ನಸುನಗುವ ಕನಸೊಂದು
ಕಣ್ಣೀರ ಮಸುಕಲ್ಲಿ, ಮಂಜಾಗಿ ಹೋಯಿತೇ
ಎದೆಸುಡುವ ನೋವೊಂದು
ಇನ್ನೀಗ ಮನಸಲ್ಲಿ, ಒಂದಾಗಿ ಹೋಯಿತೇ
ಯಾವ ಪಾಪಕೆ ನನಗೆ, ಈ ಸಜೆಯಲ್ಲಿ ಪಾಲು,,,
ಜೀವಂತ ಶವವಾಗಿ, ಮುಂದಿಹುದು ಬಾಳು...
* * * * *
ಹಸಿರಾಗಿ ಬಾಳಲು, ಅವಕಾಶ ನೂರಿದ್ದವು,,,
ಸಿಡಿಲೇಟಿಗೆ ಸಿಕ್ಕಿ, ನುಚ್ಚು ನೂರಾದವು...
ಒಂದಾಗಿ ಸಾಗಲು, ಜೀವಗಳು ಸೇರಿದ್ದವು,,,
ಹುಸಿಶಾಪಕೆ ಬೆಚ್ಚಿ, ಬೇರೆ ಬೇರಾದವು...
ಬೆಳಕಿತ್ತ ಹಣತೆಯು
ಕೋಪದ ಉರಿಯಲ್ಲಿ, ಮನೆಯನೇ ಸುಟ್ಟಿತೇ
ಒಲವಿತ್ತ ಹೃದಯವು
ಉತ್ತರವ ಕಾಯದೇ, ಮಾತನ್ನೆ ಬಿಟ್ಟಿತೇ...
ಯಾವ ಪಾಪಕೆ ನನಗೆ, ಈ ಸಜೆಯಲ್ಲಿ ಪಾಲು,,,
ಜೀವಂತ ಶವವಾಗಿ, ಮುಂದಿಹುದು ಬಾಳು...
* * * * *
ಹೂವಾಗಿ ಅರಳಲು, ಎಷ್ಟಾಸೆ ನಮಗಿತ್ತು
ವಿಧಿಯ ವಿಷದುಗುರು, ಚಿಗುರನ್ನೇ ಚಿವುಟಿತು..
ಜೀವನದ ಯಾನಕ್ಕೆ, ಹುಟ್ಟೊಂದು ಬೇಕಿತ್ತು
ಜೋರಾದ ಅಲೆಯೆದ್ದು, ದೋಣಿಯೇ ಮುಳುಗಿತು...
ಶಕುನಗಳ ಶೂಲವು
ಶುಭವಾದ ಒಲವನ್ನೇ, ಬಲಿಯಾಗಿ ಕೊಟ್ಟಿತೇ...
ಕೈ ಹಿಡಿದು ತುಸುದೂರ
ಬಂದಿದ್ದ ಪಯಣವು, ಕೊನೆಯನ್ನು ಮುಟ್ಟಿತೇ...
ಯಾವ ಪಾಪಕೆ ನನಗೆ, ಈ ಸಜೆಯಲ್ಲಿ ಪಾಲು,,,
ಜೀವಂತ ಶವವಾಗಿ, ಮುಂದಿಹುದು ಬಾಳು...
- ಸಂಪತ್ ಕುಮಾರ್
This comment has been removed by the author.
ReplyDelete