮ್ ಹೊಡೆದಾಗಲೇ ಅನ್ನೋದು ನಂಗೆ ಗೊತ್ತು.
    ಒಂದು ಸಲ ಯೋಚಿಸಿದೆ, "ನಾನೂ ಹಾಗೇ ವಾಪಸ್ಸು ನಿದ್ರೆಗೆ ಜಾರಲಾ ಅಥವಾ ಅವನಿಗೆ ಎಚ್ಚರ ಹಾಗೋ ಅಷ್ಟರಲ್ಲಿ ನಾನೇ ಏನಾದ್ರೂ ತಿಂಡಿ ತಯಾರು ಮಾಡಲು ಪರದಾಡಲಾ" ಅಂತ. ಆದರೆ ಮನಸ್ಸು ಮಾತ್ರ ನನ್ನನ್ನು ಏಳಲು ಬಿಡದೆ, ಹಾಗೇ ಮಲಗಿ, ಏನೇನೋ ಚಿಂತೆಗಳತ್ತ ನೂಕುತ್ತಾ ಹೋಯಿತು.

    ನಾನು ನನ್ನ ಬಗ್ಗೆಯೇ ಯೋಚಿಸುತ್ತಾ ಹೋದೆ. ನನ್ನ ಉಗುರುಗಳು ಸ್ವಲ್ಪ ಕೊಳೆ ಆಗಿವೆ, ಇವತ್ತು ಅವುಗಳಿಗೆ ಸ್ವಲ್ಪ ಸ್ಪೆಷಲ್ ಅಟೆನ್ಷನ್ ಕೊಡ್ಬೇಕು, ಯಾಕಂದ್ರೆ ಸಂಜಯ್ ಗೆ ನಾನು ಯಾವಾಗಲು ಕ್ಲೀನ್ ಆಗಿ ಇರೋದು ಇಷ್ಟ.
    ಸಂಜಯ್ ಬೆಳಗ್ಗೆ ಮನೆಯಿಂದ ಹೋದಮೇಲೆ ಸಂಜೆ ವಾಪಸ್ಸು ಬರುವದರೊಳಗೆ, ನಾನು ಅವನನ್ನ ಬರ ಮಾಡಿಕೊಳ್ಳೋಕೆ ಮನೆಯಲ್ಲಿ ಇದ್ದರೆ ಸಾಕು, ಅಲ್ಲಿಯ ತನಕ ನಾನು ಏನೇ ಮಾಡಿದ್ರು ಅವನಿಗೆ 'ನೋ ಪ್ರಾಬ್ಲಮ್'.

    ಈಗ ಸಂಜಯ್ ನ ಕಡೆಗೆ ಮತ್ತೆ ತಿರುಗಿ, ಅವನ 'ಹ್ಯಾಂಡ್ ಸಮ್' ಮುಖವನ್ನೊಮ್ಮೆ ನೋಡಿದೆ. ಆದರೆ, ನನಗೆ ಅವನು ಇಷ್ಟವಾಗಲು ಮೊದಲ ಕಾರಣ ಅವನ ಸ್ಪುರದ್ರೂಪವಲ್ಲ.

    ಮೊದಲಸಲ ನಾನು ಅವನನ್ನು ನೋಡಿದ್ದು ಬಸ್ ಸ್ಟಾಪ್ ನಲ್ಲಿ, ಕೈಯಲ್ಲಿ ನ್ಯೂಸ್ ಪೇಪರ್ ಒಂದನ್ನು ಓದುತ್ತಾ, ಒಬ್ಬನೇ ಒಂದು ಮೂಲೆಯಲ್ಲಿ ನಿಂತಿದ್ದ. ಯಾರಿಗೋ ಅವನು ಕಾಯುತಿದ್ದ ಹಾಗಿತ್ತು. ಎಷ್ಟು ಹೊತ್ತಾದರೂ ಯಾರೂ ಅವನ ಕಡೆಗೆ ಬರಲಿಲ್ಲ. ನನಗೆ ಆಗ ಏನನ್ನಿಸಿತೋ ಏನೋ, ಅವನ ಬಳಿ ಹೋಗಬೇಕೆನ್ನಿಸಿತು. ಮೆಲ್ಲನೆ ಅವನೆಡೆಗೆ ಸಾಗಿ, ಕಣ್ಣ ರೆಪ್ಪೆಗಳನ್ನು ಕೆಳಗಿಳಿಸಿ, ನಿಂತೆ. ಮತ್ತೆ ಕಣ್ಣೆತ್ತಿ ನೋಡುವಷ್ಟರಲ್ಲಿ, ಅವನ ಕೈಗಳು ನನ್ನ ಕೆನ್ನೆಯನ್ನು ಮೆಲ್ಲಗೆ ಮುಟ್ಟಿ, ಕೈ ಬೆರಳುಗಳು ನನ್ನ ಮೃದು ಕೂದಲುಗಳನ್ನು ತೀಡುತ್ತಿದ್ದವು. ಆ ಕ್ಷಣ ಇಬ್ಬರಿಗೂ ಯಾವುದೇ ಮಾತಿನ ಅವಶ್ಯಕತೆ ಬೇಕಾಗಿ ಬರಲಿಲ್ಲ. ಏನೋ ಮೋಡಿಗೊಳಗಾದಂತೆ ನಾನು ನಿಂತುಬಿಟ್ಟೆ. ನನ್ನ ಕಡೆಗೊಮ್ಮೆ ಸಣ್ಣ ನಗು ಬೀರಿ, ಅವನ ಪಾಡಿಗೆ ಅವನು ನೆಡೆದು ಹೊರಟುಬಿಟ್ಟ, ತಕ್ಷಣ ಎಚ್ಚೆತ್ತ ನಾನೂ ಅವನ ಹಿಂದೆಯೇ ಹೆಜ್ಜೆ ಹಾಕತೊಡಗಿದೆ. ನಾನು ಅದೇಕೆ ಅವನ ಹಿಂಬಾಲಿಸುತ್ತಿದ್ದೆ ಎಂದು ನನಗೂ ತಿಳಿದಿರಲಿಲ್ಲ, ಹಿಂದೆ ಬರಬೇಡ ಎಂದು  ಅವನೂ ಹೇಳಲಿಲ್ಲ.ಆಗ ಸಮಯ, ರಾತ್ರಿ ಸುಮಾರು ೧೨ ಆಗಿತ್ತಿರಬಹುದು.

    ನನ್ನ ಬಾಳಿನಲ್ಲಿ, ಹಿಂದೆ ಏನಾಗಿತ್ತು, ಯಾರೆಲ್ಲ ಇದ್ದರು, ನನ್ನ ಕಥೆಯೇನು ಅಂತ ಸಂಜಯ್ ಒಮ್ಮೆಯೂ ಕೇಳಲಿಲ್ಲ.ಅವನ ಹೆಸರನ್ನು ತಿಳಿಯಲೂ ಕೂಡ, ಮರುದಿನ ಅವನ ಸ್ನೇಹಿತ ಬಂದು ಅವನನ್ನು ಕೂಗಿ ಕರೆಯುವವರೆಗೂ ನಾನು ಕಾಯಬೇಕಾಯಿತು. ಸಂಜಯ್ ಅವನಾಗಿಯೇ ನನ್ನ ಬಗ್ಗೆ ಕೇಳಲಿ ಎಂಬ ಆಸೆ, ನನ್ನಲ್ಲಿ ಇಂದಿಗೂ ಇದೆ.

    ನಮ್ಮ ಮನೆಯಲ್ಲಿ ನಾನೇ ಚಿಕ್ಕವಳು, ನನಗೆ ಮೂವರು ಅಕ್ಕಂದಿರು. ನಾನು ನನ್ನ ತಂದೆಯನ್ನು ನೋಡೇ ಇಲ್ಲ, ಅವರು ಯಾರೆಂಬುದೂ ಕೂಡ ತಿಳಿದಿಲ್ಲ. ಒಂದು ಸಂಜೆ ಎಲ್ಲಿಗೋ ಆಡಲಿಕ್ಕೆ ಹೋಗಿದ್ದ ನಾನು, ಮನೆಗೆ ಬಂದಾಗ ನನ್ನಮ್ಮ ನನ್ನ ತಬ್ಬಲಿ ಮಾಡಿ ಇನ್ನ್ಯಾರ ಜೊತೆಗೋ ಓಡಿ ಹೋಗಿದ್ದಳು. ಆ ದಿನದಿಂದ ನಾನು ಅಲೆಮಾರಿಯಾಗಿಬಿಟ್ಟೆ.

    ನಾನು ರಾಜುನನ್ನು ಹೇಗೆ ಭೇಟಿಯಾದೆ, ಅನ್ನೋದು ಮರೆತು ಹೋಗಿದೆ. ಆದರೆ ಆ ಒಂದು ರಾತ್ರಿ ನನಗವನು ತೋರಿಸಿದ ಪ್ರೀತಿಗೆ ನಾನವನಿಗೆ ಮರುಳಾಗಿ ಹೋಗಿದ್ದೆ. ರಾಜುಗೆ (ಅದು ಅವನ ನಿಜವಾದ ಹೆಸರು ಹೌದೋ ಅಲ್ಲವೋ, ಅನ್ನೋದು ನನಗಿನ್ನು ಅನುಮಾನ) ನಾನು ಕೇಳಿದ್ದು ಮಲಗಲಿಕ್ಕಷ್ಟು ಜಾಗ, ಬದುಕಲಿಕ್ಕಷ್ಟು ಊಟ ಮತ್ತು ಎಷ್ಟು ಸವಿದರೂ ಸಾಕಾಗದಷ್ಟು ಅವನ ಪ್ರೀತಿ, ಅಷ್ಟೇ. ಆದರೆ ನನಗವನು ದ್ರೋಹ ಬಗೆದು, ನನ್ನ ಬಸಿರನ್ನು ತುಂಬಿಸಿ ಕಾಣೆಯಾಗಿಬಿಟ್ಟ, ಈ ಕಷ್ಟ ಕೋಟಲೆಗಳ ನಡುವಲ್ಲೇ ನಾನು ಜನ್ಮ ಕೊಟ್ಟ ಮಗು, ಈ ಕ್ರೂರ ಜಗತ್ತಿಗೆ ಹೆದರಿ ಹುಟ್ಟಿದ ಒಂದೇ ತಾಸಿಗೆ ಕೊನೆಯುಸಿರೆಳೆಯಿತು.

    ನನ್ನ ಇಷ್ಟೆಲ್ಲಾ ಕಥೆಯನ್ನು, ನಾನು ಸಂಜಯ್ ಗೆ ಯಾವಾಗ ಹೇಳುವೆನೋ ಏನೋ...
                                                                  * * * * *

    "ಟ್ರಿಂಗ್ ಗ್ ಗ್ ಗ್ ಗ್ ಗ್ ಗ್..."

    ಅಬ್ಬಾ!!! ಆ ಹಾಳಾದ್ ಅಲಾರಮ್...!!!
    ಅದನ್ನ ಎಲಾದ್ರು ಹೂತು ಹಾಕಬೇಕು ಅನ್ನಿಸ್ತಿದೆ.

    ಸಂಜಯ್ ಎದ್ದು ಅದನ್ನ ಆಫ್ ಮಾಡೋವರೆಗೂ, ಅದರ ಸದ್ದು ಇಡೀ ಮನೆಯನ್ನೇ ಆವರಿಸಿ ಬಿಟ್ಟಿರುತ್ತೆ. ಒಂದಿನ ಹೀಗೆ ಮಲಗಿದ್ದ ನಾನು, ನನ್ನ ಕೈಯನ್ನು ಅವನ ಬೆನ್ನ ಮೇಲಿಂದ ದಾಟಿಸಿ, ಆ ಅಲಾರಮ್ ಅನ್ನ ನಾನೇ ಆಫ್ ಮಾಡೋಕೆ ಹೋದೆ, ಆದ್ರೆ ಅದು ಕೈ ತಪ್ಪಿ ನೆಲಕ್ಕೆ ಬಿದ್ದುಬಿಡ್ತು. ಆಗ ಸಂಜಯ್ ನ ಕಣ್ಣಲ್ಲಿ ಕಂಡ ಕೋಪದ ಕಿಡಿ, ನನ್ನನ್ನ ತಬ್ಬಿಬ್ಬು ಮಾಡಿದ್ದಷ್ಟೇ ಅಲ್ಲ, ಆ ಕೋಪ ಅವನಿಗೆ ಇನ್ನೆಂದೂ ಬರದ ಹಾಗೆ ಇದ್ದು ಬಿಡಬೇಕು ಎಂದು ನಿರ್ಧಾರ ಮಾಡಿಬಿಟ್ಟಿದ್ದೆ.

    ಕೊನೆಗೂ ಸಂಜಯ್ ನ ಆ ಉದ್ದನೆಯ ಕೈ ಒಂದು, ಆ ಅಲಾರಮ್ ನ ನಿಲ್ಲಿಸಿಬಿಡ್ತು. ಆದರೆ, ಅವನು ಆ ಅಲಾರಮ್ ಬದಲಾಗಿ, ನನಗೇ ಅವನನ್ನು ಎಬ್ಬಿಸಲು ಹೇಳಬೇಕಿತ್ತು ಎಂಬ ಸಣ್ಣ ಕೊಪವಂತೂ ಈಗಲೂ ಇದೆ.ಈಗ ಆಕಳಿಸುತ್ತಾ ಎದ್ದ ಸಂಜಯ್ "ಬೇಗ ರೆಡಿ ಆಗ್ಬೇಕು ಡಾರ್ಲಿಂಗ್, ಆಫೀಸ್ ಗೆ ಲೇಟ್ ಆಗುತ್ತೆ" ಅಂತ ಅಂದ. ಅದೇನು ಕೆಲಸ ಮಾಡ್ತಾನೋ ಏನೋ, ನನಗಂತೂ ಅರ್ಥ ಆಗೋಲ್ಲ. ಅವನು ಬಾತ್ ರೂಂ ಗೆ ಹೋಗಿ, ಹತ್ತು ನಿಮಿಷದಲ್ಲಿ ಒದ್ದೆ ಕೂದಲು ಕೊಡವುತ್ತಾ, ಸೊಂಟದ ಸುತ್ತಾ ಕೆಂಪು ಟವೆಲ್ ಕಟ್ಟಿಕೊಂಡು ಹೊರಗೆ ಬಂದ.
    ಈಗಲೂ ಅದೆಷ್ಟು ಹ್ಯಾಂಡ್ ಸಮ್ ಆಗಿ ಕಾಣಿಸ್ತಾನೆ ಅವನು, ಆದರೆ ಆಗಲೇ ನಾನು ಹೇಳಿದ ಹಾಗೆ ಚೂರೇ ಚೂರು ಬೊಜ್ಜು ಅಷ್ಟೇ...

    "ಎದ್ದೇಳು ಡಾರ್ಲಿಂಗ್,,, ಎಷ್ಟು ಲೇಜಿ ನೀನು!!!" ಅಂತ, ನನ್ನ ಕಾಲು ಎಳೆದ. "ಹೂ... ನೀನಿರೋ ಕಡೆಗೆ ನಾನೇ ತಿಂಡಿನೂ ತರಬೇಕ" ಅಂದು, ಅಡುಗೆ ಮನೆ ಕಡೆಗೆ ಹೋದ ನನ್ ಸಂಜಯ್.

    ಮೊದಲಿಗೆ ಫ್ರಿಡ್ಜ್ ಇಂದ ಹಾಲಿನ ಪಾತ್ರೆ ತೆಗೆದು ಒಲೆ ಮೇಲೆ ಇಟ್ಟು, ಸೀದಾ ಬ್ರೆಡ್ ಟೋಸ್ಟ್ ರೆಡಿ ಮಾಡೋಕೆ ಹೋದ. ಹಾಲು ಕಾಯಿಸಿ ಅವನು ಲೋಟಕ್ಕೆ ಹಾಕುವಷ್ಟರಲ್ಲಿ ನಾನು ಅವನ ಹತ್ರ ಹೋದ್ರೆ ಸಾಕು.

    ಹತ್ತು ನಿಮಿಷದ ನಂತರ, ಕುರ್ಚಿನ ನೆಲದಮೇಲೆ ಎಳಿತಿರೋ ಶಬ್ದ ಕೇಳಿಸ್ತು, ಈಗ ಎದ್ದು ಅವನ ಹತ್ರ ಹೋದ್ರೆ ಜಾಮ್ ಹಾಕಿರೋ ಬ್ರೆಡ್ ಟೋಸ್ಟ್ ಸಿಗುತ್ತೆ, ಇಲ್ಲ ಅಂದ್ರೆ ಹಸಿ ಬ್ರೆಡ್ಡೇ ಗತಿ.

    ನಾನು 'ಡೈನಿಂಗ್ ಟೇಬಲ್' ಬಳಿ ಹೋಗೊ ಅಷ್ಟರಲ್ಲಿ, ಅವನು ಟೋಸ್ಟ್ ರೆಡಿ ಮಾಡ್ಕೊಂಡು ಬಂದು ತಿನ್ನೋಕೆ ಶುರು ಮಾಡಿದ, ಆದರೆ ನನ್ನ ಕಂಡ ಕೂಡ್ಲೇ ಅದನ್ನ ಬ್ರೆಡ್ ನ ಬದಿಗಿಟ್ಟು "ಈಗ ಬೆಳಗಾಯ್ತ ಡಾರ್ಲಿಂಗ್..." ಅಂತ ಹತ್ರಕ್ಕೆ ಕರೆದ. ನಾನು ಮೆಲ್ಲಗೆ ಅವನ ಕಾಲಿಗೆ ನನ್ನ ಕಾಲು ತಾಕುವಷ್ಟು ಹತ್ತಿರ ಹೋಗಿ ಅವನನ್ನ ನೋಡಿದೆ.

    ಸಂಜಯ್ ನನ್ನ ತಟ್ಟೆಗೂ ಎರಡು ಬ್ರೆಡ್ ಟೋಸ್ಟ್ ಹಾಕಿ, "ಹಾಲನ್ನೂ ಹಾಕಿಡಲಾ" ಅಂತ ಕೇಳಿದಾಗ, ನನ್ನನ್ನ ಇಷ್ಟು ಚೆನ್ನಾಗಿ ನೋಡ್ಕೊಳೋ ಅವನನ್ನ ನೋಡಿ, ನನಗೆ ನೂರು ನೂರು ಖುಷಿ ಬುಗ್ಗೆ ಎದೇಲಿ ಚಿಮ್ಮಿದ ಹಾಗೆ ಆಯಿತು.

    ನಾನು ಬಾಲ ಆಡಿಸುತ್ತ,  ನೆಲದ ಮೇಲಿದ್ದ ತಟ್ಟೆಯಿಂದ, ಒಂದು ಮುರುಕು ಬ್ರೆಡ್ ತಿಂದು... ನಾಲಿಗೆ ಹೊರಗೆ ಹಾಕಿ ನನ್ನ ಸಾಕುತ್ತಿರುವ ಯಜಮಾನನನ್ನು ಪ್ರೀತಿಯಿಂದ ಒಮ್ಮೆ ನೋಡಿದೆ...
* * * * *

                                                                                                             - Written by
                                                                                                                ಸಹನಾ ವದ್ವ

1 comment: