Thursday, December 12, 2013

ಹಂಬಲಿಸಿ, ಹಂಬಲಿಸಿ,..


ಪ್ರೇಯಸಿ : ಹಂಬಲಿಸಿ, ಹಂಬಲಿಸಿ
ಪ್ರೇಯಸಿ : ನೀ ನನ್ನ ಹಿಂಬಾಲಿಸು
ಪ್ರೇಮಿ    : ಸಮ್ಮತಿಸಿ, ಸಮ್ಮತಿಸಿ 
ಪ್ರೇಮಿ    : ನೀ ನನ್ನ ಸಂಬಾಳಿಸು
ಪ್ರೇಮಿ    : ಮೊಗ್ಗೊಂದ ನೀ ಮುಟ್ಟಿ, ಚೆಲುವಾದ ಹೂವಾಗಿಸು
ಪ್ರೇಯಸಿ : ಆ ಹೂವನೇ ತಂದು, ಮುದ್ದಾಗಿ ಮುಡಿಗಿರಿಸು...
                         * * * * *

ಪ್ರೇಯಸಿ : ಮೊಗದ ಅಂಗಣದಲ್ಲಿ,
ಪ್ರೇಯಸಿ : ನಗೆಯು ಮೂಡುತಲಿದೆ,
ಪ್ರೇಯಸಿ : ನೀ ಬಂದ ಕ್ಷಣವೇ, ನನಗೂ ಅರಿವಿಲ್ಲದೇ...
ಪ್ರೇಮಿ    : ಒಲವ ಸಂಗಡದಲ್ಲಿ,
ಪ್ರೇಮಿ    : ಪಯಣ ಸಾಗುತಲಿರೆ,
ಪ್ರೇಮಿ    : ಬೇರೇನು ಗೊಡವೆ??? ಹೀಗೆ ಇರಬಾರದೇ...
ಪ್ರೇಯಸಿ : ಎಲ್ಲ ಮಾತಿಗು ಮೊದಲು, ನಿನ್ನನೇ ಕೂಗಿದೆ ಕೊರಳು...  
ಪ್ರೇಮಿ    : ಎಲ್ಲಾ ಹಗಲು ಇರುಳು, ನಾನೇ ನಿನ್ನ ನೆರಳು... 

ಪ್ರೇಮಿ    : ಮಾತೊಂದ ನೀ ಆಡಿ, ಚೆಲುವಾದ ಹಾಡಾಗಿಸು
ಪ್ರೇಯಸಿ : ಹಾಡೊಂದ ನೀ ಹಾಡಿ, ಮನವನ್ನು ಹಗುರಾಗಿಸು...
                         * * * * *

ಪ್ರೇಮಿ    : ಮುಗಿಲ ಮಾಳಿಗೆಯಲ್ಲಿ,
ಪ್ರೇಮಿ    : ಚುಕ್ಕಿ ದೀಪಗಳಿವೆ,
ಪ್ರೇಮಿ    : ಭೂಮಂಚ ನಮದೇ, ಹೂ ಹಾಸಿ ರಮಿಸೋಣವೇ..?
ಪ್ರೇಯಸಿ : ಕಣ್ಣ ಜೋಳಿಗೆಯಲ್ಲಿ,
ಪ್ರೇಯಸಿ : ತುಂಟ ಸ್ವಪ್ನಗಳಿವೆ,
ಪ್ರೇಯಸಿ : ಒಂದೊಂದೂ ಹೊಸದೇ, ಕಾಣುತ್ತ ಸುಖಿಸೋಣವೇ..?
ಪ್ರೇಮಿ    : ನೀನೇ ಇರುವ ಮನಕೆ, ಬೇರೇ ಏನು ಬಯಕೆ...
ಪ್ರೇಯಸಿ : ನಿನ್ನಾ ಕಾಣೋ ಕ್ಷಣಕೆ, ದಿನದ ಪೂರ ಎಣಿಕೆ... 

ಪ್ರೇಮಿ    : ಇನ್ನೊಮ್ಮೆ ನೀ ನೋಡಿ, ನವಿರಾಗಿ ಕಣ್ಮಿಟುಕಿಸು
ಪ್ರೇಯಸಿ : ಕೈಯೊಮ್ಮೆ ನೀ ನೀಡಿ, ಬಲವಾಗಿ ಆಲಂಗಿಸು... 
                         * * *

ಪ್ರೇಯಸಿ : ಹಂಬಲಿಸಿ, ಹಂಬಲಿಸಿ
ಪ್ರೇಯಸಿ : ನೀ ನನ್ನ ಹಿಂಬಾಲಿಸು
ಪ್ರೇಮಿ    : ಸಮ್ಮತಿಸಿ, ಸಮ್ಮತಿಸಿ 
ಪ್ರೇಮಿ    : ನೀ ನನ್ನ ಸಂಬಾಳಿಸು
ಪ್ರೇಮಿ    : ಮೊಗ್ಗೊಂದ ನೀ ಮುಟ್ಟಿ, ಚೆಲುವಾದ ಹೂವಾಗಿಸು
ಪ್ರೇಯಸಿ : ಆ ಹೂವನೇ ತಂದು, ಮುದ್ದಾಗಿ ಮುಡಿಗಿರಿಸು...

                                                                 - ಸಂಪತ್ ಕುಮಾರ್

No comments:

Post a Comment