ನಾನಾಗಲೇ ನಿನಗೆ?
ಮುತ್ತುಗಳ ಕಪ್ಪವನು
ಕೊಡುವಂತ ಸಾಮಂತ,
ಈಗಂತೂ ನನ್ನೊಳಗೆ
ಪ್ರತಿಕ್ಷಣವು ನಿನ್ನತ್ತ
ಬರುವಂತ ಧಾವಂತ...
ನಿನಗೆಂದೇ ಚೆಲುವೇ,
ಒಲವಿರುವುದಿನ್ನೂ ಜೀವಂತ.
ನಾನಿರಲೆ ಹೀಗೇ, ನಿನ್ನ ಪ್ರೀತಿಸುತ್ತಾ...?
* * *
ನಗುತಿರಲು ನೀ ಹೀಗೆ
ಕತ್ತಲಲು ಅನಿಸದು
ಬೆಳದಿಂಗಳು ಬೇಕಂತ,
ಸಾಕೆನಗೆ ಈ ನೆನಪು,
ಸವಿಯುವೆನು ಸಂತೆಯಲು
ಸವಿಗನಸ ಏಕಾಂತ...
ನಿನಗೆಂದೇ ಚೆಲುವೇ,
ಒಲವಿರುವುದಿನ್ನೂ ಜೀವಂತ.
ನಾನಿರಲೆ ಹೀಗೇ, ನಿನ್ನ ಪ್ರೀತಿಸುತ್ತಾ...?
* * *
ನೀ ನಗಲು ಉದುರೊ
ಮುತ್ತುಗಳು ಇರುವಾಗ,
ನಾ ಎಲ್ಲಕಿಂತ ಶ್ರೀಮಂತ...
ನಿನಗಾಗಿ ಮಿಡಿವಂತ
ಹೃದಯವಿದು ಇರುವಾಗ,
ನನ್ನೊಲವೇ ಧೀಮಂತ...
ನಿನಗೆಂದೇ ಚೆಲುವೇ,
ಒಲವಿರುವುದಿನ್ನೂ ಜೀವಂತ.
ನಾನಿರಲೆ ಹೀಗೇ, ನಿನ್ನ ಪ್ರೀತಿಸುತ್ತಾ...?
ನಿನ್ನ ಸುತ್ತ ಮುತ್ತ, ಸುಳಿಯುತ್ತಾ,,,
ಮತ್ತೆ ಮತ್ತೆ ಪ್ರೀತಿಸುತ್ತಾ...?
- ಸಂಪತ್ ಕುಮಾರ್
No comments:
Post a Comment